ಬಸವಕಲ್ಯಾಣ (ಬೀದರ್ ಜಿಲ್ಲೆ): `ಯಾವುದೇ ರೀತಿಯ ಭೇದ ಭಾವವಿಲ್ಲದೆ ಎಲ್ಲರೂ ಭಾವೈಕ್ಯತೆಯಿಂದ ಬಾಳಬೇಕು. ಧರ್ಮ ಮಾರ್ಗದಿಂದ ನಡೆಯಬೇಕು' ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ.
ನಗರದ ಅಕ್ಕಮಹಾದೇವಿ ಕಾಲೇಜು ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ರಂಭಾಪುರಿ ಪೀಠದ ವೀರಸೋಮೇಶ್ವರ ಶಿವಾಚಾರ್ಯರ ನೇತೃತ್ವದಲ್ಲಿ ನಡೆಯುವ ದಸರಾ ದರ್ಬಾರ ಕಾರ್ಯಕ್ರಮದ ಮಾನವಧರ್ಮ ಸಭಾಮಂಟಪದ ಭೂಮಿ ಪೂಜೆ ಹಾಗೂ ಪಂಚಾಚಾರ್ಯ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
`ಅಧರ್ಮದಿಂದ ಧರ್ಮದೆಡೆಗೆ ಸಾಗಬೇಕು. ದುಷ್ಟರು ಯಾರು ಎಂಬುದೇ ತಿಳಿಯದಾಗಿದೆ. ಆದರೂ, ಶಿಷ್ಟರ ರಕ್ಷಣೆ ಆಗಬೇಕು. ದುರ್ಗುಣ, ಮದ, ಮತ್ಸರ ಬಿಡಬೇಕು. ವಿಶಾಲ ದೃಷ್ಟಿಕೋನ, ಉತ್ತಮ ಸಂಸ್ಕಾರ ಬೆಳೆಸಿಕೊಳ್ಳಬೇಕು. ಅದಕ್ಕಾಗಿ ಗುರುಗಳ, ಮಠಾಧೀಶರ ಮಾರ್ಗದರ್ಶನ ಅಗತ್ಯವಾಗಿದೆ' ಎಂದರು.
`ದಸರಾ ದರ್ಬಾರ ಕಾರ್ಯಕ್ರಮ ಅದ್ದೂರಿಯಾಗಿ ನೆರವೆರಲಿದೆ. ಅದಕ್ಕಾಗಿ ಹಾರಕೂಡ ಚನ್ನವೀರ ಶಿವಾಚಾರ್ಯರ ಸಲಹೆಯನ್ನು ಪಾಲಿಸಬೇಕಾಗಿದೆ. ರಾಜ್ಯದಲ್ಲಿ ಅಷ್ಟೇ ಅಲ್ಲ, ಮಹಾರಾಷ್ಟ್ರ ಹಾಗೂ ಇತರೆಡೆಯೂ ಅವರ ಪ್ರಭಾವವಿದೆ. ಸಮಾರಂಭ ಸುವ್ಯವಸ್ಥಿತವಾಗಿ ನೆರವೆರಲು ಎಲ್ಲರೂ ಸಹಕರಿಸಬೇಕು' ಎಂದರು.
ಶಾಸಕ ಶರಣು ಸಲಗರ, ವಿಧಾನ ಪರಿಷತ್ ಮಾಜಿ ಸದಸ್ಯ ವಿಜಯಸಿಂಗ್, ಹಾರಕೂಡ ಚನ್ನವೀರ ಶಿವಾಚಾರ್ಯರು, ತ್ರಿಪುರಾಂತ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು, ನಗರಸಭೆ ಅಧ್ಯಕ್ಷ ಎಂ.ಡಿ.ಸಗೀರುದ್ದೀನ್, ಮುಖಂಡರಾದ ಶಿವರಾಜ ನರಶೆಟ್ಟಿ, ಸುನಿಲ ಪಾಟೀಲ, ಬಸವೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಬಸವರಾಜ ಕೋರಕೆ, ದೇವಸ್ಥಾನ ವಿಶ್ವಸ್ಥ ಸಮಿತಿ ಅಧ್ಯಕ್ಷ ಶಶಿಕಾಂತ ದುರ್ಗೆ, ಶ್ರೀಮದ್ವೀರಶೈವ ಸದ್ಬೋಧನಾ ಸಂಸ್ಥೆ ಅಧ್ಯಕ್ಷ ಡಾ.ಬಸವರಾಜ ಸ್ವಾಮಿ, ಸ್ವಾಗತ ಸಮಿತಿ ವಕ್ತಾರ ಸುರೇಶ ಸ್ವಾಮಿ, ಬಜರಂಗದಳದ ಸಂಚಾಲಕ ರವಿ ನಾವದ್ಗೇಕರ್, ವಿಶ್ವ ಹಿಂದೂ ಪರಿಷತ್ತಿನ ಶ್ರೀಶೈಲ್ ವಾತಡೆ, ದಯಾನಂದ ಶೀಲವಂತ, ಪ್ರೊ.ರುದ್ರೇಶ್ವರ ಗೋರಟಾ, ಸೂರ್ಯಕಾಂತ ಮಠ, ಕಲ್ಪನಾ ಶೀಲವಂತ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.