ADVERTISEMENT

ಬೀದರ್: ಸ್ಫೋಟ ಇನ್ನೂ ನಿಗೂಢ; ಆತಂಕದಲ್ಲಿ ಗ್ರಾಮಸ್ಥರು

ಮೋಳಕೇರಾ ಗ್ರಾಮದ ಸುತ್ತ ಆವರಿಸಿದೆ ವಿಷಪೂರಿತ ರಾಸಾಯನಿಕಗಳು

ಶಶಿಕಾಂತ್ ಎಸ್. ಶೆಂಬೆಳ್ಳಿ
Published 2 ಫೆಬ್ರುವರಿ 2026, 0:12 IST
Last Updated 2 ಫೆಬ್ರುವರಿ 2026, 0:12 IST
ಸ್ಫೋಟ ಸಂಭವಿಸಿದ ಮೋಳಕೇರಾ ಗ್ರಾಮದ ಮುಖ್ಯರಸ್ತೆಯನ್ನು ಬ್ಯಾರಿಕೇಡ್‌ನಿಂದ ಬಂದ್‌ ಮಾಡಿ, ಭಾನುವಾರವೂ ತನಿಖೆ ನಡೆಸಿದ ಪೊಲೀಸರು 
ಸ್ಫೋಟ ಸಂಭವಿಸಿದ ಮೋಳಕೇರಾ ಗ್ರಾಮದ ಮುಖ್ಯರಸ್ತೆಯನ್ನು ಬ್ಯಾರಿಕೇಡ್‌ನಿಂದ ಬಂದ್‌ ಮಾಡಿ, ಭಾನುವಾರವೂ ತನಿಖೆ ನಡೆಸಿದ ಪೊಲೀಸರು    

ಬೀದರ್‌: ಹುಮನಾಬಾದ್‌ ತಾಲ್ಲೂಕಿನ ಮೋಳಕೇರಾ ಗ್ರಾಮದಲ್ಲಿ ಶನಿವಾರ ಸಂಭವಿಸಿದ ಸ್ಫೋಟ ಪ್ರಕರಣ ಇನ್ನೂ ನಿಗೂಢವಾಗಿಯೇ ಉಳಿದಿದೆ.

ಎರಡು ದಿನ ಕಳೆದರೂ ಸ್ಫೋಟಕ್ಕೆ ಕಾರಣವೇನು ಎಂಬುದು ದೃಢಪಟ್ಟಿಲ್ಲ. ಶನಿವಾರ ಸಂಭವಿಸಿದ ಪ್ರಬಲ ಸ್ಫೋಟದಲ್ಲಿ ನಾಲ್ವರು ಮಕ್ಕಳು ಸೇರಿದಂತೆ ಆರು ಜನ ಗಂಭೀರವಾಗಿ ಗಾಯಗೊಂಡಿದ್ದಾರೆ. ಇದರಲ್ಲಿ ಇಬ್ಬರು ವಯಸ್ಕರ ಪರಿಸ್ಥಿತಿ ಗಂಭೀರವಾಗಿದ್ದು, ಜೀವನ್ಮರಣದ ಹೋರಾಟ ನಡೆಸುತ್ತಿದ್ದಾರೆ.

ಬ್ಯಾರಲ್‌ನಲ್ಲಿ ಸಂಗ್ರಹಿಸಿ ಇಡಲಾಗಿದ್ದ ರಾಸಾಯನಿಕದಿಂದ ಸ್ಫೋಟ ಸಂಭವಿಸಿರುವ ಸಾಧ್ಯತೆ ಇದೆ ಎಂದು ಪೊಲೀಸರು ಅಂದಾಜಿಸಿದ್ದಾರೆ. ಆದರೆ, ಇದು ಇನ್ನೂ ದೃಢಪಟ್ಟಿಲ್ಲ. ಸ್ಫೋಟದ ತೀವ್ರತೆ ಹೆಚ್ಚಿರುವುದರಿಂದ ಎರಡನೇ ದಿನವೂ ಇಡೀ ಪ್ರದೇಶದಲ್ಲಿ ಪೊಲೀಸರು ಬ್ಯಾರಿಕೇಡ್‌ ಅಳವಡಿಸಿ, ಜನರ ಓಡಾಟ ನಿರ್ಬಂಧಿಸಿ, ತನಿಖೆ ಮುಂದುವರೆಸಿದ್ದಾರೆ. ಅವರಿಗೆ ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರು ನೆರವಾಗಿದ್ದಾರೆ.

ADVERTISEMENT

ಸುತ್ತಲೂ ವಿಷಪೂರಿತ ರಾಸಾಯನಿಕ

ಕಳೆದ ಒಂದು ವರ್ಷದಲ್ಲಿ ಗ್ರಾಮದಲ್ಲಿ ಐದು ಸ್ಫೋಟಗಳು ಸಂಭವಿಸಿವೆ. ಜನವರಿ 28ರಂದು ಕೂಡ ಸ್ಫೋಟ ಸಂಭವಿಸಿತ್ತು. ಈ ಕುರಿತು ಸಂಬಂಧಿಸಿದವರ ಗಮನಕ್ಕೆ ತಂದರೂ ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಇದಾದ ಮೂರು ದಿನ ಕಳೆಯುವಷ್ಟರಲ್ಲಿ ಮತ್ತೆ ಸ್ಫೋಟ ಸಂಭವಿಸಿದೆ. 

ಸ್ಫೋಟ ಸಂಭವಿಸಿದ ಸ್ಥಳದಲ್ಲಿ ವಿದ್ಯುತ್‌ ಕಂಬಕ್ಕೆ ಅಳವಡಿಸಿದ್ದ ಸಿ.ಸಿ ಟಿ.ವಿ ಕ್ಯಾಮೆರಾಗಳನ್ನು ತೆರವುಗೊಳಿಸಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ಮೋಳಕೇರಾ, ಗಡವಂತಿ, ಮಾಣಿಕ್‌ ನಗರ ಹಾಗೂ ಧುಮ್ಮನಸೂರ ಗ್ರಾಮಗಳ ಅಂತರ್ಜಲ ಕಲುಷಿತವಾಗಿರುವುದರ ಕುರಿತು ಹೆಸರು ಹೇಳಲಿಚ್ಛಿಸದ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ದೃಢಪಡಿಸಿದ್ದಾರೆ.

ಮೋಳಕೇರಾ ಗ್ರಾಮವು ಹೈದರಾಬಾದ್‌–ಮುಂಬೈ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿದೆ. ಗ್ರಾಮಸ್ಥರ ಪ್ರಕಾರ, ಕೆಲ ರಾಸಾಯನಿಕ ಕೈಗಾರಿಕೆಗಳಿಗೆ ಸೇರಿದವರು ರಾತ್ರಿ ವೇಳೆ ಗ್ರಾಮದ ಸುತ್ತಲೂ ರಾಸಾಯನಿಕ ತ್ಯಾಜ್ಯವನ್ನು ಸುರಿದು ಹೋಗುತ್ತಿದ್ದಾರೆ. ಇದರ ಪರಿಣಾಮ ಇಡೀ ಗ್ರಾಮದ ಅಂತರ್ಜಲ ಕಲುಷಿತಗೊಂಡಿದೆ. ಮಣ್ಣಿನ ಸತ್ವ ಹೋಗಿದೆ. ಬಾವಿ, ಕೆರೆ ನೀರು ಸೇವಿಸಿ ದನ ಕರುಗಳು ಮೃತಪಟ್ಟಿವೆ. ಗ್ರಾಮಸ್ಥರು ಬೇರೆ ಕಡೆಗಳಿಂದ ನೀರು ತಂದು ಕುಡಿಯುತ್ತಿದ್ದಾರೆ. ಗ್ರಾಮಸ್ಥರಿಗೆ ತುರಿಕೆ, ಚರ್ಮ ರೋಗಗಳು ಬರುತ್ತಿವೆ. ಇದನ್ನು ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಇದರ ಪರಿಣಾಮ ದೊಡ್ಡ ಅನಾಹುತ ಸಂಭವಿಸಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

‘ಮೋಳಕೇರಾ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ನೀರು ಬಳಸಲು ಯೋಗ್ಯವಿಲ್ಲ. ಇನ್ನೂ ಸ್ವಲ್ಪ ದಿನಗಳು ಕಳೆದರೆ ಗಾಳಿ ಸಹ ವಿಷ ಆಗುವ ಆತಂಕವಿದೆ. ಪ್ರಭಾವಿಗಳ ಒತ್ತಡಕ್ಕೆ ಒಳಗಾಗದೇ ಸೂಕ್ತ ತನಿಖೆ ನಡೆಸಿ, ಕ್ರಮ ಕೈಗೊಳ್ಳಬೇಕು. ಗ್ರಾಮದ ಸುತ್ತಮುತ್ತ ವಿಷಪೂರಿತ ರಾಸಾಯನಿಕ ತ್ಯಾಜ್ಯ ಹಾಕದಂತೆ ಕ್ರಮ ಕೈಗೊಳ್ಳಬೇಕು’ ಎಂದು ಗ್ರಾಮದ ಬಸವರಾಜ ಆಗ್ರಹಿಸಿದ್ದಾರೆ.

ರಾಜ್ಯಮಟ್ಟದ ತಜ್ಞರ ತಂಡವನ್ನು ಮೋಳಕೇರಾ ಗ್ರಾಮಕ್ಕೆ ಕಳಿಸಿ ಅಲ್ಲಿನ ಮಣ್ಣು ನೀರಿನ ಪರೀಕ್ಷೆ ಮಾಡಿಸಿ ಆ ವರದಿ ಆಧರಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು.
–ಈಶ್ವರ ಬಿ. ಖಂಡ್ರೆ, ಪರಿಸರ ಅರಣ್ಯ ಮತ್ತು ಜೀವಿಶಾಸ್ತ್ರ ಸಚಿವ
ಗ್ರಾಮದ ಸುತ್ತಮುತ್ತ ವಿಷಪೂರಿತ ಕೆಮಿಕಲ್‌ ಹಾಕುತ್ತಿರುವ ಕಾರಣ ನೆಲ ಜಲ ವಿಷವಾಗಿದೆ. ಮಕ್ಕಳು ಹುಟ್ಟುತ್ತಲೇ ಅಂಗವೈಕಲ್ಯ ಸಮಸ್ಯೆಗೆ ಒಳಗಾಗುತ್ತಿದ್ದಾರೆ.
–ಅರವಿಂದ ಜೋಗ್ರೆ ಗ್ರಾಮಸ್ಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.