ಸಮರ್ಪಕವಾಗಿ ಮಳೆಯಾಗದ ಕಾರಣ ಸಸಿಗಳು ಬೆಳೆಯುತ್ತಿಲ್ಲ ಎಂದು ವಿವರಿಸಿದ ಬೀದರ್ ತಾಲ್ಲೂಕಿನ ಮರಕಲ್ ಗ್ರಾಮ ಸಮೀಪದ ರೈತ ಅಕ್ಬರ್ ಬಿಲಾಲ್
ಬೀದರ್: ಬೆಳೆಗೆ ಅಗತ್ಯವಿರುವ ಸಂದರ್ಭದಲ್ಲಿ ಮಳೆ ಕೈಕೊಟ್ಟಿರುವುದು ರೈತರ ಚಿಂತೆಗೆ ಕಾರಣವಾಗಿದೆ.
ಮೇ ತಿಂಗಳಲ್ಲಿ ಭರಪೂರ ಮಳೆಯಾಗಿತ್ತು. ಈ ಸಲ ಉತ್ತಮ ಮುಂಗಾರು ಮಳೆ ಆಗಲಿದೆ ಎಂದು ರೈತರು ನಿರೀಕ್ಷಿಸಿದ್ದರು. ಆದರೆ, ಜೂನ್ ಮತ್ತು ಜುಲೈ ತಿಂಗಳಲ್ಲಿ ಸಮರ್ಪಕವಾಗಿ ಮಳೆಯಾಗದ ಕಾರಣ ಸಹಜವಾಗಿಯೇ ರೈತರ ಚಿಂತೆ ಹೆಚ್ಚಿಸಿದೆ.
ಮೇ ತಿಂಗಳಲ್ಲಿ ವಾಡಿಕೆಗಿಂತ ಶೇ 256ರಷ್ಟು ಹೆಚ್ಚುವರಿ ಮಳೆಯಾಗಿತ್ತು. ಹೆಚ್ಚಿನವರು ಜೂನ್ ಆರಂಭದಲ್ಲೇ ಬಿತ್ತನೆ ಕಾರ್ಯ ಶುರು ಮಾಡಿದ್ದರು. ಆದರೆ, ಜೂನ್, ಜುಲೈನಲ್ಲಿ ಮಳೆ ಸಂಪೂರ್ಣ ಕೈಕೊಟ್ಟಿದೆ. ಎರಡು ತಿಂಗಳಲ್ಲಿ ಕ್ರಮವಾಗಿ ಶೇ 49ರಷ್ಟು ಮಳೆ ಕೊರತೆಯಾಗಿದೆ. ಆಗೊಮ್ಮೆ, ಈಗೊಮ್ಮೆ ಎಂಬಂತೆ ಎರಡು ಹನಿಗಳು ಬಿದ್ದು ಮಳೆ ಮಾಯವಾಗುತ್ತಿದೆ. ‘ಹೀಗಾದರೆ ಮುಂದೆ ಹೇಗಪ್ಪಾ?’ ಎಂದು ರೈತರು ಆಕಾಶ ನೋಡುತ್ತ ಅವರೇ ಪ್ರಶ್ನೆ ಮಾಡಿಕೊಳ್ಳುವಂತಹ ಪರಿಸ್ಥಿತಿ ಸೃಷ್ಟಿಯಾಗಿದೆ.
‘ಮಳೆ ಬೇಕಾದಾಗ ಸುರಿಯುತ್ತಿಲ್ಲ. ಬೇಡವಾದಾಗ ಬರುತ್ತಿದೆ. ಕಾಲ ಬದಲಾಗುತ್ತಿದೆ ಅಂತಾರಲ್ಲ ಇದೇ ಇರಬೇಕು ನೋಡಿ. ಮೇ ತಿಂಗಳಲ್ಲಿ ಬಿಸಿಲು ಹೆಚ್ಚಿದ್ದರೆ ನೆಲ ಕಾದು, ಅದರಲ್ಲಿ ಸತ್ವ ಹೆಚ್ಚಾಗುತ್ತದೆ. ಅದರಲ್ಲಿ ಬಿತ್ತನೆ ಮಾಡಿದರೆ ಉತ್ತಮ ಫಸಲು ಬರುತ್ತದೆ. ಈ ಸಲ ಈ ತರಹ ಆಗಿಲ್ಲ. ಎರಡು ತಿಂಗಳಿಂದ ಮಳೆಯೂ ಇಲ್ಲ. ಮುಂದೆ ಮಳೆ ಆಗದಿದ್ದರೆ ಬಹಳ ಕಷ್ಟವಾಗುತ್ತದೆ’ ಎಂದು ಮನ್ನಾಏಖ್ಖೆಳ್ಳಿಯ ರೈತ ಪ್ರಶಾಂತ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
‘ಜೂನ್‌ನಲ್ಲಿ ಕೊರತೆ ಮಳೆ ಆಗಿದ್ದರಿಂದ ಸಮಸ್ಯೆ ತಲೆದೋರಿತ್ತು. ಆದರೆ, ಜೂನ್ ತಿಂಗಳ ಕೊನೆಯ ಒಂದೆರೆಡು ದಿನಗಳಲ್ಲಿ ಮಳೆ ಬಿದ್ದಿದ್ದರಿಂದ ಬೆಳೆಗಳು ಚೇತರಿಸಿಕೊಂಡಿವೆ. ಆಗಾಗ ಮಳೆ ಬಂದು ಹೋಗುತ್ತಿರುವುದರಿಂದ ಸದ್ಯ ಚಿಂತೆ ಪಡುವ ಅಗತ್ಯವಿಲ್ಲ. ಆದರೆ, ಮುಂದೆ ಮಳೆ ಬೇಕಾಗುತ್ತದೆ’ ಎನ್ನುತ್ತಾರೆ ಜಂಟಿ ಕೃಷಿ ನಿರ್ದೇಶಕಿ ದೇವಿಕಾ ಆರ್.
ಸೋಯಾ ಹೆಚ್ಚು:
ಈ ಹಿಂದಿನಂತೆ ಈ ವರ್ಷವೂ ಸೋಯಾಬಿನ್ ಹೆಚ್ಚಿನ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. 2.32 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಸೋಯಾ ಬೆಳೆಸಲಾಗಿದೆ. ನಂತರದ ಸ್ಥಾನದಲ್ಲಿ ತೊಗರಿ ಇದೆ. 1.36 ಲಕ್ಷ ಹೆಕ್ಟೇರ್‌ನಲ್ಲಿ ತೊಗರಿ, 24 ಸಾವಿರ ಹೆಕ್ಟೇರ್‌ನಲ್ಲಿ ಹೆಸರು, 17 ಸಾವಿರ ಹೆಕ್ಟೇರ್‌ನಲ್ಲಿ ಉದ್ದು, 11 ಸಾವಿರ ಹೆಕ್ಟೇರ್‌ನಲ್ಲಿ ಕಬ್ಬು ಬೆಳೆಸಲಾಗಿದೆ.
‘ಸೋಯಾಬೀನ್‌ನಿಂದ ಉಪ ಉತ್ಪನ್ನಗಳನ್ನು ಹೆಚ್ಚಿನ ಪ್ರಮಾಣದಲ್ಲಿ ತಯಾರಿಸುತ್ತಿರುವುದರಿಂದ ಅದಕ್ಕೆ ಬೇಡಿಕೆ ಹೆಚ್ಚಿದೆ. ನಿರ್ವಹಣೆಯೂ ಅಷ್ಟಕಷ್ಟೇ. ಆದಕಾರಣ ರೈತರು ಅದಕ್ಕೆ ಹೆಚ್ಚಾಗಿ ಒಲವು ತೋರಿಸುತ್ತಿದ್ದಾರೆ’ ಎನ್ನುತ್ತಾರೆ ಕೃಷಿ ಇಲಾಖೆಯ ಅಧಿಕಾರಿಗಳು.
ಬೀದರ್ ಜಿಲ್ಲೆಯಲ್ಲಿ ನಿರೀಕ್ಷೆಗೆ ತಕ್ಕಂತೆ ಜೂನ್ ಜುಲೈ ತಿಂಗಳಲ್ಲಿ ಮಳೆಯಾಗಿಲ್ಲ. ಮುಂಬರುವ ದಿನಗಳಲ್ಲಿ ಉತ್ತಮ ಮಳೆಯ ನಿರೀಕ್ಷೆ ಇದೆ. ರೈತರು ಆತಂಕ ಪಡಬೇಕಿಲ್ಲದೇವಿಕಾ ಆರ್. ಜಂಟಿ ಕೃಷಿ ನಿರ್ದೇಶಕಿ ಬೀದರ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.