ಬೀದರ್: ಎಲ್ಲಿ ಭೂರಮೆ ದೇವಸನ್ನಿಧಿ ಬಯಸಿ ಭಿಮ್ಮನೆ ಬಂದಳೋ?
ಎಲ್ಲಿ ಮೋಹನ ಗಿರಿಯ ಬೆಡಗಿನ ರೂಪಿನಿಂದಲಿ ನಿಂದಳೋ?
ಇದು ಪಂಜೇ ಮಂಗೇಶರಾಯರ ಸಾಲುಗಳು.
ಬೀದರ್‌ನಲ್ಲಿ ಒಮ್ಮೆ ಸುತ್ತಾಡಿದರೆ ಇಂತಹ ಅನುಭವ ಎಂತಹವರಿಗಾದರೂ ಒಂದು ಕ್ಷಣ ಆಗುತ್ತದೆ.
ಮಳೆಗಾಲದ ಆರಂಭದಿಂದಲೂ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಇಳೆ ಸಂಪೂರ್ಣ ಹಸಿರು ಹೊದ್ದುಕೊಂಡಿದೆ. ದೃಷ್ಟಿ ಹಾಯಿಸಿದಲೆಲ್ಲಾ ಹಚ್ಚ ಹಸಿರು ಬಿಟ್ಟರೇ ಮತ್ತೇನೂ ಇಲ್ಲ. ತೊರೆ, ಹಳ್ಳಗಳೆಲ್ಲ ತುಂಬಿ ಹರಿಯುತ್ತಿವೆ. ಜಿಲ್ಲೆಯ ಪ್ರಮುಖ ನದಿಗಳಾದ ಮಾಂಜ್ರಾ, ಕಾರಂಜಾ ಮೈದುಂಬಿ ಹರಿಯುತ್ತಿದ್ದು, ಜಲಮೂಲಗಳೆಲ್ಲ ಭರ್ತಿಯಾಗಿವೆ.
ಅತಿವೃಷ್ಟಿ ಅನ್ನದಾತರ ಬದುಕು ಮೂರಾಬಟ್ಟೆ ಮಾಡಿ ಸಂಕಷ್ಟಕ್ಕೆ ಈಡು ಮಾಡಿರುವುದು ಸತ್ಯ. ಆದರೆ, ಇನ್ನೊಂದೆಡೆ ಧರೆಗೆ ಸಮೃದ್ಧಿ ಬಂದಂತಹ ಅನುಭವವಾಗುತ್ತಿರುವುದು ಅಷ್ಟೇ ನಿಜ.
ಪ್ರತಿ ವರ್ಷ ಜಿಲ್ಲೆಯ ಒಂದು ಕಡೆ ಉತ್ತಮ ಮಳೆಯಾದರೆ, ಮತ್ತೊಂದು ಭಾಗದಲ್ಲಿ ವ್ಯತಿರಿಕ್ತ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು. ಆದರೆ, ಈ ಸಲ ಸಂಪೂರ್ಣ ಭಿನ್ನ. ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿರುವುದರಿಂದ ಎಲ್ಲ ಜಲಮೂಲಗಳಿಗೆ ಜೀವ ಕಳೆ ಬಂದಿದೆ. ನೆಲವೆಲ್ಲ ಹಸಿರು ಹೊದ್ದು ನಿಂತಿದೆ. ಕಾರಂಜಾ, ಮಾಂಜ್ರಾ ನದಿಗಳು ಸದ್ದಿಲ್ಲದೇ ಮೈಚಾಚಿಕೊಂಡು ಹರಿಯುತ್ತಿದ್ದು, ಎಲ್ಲರ ಕಣ್ಮನ ಸೆಳೆಯುತ್ತಿದೆ. ಅದರಲ್ಲೂ ಕೆಲ ಪ್ರವಾಸಿ ತಾಣಗಳು ಹಸಿರಿನಿಂದ ಮತ್ತಷ್ಟು ಗಮನ ಸೆಳೆಯುತ್ತಿವೆ. ಎಲ್ಲೇ ಹೋದರೂ ಥೇಟ್ ಮಲೆನಾಡಿನ ಅನುಭವ ಉಂಟಾಗುತ್ತಿದೆ.
ಎತ್ತರದ ಪ್ರದೇಶದಲ್ಲಿರುವ ಬೀದರ್ ಕೋಟೆಯ ಒಳ ಆವರಣ ಹಾಗೂ ಸುತ್ತಲಿನ ಪ್ರದೇಶವೆಲ್ಲ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದು, ನೋಡಲು ಎರಡು ಕಣ್ಣುಗಳು ಸಾಲದ ಅನುಭವ. ಗುರುದ್ವಾರ, ಝರಣಿ ನರಸಿಂಹ ಸ್ವಾಮಿ, ಪಾಪನಾಶ, ಹೊನ್ನಿಕೇರಿ ಸಿದ್ದೇಶ್ವರ, ಮೈಲಾರ ಮಲ್ಲಣ್ಣ ದೇವಸ್ಥಾನವೂ ಭಿನ್ನವಾಗೇನೂ ಇಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.