ಬೀದರ್: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಭಾನುವಾರ ಮೊಹರಂ ಆಚರಿಸಲಾಯಿತು.
ಪೀರಲ ದೇವರುಗಳನ್ನು ಅಲಂಕರಿಸಿ, ಪೂಜೆ ಸಲ್ಲಿಸಿ ನೈವೇದ್ಯ ಸಮರ್ಪಿಸಲಾಯಿತು. ಮಕ್ಕಳು, ಯುವಕರು, ವಯಸ್ಕರು ಹುಲಿ ಹೋಲುವ ರೀತಿಯಲ್ಲಿ ಮೈಗೆ ಬಣ್ಣ ಬಳಿದುಕೊಂಡು, ತಮಟೆ ನಾದಕ್ಕೆ ಹೆಜ್ಜೆ ಹಾಕಿ ಹರಕೆ ತೀರಿಸಿದರು. ನಗರದ ಸಿದ್ದಿ ತಾಲೀಮ್, ಮೈಲೂರ, ಚಿದ್ರಿ, ತಾಲ್ಲೂಕಿನ ಅಮಲಾಪೂರ, ಚಿಟ್ಟಾ, ಬಗದಲ್, ಕಮಠಾಣ, ಚಿಟಗುಪ್ಪ ತಾಲ್ಲೂಕಿನ ಮನ್ನಾಏಖ್ಖೆಳ್ಳಿ ಸೇರಿದಂತೆ ಜಿಲ್ಲೆಯ ಹಲವೆಡೆ ಸೌಹಾರ್ದಿಂದ ಹಬ್ಬ ಆಚರಿಸಲಾಯಿತು. ಹಿಂದೂ, ಮುಸ್ಲಿಮರು ದೇವರಿಗೆ ಪೂಜೆ ಸಲ್ಲಿಸಿ, ದರ್ಶನ ಪಡೆದದ್ದು ವಿಶೇಷ.
ಇನ್ನು ಶನಿವಾರ ಮಧ್ಯರಾತ್ರಿ ಕತ್ತಲರಾತ್ರಿ ಆಚರಿಸಲಾಯಿತು. ಕೆಲವೆಡೆ ಕೆಂಡ ತುಳಿದು ಭಕ್ತರು ಹರಕೆ ತೀರಿಸಿದರೆ, ಕೆಲವು ಕಡೆಗಳಲ್ಲಿ ಪೀರಲ ದೇವರನ್ನು ಹೊತ್ತು ನಗರದಲ್ಲಿ ಮೆರವಣಿಗೆ ಮಾಡಿದರು. ಪಟಾಕಿ ಸಿಡಿಸಿ, ತಮಟೆ ಬಾರಿಸಿ ಕುಣಿದು ಕುಪ್ಪಳಿಸಿದರು. ಬೆಳಗಿನ ವರೆಗೆ ದೇವರ ಸ್ತುತಿಸುವ ಹಾಡುಗಳನ್ನು ಹಾಕಿ, ಭಜಿಸಿದರು.
ನಗರದಲ್ಲಿ ಇರಾನಿ ಮೂಲದವರು ದೊಡ್ಡ ಸಂಖ್ಯೆಯಲ್ಲಿ ಸೇರಿ ದೇವರ ಮೆರವಣಿಗೆ ಮಾಡಿದರು. ದೇಹವನ್ನು ದಂಡಿಸುತ್ತ ಹೆಜ್ಜೆ ಹಾಕಿದರು. ಇದನ್ನು ಕಣ್ತುಂಬಿಕೊಳ್ಳಲು ಅಪಾರ ಸಂಖ್ಯೆಯ ಜನ ಸೇರಿದ್ದರು. ನಗರದ ಇರಾನಿ ಕಾಲೊನಿಯಿಂದ ಆರಂಭಗೊಂಡ ಮೆರವಣಿಗೆ ಪ್ರಮುಖ ಮಾರ್ಗಗಳ ಮೂಲಕ ಪುನಃ ಅಲ್ಲಿಗೆ ತಲುಪಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.