
ಬೀದರ್: ಬೀದರ್ ಮಹಾನಗರ ಪಾಲಿಕೆ ವ್ಯಾಪ್ತಿಗೆ ಸೇರಿದ ಕೆಲವು ಗ್ರಾಮ ಪಂಚಾಯಿತಿಗಳ ಗ್ರಾಮಗಳು ಇದುವರೆಗೆ ಪಾಲಿಕೆಯಾಗಲಿ, ಹೊಸ ಪಂಚಾಯಿತಿ ವ್ಯಾಪ್ತಿಗೆ ಸೇರದ ಕಾರಣ ಆ ಗ್ರಾಮಸ್ಥರು ಅತಂತ್ರರಾಗಿದ್ದಾರೆ. ಬಹಳ ತೊಂದರೆ ಅನುಭವಿಸುತ್ತಿದ್ದಾರೆ.
ಬೀದರ್ ತಾಲ್ಲೂಕಿನ ಆರು ಗ್ರಾಮ ಪಂಚಾಯಿತಿಗಳ 16 ಗ್ರಾಮಗಳು ಪಾಲಿಕೆ ವ್ಯಾಪ್ತಿಗೆ ಸೇರಿವೆ. ಆದರೆ, ಆ ಪಂಚಾಯಿತಿಗಳ ಕೆಲ ಗ್ರಾಮಗಳನ್ನು ಇದುವರೆಗೆ ಸಮೀಪದ ಪಂಚಾಯಿತಿಗಳಿಗೆ ಸೇರ್ಪಡೆ ಮಾಡಿಲ್ಲ. ಇದರಿಂದ ಗ್ರಾಮಸ್ಥರ ಯಾವುದೇ ಕೆಲಸಗಳು ಆಗುತ್ತಿಲ್ಲ ಎಂದು ಬೇಸರ ತೋಡಿಕೊಂಡಿದ್ದಾರೆ.
ಪಂಚಾಯಿತಿಯಲ್ಲಿ ಮ್ಯುಟೇಶನ್, ಡಿಜಿಟಲ್ ಖಾತಾ, ಉದ್ಯೋಗ ಖಾತ್ರಿ ಜಾಬ್ ಕಾರ್ಡ್, ಕಟ್ಟಡ ನಿರ್ಮಾಣದ ಪರವಾನಗಿ, ವಾಸಸ್ಥಳ ಪ್ರಮಾಣ ಪತ್ರ ಸೇರಿದಂತೆ ಇತರೆ ದಾಖಲೆಗಳನ್ನು ಕೊಡುತ್ತಾರೆ. ಆದರೆ, ಅವರ ಗ್ರಾಮಗಳನ್ನು ಇದುವರೆಗೆ ಎಲ್ಲೂ ಕೂಡ ಸೇರ್ಪಡೆ ಮಾಡದ ಕಾರಣ ದಿಕ್ಕು ತೋಚದೆ ಇಕ್ಕಟ್ಟಿಗೆ ಸಿಲುಕಿದ್ದಾರೆ. ಈ ಸಂಬಂಧ ಅಧಿಕಾರಿಗಳನ್ನು ಪ್ರಶ್ನಿಸಿದರೆ, ಯಾವ ಗ್ರಾಮ ಪಂಚಾಯಿತಿಗೆ ಸೇರಿಸಬೇಕೆನ್ನುವುದರ ಬಗ್ಗೆ ಚರ್ಚೆ ನಡೆದಿದೆ ಎಂದು ಹೇಳುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಉದಾಹರಣೆಗೆ ಬೀದರ್ ತಾಲ್ಲೂಕಿನ ಕೊಳಾರ (ಕೆ) ಗ್ರಾಮ ಪಂಚಾಯಿತಿಯಿಂದ ಕೊಳಾರ (ಕೆ), ಹಜ್ಜರಗಿ, ಕಮಲಪೂರ, ನಿಜಾಮಪೂರ ಗ್ರಾಮಗಳು ಪಾಲಿಕೆಗೆ ಸೇರ್ಪಡೆಯಾಗಿವೆ. ಆದರೆ, ಈ ಪಂಚಾಯಿತಿ ವ್ಯಾಪ್ತಿಯ ಬಕಚೌಡಿ, ಬೆಳ್ಳೂರ ಗ್ರಾಮಗಳನ್ನು ಇದುವರೆಗೆ ಎಲ್ಲೂ ಸೇರಿಸಿಲ್ಲ. ಇತರೆ ಗ್ರಾಮಗಳ ಪರಿಸ್ಥಿತಿಯೂ ಹೀಗೆ ಇದೆ. ಅದೇ ರೀತಿ ಮರಕಲ್ ಗ್ರಾಮ ಪಂಚಾಯಿತಿಯಿಂದ ಚಿಕ್ಕಪೇಟೆ ಗ್ರಾಮ ಪಾಲಿಕೆಗೆ ಸೇರಿಸಲಾಗಿದೆ. ಮರಕಲ್, ಬೆನಕನಳ್ಳಿ ಸೇರಿಲ್ಲ. ಆದರೆ, ಪಂಚಾಯಿತಿ ಕಚೇರಿ ಇರುವ ಮರಕಲ್ ಪಾಲಿಕೆಗೆ ಸೇರದ ಕಾರಣ ಹೆಚ್ಚೇನೂ ಸಮಸ್ಯೆ ಆಗಿಲ್ಲ.
ಆದರೆ, ಪಾಲಿಕೆ ಮೇಲ್ದರ್ಜೆಗೊಂಡ ನಂತರ ಗ್ರಾಮಗಳ ದಾಖಲೆಗಳನ್ನು ಪಾಲಿಕೆಗೆ ಹಸ್ತಾಂತರಿಸಲಾಗಿದ್ದು, ಅವುಗಳನ್ನು ಡಿಜಿಟಲೀಕರಣಗೊಳಿಸುವ ಪ್ರಕ್ರಿಯೆ ಇನ್ನೂ ನಡೆಯುತ್ತಿದ್ದು, ಪಾಲಿಕೆ ಸೇರಿದ ಗ್ರಾಮಗಳ ಗ್ರಾಮಸ್ಥರಿಗೂ ಸಮಸ್ಯೆ ಎದುರಾಗಿದೆ.
‘ಆದಷ್ಟು ಶೀಘ್ರ ಸಮೀಪದ ಪಂಚಾಯಿತಿಗಳಿಗೆ ಬಿಟ್ಟು ಹೋದ ಗ್ರಾಮಗಳನ್ನು ಸೇರಿಸಬೇಕು. ಗ್ರಾಮಸ್ಥರನ್ನು ಇಕ್ಕಟ್ಟಿನಿಂದ ಪಾರು ಮಾಡಬೇಕು. ಪಂಚಾಯಿತಿ ಇಲ್ಲದ ಕಾರಣ ದಾಖಲೆಗಳಿಲ್ಲದೇ ಸುಮ್ಮನೆ ಕೂರುವ ಪರಿಸ್ಥಿತಿ ಇದೆ. ಇದನ್ನು ಜಿಲ್ಲಾಡಳಿತ ಗಂಭೀರವಾಗಿ ತೆಗೆದುಕೊಂಡು ಸಮಸ್ಯೆ ಬಗೆಹರಿಸಬೇಕು’ ಎಂದು ಬಕಚೌಡಿ, ಬೆಳ್ಳೂರ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಬೀದರ್ ನಗರಸಭೆ ಮಹಾನಗರ ಪಾಲಿಕೆಯಾಗಿ 2025ರ ಫೆಬ್ರುವರಿಯಲ್ಲಿ ಮೇಲ್ದರ್ಜೆಗೇರಿಸಲಾಗಿದೆ. ಎಂಟು ತಿಂಗಳು ಕಳೆದರೂ ಗ್ರಾಮಗಳ ಸೇರ್ಪಡೆ ಇನ್ನೂ ನನೆಗುದಿಗೆ ಬಿದ್ದ ಕಾರಣ ಗ್ರಾಮಸ್ಥರು ಅಸಮಾಧಾನಗೊಂಡಿದ್ದಾರೆ.
ಕೊಳಾರ ಪಂಚಾಯಿತಿ ಮಹಾನಗರ ಪಾಲಿಕೆಗೆ ಸೇರಿದೆ. ಆದರೆ ಬಕಚೌಡಿ ಬೆಳ್ಳೂರ ಗ್ರಾಮಗಳನ್ನು ಇದುವರೆಗೆ ಯಾವುದೇ ಪಂಚಾಯಿತಿಗೆ ಸೇರ್ಪಡೆ ಮಾಡಿಲ್ಲ. ಯಾವುದೇ ಕೆಲಸಗಳು ಆಗುತ್ತಿಲ್ಲ. ಬಹಳ ತೊಂದರೆಯಾಗುತ್ತಿದೆ.ವಿನೋದ್ ಚಿಂತಾಮಣಿ ಬಕಚೌಡಿ ಗ್ರಾಮಸ್ಥ
ಇನ್ನೂ ಯಾವುದೇ ಪಂಚಾಯಿತಿಗೆ ನಮ್ಮ ಗ್ರಾಮ ಸೇರ್ಪಡೆ ಮಾಡಿಲ್ಲ. ಯಾವುದೇ ಕೆಲಸವಿದ್ದರೆ ಎಲ್ಲಿ ಅರ್ಜಿ ಕೊಡಬೇಕು ಗೊತ್ತಾಗುತ್ತಿಲ್ಲ. ಐದಾರು ತಿಂಗಳಿಂದ ಹುಚ್ಚರಂತೆ ಓಡಾಡುತ್ತಿದ್ದೇವೆ. ಅಧಿಕಾರಿಗಳನ್ನು ಕೇಳಿದರೆ ಸಮಂಜಸ ಉತ್ತರ ಸಿಗುತ್ತಿಲ್ಲ.ಗಣೇಶ ಬಕಚೌಡಿ ಗ್ರಾಮಸ್ಥ
ಮಹಾನಗರ ಪಾಲಿಕೆಗೆ ಸೇರದ ಕೆಲವು ಗ್ರಾಮಗಳನ್ನು ಸಮೀಪದ ಪಂಚಾಯಿತಿಗೆ ಸೇರ್ಪಡೆ ಮಾಡಬೇಕೆಂದು ಜಿಲ್ಲಾಧಿಕಾರಿಗೆ ಪ್ರಸ್ತಾವ ಸಲ್ಲಿಸಲಾಗಿದೆ. ಮಿಕ್ಕುಳಿದ ಪ್ರಕ್ರಿಯೆ ಅವರ ಹಂತದಲ್ಲಿಯೇ ನಡೆಯಲಿದೆ.ಡಾ. ಗಿರೀಶ ಬದೋಲೆ ಕಾರ್ಯನಿರ್ವಾಹಕ ಅಧಿಕಾರಿ ಜಿ.ಪಂ. ಬೀದರ್
ಮಹಾನಗರ ಪಾಲಿಕೆಗೆ ಕೆಲ ಪಂಚಾಯಿತಿಗಳು ಸೇರಿದ್ದು ಅವುಗಳ ವ್ಯಾಪ್ತಿಯ ಕೆಲ ಗ್ರಾಮಗಳು ಸೇರಿಲ್ಲ. ಅವುಗಳನ್ನು ಸಮೀಪದ ಪಂಚಾಯಿತಿಗಳಿಗೆ ಸೇರಿಸುವ ಪ್ರಕ್ರಿಯೆ ಈ ತಿಂಗಳ ಅಂತ್ಯಕ್ಕೆ ಕೊನೆಗೊಳ್ಳಲಿದೆ.ಶಿಲ್ಪಾ ಶರ್ಮಾ ಜಿಲ್ಲಾಧಿಕಾರಿ ಬೀದರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.