ADVERTISEMENT

ಏನೇ ಪರಿಸ್ಥಿತಿ ಬಂದರೂ ಎದುರಿಸಲು ಸಿದ್ಧರಾಗಿ: ನೂತನ ಜಿಲ್ಲಾಧಿಕಾರಿ

ಅಧಿಕಾರಿಗಳಿಗೆ ನೂತನ ಜಿಲ್ಲಾಧಿಕಾರಿ ಸೂಚನೆ

​ಪ್ರಜಾವಾಣಿ ವಾರ್ತೆ
Published 4 ಜೂನ್ 2020, 16:03 IST
Last Updated 4 ಜೂನ್ 2020, 16:03 IST
ಬೀದರ್‌ನಲ್ಲಿ ಗುರುವಾರ ನೂತನ ಜಿಲ್ಲಾಧಿಕಾರಿ ರಾಮಚಂದ್ರನ್ ಅವರು ವೈದ್ಯಾಧಿಕಾರಿ ಹಾಗೂ ಇತರ ಅಧಿಕಾರಿಗಳ ಸಭೆ ನಡೆಸಿದರು
ಬೀದರ್‌ನಲ್ಲಿ ಗುರುವಾರ ನೂತನ ಜಿಲ್ಲಾಧಿಕಾರಿ ರಾಮಚಂದ್ರನ್ ಅವರು ವೈದ್ಯಾಧಿಕಾರಿ ಹಾಗೂ ಇತರ ಅಧಿಕಾರಿಗಳ ಸಭೆ ನಡೆಸಿದರು   

ಬೀದರ್: ‘ಕೋವಿಡ್–19 ಸೋಂಕಿಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಎಂತಹುದೇ ಪರಿಸ್ಥಿತಿ ಉದ್ಭವಿಸಿದರೂ ಎದುರಿಸಲು ಸಿದ್ಧರಾಗಿರಬೇಕು’ ಎಂದು ನೂತನ ಜಿಲ್ಲಾಧಿಕಾರಿ ರಾಮಚಂದ್ರನ್ ಆರ್., ಅವರು ವೈದ್ಯರು ಹಾಗೂ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ವೈದ್ಯಾಧಿಕಾರಿಗಳು ಹಾಗೂ ಇತರ ಅಧಿಕಾರಿಗಳ ಸಭೆ ನಡೆಸಿದ ಅವರು, ‘ಜಿಲ್ಲೆಯಲ್ಲಿ ಕೋವಿಡ್–19 ಪ್ರಕರಣಗಳು ಹೆಚ್ಚುತ್ತಿರುವುದು ಎಚ್ಚರಿಕೆಯ ಗಂಟೆಯಾಗಿದೆ. ಬ್ರಿಮ್ಸ್ ಆಸ್ಪತ್ರೆಯಲ್ಲಿ ಅಗತ್ಯ ಬೆಡ್, ವೆಂಟಿಲೇಟರ್ ಮೊದಲಾದ ಸೌಕರ್ಯಗಳಿಗೆ ಒತ್ತು ಕೊಡಬೇಕು’ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗ್ಯಾನೇಂದ್ರಕುಮಾರ ಗಂಗ್ವಾರ್ ಮಾತನಾಡಿ, ‘ರೋಗಿಗಳ ಚಿಕಿತ್ಸೆಗೆ ಎಲ್ಲ ವೈದ್ಯಕೀಯ ಸಾಮಗ್ರಿ ಲಭ್ಯ ಇರುವಂತೆ ನೋಡಿಕೊಳ್ಳಬೇಕು. ಪ್ರಯೋಗಾಲಯ ಸಾಮರ್ಥ್ಯ ಹೆಚ್ಚಿಸುವ ಕಡೆ ಗಮನ ಹರಿಸಬೇಕು’ ಎಂದು ಹೇಳಿದರು.

ADVERTISEMENT

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್.ನಾಗೇಶ ಮಾತನಾಡಿ, ‘ಕೋವಿಡ್–19 ಗೆ ಸಂಬಂಧಿಸಿದಂತೆ ಈವರೆಗೆ ಸಿದ್ಧಪಡಿಸಿರುವ ಬೆಡ್‍ಗಳ ಸಂಖ್ಯೆ ಎಷ್ಟು, ಐಸೊಲೇಶನ್ ವಿಶೇಷ ವಾರ್ಡ್‍ಗಳು ಎಷ್ಟು ಎನ್ನುವುದನ್ನು ಕೋವಿಡ್– 19 ಪೋರ್ಟಲ್‍ನಲ್ಲಿ ಪ್ರತಿದಿನ ಅಪ್‍ಡೇಟ್ ಮಾಡಬೇಕು’ ಎಂದು ತಿಳಿಸಿದರು.

ಬ್ರಿಮ್ಸ್ ನಿರ್ದೇಶಕ ಡಾ. ಶಿವಕುಮಾರ ಮಾತನಾಡಿ, ‘ಸ್ಟಾಫ್ ನರ್ಸ್‍ಗಳು, ಎಕ್ಸ್‌ರೇ ಟೆಕ್ನಿಶಿಯನ್ ಸೇರಿದಂತೆ ಬ್ರಿಮ್ಸ್ ಆಸ್ಪತ್ರೆಗೆ ಮಾನವ ಸಂಪನ್ಮೂಲದ ಅಗತ್ಯ ಇದೆ’ ಎಂದು ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ರುದ್ರೇಶ ಘಾಳಿ, ಬೀದರ್ ಉಪ ವಿಭಾಗಧಿಕಾರಿ ಅಕ್ಷಯ್ ಶ್ರೀಧರ, ಭಂವರಸಿಂಗ್ ಮೀನಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.