
ಬೀದರ್: ಬುಧವಾರ (ಡಿ.31) ರಾತ್ರಿ ಹೊಸ ವರ್ಷವನ್ನು ಅತ್ಯುತ್ಸಾಹದಿಂದ ಸ್ವಾಗತಿಸಲು ಜನ ತುದಿಗಾಲ ಮೇಲೆ ನಿಂತಿದ್ದು, ಉತ್ಸುಕರಾಗಿದ್ದಾರೆ.
ಇನ್ನೊಂದೆಡೆ ಜಿಲ್ಲಾ ಪೊಲೀಸ್ ಇಲಾಖೆ ಕೂಡ ಯಾವುದೇ ಅವಘಡಗಳು ನಡೆಯದಂತೆ ಹೊಸ ವರ್ಷಾಚರಣೆ ಸಂಭ್ರಮದಿಂದ ನಡೆಯಲೆಂದು ವ್ಯಾಪಕ ಸಿದ್ಧತೆ ಮಾಡಿಕೊಂಡಿದೆ.
ವಿವಿಧ ಬಡಾವಣೆಗಳಲ್ಲಿ ಸ್ನೇಹಿತರ ಬಳಗ, ಸಂಘ ಸಂಸ್ಥೆಗಳು, ಹೋಟೆಲ್, ರೆಸಾರ್ಟ್‌ನವರು ಹೊಸ ವರ್ಷಾಚರಣೆ ಕಾರ್ಯಕ್ರಮಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ. ಹೋಟೆಲ್, ರೆಸಾರ್ಟ್‌ನವರು ಎಂದಿಗಿಂತ ಹೆಚ್ಚಿನ ಪ್ರಮಾಣದ ಮದ್ಯ ದಾಸ್ತಾನು ಮಾಡಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅಕ್ರಮ ಮದ್ಯ ಮಾರಾಟ–ಸಾಗಾಟದ ಮೇಲೆ ಅಬಕಾರಿ ಇಲಾಖೆಯವರು ವಿಶೇಷ ನಿಗಾ ವಹಿಸಲು ತಂಡ ರಚಸಿದ್ದಾರೆ. ಇನ್ನೊಂದೆಡೆ ಜಿಲ್ಲಾ ಪೊಲೀಸ್ ಇಲಾಖೆಯು, ಮದ್ಯ ಸೇವಿಸಿ ವಾಹನ ಚಲಾಯಿಸುವವರ ಮೇಲೆ ಹದ್ದಿನ ಕಣ್ಣು ಇಟ್ಟಿದೆ. ಸಾರ್ವಜನಿಕ ಸ್ಥಳಗಳಲ್ಲಿ ಶಾಂತಿ ಭಂಗವಾಗದಂತೆ ತಡೆಯುವುದಕ್ಕಾಗಿ ತಂಡಗಳನ್ನು ರಚಿಸಿದೆ. ಅದರಲ್ಲೂ ಬೀದರ್ ನಗರ ಹಾಗೂ ತಾಲ್ಲೂಕು ಕೇಂದ್ರಗಳು, ಪ್ರಮುಖ ಹೋಬಳಿ ಕೇಂದ್ರಗಳಲ್ಲಿ ಆ ದಿನ ರಾತ್ರಿಯಿಡೀ ಪೊಲೀಸರು ಗಸ್ತು ತಿರುಗಲಿದ್ದಾರೆ.
ಪ್ಯಾಟ್ರೊಲಿಂಗ್ ಮತ್ತು ಪಿಕೆಟಿಂಗ್‌ಗಾಗಿಯೇ 1,700 ಜನ ಸಿಬ್ಬಂದಿಯನ್ನು ಪೊಲೀಸ್ ಇಲಾಖೆ ನಿಯೋಜಿಸಿದೆ. ಇದಲ್ಲದೇ 2 ಕೆಎಸ್‌ಆರ್‌ಪಿ, 10 ಡಿಎಆರ್ ತುಕಡಿ, 200 ಜನ ಗೃಹರಕ್ಷಕರು ಹಾಗೂ ಅಕ್ಕ ಪಡೆಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಹೊಸ ವರ್ಷದ ದಿನ ಪಡ್ಡೆ ಹುಡುಗರು/ಯುವಕರು ಬೈಕ್ ಸೈಲೆನ್ಸರ್ ತೆಗೆದು ಮದ್ಯ ಸೇವಿಸಿ ವಾಹನ ಚಲಾಯಿಸುವುದು ಫ್ಯಾಶನ್ ಮಾಡಿಕೊಂಡಿದ್ದಾರೆ. ಈ ಸಲ ಅದನ್ನು ನಿಯಂತ್ರಿಸಲು ಪೊಲೀಸರು ಮುಂದಾಗಿದ್ದಾರೆ. ಈ ರೀತಿ ಮಾಡುವವರ ವಾಹನಗಳನ್ನು ಜಪ್ತಿ ಮಾಡಿ, ಅವರ ಡಿಎಲ್ ರದ್ದುಪಡಿಸಲು ಆರ್‌ಟಿಒಗೆ ಶಿಫಾರಸು ಮಾಡಲು ಯೋಜಿಸಲಾಗಿದೆ.
ಹೊಸ ವರ್ಷಾಚರಣೆಯನ್ನು ಸಂಭ್ರಮದಿಂದ ಆಚರಿಸಲು ಯಾವುದೇ ನಿರ್ಬಂಧವಿಲ್ಲ. ಆದರೆ ಕಾನೂನು ಸುವ್ಯವಸ್ಥೆಗೆ ಭಂಗ ಬರದಂತೆ ಆಚರಿಸಬೇಕುಪ್ರದೀಪ್ ಗುಂಟಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬೀದರ್
ಹೊಸ ವರ್ಷಾಚರಣೆ ಕಾರ್ಯಕ್ರಮ ಆಯೋಜನೆ ಹೀಗಿರಬೇಕು...
ಹೊಸ ವರ್ಷಾಚರಣೆ ನಡೆಯಲಿರುವ ಹೋಟೆಲ್/ರೆಸಾರ್ಟ್ ಮಾಲೀಕರಿಗೆ ಜಿಲ್ಲಾ ಪೊಲೀಸ್ ಇಲಾಖೆಯು ಕೆಲವು ಸೂಚನೆಗಳನ್ನು ನೀಡಿದೆ. ಅವುಗಳು ಇಂತಿವೆ
* ಕಾರ್ಯಕ್ರಮ ಆಯೋಜನೆಗೆ ಪೂರ್ವಾನುಮತಿ ಕಡ್ಡಾಯ
* ಮದ್ಯ ಮಾರಾಟಕ್ಕೆ ಸಂಬಂಧಿಸಿದಂತೆ ಅಬಕಾರಿ ಇಲಾಖೆಯ ಅನುಮತಿಯಂತೆ ಸಮಯ ಪಾಲಿಸುವುದು
* ನಿಗದಿಪಡಿಸಿದ ಸೌಂಡ್ ಸಿಸ್ಟಂ ಬಳಸುವುದು
* ಹೋಟೆಲ್/ರೆಸಾರ್ಟ್ ಎದುರು ಸಾರ್ವಜನಿಕ ಸಂಚಾರಕ್ಕೆ ಸಮಸ್ಯೆಯಾಗಬಾರದು
* ಮಾದಕ ವಸ್ತುಗಳ ಬಳಕೆ ನಿಷಿದ್ಧ
* ನಿಗದಿತ ಸಂಖ್ಯೆಗಿಂತ ಹೆಚ್ಚಿನ ಜನ ಸೇರುವಂತಿಲ್ಲ
* ಯಾವುದೇ ಆಯುದ್ಧ ಇರಿಸಿಕೊಳ್ಳುವುದು/ಪ್ರದರ್ಶಿಸುವಂತಿಲ್ಲ
* ಜನರ ಭದ್ರತೆಗೆ ವ್ಯವಸ್ಥೆಗೆ ಮಾಡಿಕೊಳ್ಳುವುದು
* ಕಾರ್ಯಕ್ರಮ ಸ್ಥಳದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸುವುದು ಕಡ್ಡಾಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.