ADVERTISEMENT

ಯಾತ್ರಾ ಪರ್ವ ಉದ್ಘಾಟನೆ ನಾಳೆ: ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಸಮಾರಂಭ

ಬಸವಕಲ್ಯಾಣದಲ್ಲಿ ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಸಮಾರಂಭ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2022, 11:53 IST
Last Updated 8 ಏಪ್ರಿಲ್ 2022, 11:53 IST
ಬಸವಕಲ್ಯಾಣದಲ್ಲಿ ಡಾ.ಬಿ.ಆರ್‌.ಅಂಬೇಡ್ಕರ್ ವೃತ್ತ ಸಿಂಗಾರಗೊಳಿಸಲಾಗಿದೆ
ಬಸವಕಲ್ಯಾಣದಲ್ಲಿ ಡಾ.ಬಿ.ಆರ್‌.ಅಂಬೇಡ್ಕರ್ ವೃತ್ತ ಸಿಂಗಾರಗೊಳಿಸಲಾಗಿದೆ   

ಬಸವಕಲ್ಯಾಣ: ಶನಿವಾರ (ಏ.9) ಬೆಳಿಗ್ಗೆ 11.30ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಐದು ವರ್ಷದ ಯೋಜನೆಯಾದ ಬಸವಕಲ್ಯಾಣ ಹಾಗೂ ಕಲ್ಯಾಣ ಕರ್ನಾಟಕ ಯಾತ್ರಾ ಪರ್ವದ ಉದ್ಘಾಟನೆ ನೆರವೇರಿಸಲಿದ್ದಾರೆ.

ಅದಕ್ಕಾಗಿ ತೇರು ಮೈದಾನದಲ್ಲಿ ಬೃಹತ್ ಸಭಾ ಮಂಟಪ ಸಿದ್ಧಗೊಂಡಿದೆ. 8 ಸ್ಥಳಗಳಲ್ಲಿ ದೊಡ್ಡ ಅಲಂಕಾರಿಕ ಬಲೂನ್‌ಗಳನ್ನು ಕಟ್ಟಲಾಗಿದೆ. ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದ್ದು, 800ಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿದೆ.

ಬಸವಕಲ್ಯಾಣ ಕ್ಷೇತ್ರ ಸಮಿತಿ ಹಾಗೂ ಕಲಬುರಗಿಯ ವಿಕಾಸ ಅಕಾಡೆಮಿ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿದೆ.

ADVERTISEMENT

ಬಸವಕಲ್ಯಾಣವನ್ನು ಸುಂದರ ಹಾಗೂ ಸಾಂಸ್ಕೃತಿಕ ನಗರವನ್ನಾಗಿಸುವ ಉದ್ದೇಶದಿಂದ ಯಾತ್ರಾ ಪರ್ವ ಯೋಜನೆ ರೂಪಿಸಲಾಗಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಳ್ಳುವರು. ನಾಡಿನ ಹರ ಗುರು ಚರ ಮೂರ್ತಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಬಸವಕಲ್ಯಾಣ ಕ್ಷೇತ್ರ ಸಮಿತಿ ಪರವಾಗಿ ಬಸವರಾಜ ಪಾಟೀಲ ಸೇಡಂ ಹೇಳಿದ್ದಾರೆ.

ಸಸ್ತಾಪುರ ಬಂಗ್ಲಾದಿಂದ ಬಸವೇಶ್ವರ ವೃತ್ತ ಹಾಗೂ ತೇರು ಮೈದಾನದವರೆಗೆ ಮುಖ್ಯರಸ್ತೆಯಲ್ಲಿ ಅಲ್ಲಲ್ಲಿ ಸ್ವಾಗತ ಕಮಾನುಗಳನ್ನು ಅಳವಡಿಸಲಾಗಿದೆ. ರಾಜಕೀಯ ಮುಖಂಡರು, ಕಾರ್ಯಕರ್ತರು ದೊಡ್ಡ ದೊಡ್ಡ ಫ್ಲೆಕ್ಸ್, ಕಟೌಟ್, ಬ್ಯಾನರ್ ಕಟ್ಟಿದ್ದಾರೆ. ಹೀಗಾಗಿ ಎಲ್ಲೆಡೆ ಸಂಭ್ರಮ ಎದ್ದು ಕಾಣುತ್ತಿದೆ. ತೇರು ಮೈದಾನದಲ್ಲಿ ಬೃಹತ್ ವೇದಿಕೆ, ಮಂಟಪ ಸಿದ್ಧಪಡಿಸಲಾಗಿದ್ದು, ಸಾವಿರಾರು ಆಸನಗಳ ವ್ಯವಸ್ಥೆ ಕಲ್ಪಿಸಲಾಗಿದೆ.

ಮಂಡಳಿ ಸಭೆ: ಮುಖ್ಯಮಂತ್ರಿಯವರು ಬೆಂಗಳೂರಿನಿಂದ ವಿಮಾನದ ಮೂಲಕ ಬೆಳಿಗ್ಗೆ 10.20ಕ್ಕೆ ಬೀದರ್‌ಗೆ ಬಂದು ತಲುಪುವರು. ಅಲ್ಲಿಂದ ಹೆಲಿಕಾಪ್ಟರ್ ಮೂಲಕ 10.45 ಕ್ಕೆ ಬಸವಕಲ್ಯಾಣಕ್ಕೆ ಬರುವರು. ಬಸವಕಲ್ಯಾಣ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರು ಕೂಡ ಆಗಿರುವ ಅವರು 11 ಗಂಟೆಗೆ ಇಲ್ಲಿ ಮಂಡಳಿಯ ವಿಶೇಷ ಸಭೆ ನಡೆಸಲಿದ್ದಾರೆ. ಜಿಲ್ಲಾ ಮಟ್ಟದ ಅಧಿಕಾರಿಗಳು, ಮಂಡಳಿ ಆಯುಕ್ತರು, ಜನಪ್ರನಿಧಿಗಳು ಪಾಲ್ಗೊಳ್ಳಲಿದ್ದಾರೆ. ಇದಾದ ಮೇಲೆ, ತೇರು ಮೈದಾನದಲ್ಲಿನ ಕಾರ್ಯಕ್ರಮ ಹಾಗೂ ಅಂಬೇಡ್ಕರ್ ಪುತ್ಥಳಿ ಅನಾವರಣ ಸಮಾರಂಭ ನಡೆಸಿ ಮಧ್ಯಾಹ್ನ 2.30 ಗಂಟೆಗೆ ಹೆಲಿಕಾಪ್ಟರ್ ಮೂಲಕ ಬೀದರ್‌ಗೆ ಹಿಂದಿರುಗಲಿದ್ದಾರೆ. ಅಲ್ಲಿಂದ ಬೆಂಗಳೂರಿಗೆ ಪ್ರಯಾಣಿಸಲಿದ್ದಾರೆ.

ಅಂಬೇಡ್ಕರ್‌ ಪುತ್ಥಳಿ ಅನಾವರಣ

ಶನಿವಾರ ಮಧ್ಯಾಹ್ನ 1.30 ಗಂಟೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿನ ಪುತ್ಥಳಿ ಅನಾವರಣಗೊಳಿಸುವರು. ಈ ಕಾರ್ಯಕ್ರಮಕ್ಕಾಗಿ ಪುತ್ಥಳಿ ಎದುರಲ್ಲಿನ ಬಸ್ ನಿಲ್ದಾಣ ರಸ್ತೆಯಲ್ಲಿ ಪೂರ್ವಾಭಿಮುಖವಾಗಿ ಬೃಹತ್ ಮಂಟಪ ಸಿದ್ಧಗೊಂಡಿದೆ. ಕಟೌಟ್, ನೀಲಿ ಪತಾಕೆ ಕಟ್ಟಿ ವೃತ್ತವನ್ನು ಸಿಂಗರಿಸಲಾಗಿದೆ.

ಇಲ್ಲಿನ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ಭಗವಂತ ಖೂಬಾ, ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಪಾಟೀಲ ಮಾನೇನಕೊಪ್ಪ, ಸಚಿವ ಪ್ರಭು ಚವಾಣ್ ಹಾಗೂ ಮೊದಲಾದವರು ಪಾಲ್ಗೊಳ್ಳಲಿದ್ದಾರೆ. ಸಾವಿರಾರು ಜನರು ಭಾಗವಹಿಸುವರು ಎಂದು ಶಾಸಕ ಶರಣು ಸಲಗರ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.