ADVERTISEMENT

ಹೊರಗೆ ಫಳಫಳ; ಒಳಗೆಲ್ಲ ಬರೀ ಟೊಳ್ಳು

ಹೊಸ ಬಡಾವಣೆಗಳಲ್ಲಿಲ್ಲ ಕನಿಷ್ಠ ಮೂಲಸೌಕರ್ಯ; ಮುಗಿಯದ ರಿಂಗ್‌ರೋಡ್‌

​ಪ್ರಜಾವಾಣಿ ವಾರ್ತೆ
ಶಶಿಕಾಂತ್ ಎಸ್. ಶೆಂಬೆಳ್ಳಿ
Published 24 ಫೆಬ್ರುವರಿ 2026, 8:11 IST
Last Updated 24 ಫೆಬ್ರುವರಿ 2026, 8:11 IST
ರಹೀಂ ಖಾನ್‌
ರಹೀಂ ಖಾನ್‌   

ಬೀದರ್‌: ನಗರ ಮತ್ತು ಹಳ್ಳಿಗಳಿಂದ ಕೂಡಿರುವಂಥದ್ದು ಬೀದರ್‌ ಉತ್ತರ ವಿಧಾನಸಭಾ ಕ್ಷೇತ್ರ.

ಹೊಸದಾಗಿ 16 ಹಳ್ಳಿಗಳ ಸೇರ್ಪಡೆಯೊಂದಿಗೆ ಬೀದರ್‌ ನಗರಸಭೆಯನ್ನು ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿಸಲಾಗಿದೆ. ಇದರೊಂದಿಗೆ ನಗರದ ವ್ಯಾಪ್ತಿ ಕೂಡ ಹಿಗ್ಗಿದೆ.

ಗ್ರಾಮ ಪಂಚಾಯಿತಿಯಿಂದ ಪಾಲಿಕೆಗೆ ಸೇರಿದ ಹಳ್ಳಿಗಳೊಂದಿಗೆ ಮಹಾನಗರ ವ್ಯಾಪ್ತಿಯಲ್ಲಿ ಹೊಸದಾಗಿ ನಿರ್ಮಾಣಗೊಂಡ ಬಡಾವಣೆಗಳಲ್ಲಿ ಮೂಲಸೌಕರ್ಯ ಕಲ್ಪಿಸುವ ಕೆಲಸ ತುರ್ತಾಗಿ ಆಗಬೇಕಿದೆ.

ADVERTISEMENT

ಹೊರಗೆಲ್ಲ ಫಳಫಳ ಎಂಬಂತೆ ನಗರದ ಪ್ರಮುಖ ರಸ್ತೆಗಳೆಲ್ಲ ಕಂಗೊಳಿಸುತ್ತಿವೆ. ಹಾಗಂತ ಎಲ್ಲವೂ ಆಗಿಲ್ಲ. ಮಳೆಗಾಲ ಮುಗಿದ ಬೆನ್ನಲ್ಲೆ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಕೆಲ ಆಯ್ದ ಪ್ರಮುಖ ರಸ್ತೆಗಳಲ್ಲಿ ವಿದ್ಯುತ್‌ ದೀಪಗಳನ್ನು ಸರಿಪಡಿಸಲಾಗಿದೆ. ಜೊತೆಗೆ ಪಾದಚಾರಿ ಮಾರ್ಗ ಕೂಡ ನಿರ್ಮಿಸಲಾಗುತ್ತಿದೆ. ಆದರೆ, ಒಂದು ಜಿಲ್ಲಾ ಕೇಂದ್ರದಲ್ಲಿ ಯಾವ ರೀತಿಯ ಸೌಲಭ್ಯಗಳು ಇರಬೇಕೋ ಅದು ಇನ್ನೂ ಆಗಿಲ್ಲ.

ನಗರದ ವ್ಯಾಪ್ತಿ ಹಿಗ್ಗಿರುವಂತೆ ಅನೇಕ ಹೊಸ ಬಡಾವಣೆಗಳು ತಲೆ ಎತ್ತಿವೆ. ಆದರೆ, ಅಲ್ಲಿ ಕನಿಷ್ಠ ಮೂಲಸೌಕರ್ಯಗಳಾದ ಕುಡಿಯುವ ನೀರು, ರಸ್ತೆ, ಬೀದಿ ದೀಪ, ಒಳಚರಂಡಿ ಸೇರಿದಂತೆ ಯಾವ ಸೌಕರ್ಯವೂ ಇಲ್ಲ. ನ್ಯೂ ಆದರ್ಶ ಕಾಲೊನಿ, ಕರೊಡಿಮಲ್‌, ಶಹಾಪುರ ಗೇಟ್, ಮಂಗಲಪೇಟ್‌, ಮೈಲೂರ, ಚಿದ್ರಿ, ಗುಂಪಾ, ಚಿಟ್ಟಾ ರಸ್ತೆ ಸೇರಿದಂತೆ ಅನೇಕ ಬಡಾವಣೆಗಳಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಕೆಂಪು ದೂಳಿನಿಂದ ಜನ ಸಾಕಷ್ಟು ರೋಸಿ ಹೋಗಿದ್ದಾರೆ. ಸಂಚಾರ ದುಸ್ತರವಾಗಿದೆ. ಇನ್ನು, ಬಿರುಸಿನ ಮಳೆ ಬಂದರೆ ಹಳೆಯ ಬಡಾವಣೆಗಳಲ್ಲಿ ಚರಂಡಿಗಳು ಉಕ್ಕಿ ಹರಿದು ಜನರ ಬದುಕು ಹಾಳು ಮಾಡುತ್ತವೆ. ಅದಕ್ಕೂ ಯೋಜನೆ ರೂಪಿಸಿಲ್ಲ ಎನ್ನುವುದು ಸಾರ್ವಜನಿಕರ ಆರೋಪ. ಹಲವೆಡೆ ಶುದ್ಧ ಕುಡಿಯುವ ನೀರು ಕೂಡ ಮರೀಚಿಕೆಯಾಗಿದೆ.

ಮುಗಿಯದ ರಿಂಗ್‌ರೋಡ್‌:

ಬೀದರ್‌ ನಗರದಲ್ಲಿ ರಿಂಗ್‌ರೋಡ್‌ ಯೋಜನೆ ರೂಪಿಸಿ, ಅದನ್ನು ಹಂತ ಹಂತವಾಗಿ ಜಾರಿಗೆ ತರುವ ಕೆಲಸ ಸುಮಾರು ಎರಡು ದಶಕಗಳ ಹಿಂದೆ ಆರಂಭಗೊಂಡಿದೆ. ಆದರೆ, ಇನ್ನೂ ರಿಂಗ್‌ರೋಡ್‌ ಕೆಲಸ ಪೂರ್ಣಗೊಂಡಿಲ್ಲ.

ಈಗ ಜನ ಸುತ್ತು ಬಳಸಿ, ಓಡಾಡುವಂತಹ ಪರಿಸ್ಥಿತಿ ಇದೆ. ಕೆಲವೆಡೆ ಅತಿಕ್ರಮಣ ತೆರವಾಗಬೇಕಿದೆ. ಮತ್ತೆ ಕೆಲವೆಡೆ ಜಮೀನು ಸ್ವಾಧೀನಕ್ಕೆ ಪಡೆಯಬೇಕಿದೆ. ಇಂದು, ನಾಳೆ ಎನ್ನುತ್ತ ಅಧಿಕಾರಕ್ಕೆ ಬಂದವರು ಜನರಿಗೆ ಆಶ್ವಾಸನೆ ಕೊಟ್ಟು ಕಾಲ ದೂಡುತ್ತಲೇ ಇದ್ದಾರೆ.

‘ರಿಂಗ್‌ರೋಡ್‌ ಮುಗಿಯದ ಕಾರಣ ವಾಹನಗಳು ಸುತ್ತು ಬಳಸಿ ಸಂಚರಿಸುವ ಪರಿಸ್ಥಿತಿ ಇದೆ. ದೊಡ್ಡ ವಾಹನಗಳು ಇಕ್ಕಟ್ಟಿನ ರಸ್ತೆಗಳಲ್ಲಿ ಸಂಚರಿಸುತ್ತಿರುವ ಕಾರಣ ಅಪಘಾತಗಳು ಹೆಚ್ಚಿದೆ. ಇದರ ಬಗ್ಗೆ ವಿಶೇಷ ಕಾಳಜಿ ವಹಿಸಿ, ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ತಂದು ಆದ್ಯತೆ ಮೇರೆಗೆ ರಿಂಗ್‌ರೋಡ್‌ ಅಭಿವೃದ್ಧಿಪಡಿಸಬೇಕು’ ಎಂದು ಸಾಮಾಜಿಕ ಕಾರ್ಯಕರ್ತ ರಮೇಶಕುಮಾರ್‌ ಬಿರಾದಾರ ಆಗ್ರಹಿಸಿದರು.

‘ಅಲೆಮಾರಿ ಸಮುದಾಯಗಳು ರಸ್ತೆ ಬದಿ ವಾಸಿಸುತ್ತಿದ್ದಾರೆ. ಅವರಿಗೆ ತಲೆ ಮೇಲೆ ಸೂರಿಲ್ಲ. ಅವರ ಮಕ್ಕಳಿಗೆ ಶಿಕ್ಷಣವಿಲ್ಲ. ಅವರಿಗೂ ಯೋಜನೆ ರೂಪಿಸುವ ಅಗತ್ಯವಿದೆ’ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತರಾದ ಓಂಪ್ರಕಾಶ್‌ ರೊಟ್ಟೆ, ಜಗದೀಶ್ವರ ಬಿರಾದಾರ.

ಬಿ.ಜಿ. ಶೆಟಕಾರ್

ಶಾಸಕರು ಏನಂತಾರೆ?

ಬೀದರ್‌ ನಗರಸಭೆಯನ್ನು ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿಸಿರುವುದು ತಮ್ಮ ಸಾಧನೆ. ಇತರೆ ಮಹಾನಗರಗಳಂತೆ ಇದನ್ನು ಅಭಿವೃದ್ಧಿ ಪಡಿಸುವುದು ತಮ್ಮ ಕನಸಿನ ಯೋಜನೆ ಎನ್ನುತ್ತಾರೆ ರಹೀಂ ಖಾನ್‌. ‘ಬೀದರ್‌ ನಗರಸಭೆಯನ್ನು ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿಸುವುದು ನನ್ನ ಮೊದಲ ಆದ್ಯತೆಯಾಗಿತ್ತು. ಅದರಂತೆ ಮಾಡಿ ತೋರಿಸಿದ್ದೇನೆ. ಈ ಸಾಲಿನ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ಮೀಸಲಿಡಬೇಕೆಂದು ಮುಖ್ಯಮಂತ್ರಿಯವರಿಗೆ ಮನವಿ ಮಾಡಿದ್ದೇನೆ. ಈ ಕುರಿತು ಪ್ರಸ್ತಾವ ಸಲ್ಲಿಸಿದ್ದೇನೆ. ಹಂತ ಹಂತವಾಗಿ ನಗರವನ್ನು ಅಭಿವೃದ್ಧಿ ಪಡಿಸಲಾಗುವುದು’ ಎಂದು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.

ಏನಾಗಬೇಕಿದೆ...?

ಬೀದರ್‌ ನಗರ ಸಾಕಷ್ಟು ಬೆಳೆದಿದೆ. ಅನೇಕ ಹೊಸ ಬಡಾವಣೆಗಳು ಕೂಡ ತಲೆ ಎತ್ತಿವೆ. ಕಾಲಕಾಲಕ್ಕೆ ಮುಖ್ಯರಸ್ತೆಗಳನ್ನು ನಿರ್ವಹಣೆ ಮಾಡಬೇಕು. ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಬಡಾವಣೆಗಳಲ್ಲಿ ಮೂಲಸೌಕರ್ಯ ಕಲ್ಪಿಸುವ ಕೆಲಸ ತುರ್ತಾಗಿ ಆಗಬೇಕಿದೆ ಎನ್ನುತ್ತಾರೆ ವಾಣಿಜ್ಯೋದ್ಯಮಿಗಳು ಹಾಗೂ ಸಾರ್ವಜನಿಕರು. ‘ಮುಖ್ಯರಸ್ತೆಗಳು ರಿಂಗ್‌ರೋಡ್‌ ಅಭಿವೃದ್ಧಿ ಕೆಲಸ ಬೇಗ ಮುಗಿಸಬೇಕು. ರಸ್ತೆ ಬೀದಿ ದೀಪ ಒಳಚರಂಡಿಯನ್ನು ತುರ್ತಾಗಿ ನಗರದಲ್ಲಿ ಒದಗಿಸಬೇಕು. ಹೊಸದಾಗಿ ಪಾಲಿಕೆ ಸೇರಿದ ಹಳ್ಳಿಗಳಲ್ಲೂ ಸೌಕರ್ಯ ಕಲ್ಪಿಸಬೇಕು. ಜನಸಂಖ್ಯೆಗೆ ಅನುಗುಣವಾಗಿ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸುವ ಅಗತ್ಯವಿದೆ’ ಎನ್ನುತ್ತಾರೆ ಬೀದರ್‌ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಬಿ.ಜಿ. ಶೆಟಕಾರ್‌. ಬೀದರ್‌ ಉತ್ತರ ವಿಧಾನಸಭಾ ಕ್ಷೇತ್ರದ ಹೆಚ್ಚಿನ ಭಾಗ ನಗರವನ್ನು ಒಳಗೊಂಡಿದೆ. ಜೊತೆಗೆ ರಹೀಂ ಖಾನ್‌ ಪೌರಾಡಳಿತ ಖಾತೆ ಹೊಂದಿದ್ದಾರೆ. ಅವರು ವಿಶೇಷ ಮುತುವರ್ಜಿ ವಹಿಸಿದರೆ ಅತ್ಯುತ್ತಮ ರೀತಿಯಲ್ಲಿ ನಗರ ಅಭಿವೃದ್ಧಿಪಡಿಸಬಹುದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.