ADVERTISEMENT

ಬೀದರ್‌ | 6 ಗಂಟೆಯಲ್ಲಿ ಚಿನ್ನಾಭರಣ ಕಳವಿನ ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 30 ಜನವರಿ 2026, 6:15 IST
Last Updated 30 ಜನವರಿ 2026, 6:15 IST
ಎಸ್ಪಿ ಪ್ರದೀಪ್‌ ಗುಂಟಿ ಅವರು ಈರಪ್ಪ ಬಡಿಗೇರ ಅವರಿಗೆ ಚಿನ್ನಾಭರಣ ಹಸ್ತಾಂತರಿಸಿದರು 
ಎಸ್ಪಿ ಪ್ರದೀಪ್‌ ಗುಂಟಿ ಅವರು ಈರಪ್ಪ ಬಡಿಗೇರ ಅವರಿಗೆ ಚಿನ್ನಾಭರಣ ಹಸ್ತಾಂತರಿಸಿದರು    

ಬೀದರ್‌: ಚಿನ್ನಾಭರಣ ಕಳವು ಮಾಡಿದ್ದ ಆರೋಪಿಯನ್ನು ಆರು ಗಂಟೆಯೊಳಗೆ ಬಂಧಿಸುವಲ್ಲಿ ಯಶಸ್ವಿಯಾಗಿರುವ ಭಾಲ್ಕಿ ತಾಲ್ಲೂಕಿನ ಖಟಕಚಿಂಚೋಳಿ ಠಾಣೆ ಪೊಲೀಸರು, ಚಿನ್ನಾಭರಣಗಳನ್ನು ಮೂಲ ಮಾಲೀಕರಿಗೆ ಒಪ್ಪಿಸಿದ್ದಾರೆ.

ಭಾಲ್ಕಿ ತಾಲ್ಲೂಕಿನ ಕುರುಬಖೇಳಗಿ ಗ್ರಾಮದ ಆನಂದ್‌ (50) ಬಂಧಿತ ವ್ಯಕ್ತಿ. ಸಿಂದಗಿ ತಾಲ್ಲೂಕಿನ ಬಂಟನೂರಿನ ಈರಪ್ಪ ಬಡಿಗೇರ ಅವರಿಗೆ ಸೇರಿದ ₹3.15 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಜಪ್ತಿ ಮಾಡಲಾಗಿದೆ. 6 ಗ್ರಾಂ ಹಾಗೂ 5 ಗ್ರಾಂ ಎರಡು ಚಿನ್ನದ ಉಂಗುರ, ಒಂದು ತೊಲ ಚಿನ್ನದ ಲಾಕೆಟ್‌ ಅನ್ನು ಈರಪ್ಪ ಅವರಿಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪ್ರದೀಪ್‌ ಗುಂಟಿ ಅವರು ಅವರ ಕಚೇರಿಗೆ ಕರೆದು ಹಸ್ತಾಂತರಿಸಿದರು.

ಈರಪ್ಪ ಬಡಿಗೇರ ಅವರು ಜನವರಿ 27ರಂದು ಹುಮನಾಬಾದ್‌ ವೀರಭದ್ರೇಶ್ವರ ಜಾತ್ರೆಯ ದೇವಸ್ಥಾನಕ್ಕೆ ಹೋಗಿ ದರ್ಶನ ಮುಗಿಸಿಕೊಂಡು ಹುಮನಾಬಾದ್‌ನಿಂದ ಭಾಲ್ಕಿಗೆ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದರು. ಖಟಕಚಿಂಚೋಳಿ ಠಾಣೆ ವ್ಯಾಪ್ತಿಯ ಕಪಲಾಪೂರ ಕ್ರಾಸ್ ಬಳಿ ಅವರ ಚಿನ್ನಾಭರಣ ಕಳವು ಮಾಡಲಾಗಿತ್ತು. ಈ ಬಗ್ಗೆ ಖಟಕಚಿಂಚೋಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಭಾಲ್ಕಿ ಡಿವೈಎಸ್ಪಿ ಶಿವಾನಂದ ಪವಾಡಶೆಟ್ಟಿ, ಖಟಕಚಿಂಚೋಳಿ ಠಾಣೆಯ ಪಿಎಸ್‌ಐ ಪ್ರಭಾಕರ ಪಾಟೀಲ್‌, ಅಪರಾಧ ವಿಭಾಗದ ಸಿಬ್ಬಂದಿ ಬುಡ್ಡಪ್ಪ, ಶ್ರೀಕಾಂತ ಅವರು ಕಾರ್ಯಾಚರಣೆ ನಡೆಸಿ, ಆರು ಗಂಟೆಯೊಳಗೆ ಆರೋಪಿಯನ್ನು ಬಂಧಿಸಿ ಉತ್ತಮ ಕೆಲಸ ಮಾಡಿದ್ದಾರೆ ಎಂದು ಎಸ್ಪಿ ಪ್ರದೀಪ್‌ ಗುಂಟಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ADVERTISEMENT
ಟ್ರಾಫಿಕ್‌ ಇನ್‌ಸ್ಪೆಕ್ಟರ್‌ ರಮೇಶ ಮೈಲೂರಕರ್‌ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಬೈಕ್‌ ಜಪ್ತಿ ಮಾಡಿರುವುದು

18 ಬೈಕ್‌ 44 ಸೈಲೆನ್ಸರ್‌ ಜಪ್ತಿ ಕರ್ಕಶ ಶಬ್ದ ಉಂಟು ಮಾಡುತ್ತಿದ್ದ 18 ಬೈಕ್‌ಗಳನ್ನು ಪೊಲೀಸರು ಗುರುವಾರ ಜಪ್ತಿ ಮಾಡಿದ್ದಾರೆ. ಅದೇ ರೀತಿ ವಿಪರೀತ ಶಬ್ದ ಹೊರಹಾಕುತ್ತಿದ್ದ 44 ಬೈಕ್‌ಗಳ ಸೆಲೆನ್ಸರ್‌ ತೆಗೆಸಿದ್ಧಾರೆ. ಟ್ರಾಫಿಕ್‌ ಪೊಲೀಸ್‌ ಇನ್‌ಸ್ಪೆಕ್ಟರ್‌ ರಮೇಶ ಮೈಲೂರಕರ್‌ ನೇತೃತ್ವದಲ್ಲಿ ಸಿಬ್ಬಂದಿ ನಗರದಲ್ಲಿ ಕಾರ್ಯಾಚರಣೆ ನಡೆಸಿದ್ಧಾರೆ. ಯಾರೂ ಕೂಡ ಕರ್ಕಶ ಶಬ್ದ ಉಂಟು ಮಾಡುವ ಸೈಲೆನ್ಸರ್‌ ಕೂರಿಸಬಾರದು. ಇಲ್ಲವಾದಲ್ಲಿ ಜಪ್ತಿ ಮಾಡಲಾಗುವುದು ಎಂದು ಎಸ್ಪಿ ಪ್ರದೀಪ್‌ ಗುಂಟಿ ಎಚ್ಚರಿಕೆ ನೀಡಿದ್ಧಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.