ಬೀದರ್: ಬೀದರ್ ಜಿಲ್ಲಾ ಪೊಲೀಸರು ಐದು ಪ್ರಕರಣಗಳನ್ನು ಭೇದಿಸಿ ಮಾದಕ ವಸ್ತು, 13 ದ್ವಿಚಕ್ರ ವಾಹನ, ಅಶೋಕ ಲಿಲ್ಯಾಂಡ್ ವಾಹನ, ನಗದು ಸೇರಿದಂತೆ ಒಟ್ಟು ₹15.55 ಲಕ್ಷ ಮೌಲ್ಯದ ಸ್ವತ್ತು ಜಪ್ತಿ ಮಾಡಿ, ಒಂಬತ್ತು ಜನ ಆರೋಪಿಗಳನ್ನು ಬಂಧಿಸಿದ್ದಾರೆ.
ಚಿಟಗುಪ್ಪ, ಬಸವಕಲ್ಯಾಣ ಹಾಗೂ ಕಲಬುರಗಿ ಜಿಲ್ಲೆಯ ಸುಲೇಪೇಟ್, ನರೋಣ, ರಟಕಲ್ ಹಾಗೂ ಕಮಲಾಪೂರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳವು ಮಾಡಿದ್ದ ₹9.25 ಲಕ್ಷ ಮೌಲ್ಯದ 13 ಬೈಕ್‌ಗಳನ್ನು ಜಪ್ತಿ ಮಾಡಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಅವರು ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.
ಚಿಟಗುಪ್ಪ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇನ್‌ಸ್ಪೆಕ್ಟರ್ ಅಶೋಕ ರೆಡ್ಡಿ ಅವರು ಈಚೆಗೆ ರಾತ್ರಿ ಗಸ್ತು ತಿರುಗುವಾಗ ಮೂವರು ಅನುಮಾನಾಸ್ಪದ ರೀತಿಯಲ್ಲಿ ಓಡಾಡುತ್ತಿದ್ದರು. ಅವರನ್ನು ಬೆನ್ನತ್ತಿ ಹಿಡಿದಾಗ ಚಿಟಗುಪ್ಪ, ಬಸವಕಲ್ಯಾಣ ಹಾಗೂ ಕಲಬುರಗಿ ವ್ಯಾಪ್ತಿಯಲ್ಲಿ ಬೈಕ್ ಕದ್ದಿರುವುದು ಒಪ್ಪಿಕೊಂಡಿದ್ದಾರೆ. ಕಟಿಂಗ್ ಪ್ಲೇರ್‌ನಿಂದ ಎಂಜಿನ್ ವೈರ್ ಕತ್ತರಿಸಿ ಬೈಕ್ ಆನ್ ಮಾಡಿ ಓಡಿಸಿಕೊಂಡು ಹೋಗುತ್ತಿದ್ದರು. ಬಂಧಿತರೆಲ್ಲರೂ 25ರಿಂದ 30 ವರ್ಷ ವಯಸ್ಸಿನೊಳಗಿನವರು ಎಂದು ಮಾಹಿತಿ ನೀಡಿದರು.
ಇನ್ನು ಬೇಮಳಖೇಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜಾನುವಾರುಗಳನ್ನು ಕಳವು ಮಾಡುತ್ತಿದ್ದ ಆರೋಪಿಯನ್ನು ಬಂಧಿಸಲಾಗಿದೆ. ₹3.25 ಲಕ್ಷ ಮೌಲ್ಯದ ಎರಡು ಹೋರಿಗಳನ್ನು ಜಪ್ತಿ ಮಾಡಲಾಗಿದೆ. ₹3 ಲಕ್ಷ ಮೌಲ್ಯದ ಅಶೋಕ ಲಿಲ್ಯಾಂಡ್ ವಾಹನ ಜಪ್ತಿ ಮಾಡಲಾಗಿದೆ ಎಂದು ತಿಳಿಸಿದರು.
ಬೀದರ್ ಸಬ್ ಅರ್ಬನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜುಲೈ ತಿಂಗಳಲ್ಲಿ ನಡೆದ ಕಳ್ಳತನ ಪ್ರಕರಣವನ್ನು ಭೇದಿಸಿ, ₹1.57 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಿ ಮೂವರನ್ನು ನ್ಯಾಯಾಂಗ ಬಂಧನಕ್ಕೆ ಕಳಿಸಲಾಗಿದೆ ಎಂದು ವಿವರಿಸಿದರು.
ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಕಾಂತ ಪೂಜಾರಿ ಹಾಗೂ ನಾಲ್ಕೂ ಠಾಣೆಗಳ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.
ಮಾದಕ ವಸ್ತು ಜಪ್ತಿ; ಐವರ ಬಂಧನ
ಎರಡು ಪ್ರತ್ಯೇಕ ಮಾದಕ ವಸ್ತು ಮಾರಾಟ ಪ್ರಕರಣಗಳಲ್ಲಿ ಬೀದರ್ ಪೊಲೀಸರು ಒಟ್ಟು ಐದು ಜನರನ್ನು ಬಂಧಿಸಿದ್ದಾರೆ.
‘ಬೀದರ್‌ನ ಮಾಂಗರವಾಡಿ ಗಲ್ಲಿಯಲ್ಲಿ ₹1.48 ಲಕ್ಷ ಮೌಲ್ಯದ ಮಾದಕ ವಸ್ತುಗಳನ್ನು ಜಪ್ತಿ ಮಾಡಿ, ಇಬ್ಬರು ಸ್ಥಳೀಯರನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ’ ಎಂದು ಎಸ್ಪಿ ಪ್ರದೀಪ್ ಗುಂಟಿ ತಿಳಿಸಿದರು.
ಸುದೇಶ ಹಾಗೂ ಆತನ ಸಹೋದರ ವಿಕಾಸ್ ಎಂಬುವರು ಯಾವುದೇ ರೀತಿಯ ಪ್ರಿಸ್ಕ್ಷಪ್ರಶನ್ ಇಲ್ಲದೇ ದೊಡ್ಡ ಮಟ್ಟದಲ್ಲಿ ನಶೆ ಬರುವ ಮಾದಕ ದ್ರವ್ಯದ ಬಾಟಲಿ, ಗುಳಿಗೆಗಳನ್ನು ಮಾರಾಟ ಮಾಡುತ್ತಿದ್ದರು. ಸುದೇಶ ವಿರುದ್ಧ ಮೂರು ಹಾಗೂ ವಿಕಾಸ್ ವಿರುದ್ಧ ಎರಡು ಪ್ರಕರಣ ನಗರದ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಈಗಾಗಲೇ ದಾಖಲಾಗಿವೆ. ಇಬ್ಬರೂ ಸೇರಿಕೊಂಡು ಕಾಲೇಜು ಹುಡುಗರಿಗೆ ಮಾರಾಟ ಮಾಡುತ್ತಿದ್ದರು. ಇಂತಹವರನ್ನು ಬೀದರ್‌ನಿಂದ ಗಡಿಪಾರು ಮಾಡಿ ಗೂಂಡಾ ಕಾಯ್ದೆಯಡಿ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.
ಬೀದರ್‌ನ ಇರಾನಿ ಗಲ್ಲಿಯಲ್ಲಿ ಮಾದಕ ವಸ್ತು ಮಾರಾಟದಲ್ಲಿ ತೊಡಗಿದ್ದ ಇರಾನಿ ಗ್ಯಾಂಗ್‌ನ ಮೂವರನ್ನು ಬಂಧಿಸಲಾಗಿದೆ. ಹೈದರಾಬಾದ್‌ನಿಂದ ಮಾದಕ ವಸ್ತು ತರಿಸಿಕೊಂಡು ಜಿಲ್ಲೆಯಲ್ಲಿ ಮಾರಾಟ ಮಾಡುತ್ತಿರುವುದರ ಬಗ್ಗೆ ಒಪ್ಪಿಕೊಂಡಿದ್ದಾರೆ. ಈ ಜಾಲ ಭೇದಿಸಲು ತನಿಖೆ ಮುಂದುವರೆಸಲಾಗಿದೆ ಎಂದರು.
‘ಹೊರರಾಜ್ಯದ ಡಿಜೆ ತಡೆಗೆ ನಾಕಾಬಂದಿ’
‘ಗಣೇಶ ಚತುರ್ಥಿಗೆ ಕೆಲವು ಗಣೇಶ ಮಹಾಮಂಡಳದವರು ಹೈದರಾಬಾದ್, ಪುಣೆ ಹಾಗೂ ಲಾತೂರ್‌ನಿಂದ ಡಿಜೆ ತರಿಸುತ್ತಿದ್ದಾರೆ. ಇದಕ್ಕಾಗಿ ₹10ರಿಂದ ₹12 ಲಕ್ಷ ವೆಚ್ಚ ಮಾಡುತ್ತಿದ್ದಾರೆ ಎಂದು ಗೊತ್ತಾಗಿದೆ. ಹೊರರಾಜ್ಯದ ಡಿಜೆ ಜಿಲ್ಲೆಗೆ ಬರದಂತೆ ತಡೆಯಲು ಜಿಲ್ಲೆಯ ಗಡಿಭಾಗಗಳಲ್ಲಿ ನಾಕಾಬಂದಿ ಮಾಡಲಾಗುವುದು’ ಎಂದು ಎಸ್ಪಿ ಪ್ರದೀಪ್ ಗುಂಟಿ ತಿಳಿಸಿದರು.
ಇನ್ನು ಗಣೇಶ ಉತ್ಸವದ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ನಿರ್ದೇಶನದ ಪ್ರಕಾರ ಡಿಜೆ ಬಳಸಲು ಅವಕಾಶ ಕಲ್ಪಿಸಲಾಗುವುದು. ಪಿಒಪ ಗಣೇಶನ ಮೂರ್ತಿಗಳ ಮಾರಾಟ ತಡೆಗೆ ಮಾಲಿನ್ಯ ಮಂಡಳಿ ಹಾಗೂ ಅರಣ್ಯ ಇಲಾಖೆಯ ಜೊತೆ ಸೇರಿಕೊಂಡು ಕ್ರಮ ಜರುಗಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ವಿವಿಧ ಅಪರಾಧ ಪ್ರಕರಣ; ತಿಂಗಳಲ್ಲಿ ₹3.32 ಕೋಟಿ ಸ್ವತ್ತು ಜಪ್ತಿ
‘ಬೀದರ್ ಜಿಲ್ಲೆಯಲ್ಲಿ ಜುಲೈನಿಂದ ಆಗಸ್ಟ್ 21ರ ವರೆಗೆ ನಡೆದ ವಿವಿಧ ಸಂಘಟಿತ ಅಪರಾಧಗಳಿಗೆ ಸಂಬಂಧಿಸಿದ 1,058 ಪ್ರಕರಣಗಳಲ್ಲಿ 2,455 ಆರೋಪಿಗಳನ್ನು ಬಂಧಿಸಿ, ₹3.32 ಕೋಟಿ ಮೌಲ್ಯದ ಸ್ವತ್ತು ಜಪ್ತಿ ಮಾಡಲಾಗಿದೆ’ ಎಂದು ಎಸ್ಪಿ ಪ್ರದೀಪ್ ಗುಂಟಿ ತಿಳಿಸಿದರು.
ಮಟ್ಕಾ, ಜೂಜಾಟ, ಅಬಕಾರಿಗೆ ಸಂಬಂಧಿಸಿದಂತೆ ಹೆಚ್ಚಿನ ಪ್ರಕರಣಗಳು ದಾಖಲಾಗಿವೆ. 233 ಜೂಜಾಟ ಪ್ರಕರಣಗಳಲ್ಲಿ 1,417 ಜನರನ್ನು ಬಂಧಿಸಿ, ₹20.47 ಲಕ್ಷ, 355 ಮಟ್ಕಾ ಪ್ರಕರಣಗಳಲ್ಲಿ 467 ಮಂದಿಯನ್ನು ಬಂಧಿಸಿ ₹6.37 ಲಕ್ಷ, 330 ಅಬಕಾರಿ ಪ್ರಕರಣಗಳಲ್ಲಿ ₹7.28 ಲಕ್ಷ ಸ್ವತ್ತು ಜಪ್ತಿ ಮಾಡಿ 339 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮಾಹಿತಿ ಹಂಚಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.