ADVERTISEMENT

Bidar Rains | ಸತತ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2025, 13:11 IST
Last Updated 11 ಸೆಪ್ಟೆಂಬರ್ 2025, 13:11 IST
   

ಬೀದರ್: ಗುರುವಾರವೂ ಜಿಲ್ಲೆಯಾದ್ಯಂತ ಮಳೆ ಮುಂದುವರೆದಿದ್ದು, ಸತತ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿತು.

ಗುರುವಾರ ಬೆಳಕು ಹರಿಯುತ್ತಿದ್ದಂತೆ ಮಳೆ ಆರಂಭಗೊಂಡಿತು. ದಟ್ಟ ಮಂಜು, ಅದರ ನಡುವೆ ಗಂಟೆಗೂ ಹೆಚ್ಚು ಕಾಲ ಜೋರು ಮಳೆಯಾಯಿತು. ಶಾಲಾ–ಕಾಲೇಜು, ದೈನಂದಿನ ಕೆಲಸಗಳಿಗೆ ಹೋಗುವವರು ಸಮಸ್ಯೆ ಎದುರಿಸಿದರು. ಶಾಲಾ–ಕಾಲೇಜುಗಳ ಬಸ್‌ ಸೇರಿದಂತೆ ಇತರೆ ವಾಹನಗಳ ವ್ಯವಸ್ಥೆ ಇದ್ದವರು ಅವುಗಳಲ್ಲಿ ತೆರಳಿದರೆ, ಕೆಲ ವಿದ್ಯಾರ್ಥಿಗಳು ನೆನೆದುಕೊಂಡೇ ಹೆಜ್ಜೆ ಹಾಕಿದರು. ಕೆಲವರು ಕೊಡೆ ಹಿಡಿದುಕೊಂಡು ಕಾಯಕಕ್ಕೆ ತೆರಳಿದರು.

ಇಡೀ ದಿನ ಬಿಟ್ಟು ಬಿಟ್ಟು ಜಿಟಿಜಿಟಿ ಮಳೆಯಾಯಿತು. ನಡು ನಡುವೆ ಕೆಲವೊಮ್ಮೆ ಬಿರುಸಾಗಿ ಸುರಿಯಿತು. ಸತತ ಮಳೆಗೆ ಜನರ ನಿತ್ಯದ ಕೆಲಸಗಳಿಗೆ ತೊಡಕಾಯಿತು. ಹಣ್ಣು, ತರಕಾರಿ ಸೇರಿದಂತೆ ರಸ್ತೆಬದಿಯ ವ್ಯಾಪಾರಿಗಳಿಗೆ ತೊಂದರೆ ಎದುರಾಯಿತು. ವ್ಯಾಪಾರವೂ ಅಷ್ಟಕಷ್ಟೇ ಇತ್ತು. ದೈನಂದಿನ ಕೆಲಸ ಮುಗಿಸಿಕೊಂಡು ಮನೆ ಸೇರುವಾಗಲೂ ಮಳೆ ಬಿದ್ದದ್ದರಿಂದ ಜನರಿಗೆ ಅಡಚಣೆ ಉಂಟಾಯಿತು.

ADVERTISEMENT

ನಗರದ ಮನ್ನಳ್ಳಿ ರಸ್ತೆ, ಡಾ.ಬಿ.ಆರ್‌. ಅಂಬೇಡ್ಕರ್‌ ವೃತ್ತ, ಶಿವಾಜಿ ಮಹಾರಾಜರ ವೃತ್ತ, ರಾಣಿ ಚನ್ನಮ್ಮ ವೃತ್ತ ಸೇರಿದಂತೆ ಹಲವೆಡೆ ರಸ್ತೆಯ ಮೇಲೆ ನೀರು ಸಂಗ್ರಹಗೊಂಡಿದ್ದರಿಂದ ವಾಹನಗಳು ನಿಧಾನ ಗತಿಯಲ್ಲಿ ಸಂಚರಿಸಿದವು. ಜನರ ಓಡಾಟಕ್ಕೂ ತೊಂದರೆಯಾಯಿತು.

ಮಳೆ, ಮಂಜು ಹಾಗೂ ದಟ್ಟ ಮೋಡ ಇದ್ದದ್ದರಿಂದ ಮಂದ ಬೆಳಕಿತ್ತು. ವಾತಾವರಣ ಸಂಪೂರ್ಣ ತಂಪಾಗಿತ್ತು. ಒಂದು ವಾರದ ವರೆಗೆ ಬಿಡುವು ಕೊಟ್ಟಿದ್ದ ಮಳೆ ಜಿಲ್ಲೆಯಾದ್ಯಂತ ಪುನಃ ಚುರುಕು ಪಡೆದಿದೆ.

ಬೀದರ್‌ ನಗರ, ಬೀದರ್‌ ತಾಲ್ಲೂಕು, ಹುಮನಾಬಾದ್‌, ಚಿಟಗುಪ್ಪ, ಭಾಲ್ಕಿ ಹಾಗೂ ಔರಾದ್‌ ತಾಲ್ಲೂಕು ವ್ಯಾಪ್ತಿಯಲ್ಲೂ ಎರಡನೇ ದಿನವೂ ಮಳೆಯಾಗಿದೆ.

ಬುಧವಾರ ದಿನವಿಡೀ‌ ಜಿಟಿಜಿಟಿ ಮಳೆಯಾಗಿತ್ತು. ರಾತ್ರಿ ಕೆಲಸಮಯ ಜೋರಾಗಿ‌ ಸುರಿದಿತ್ತು. ಆಗಸ್ಟ್‌ ಕೊನೆಯ ವಾರ ಹಾಗೂ ಸೆಪ್ಟೆಂಬರ್‌ ಮೊದಲ ವಾರ ಸುರಿದ ಭಾರಿ ಮಳೆಗೆ ಜಿಲ್ಲೆಯಾದ್ಯಂತ ಅಪಾರ ಹಾನಿ ಉಂಟಾಗಿದೆ. ಅಳಿದುಳಿದ ಬೆಳೆ ಕಟಾವು ಮಾಡಿ, ರಾಶಿ ಮಾಡುತ್ತಿದ್ದವರಿಗೆ ಮಳೆ ಪುನಃ ಅಡ್ಡಿಯಾಗಿದೆ. ರಾಶಿಗೆ ಹಿನ್ನಡೆ ಉಂಟಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.