ADVERTISEMENT

ಎಲ್ಲ ಧರ್ಮಗಳ ಅಂತಿಮ ಗುರಿ ಪರಮ ಸತ್ಯ: ಸುಸಜ್ಜಿತ ಸ್ವಾಮಿ ಬ್ರಹ್ಮಾನಂದ

ರಾಮಕೃಷ್ಣ ಪರಮಹಂಸ ಜಯಂತಿ, ಬ್ರಹ್ಮಾನಂದ ಭವನ ಲೋಕಾರ್ಪಣೆ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2026, 5:31 IST
Last Updated 21 ಫೆಬ್ರುವರಿ 2026, 5:31 IST
ಬೀದರ್ ಶಿವನಗರದ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ಗುರುವಾರ ನಡೆದ ರಾಮಕೃಷ್ಣರ ಜಯಂತ್ಯುತ್ಸವ ಮತ್ತು ಸ್ವಾಮಿ ಬ್ರಹ್ಮಾನಂದ ಭವನ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಸ್ವಾಮಿ ಜ್ಯೋತಿರ್ಮಯಾನಂದ ಮಹಾರಾಜ ಮಾತನಾಡಿದರು
ಬೀದರ್ ಶಿವನಗರದ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ಗುರುವಾರ ನಡೆದ ರಾಮಕೃಷ್ಣರ ಜಯಂತ್ಯುತ್ಸವ ಮತ್ತು ಸ್ವಾಮಿ ಬ್ರಹ್ಮಾನಂದ ಭವನ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಸ್ವಾಮಿ ಜ್ಯೋತಿರ್ಮಯಾನಂದ ಮಹಾರಾಜ ಮಾತನಾಡಿದರು    

ಬೀದರ್: ಇಲ್ಲಿನ ಶಿವನಗರದ ರಾಮಕೃಷ್ಣ ಆಶ್ರಮದ ಗೋಶಾಲೆ ಪರಿಸರದಲ್ಲಿ ಗುರುವಾರ ರಾಮಕೃಷ್ಣರ ಜಯಂತಿ ಉತ್ಸವ ಮತ್ತು ಸುಸಜ್ಜಿತ ಸ್ವಾಮಿ ಬ್ರಹ್ಮಾನಂದ ಭವನದ ಉದ್ಘಾಟನೆ ನೆರವೇರಿಸಲಾಯಿತು. 

ಸಾನ್ನಿಧ್ಯ ವಹಿಸಿ ಮಾತನಾಡಿದ ಆಶ್ರಮದ ಅಧ್ಯಕ್ಷ ಸ್ವಾಮಿ ಜ್ಯೋತಿರ್ಮಯಾನಂದ ಮಹಾರಾಜ, ರಾಮಕೃಷ್ಣರು ವಿವಿಧ ಧರ್ಮಗಳನ್ನು ಸ್ವಯಂ ಅನುಭವದ ಮೂಲಕ ಅರಿತುಕೊಂಡೇ ಎಲ್ಲ ಮಾರ್ಗಗಳು ಪರಮ ಸತ್ಯದ ಕಡೆ ಹೋಗುತ್ತವೆ ಎಂದಿದ್ದರು. ಅವರ ಜೀವನವೇ ಸರ್ವಧರ್ಮ ಸಮಭಾವಕ್ಕೆ ಜೀವಂತ ಸಾಕ್ಷಿ. ಯಾವ ಧರ್ಮವಿದ್ದರೂ ಅದರ ಅಂತಿಮ ಗುರಿ ಪರಮ ಸತ್ಯದ ಅನುಭವವಾಗಿದೆ. ಧರ್ಮಗಳ ನಡುವೆ ವೈಮನಸ್ಯವಲ್ಲ, ವೈವಿಧ್ಯತೆಯಲ್ಲಿ ಏಕತೆ ಕಾಣುವ ಮನೋಭಾವ ಬೆಳೆಸಬೇಕಿದೆ ಎಂದು ತಿಳಿಸಿದರು.

ಧರ್ಮದ ಹೆಸರಿನಲ್ಲಿ ಇಂದು ಸಮಾಜದಲ್ಲಿ ವೈಷ್ಯಮ್ಯ ಹೆಚ್ಚುತ್ತಿರುವುದು ಕಳವಳಕಾರಿ ಸಂಗತಿ. ಈ ಸ್ಥಿತಿ ತಿಳಿಗೊಳಿಸಿ ಸಮಾಜದಲ್ಲಿ ಪರಸ್ಪರ ಗೌರವ, ಸಹಿಷ್ಣುತೆ, ಶಾಂತಿ ಸ್ಥಾಪನೆಗೆ ಭಗವಾನ್ ರಾಮಕೃಷ್ಣ ಪರಮಹಂಸರ ಸರ್ವಧರ್ಮ ಸಮಭಾವ, ಎಲ್ಲ ಮಾರ್ಗಗಳು ಪರಮಸತ್ಯದ ಕಡೆಗೆ ಎಂಬ ಸಂದೇಶ ಅತ್ಯಂತ ಪ್ರಸ್ತುತವಾಗಿದೆ ಎಂದರು.

ADVERTISEMENT

ರಾಮಕೃಷ್ಣರ ಚಿಂತನೆಗಳಲ್ಲಿ ಆಧ್ಯಾತ್ಮಿಕತೆ ಮತ್ತು ವೈಜ್ಞಾನಿಕ ಮನೋಭಾವದ ಸಮನ್ವಯ ಕಾಣಬಹುದು. ಅನುಭವವೇ ಪರಮ ಪ್ರಮಾಣ ಎಂಬ ಅವರ ನಿಲುವು ಇಂದಿನ ವಿಜ್ಞಾನ ಯುಗಕ್ಕೂ ಅನ್ವಯಿಸುತ್ತದೆ. ಆತ್ಮಜ್ಞಾನ ಮತ್ತು ವೈಜ್ಞಾನಿಕ ಮನೋಭಾವ ಪರಸ್ಪರ ಪೂರಕವಾಗಿವೆ. ಹಸಿದವನಿಗೆ ಅನ್ನ, ಬಡವನಿಗೆ ನೆರವು, ಅಶಕ್ತನಿಗೆ ಆಧಾರ ನೀಡುವುದೇ ನಿಜವಾದಂಥ ಪೂಜೆ ಎಂಬ ಅವರ ಮೌಲಿಕ ವಿಚಾರ ಸಮಾಜಕ್ಕೆ ಬೆಳಕು ನೀಡುವ ಶಕ್ತಿಯಾಗಿವೆ ಎಂದು ಪ್ರತಿಪಾದಿಸಿದರು.

Quote - ರಾಮಕೃಷ್ಣರು ವ್ಯಕ್ತಿಯ ಒಳಮನಸ್ಸಿನ ಪರಿವರ್ತನೆ ತಿಳಿಸಿದ್ದರು. ವ್ಯಕ್ತಿ ಬದಲಾದಾಗ ಸಮಾಜ ಸ್ವಯಂ ಬದಲಾಗುತ್ತದೆ ಎಂಬ ಅವರ ತತ್ವ ಸಾರ್ವಕಾಲಿಕ ಸತ್ಯ. -ಸ್ವಾಮಿ ಜ್ಯೋತಿರ್ಮಯಾನಂದ ಮಹಾರಾಜ ಅಧ್ಯಕ್ಷ ರಾಮಕೃಷ್ಣ ಆಶ್ರಮ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.