ADVERTISEMENT

ಬೀದರ್ | 3 ಕಿ.ಮೀ ಅಂತರದಲ್ಲಿದೆ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳು

ನಿಸರ್ಗದ ಹೊದಿಕೆಯಲ್ಲಿ ಮಲ್ಲಣ್ಣ ದೇವರು, ಶನೇಶ್ವರ, ಗಾಯಮುಖ ಗುಪ್ತಲಿಂಗೇಶ್ವರ ದೇವಸ್ಥಾನ

​ಪ್ರಜಾವಾಣಿ ವಾರ್ತೆ
Published 30 ಜುಲೈ 2025, 4:43 IST
Last Updated 30 ಜುಲೈ 2025, 4:43 IST
ಭಾಲ್ಕಿ ತಾಲ್ಲೂಕಿನ ಖಾನಾಪೂರ ಗ್ರಾಮದ ಮಲ್ಲಣ್ಣ ದೇವಸ್ಥಾನಲ್ಲಿರುವ ಮಲ್ಲಣ್ಣ ದೇವರ ಮೂರ್ತಿ
ಭಾಲ್ಕಿ ತಾಲ್ಲೂಕಿನ ಖಾನಾಪೂರ ಗ್ರಾಮದ ಮಲ್ಲಣ್ಣ ದೇವಸ್ಥಾನಲ್ಲಿರುವ ಮಲ್ಲಣ್ಣ ದೇವರ ಮೂರ್ತಿ   

ಭಾಲ್ಕಿ: ನಿಸರ್ಗದ ಹಸಿರು ಹೊದಿಕೆಯ ಮಧ್ಯದಲ್ಲಿರುವ ತಾಲ್ಲೂಕಿನ ಖಾನಾಪುರ ಗ್ರಾಮದ ಐತಿಹಾಸಿಕ ಮಲ್ಲಣ್ಣ ದೇವರು, ಶನೇಶ್ವರ, ಗಾಯಮುಖ ಗುಪ್ತಲಿಂಗೇಶ್ವರ ದೇವಸ್ಥಾನ ಶ್ರಾವಣದ ಪವಿತ್ರ ತಿಂಗಳಲ್ಲಿ ಭಕ್ತರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೆಳೆಯುವ ಪವಿತ್ರ ತಾಣಗಳಾಗಿವೆ.

ತಾಲ್ಲೂಕು ಕೇಂದ್ರದಿಂದ 22 ಕಿ.ಮೀ ಅಂತರದಲ್ಲಿರುವ ಖಾನಾಪೂರ ಗ್ರಾಮದಿಂದ ಕೇವಲ ಮೂರು ಕಿ.ಮೀ ಅಂತರದಲ್ಲಿ ಈ ಮೂರು ದೇವಸ್ಥಾನಗಳು ಇವೆ. ಭಕ್ತರು ಒಂದು ದೇವಸ್ಥಾನಕ್ಕೆಂದು ಬಂದರೂ ಸಮೀಪದಲ್ಲಿಯೇ ಇರುವ ಇನ್ನೆರಡು ದೇವಸ್ಥಾನಗಳಿಗೆ ತೆರಳುವುದು ಸಾಮಾನ್ಯ ಸಂಗತಿ.

ದಕ್ಷಿಣ ಕಾಶಿ ಎಂದೇ ಖ್ಯಾತಿ ಪಡೆದಿರುವ ಮಲ್ಲಣ್ಣ ದೇವಸ್ಥಾನಕ್ಕೆ ಆಗಮಿಸುವ ಭಕ್ತರು ಮೊದಲು ದೇವಸ್ಥಾನ ಪಕ್ಕದಲ್ಲಿರುವ ಪವಿತ್ರ ಪುಷ್ಕರಣಿಯಲ್ಲಿ ಪವಿತ್ರ ಸ್ನಾನ ಮಾಡಿ ಸರತಿ ಸಾಲಿನಲ್ಲಿ ನಿಂತು ಮಲ್ಲಣ್ಣ ದೇವರ ದರ್ಶನ ಪಡೆದು ಕೃತಾರ್ಥರಾಗುತ್ತಾರೆ.

ADVERTISEMENT

ರಾಜ್ಯದ ವಿವಿಧ ಜಿಲ್ಲೆಗಳು ಸೇರಿ ಇತರೆ ರಾಜ್ಯಗಳಿಂದಲೂ ಆಗಮಿಸುವ ಭಕ್ತರು ತಮ್ಮ ಹರಕೆ ತೀರಿಸಲು ದೇವಸ್ಥಾನ ಆವರಣದಲ್ಲಿ ರಾತ್ರಿ ಕಳೆದು ಬೆಳಿಗ್ಗೆ ನೈವೇದ್ಯ ತಯಾರಿಸಿ ದೇವರಿಗೆ ಅರ್ಪಿಸುತ್ತಾರೆ. ಈ ದೇವಾಲಯದಲ್ಲಿ ಪ್ರತಿವರ್ಷ ಒಂದು ತಿಂಗಳ ಪರ್ಯಂತ ಮಲ್ಲಣ್ಣ ದೇವರ ಜಾತ್ರೆ ನಡೆಯುತ್ತದೆ. ಕೊಬ್ಬರಿ, ಭಂಡಾರ ಹಾರಿಸುವುದು ಇಲ್ಲಿನ ವೈಶಿಷ್ಟತೆ.

‘ದೇವಾಲಯ ಸುತ್ತಲೂ ತೀರ್ಥಗುಂಡ, ತೆಪ್ಪಿಗುಂಡ, ಕಾಶಿಗುಂಡ, ಶನೇಶ್ವರ ಗುಂಡ, ವಿಠ್ಠಲ್-ರುಕ್ಮಿಣಿ ಗುಂಡ, ಬೈರವ ಕೊಳ ಸೇರಿದಂತೆ 108 ಗುಂಡಗಳಿದ್ದವು ಎಂದು ಹಲವು ಗ್ರಂಥಗಳಲ್ಲಿ ಉಲ್ಲೇಖವಿದೆ’ ಎಂದು ಗ್ರಾಮದ ಹಿರಿಯರು ತಿಳಿಸುತ್ತಾರೆ.

ಇನ್ನು ಈ ದೇವಸ್ಥಾನದಿಂದ ಒಂದೂವರೆ ಕಿ.ಮೀ ಅಂತರದಲ್ಲಿರುವ ಶನೇಶ್ವರ ದೇವಸ್ಥಾನಕ್ಕೆ ತೆರಳಲು ಸುಮಾರು 120 ಮೆಟ್ಟಿಲುಗಳನ್ನು ಇಳಿದು ತೆರಳಬೇಕಾಗುತ್ತದೆ. ಶನಿವಾರ ಅಮಾವಾಸ್ಯೆ ಇರುವ ದಿನ ಶನೇಶ್ವರ ದೇವರ ದರುಶನ ಪಡೆಯಲು ನಾನಾ ಸ್ಥಳಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ, ಸರತಿ ಸಾಲಿನಲ್ಲಿ ನಿಂತು ಶನೇಶ್ವರ ದೇವರ ದರುಶನ ಪಡೆದು ಪುನೀತರಾಗುತ್ತಾರೆ.

ಇಲ್ಲಿಂದ 1 ಕಿ.ಮೀ ದೂರದಲ್ಲಿರುವ ಗಾಯಮುಖ ಗುಪ್ತಲಿಂಗೇಶ್ವರ ದೇವಸ್ಥಾನವಿದೆ. ಈ ದೇವಾಲಯದ ಸುತ್ತಲೂ ಅರಣ್ಯ ಪ್ರದೇಶವಿದೆ. ಇಲ್ಲಿಯ ಹಸಿರು ವಾತಾವರಣ, ಮಳೆಗಾಲದಲ್ಲಿ ಧುಮ್ಮಿಕ್ಕುವ ಮಿನಿ ಜಲಪಾತ, ಹಕ್ಕಿಗಳ ಚಿಲಿಪಿಲಿ ಕಲರವ, ನಯನ ಮನೋಹರ ನಿಸರ್ಗದ ದೃಶ್ಯಗಳು ಭಕ್ತರನ್ನು ಬಹುವಾಗಿ ಆಕರ್ಷಿಸುತ್ತವೆ. ಹಾಗಾಗಿಯೇ ಹೆಚ್ಚಿನ ಸಂಖ್ಯೆಯ ಭಕ್ತರು ಕುಟುಂಬ ಸಮೇತರಾಗಿ ಆಗಮಿಸಿ ಆಹ್ಲಾದಕರ ವಾತಾವರಣದ ಮಧ್ಯೆ ದಿನ ಕಳೆಯುತ್ತಾರೆ.

ಸುಮಾರು 50ಅಡಿ ಆಳದಲ್ಲಿರುವ ಈ ದೇವಸ್ಥಾನದ ಸಮೀಪ ಆಕಳ ಬಾಯಿಯಿಂದ ದಿನದ 24ಗಂಟೆ ಹರಿಯುವ ರುಚಿಕರವಾದ ನೀರಿನ ಝರಿ ಇದೆ.

ಪುರಾತನವಾದ ಈ ದೇವಾಲಯ, ಹಲವು ವಿಸ್ಮಯಗಳನ್ನು ತನ್ನೊಡಲಲ್ಲಿ ಇಟ್ಟುಕೊಂಡಿದೆ ಎನ್ನುತ್ತಾರೆ ದೇವಸ್ಥಾನದ ಅಧ್ಯಕ್ಷ ಅಮರೇಶ್ವರ ಪಾಟೀಲ.

ಭಾಲ್ಕಿ ತಾಲ್ಲೂಕಿನ ಖಾನಾಪೂರ ಗ್ರಾಮದ ಮಲ್ಲಣ್ಣ ದೇವಸ್ಥಾನದ ಪಕ್ಕದಲ್ಲಿರುವ ಪವಿತ್ರ ಪುಷ್ಕರಣಿ
ಭಾಲ್ಕಿ ತಾಲ್ಲೂಕಿನ ಖಾನಾಪೂರ ಗ್ರಾಮದ ಮಲ್ಲಣ್ಣ ದೇವಸ್ಥಾನದ ಸಮೀಪದಲ್ಲಿರುವ ಗಾಯಮುಖ ದೇವಸ್ಥಾನ
ಗಾಯಮುಖ ದೇವಸ್ಥಾನ ಪಕ್ಕದ ಮಿನಿ ಜಲಪಾತ
ಭಾಲ್ಕಿ ತಾಲ್ಲೂಕಿನ ಖಾನಾಪೂರ ಗ್ರಾಮದ ಮಲ್ಲಣ್ಣ ದೇವಸ್ಥಾನದ ಸಮೀಪದಲ್ಲಿರುವ ಶನೇಶ್ವರ ದೇವಸ್ಥಾನ
ಭಾಲ್ಕಿ ತಾಲ್ಲೂಕಿನ ಖಾನಾಪೂರ ಗ್ರಾಮದ ಮಲ್ಲಣ್ಣ ದೇವಸ್ಥಾನದ ಸಮೀಪದಲ್ಲಿರುವ ಶನೇಶ್ವರ ದೇವಸ್ಥಾನ
ಭಾಲ್ಕಿ ತಾಲ್ಲೂಕಿನ ಖಾನಾಪೂರ ಗ್ರಾಮದ ಮಲ್ಲಣ್ಣ ದೇವಸ್ಥಾನದ ಸಮೀಪದಲ್ಲಿರುವ ಗಾಯಮುಖ ದೇವಸ್ಥಾನ

ಕೊಬ್ಬರಿ, ಭಂಡಾರ ಹಾರಿಸುವುದು ಮಲ್ಲಣ್ಣ ದೇವಸ್ಥಾನದ ವೈಶಿಷ್ಟ್ಯ ಗಾಯಮುಖದಲ್ಲಿ ಮಳೆಗಾಲದಲ್ಲಿ ಸೃಷ್ಟಿಯಾಗುವ ಮಿನಿ ಜಲಪಾತ ವಿವಿಧ ಜಿಲ್ಲೆ, ಹೊರ ರಾಜ್ಯಗಳಿಂದ ಆಗಮಿಸುವ ಭಕ್ತರು

ಭಕ್ತರಿಗೆ ದೇವರುಗಳ ದರುಶನಕ್ಕೆ ಅನುಕೂಲ ಕಲ್ಪಿಸಲು ಶನೇಶ್ವರ ಗಾಯಮುಖ ಗುಪ್ತಲಿಂಗೇಶ್ವರ ದೇವಸ್ಥಾನದವರೆಗೆ ಸಿ.ಸಿ ರಸ್ತೆ ನಿರ್ಮಿಸಿ ಭಾಲ್ಕಿ ಬೀದರ್ ಡಿಪೊಗಳಿಂದ ಪ್ರತ್ಯೇಕ ಬಸ್ ಓಡಿಸಬೇಕು
ಅಮರೇಶ್ವರ ಪಾಟೀಲ ಅಧ್ಯಕ್ಷ ಗಾಯಮುಖ ಗುಪ್ತಲಿಂಗೇಶ್ವರ ದೇವಸ್ಥಾನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.