ಬೀದರ್: ಸಿನಿಮೀಯ ಶೈಲಿಯಲ್ಲಿ ನಗರದ ಹೃದಯ ಭಾಗದಲ್ಲಿ ಗುರುವಾರ ಗುಂಡಿನ ದಾಳಿ ನಡೆಸಿ, ಕೊಲೆಗೈದು ಹಣ ದರೋಡೆ ಮಾಡಿದ ಪ್ರಕರಣದಿಂದ ನಗರದ ಜನ ಅಕ್ಷರಶಃ ಬೆಚ್ಚಿ ಬಿದ್ದಿದ್ದಾರೆ.
ಮಕರ ಸಂಕ್ರಮಣದ ಕರಿ ಮುಗಿಸಿಕೊಂಡು ಎಂದಿನಂತೆ ಜನ ದೈನಂದಿನ ಕೆಲಸಕ್ಕೆ ಮರಳಿದ್ದರು. ವಿದ್ಯಾರ್ಥಿಗಳು ಶಾಲಾ–ಕಾಲೇಜಿನತ್ತ ಮುಖ ಮಾಡಿದ್ದರು. ಆಗಷ್ಟೇ ವಾಣಿಜ್ಯ ಚಟುವಟಿಕೆಗಳು ಶುರುವಾಗಿದ್ದವು. ಒಂದು ಬದಿಯಲ್ಲಿ ಜಿಲ್ಲಾಧಿಕಾರಿ ಕಚೇರಿ, ಮತ್ತೊಂದು ಬದಿಯಲ್ಲಿ ಜಿಲ್ಲಾ ನ್ಯಾಯಾಲಯ ಸಂಕೀರ್ಣ. ಎರಡೂ ಕಡೆ ಜನಜಂಗುಳಿ ಇತ್ತು. ಇವುಗಳೆರಡರ ಮಧ್ಯ ಭಾಗದಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಮುಖ್ಯ ಕಚೇರಿ ಕೂಡ ಆಗಷ್ಟೇ ತೆರೆದು ಅಲ್ಲಿನ ಸಿಬ್ಬಂದಿ ಕೆಲಸ ಆರಂಭಿಸಿದ್ದರು.
ಸಿಎಂಎಸ್ ಕಂಪನಿಯ ‘ಕ್ಯಾಶ್ ಕಸ್ಟೋಡಿಯನ್’ಗಳಾಗಿದ್ದ ಚಿದ್ರಿ ನಿವಾಸಿ ಗಿರಿ ವೆಂಕಟೇಶ ಹಾಗೂ ಲಾಡಗೇರಿಯ ನಿವಾಸಿ ಶಿವಕುಮಾರ ಅವರು ಎಟಿಎಂಗಳಿಗೆ ಹಣ ಜಮೆ ಮಾಡಲು ಎಸ್‌ಬಿಐ ಬ್ಯಾಂಕಿನಿಂದ ಟ್ರಂಕ್ ತೆಗೆದುಕೊಂಡು ಜೀಪಿನೊಳಗೆ ಇರಿಸುತ್ತಿದ್ದರು. ಈ ವೇಳೆ ಇಬ್ಬರು ಅಪರಿಚಿತರು ಅವರ ಮೇಲೆ ಎರಗಿ, ಕಣ್ಣಿಗೆ ಕಾರದ ಪುಡಿ ಎರಚಿ ಗುಂಡಿನ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಗಿರಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಶಿವಕುಮಾರ ಗಂಭೀರವಾಗಿ ಗಾಯಗೊಂಡು ಕುಸಿದು ಬಿದ್ದಿದ್ದರು. ಬಳಿಕ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಅಪರಿಚಿತರು ಟ್ರಂಕ್ ಸಮೇತ ಬೈಕ್ ಮೇಲೆ ಕುಳಿತು ಗಾಳಿಯಲ್ಲಿ ಗುಂಡು ಹಾರಿಸಿ ಸ್ಥಳದಿಂದ ನಿರ್ಗಮಿಸಿದರು.
ಘಟನೆ ನಡೆದ ಕೆಲವೇ ನಿಮಿಷಗಳಲ್ಲಿ ಈ ವಿಷಯ ಕಾಡ್ಗಿಚ್ಚಿನಂತೆ ಎಲ್ಲೆಡೆ ಹರಡಿತು. ಸಾಮಾಜಿಕ ಮಾಧ್ಯಮಗಳಲ್ಲೂ ಇದೇ ಘಟನೆಯ ವಿಡಿಯೋ, ಚಿತ್ರಗಳು ಹರಿದಾಡಿದವು. ಮಾಧ್ಯಮಗಳಲ್ಲಿ ಈ ವಿಷಯ ಬಿತ್ತರವಾಗುತ್ತಿದ್ದಂತೆ ವಿವಿಧ ಕಡೆಗಳಿಂದ ಜನ ತಂಡೋಪತಂಡವಾಗಿ ಬಂದು ಘಟನಾ ಸ್ಥಳದಲ್ಲಿ ಸೇರಿದರು.
ಘಟನೆ ನಡೆದ ಸುತ್ತಲೂ ಪೊಲೀಸರು ಹಾಕಿದ ಬ್ಯಾರಿಕೇಡ್ ಸುತ್ತ ಅಪಾರ ಸಂಖ್ಯೆಯಲ್ಲಿ ಜನ ನೆರೆದಿದ್ದರು. ಮೊಬೈಲ್‌ಗಳಲ್ಲಿ ಛಾಯಾಚಿತ್ರ, ವಿಡಿಯೋ ತೆಗೆದುಕೊಂಡರು. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿ ಬೀಡು ಬಿಟ್ಟಿದ್ದರು. ವಿಧಿ ವಿಜ್ಞಾನ ಪ್ರಯೋಗಾಲಯ, ಬೆರಳಚ್ಚು ತಜ್ಞರು ಹಾಗೂ ಶ್ವಾನ ದಳದವರು ಸ್ಥಳಕ್ಕೆ ಬಂದು ಪರಿಶೀಲಿಸುತ್ತಿದ್ದಾಗ ಜನ ಬ್ಯಾರಿಕೇಡ್ ದಾಟಿ ಒಳಬಂದರು. ಈ ವೇಳೆ ಪೊಲೀಸರು ಲಾಠಿ ಬೀಸಿ ಜನರನ್ನು ಚದುರಿಸಿದರು. ಇದು ಎರಡ್ಮೂರು ಸಲ ಪುನರಾವರ್ತನೆಯಾಯಿತು. ಇಡೀ ದಿನ ಪೊಲೀಸರು ಘಟನಾ ಸ್ಥಳದಲ್ಲಿ ಸಾರ್ವಜನಿಕ ಸಂಚಾರದ ಮೇಲೆ ನಿರ್ಬಂಧ ಹೇರಿದ್ದರು. ತನಿಖಾ ತಂಡದವರು ಸಾಕ್ಷ್ಯಗಳನ್ನು ಕಲೆ ಹಾಕಿ ತೆರಳಿದ ನಂತರವಷ್ಟೇ ಜನರಿಗೆ ಓಡಾಡಲು ಬಿಡಲಾಯಿತು. ಇದರ ನಂತರವೂ ಜನ ವಿವಿಧ ಕಡೆಗಳಿಂದ ಬಂದು ಹೋಗುವುದು ಮುಂದುವರೆದಿತ್ತು.
ಘಟನೆ ಬಳಿಕ ದಿನವಿಡೀ ಎಲ್ಲೆಡೆಯೂ ಇದೇ ವಿಷಯವಾಗಿ ಚರ್ಚೆ ನಡೆಯುತ್ತಿತ್ತು. ‘ಹಾಡಹಗಲೇ ನಗರದ ಡಿಸಿ ಕಚೇರಿ ಪಕ್ಕದಲ್ಲಿಯೇ ಈ ಘಟನೆ ನಡೆದಿದೆ. ಯಾರಿಗೂ ಪೊಲೀಸರ ಭಯ ಇಲ್ಲದಂತಾಗಿದೆ. ಸಾರ್ವಜನಿಕರಿಗೆ ರಕ್ಷಣೆ ಒದಗಿಸುವವರು ಯಾರು’ ಹೀಗೆ ಅನೇಕ ರೀತಿಯ ಪ್ರಶ್ನೆಗಳನ್ನು ಹಾಕಿ ಜನ ಚರ್ಚಿಸುತ್ತಿದ್ದರು. ಪೊಲೀಸರ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸುತ್ತಿದ್ದರು.
ಕಲಬುರಗಿ ವಲಯ ಐಜಿ ಭೇಟಿ
ಘಟನೆ ನಡೆದ ವಿಷಯ ತಿಳಿದು ಕಲಬುರಗಿ ವಲಯದ ಐ.ಜಿ. ಅಜಯ್ ಹಿಲೋರಿ ಅವರು ಸ್ಥಳಕ್ಕೆ ಭೇಟಿ ನೀಡಿ ಎಸ್ಪಿ ಪ್ರದೀಪ್ ಗುಂಟಿ ಅವರಿಂದ ಮಾಹಿತಿ ಪಡೆದರು. ಎಸ್‌ಬಿಐ ಮುಖ್ಯ ಕಚೇರಿಯ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ತಡಹೊತ್ತು ಪರಿಶೀಲಿಸಿದ ಅವರು ಬಳಿಕ ಘಟನಾ ಸ್ಥಳವನ್ನು ವೀಕ್ಷಿಸಿದರು. ನಂತರ ಎಸ್ಪಿ ಕಚೇರಿಗೆ ತೆರಳಿ ಮಾಹಿತಿ ಪಡೆದರು. ಹೆಚ್ಚುವರಿ ಎಸ್ಪಿ ಚಂದ್ರಕಾಂತ ಪೂಜಾರಿ ಡಿವೈಎಸ್ಪಿ ಶಿವನಗೌಡ ಪಾಟೀಲ ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳದಲ್ಲಿದ್ದರು.
ಪೊಲೀಸ್ ವೈಫಲ್ಯ; ಬಿಜೆಪಿ ಟೀಕೆ
‘ಹಾಡುಹಗಲೇ ನಡೆದಿರುವ ದರೋಡೆಗೆ ಬೀದರ್ ಜಿಲ್ಲಾ ಪೊಲೀಸರ ವೈಫಲ್ಯವೇ ಕಾರಣ’ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಸೋಮನಾಥ ಪಾಟೀಲ ಟೀಕಿಸಿದ್ದಾರೆ. ಗುಂಡು ಹಾರಿಸಿ ಕೊಲೆ ಮಾಡಿ ದರೋಡೆ ಮಾಡಿರುವುದು ನೋಡಿದರೆ ಪೊಲೀಸರಿಗೆ ಭಯ ಇಲ್ಲದಂತಾಗಿದೆ. ಸಚಿನ್ ಪಾಂಚಾಳ್ ಆತ್ಮಹತ್ಯೆ ಪ್ರಕರಣದ ನಂತರ ಜನರಿಗೆ ಪೊಲೀಸರ ಮೇಲೆ ನಂಬಿಕೆ ಹೋಗಿದೆ. ಜಿಲ್ಲಾ ಉಸ್ತುವಾರಿ ಸಚಿವರಿಗೆ ಜಿಲ್ಲಾಡಳಿತದ ಮೇಲೆ ಹಿಡಿತವಿಲ್ಲ. ಮುಖ್ಯಮಂತ್ರಿಯವರು ಜಿಲ್ಲೆಗೆ ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಗಳನ್ನು ನೇಮಕ ಮಾಡಬೇಕೆಂದು ಒತ್ತಾಯಿಸಿದ್ದಾರೆ. ಬಿಜೆಪಿ ಮುಖಂಡ ಭಗವಂತ ಖೂಬಾ ಕೂಡ ಘಟನೆಯನ್ನು ಖಂಡಿಸಿದ್ದಾರೆ.
ಮರಣೋತ್ತರ ಪರೀಕ್ಷೆಗೆ ವಿಳಂಬ
ಘಟನೆಗೆ ಕಾರಣರಾದವರನ್ನು ಬಂಧಿಸುವಂತೆ ಆಗ್ರಹಿಸಿ ಮೃತ ಗಿರಿ ವೆಂಕಟೇಶ ಅವರ ಸಂಬಂಧಿಕರು ನಗರದ ಬ್ರಿಮ್ಸ್ ಎದುರು ರಾತ್ರಿ ಎಂಟು ಗಂಟೆಯ ವರೆಗೆ ಧರಣಿ ನಡೆಸಿದರು. ನ್ಯಾಯ ಸಿಗುವವರೆಗೆ ಮರಣೋತ್ತರ ಪರೀಕ್ಷೆಗೆ ಅವಕಾಶ ಕಲ್ಪಿಸುವುದಿಲ್ಲ ಎಂದು ಪಟ್ಟು ಹಿಡಿದರು. ಅವರ ಆಕ್ರಂದನ ಮುಗಿಲು ಮುಟ್ಟಿತ್ತು. ಸಂಸದ ಸಾಗರ್ ಖಂಡ್ರೆ ಶಾಸಕ ಡಾ. ಶೈಲೇಂದ್ರ ಕೆ. ಬೆಲ್ದಾಳೆ ಬಿಜೆಪಿ ಮುಖಂಡ ಭಗವಂತ ಖೂಬಾ ಭೇಟಿ ನೀಡಿ ಸಾಂತ್ವನ ಹೇಳಿದರು. ಹಿರಿಯ ಪೊಲೀಸ್ ಅಧಿಕಾರಿಗಳ ಮನವೊಲಿಕೆ ನಂತರ ಪಟ್ಟು ಸಡಿಲಿಸಿದರು. ಮರಣೋತ್ತರ ಪರೀಕ್ಷೆ ನಂತರ ಗಿರಿ ವೆಂಕಟೇಶ ಅವರ ಮೃತದೇಹವನ್ನು ಚಿಟಗುಪ್ಪ ತಾಲ್ಲೂಕಿನ ಬೇಮಳಖೇಡಕ್ಕೆ ಅಂತ್ಯಕ್ರಿಯೆಗೆ ಕೊಂಡೊಯ್ದರು. ಇದಕ್ಕೂ ಮುನ್ನ ಗಿರಿ ವೆಂಕಟೇಶ ಅವರ ಕುಟುಂಬ ಸದಸ್ಯರು ಘಟನಾ ಸ್ಥಳಕ್ಕೆ ಬಂದರು. ಅವರ ಆಕ್ರಂದನ ಮುಗಿಲು ಮುಟ್ಟಿತ್ತು. ಮರಣೋತ್ತರ ಪರೀಕ್ಷೆ ನಂತರ ಶವ ಒಪ್ಪಿಸಲಾಗುವುದು ಎಂದು ಪೊಲೀಸರು ಸಮಾಧಾನ ಪಡಿಸಿದರು.
ಎಂಟು ಗುಂಡು ಹಾರಿಸಿದ ದರೋಡೆಕೋರರು
ಕೃತ್ಯ ಎಸಗುವಾಗ ದರೋಡೆಕೋರರು ಒಟ್ಟು ಎಂಟು ಗುಂಡುಗಳು ಹಾರಿಸಿದ್ದಾರೆ ಎಂದು ಗೊತ್ತಾಗಿದೆ. ಗಿರಿ ವೆಂಕಟೇಶ ಅವರ ಮೇಲೆ ನಾಲ್ಕು ಗುಂಡುಗಳನ್ನು ಹಾರಿಸಿದರೆ ಶಿವಕುಮಾರ ಅವರ ಮೇಲೆ ಎರಡು ಗುಂಡು ಹಾರಿಸಿದ್ದಾರೆ. ಸ್ಥಳದಲ್ಲಿ ಒಂದು ಜೀವಂತ ಗುಂಡು ಪೊಲೀಸರು ಜಪ್ತಿ ಮಾಡಿದ್ದಾರೆ. ದರೋಡೆಕೋರರು ಬೈಕ್‌ನಲ್ಲಿ ಪರಾರಿಯಾಗುವಾಗ ಅಲ್ಲಿದ್ದ ಕೆಲವರು ಕಲ್ಲು ತೂರಿ ಅಡ್ಡಿಪಡಿಸಿದಾಗ ಗಾಳಿಯಲ್ಲಿ ಒಂದು ಗುಂಡು ಹಾರಿಸಿದ್ದಾರೆ.
‘ಐದು ವರ್ಷದಿಂದ ಒಟ್ಟಿಗೆ ಕೆಲಸ’
‘ನಾನು ಗಿರಿ ವೆಂಕಟೇಶ ಅವರೊಂದಿಗೆ ಐದು ವರ್ಷಗಳಿಂದ ಸಿಎಂಎಸ್ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ. ಅವರು ಗುಂಡೇಟಿಗೆ ಮೃತಪಟ್ಟಿದ್ದು ನಂಬಲು ಸಾಧ್ಯವಾಗುತ್ತಿಲ್ಲ’ ಎಂದು ಸಿಎಂಎಸ್ ಏಜೆನ್ಸಿಯ ಹಣ ಸಾಗಣೆ ವಾಹನದ ಚಾಲಕ ರಾಜು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ. ‘ನಾನು ವಾಹನವನ್ನು ಬ್ಯಾಂಕಿನ ಎದುರು ನಿಲ್ಲಿಸಿ ಒಳಗೆ ಹೋಗಿದ್ದೆ. ಈ ವೇಳೆ ನೋಟಿನ ಕಂತೆಯಿರುವ ಟ್ರಂಕ್ ಅನ್ನು ಗಿರಿ ವೆಂಕಟೇಶ ಹಾಗೂ ಶಿವಕುಮಾರ ಅವರು ಜೀಪಿನೊಳಗೆ ಇರಿಸುವಾಗ ದರೋಡೆಕೋರರು ಬಂದು ದಾಳಿ ನಡೆಸಿದ್ದಾರೆ. ನಮ್ಮೊಂದಿಗೆ ಸದಾ ಒಬ್ಬ ಗನ್‌ಮ್ಯಾನ್ ಇರುತ್ತಿದ್ದರು. ಆದರೆ ಇಂದು ಅವರು ರಜೆ ಮೇಲಿದ್ದರು. ಬ್ಯಾಂಕಿನ ಗನ್‌ಮ್ಯಾನ್ ಬ್ಯಾಂಕಿನೊಳಗೆ ಇದ್ದರು’ ಎಂದು ಘಟನೆಯನ್ನು ವಿವರಿಸಿದ್ದಾರೆ.
ಎರಡು ಸಲ ಕೆಳಗೆ ಬಿದ್ದ ಟ್ರಂಕ್
ದರೋಡೆಕೋರರು ಗುಂಡಿನ ದಾಳಿ ನಡೆಸಿ ಬೈಕ್ ಮೇಲೆ ನೋಟಿನ ಕಂತೆಯಿರುವ ಟ್ರಂಕ್ ಇರಿಸಿಕೊಳ್ಳುವಾಗ ಎರಡು ಸಲ ಕೆಳಗೆ ಬಿದ್ದಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ₹92 ಲಕ್ಷದ ಮೊತ್ತದ ನೋಟುಗಳಿದ್ದ ಟ್ರಂಕ್ ಭಾರವಾಗಿತ್ತು. ಅವಸರದಲ್ಲಿ ಇಟ್ಟುಕೊಳ್ಳುವಾಗ ಎರಡು ಸಲ ಕೆಳಗೆ ಬಿದ್ದಿದೆ. ಈ ವೇಳೆ ₹5 ಲಕ್ಷ ಕೆಳಗೆ ಬಿದ್ದಿತ್ತು. ಅದನ್ನು ಲೆಕ್ಕಿಸದೆ ಸಂಭಾಳಿಸಿಕೊಂಡು ಪರಾರಿಯಾಗಿದ್ದಾರೆ. ಬಳಿಕ ಜನರು ಅದನ್ನು ಗಮನಿಸಿ ಬ್ಯಾಂಕಿನವರಿಗೆ ತಲುಪಿಸಿದರು. ಬ್ಯಾಂಕಿನವರು ಇದನ್ನು ಖಚಿತಪಡಿಸಿದ್ದಾರೆ. ದರೋಡೆಕೋರರು ಬೈಕ್ ಮೇಲೆ ಓಡಿ ಹೋಗುವಾಗ ಸ್ಥಳದಲ್ಲಿದ್ದ ಕೆಲವರು ಕಲ್ಲು ತೂರಿ ತಡೆಯಲು ಯತ್ನಿಸಿದ್ದಾರೆ. ಆದರೆ ಅವರು ಪಿಸ್ತೂಲ್ ತೋರಿಸಿ ಹೆದರಿಸಿದ್ದರಿಂದ ಜನ ದೂರ ಓಡಿ ಹೋದರು.
ಸಚಿನ್ ಪಾಂಚಾಳ್ ಆತ್ಮಹತ್ಯೆ ಘಟನೆ ಮಾಸುವ ಮುಂಚೆ..
ಡಿಸೆಂಬರ್ 26ರಂದು ಬೀದರ್‌ನಲ್ಲಿ ನಡೆದ ಗುತ್ತಿಗೆದಾರ ಸಚಿನ್ ಪಾಂಚಾಳ್ ಆತ್ಮಹತ್ಯೆ ಘಟನೆ ರಾಜ್ಯದಾದ್ಯಂತ ಸಾಕಷ್ಟು ಸದ್ದು ಮಾಡಿತು. ಆ ಘಟನೆಯ ನೆನಪು ಮಾಸುವ ಮುಂಚೆಯೇ ದರೋಡೆ ನಡೆದಿರುವುದು ಕಾನೂನು ಹಾಗೂ ಸುವ್ಯವಸ್ಥೆಯ ಮೇಲೆ ಪ್ರಶ್ನೆ ಮೂಡಿದೆ. ಬಿಜೆಪಿ ಮುಖಂಡರು ಪೊಲೀಸ್ ಇಲಾಖೆಯ ದೊಡ್ಡ ವೈಫಲ್ಯ ಎಂದು ಟೀಕಿಸಿದ್ದಾರೆ.
ದಿನದ ಬೆಳವಣಿಗೆ...
* ಬೆಳಿಗ್ಗೆ 10.30ರಿಂದ 11ರ ನಡುವೆ ಘಟನೆ ಗುಂಡಿನ ದಾಳಿ
* ಜೀಪಿನೊಳಗೆ ಹಣದ ಟ್ರಂಕ್ ಇರಿಸುವಾಗ ದಾಳಿ
* ನೋಟಿನ ಕಂತೆ ಇರುವ ಟ್ರಂಕ್‌ನೊಂದಿಗೆ ಬೈಕ್ ಮೇಲೆ ಪರಾರಿ
* ಸ್ಥಳದಲ್ಲೇ ಗಿರಿ ವೆಂಕಟೇಶ ಸಾವು ಶಿವಕುಮಾರ ಆಸ್ಪತ್ರೆಗೆ ರವಾನೆ
* ಬೆರಳಚ್ಚು ತಜ್ಞರು ಶ್ವಾನ ದಳ ಆಗಮನ
* ಮಧ್ಯಾಹ್ನ ಕಲಬುರಗಿ ವಲಯ ಐಜಿ ಅಜಯ್ ಹಿಲೋರಿ ಭೇಟಿ
* ದಿನವಿಡೀ ಎಸ್‌ಬಿಐ ಎದುರು ಜನಜಂಗುಳಿ
* ಸಂಜೆ ಬ್ರಿಮ್ಸ್ ಎದುರು ಗಿರಿ ವೆಂಕಟೇಶ ಕುಟುಂಬದವರ ಧರಣಿ
* ರಾತ್ರಿ ಗಿರಿ ವೆಂಕಟೇಶ ಮರಣೋತ್ತರ ಪರೀಕ್ಷೆ
ಎಸ್‌ಬಿಐ ವಿರುದ್ಧ ಪ್ರಕರಣ ದಾಖಲು
ಘಟನೆಗೆ ಸಂಬಂಧಿಸಿದಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕಚೇರಿಯ ವ್ಯವಸ್ಥಾಪಕ ಸಿಎಂಎಸ್ ಏಜೆನ್ಸಿಯ ವ್ಯವಸ್ಥಾಪಕ ಹಾಗೂ ಇಬ್ಬರು ಅಪರಿಚಿತರ ವಿರುದ್ಧ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಗುರುವಾರ ರಾತ್ರಿ ಪ್ರಕರಣ ದಾಖಲಾಗಿದೆ. ನಿರ್ಲಕ್ಷ್ಯ ವಹಿಸಿದ ಆರೋಪದ ಮೇರೆಗೆ ಬ್ಯಾಂಕ್ ಹಾಗೂ ಏಜೆನ್ಸಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.