ADVERTISEMENT

ಬೀದರ್‌ | ಸುಳ್ಳು ಜಾತಿ ಪ್ರಮಾಣ ಪತ್ರ ಕೊಟ್ಟರೆ ಕ್ರಮ–ಮೂರ್ತಿ ಎಲ್

ಅರಣ್ಯ ಜಮೀನಿನಿಂದ ಪರಿಶಿಷ್ಟರ ಒಕ್ಕಲೆಬ್ಬಿಸದಿರಿ–ಆಯೋಗದ ಅಧ್ಯಕ್ಷ ಡಾ.ಮೂರ್ತಿ ಎಲ್.

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2026, 7:51 IST
Last Updated 25 ಫೆಬ್ರುವರಿ 2026, 7:51 IST
ಬೀದರ್‌ನಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಕರ್ನಾಟಕ ರಾಜ್ಯ ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟು ಆಯೋಗದ ಅಧ್ಯಕ್ಷ ಡಾ.ಮೂರ್ತಿ ಎಲ್. ಮಾತನಾಡಿದರು
ಬೀದರ್‌ನಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಕರ್ನಾಟಕ ರಾಜ್ಯ ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟು ಆಯೋಗದ ಅಧ್ಯಕ್ಷ ಡಾ.ಮೂರ್ತಿ ಎಲ್. ಮಾತನಾಡಿದರು   

ಬೀದರ್‌: ‘ಇತ್ತೀಚೆಗೆ ಸುಳ್ಳು ಜಾತಿ ಪ್ರಮಾಣ ಪತ್ರಗಳನ್ನು ಕೊಟ್ಟು ಪರಿಶಿಷ್ಟ ಸೌಲಭ್ಯಗಳನ್ನು ಕಬಳಿಸುತ್ತಿರುವ ಪ್ರಕರಣಗಳು ಹೆಚ್ಚಾಗಿದ್ದು, ಅಂಥವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ಕರ್ನಾಟಕ ರಾಜ್ಯ ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟು ಆಯೋಗದ ಅಧ್ಯಕ್ಷ ಮೂರ್ತಿ ಎಲ್. ಎಚ್ಚರಿಕೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ಬೀದರ್‌ ಜಿಲ್ಲೆಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಸಂಘ ಸಂಸ್ಥೆಯ ಪದಾಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಮಾತನಾಡಿದರು. 

‘ಬೇಡ ಜಂಗಮ, ಬುಡ್ಗ ಜಂಗಮ ಕುರಿತ ‌ಪ್ರಕರಣಗಳ ಬಗ್ಗೆ ನ್ಯಾಯಾಲಯ ತೀರ್ಪು ನೀಡಿದೆ. ಶಾಲಾ ಕಾಲೇಜು ಹಂತದಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರ ನೀಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು. 

ADVERTISEMENT

‘ಹಲವಾರು ವರ್ಷಗಳಿಂದ ಅರಣ್ಯ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಸಾಗುವಳಿದಾರರನ್ನು ಒಕ್ಕಲೆಬ್ಬಿಸಬಾರದು. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಅರಣ್ಯ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜನರನ್ನು ಒಕ್ಕಲೆಬ್ಬಿಸುತ್ತಿರುವ ಸಮಸ್ಯೆ ಹೆಚ್ಚಿದೆ. ಮಾರ್ಚ್‌ 8ರಂದು ಅರಣ್ಯ ಹಾಗೂ ಕಂದಾಯ ಇಲಾಖೆ ಕಾರ್ಯದರ್ಶಿಗಳೊಂದಿಗೆ ಸಭೆ ನಡೆಸಿ ಮುಖ್ಯಮಂತ್ರಿಗಳ ಗಮನಕ್ಕೆ ಸಮಸ್ಯೆಯನ್ನು ತರಲಾಗುವುದು. ಈ ಸಂಬಂಧ ಆಯೋಗದಿಂದ ಆದೇಶ ಕೂಡ ಹೊರಡಿಸಲಾಗುವುದು’ ಎಂದು ತಿಳಿಸಿದರು. 

‘ಪರಿಶಿಷ್ಟ ಜಾತಿ, ಪಂಗಡದ ಜನರ ಹಿತರಕ್ಷಣೆ ಕಾಪಾಡುವುದಕ್ಕಾಗಿಯೇ ಈ ಆಯೋಗವಿದೆ. ಈಗಾಗಲೇ 3,900 ಪ್ರಕರಣಗಳು ನಡೆಯುತ್ತಿವೆ. ದಿನನಿತ್ಯ ಸಾವಿರಾರು ಅರ್ಜಿಗಳು ಬರುತ್ತಿವೆ. ಈಗಾಗಲೇ 325 ಪ್ರಕರಣಗಳನ್ನು ಕೋರ್ಟ್‌ ನಡೆಸಿ ಇತ್ಯರ್ಥ ಪಡಿಸಲಾಗಿದೆ’ ಎಂದು ಹೇಳಿದರು.

‘ಬೀದರ್‌ ಜಿಲ್ಲೆಯ ವಿವಿಧ ಸಮಾಜದ ಮುಖಂಡರ ಅಹವಾಲುಗಳನ್ನು ಸುದೀರ್ಘವಾಗಿ ಆಲಿಸಿದರು. ದೌರ್ಜನ್ಯ ಪ್ರಕರಣಗಳು, ಸ್ಮಶಾನ ಭೂಮಿ, ಎಸ್‌ಸಿಎಸ್‌ಪಿ, ಟಿಎಸ್‌ಪಿ ಅನುದಾನ ಬಳಕೆ, ಕಾಲೊನಿಗಳ ಅಭಿವೃದ್ಧಿ, ಸುಳ್ಳು ಜಾತಿ ಪ್ರಮಾಣ ಪತ್ರ, ವಿದ್ಯಾರ್ಥಿ ನಿಲಯಗಳ ಅವ್ಯವಸ್ಥೆ, ಜಮೀನು ಮಂಜೂರು, ಮುಂತಾದ ವಿಷಯಗಳ ಬಗ್ಗೆ ಅಹವಾಲುಗಳನ್ನು ಸ್ವೀಕರಿಸಿದರು.

‘ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜನರ ಅಭಿವೃದ್ಧಿಗೆ ಮೀಸಲಿಟ್ಟ ಅನುದಾನವನ್ನು ಅದೇ ವರ್ಗದ ಜನರಿಗೆ ಕಡ್ಡಾಯವಾಗಿ ಬಳಸತಕ್ಕದ್ದು. ಈ ರೀತಿ ಮಾಡದಿದ್ದರೆ ಅಂಥವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಎಚ್ಚರಿಕೆ ನೀಡಿದರು. 

‘ಎಸ್.ಸಿ.,ಎಸ್.ಟಿ. ಕಾಲೊನಿಗಳಲ್ಲಿ ಮೂಲಸೌಕರ್ಯಗಳ ಕೊರತೆ ನೀಗಿಸಬೇಕು. ಒಳಚರಂಡಿ, ಕುಡಿಯುವ ನೀರು, ವಿದ್ಯುತ್ ಪೂರೈಕೆ ಕಡ್ಡಾಯವಾಗಿ ಇರಬೇಕು. ಸ್ಥಳೀಯ ಸಂಸ್ಥೆಗಳಲ್ಲಿ ಅನುದಾನವನ್ನು ಸರಿಯಾಗಿ ಬಳಸಬೇಕು. ‌ಭೋವಿ ಅಭಿವೃದ್ಧಿ ನಿಗಮದ ಯೋಜನೆಗಳು ಸರಿಯಾಗಿ ತಲುಪದೇ ಇರುವ ಬಗ್ಗೆ ಅಹವಾಲು ಕೇಳಿ ಬಂದಿದೆ. ಭೋವಿ ವರ್ಗದ ಮೀನುಗಾರರು ಭೋವಿ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆಯುತ್ತಿದ್ದು ಈ ಬಗ್ಗೆ ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ಸೂಚಿಸಿದರು.

‘ಜಿಲ್ಲೆಯಲ್ಲಿ ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರದ ವಸತಿ ನಿಲಯಗಳಲ್ಲಿ ವ್ಯವಸ್ಥೆ ಸರಿಪಡಿಸಬೇಕು. ವಿದ್ಯಾರ್ಥಿಗಳಿಗೆ ಉತ್ತಮ ಆಹಾರ ಒದಗಿಸಬೇಕು. ಯುವಕ ಯುವತಿಯರಲ್ಲಿ ಕಾನೂನು ಅರಿವು, ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಬೇಕು’ ಎಂದು ಹೇಳಿದರು.

ಆಯೋಗದ ಸದಸ್ಯ ಸುನೀಲ್‌ ಉಕ್ಕಲಿ, ಕಾರ್ಯದರ್ಶಿ ಡಾ.ಎಚ್.ಎಸ್.ಶಿವರಾಮ, ಜಿಲ್ಲಾ ಪಂಚಾಯಿತಿ ಸಿಇಒ ಡಾ. ಗಿರೀಶ್‌ ಬದೋಲೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್‌ ಗುಂಟಿ, ಪಂಚ ಗ್ಯಾರಂಟಿ ಯೋಜನೆ ಜಿಲ್ಲಾಧ್ಯಕ್ಷ ಅಮೃತರಾವ್‌ ಚಿಮಕೋಡೆ, ಮುಖಂಡರಾದ ಅರವಿಂದಕುಮಾರ್‌ ಅರಳಿ, ಅನಿಲ್‌ಕುಮಾರ್‌ ಬೆಲ್ದಾರ, ಮಾರುತಿ ಬೌದ್ಧೆ, ಮಹೇಶ ಗೋರನಾಳಕರ, ರಮೇಶ ಡಾಕುಳಗಿ, ಪಂಡಿತರಾವ ಚಿದ್ರಿ, ಬಸವರಾಜ ಮಾಳಗೆ, ಪೃಥ್ವಿರಾಜ ಎಸ್‌. ಸೇರಿದಂತೆ ಪರಿಶಿಷ್ಟ ಜಾತಿ, ಪಂಗಡದ ಮುಖಂಡರು, ಸಾರ್ವಜನಿಕರು ಭಾಗವಹಿಸಿದ್ದರು.

ಬೌದ್ಧ ಭಿಕ್ಕುಗಳು ಸಭೆಯಲ್ಲಿ ಮಾತನಾಡಿದರು

‘ಪರಿಶಿಷ್ಟ ಸಾಗುವಳಿದಾರರನ್ನು ವಕ್ಕಲೆಬ್ಬಿಸುವಂತಿಲ್ಲ’ ‘ಪರಿಶಿಷ್ಟರ ಅನುದಾನವನ್ನು ಪರಿಶಿಷ್ಟರ ಅಭ್ಯುದಕ್ಕಾಗಿಯೇ ಬಳಸಿ’ ‘ಭೋವಿ ನಿಗಮದ ಯೋಜನೆಗಳು ಅವರಿಗೆ ತಲುಪಲಿ’  

ಬೀದರ್‌ ಜಿಲ್ಲೆಯಲ್ಲಿ ಎಸ್‌ಸಿ ಎಸ್‌ಟಿ ಜನರ ವಿರುದ್ಧದ ದೌರ್ಜನ್ಯ ಪ್ರಕರಣಗಳನ್ನು ಸರಿಯಾಗಿ ದಾಖಲಿಸಿ ಇತ್ಯರ್ಥಗೊಳಿಸಬೇಕು. ಅವುಗಳಿಗೆ ಪರಿಹಾರ ಕೂಡ ಒದಗಿಸಬೇಕು

– ಮೂರ್ತಿ ಎಲ್. ಅಧ್ಯಕ್ಷ ರಾಜ್ಯ ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟು ಆಯೋಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.