ADVERTISEMENT

ಬೀದರ್‌: ಈ ರಾಖಿಯಿಂದ ಬೆಳೆಯುತ್ತೆ ತರಕಾರಿ!

ಹತ್ತು ಬಗೆಯ ಬೀಜಗಳಿಂದ ರಾಖಿ ಸಿದ್ಧಪಡಿಸಿದ ತೋಟಗಾರಿಕೆ ವಿದ್ಯಾರ್ಥಿಗಳು

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2025, 6:31 IST
Last Updated 8 ಆಗಸ್ಟ್ 2025, 6:31 IST
ತರಕಾರಿ ಬೀಜಗಳಲ್ಲಿ ಅರಳಿದ ರಾಖಿ
ತರಕಾರಿ ಬೀಜಗಳಲ್ಲಿ ಅರಳಿದ ರಾಖಿ   

ಬೀದರ್‌: ಇದು ಅಂತಿಂತಹ ಸಾಮಾನ್ಯ ರಾಖಿ ಅಲ್ಲ. ಸಹೋದರಿ ಸಹೋದರನ ಕೈಗೆ ಕಟ್ಟಿದ ಬಳಿಕ ಈ ರಾಖಿಯನ್ನು ಮಣ್ಣಿಗೆ ಹಾಕಿದರೆ ಅಥವಾ ಪಾಟಲ್ಲಿ ಇಟ್ಟರೆ ತನ್ನಿಂದಾನೇ ತರಕಾರಿ ಬೆಳೆಯುತ್ತದೆ!

ಇಂತಹದ್ದೊಂದು ವಿನೂತನ ಪ್ರಯತ್ನ ನಗರದ ತೋಟಗಾರಿಕೆ ಕಾಲೇಜಿನ ಬಿಎಸ್‌ಸಿಯ ಬೀಜ ವಿಜ್ಞಾನದ ವಿದ್ಯಾರ್ಥಿಗಳು ಮಾಡಿದ್ದಾರೆ.

ರಕ್ಷಾ ಬಂಧನದ ಅಂಗವಾಗಿ 10 ಜನ ವಿದ್ಯಾರ್ಥಿನಿಯರು ಹಾಗೂ 11 ವಿದ್ಯಾರ್ಥಿಗಳು ಸೇರಿಕೊಂಡು ತರಕಾರಿ ಬೀಜಗಳಿಂದಲೇ ರಾಖಿ ಸಿದ್ಧಪಡಿಸಿದ್ದಾರೆ. ಮೆಣಸಿನಕಾಯಿ, ಟೊಮೆಟೊ, ಗೋರಿ ಕಾಯಿ, ಹೀರೆಕಾಯಿ, ಹಾಗಲಕಾಯಿ, ಕೊತ್ತಂಬರಿ, ಪಾಲಕ್‌, ಸೌತೆಕಾಯಿಯ ಒಣಗಿದ ಅತ್ಯುತ್ತಮ ದರ್ಜೆಯ ಬೀಜಗಳನ್ನು ಉಪಯೋಗಿಸಿದ್ದಾರೆ. ಕಾಗದದ ರಟ್ಟು ಹಾಗೂ ಸಾವಯವ ಗೊಬ್ಬರವನ್ನು ಬಳಸಿಕೊಂಡಿದ್ದಾರೆ. ವಿವಿಧ ಬಗೆಯಲ್ಲಿ ವಿನ್ಯಾಸಗೊಳಿಸಿದ್ದಾರೆ. ನೋಟಲು ಥೇಟ್‌ ಸಾಮಾನ್ಯ ರಾಖಿಯಂತೆ ಗೋಚರಿಸುತ್ತವೆ.

ADVERTISEMENT

ಒಂದು ರಾಖಿಗೆ ತಲಾ ₹30 ಬೆಲೆ ನಿಗದಿಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳು ಮತ್ತು ವಾಟ್ಸ್ಯಾಪ್‌ ಗ್ರುಪ್‌ಗಳ ಮೂಲಕ ಇವುಗಳ ಬಗ್ಗೆ ಪ್ರಚಾರ ಮಾಡುತ್ತ ಮಾರುಕಟ್ಟೆ ಕಂಡುಕೊಂಡಿರುವುದು ವಿಶೇಷ. ತೋಟಕಾರಿಕೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಪ್ರೊ. ಅರವಿಂದ ಕುಮಾರ ಅವರ ಮಾರ್ಗದರ್ಶನದಲ್ಲಿ ಈ ಕೆಲಸ ಮಾಡಿದ್ದಾರೆ.

‘ಇತ್ತೀಚಿನ ದಿನಗಳಲ್ಲಿ ಕಿಚನ್‌ ಗಾರ್ಡನ್‌ ಬಹಳ ಜನಪ್ರಿಯವಾಗುತ್ತಿದೆ. ಸೀಸನ್‌ ಅಲ್ಲದ ದಿನಗಳಲ್ಲಿ ಸೊಪ್ಪು ಸೇರಿದಂತೆ ಇತರೆ ತರಕಾರಿ ಬಹಳ ದುಬಾರಿಯಾಗುತ್ತದೆ. ಕೊತ್ತಂಬರಿ ಇಲ್ಲದೆ ಯಾವುದೇ ಆಹಾರ ಸಿದ್ಧವಾಗುವುದಿಲ್ಲ. ಈ ರಾಖಿ ಉಪಯೋಗಿಸಿದ ನಂತರ ಮನೆಯ ಅಂಗಳದ ಮಣ್ಣಿನಲ್ಲಿ ಅಥವಾ ಪಾಟ್‌ನಲ್ಲಿ ಹಾಕಿದರೆ ತರಕಾರಿ ಬೆಳೆಯುತ್ತದೆ. ಈಗ ಮಳೆಗಾಲ ಇರುವುದರಿಂದ ವಿಶೇಷ ಆರೈಕೆಯ ಅಗತ್ಯವೂ ಬೀಳುವುದಿಲ್ಲ’ ಎನ್ನುತ್ತಾರೆ ಪ್ರೊ. ಅರವಿಂದಕುಮಾರ.

‘ಮನೆಯ ಅಂಗಳದಲ್ಲಿ ಪ್ರತಿಯೊಬ್ಬರೂ ತರಕಾರಿ ಬೆಳೆಸುವುದರಿಂದ ತಿಂಗಳಿಗೆ ತರಕಾರಿಗೆ ಖರ್ಚಾಗುವ ಹಣ ಉಳಿಸಬಹುದು. ಇದರ ಬಗ್ಗೆ ಅರಿವುದು ಮೂಡಿಸುವುದು ಇದರ ಹಿಂದಿನ ಉದ್ದೇಶ’ ಎಂದು ವಿವರಿಸಿದರು.

ರಾಖಿ ತಯಾರಿಸುತ್ತಿರುವ ತೋಟಗಾರಿಕೆ ಕಾಲೇಜಿನ ವಿದ್ಯಾರ್ಥಿಗಳು
ರಕ್ಷಾ ಬಂಧನದ ದಿನ ಅನೇಕರು ರಾಖಿಗಳನ್ನು ಕಟ್ಟಿಸಿಕೊಂಡು ಆನಂತರ ಅವುಗಳನ್ನು ಎಸೆಯುತ್ತಾರೆ. ತರಕಾರಿ ಬೀಜದಿಂದ ತಯಾರಿಸಿದ ಈ ರಾಖಿಗಳನ್ನು ಮನೆಯ ಆವರಣದಲ್ಲೇ ಹಾಕಿದರೆ ತರಕಾರಿ ಬೆಳೆಯುತ್ತದೆ.
ಪೂಜಾ ಎಸ್‌. ಜಮಾದಾರ ಚಿತ್ರ ಕೆ.ವಿ. ವಿದ್ಯಾರ್ಥಿನಿಯರು
ಏನಾದರೂ ಹೊಸದಾಗಿ ಮಾಡಬೇಕೆಂಬ ಉದ್ದೇಶವಿತ್ತು. ರಕ್ಷಾ ಬಂಧನ ಇರುವುದರಿಂದ ರಾಖಿಯಲ್ಲೇ ಹೊಸ ಪ್ರಯೋಗ ಮಾಡಲು ನಿರ್ಧರಿಸಿದೆವು. ವಿದ್ಯಾರ್ಥಿಗಳು ಕೂಡ ಅದಕ್ಕೆ ಅಣಿಗೊಂಡು ತಯಾರಿಸಿದ್ದಾರೆ.
ಪ್ರೊ. ಅರವಿಂದಕುಮಾರ ಸಹಾಯಕ ಪ್ರಾಧ್ಯಾಪಕ

ವಿದ್ಯಾರ್ಥಿಗಳಿಗೆ ಆದಾಯ ಹಂಚಿಕೆ:

‘ತೋಟಗಾರಿಕೆ ಕಾಲೇಜಿನ ಕಲಿಕಾ ಕಾರ್ಯಕ್ರಮದ ಭಾಗವಾಗಿ ಪ್ರತಿವರ್ಷ ವಿದ್ಯಾರ್ಥಿಗಳಿಗೆ ಏನಾದರೂ ಹೊಸತು ಮಾಡುವ ಟಾಸ್ಕ್‌ ನೀಡಲಾಗುತ್ತದೆ. ಈ ಸಲ ತರಕಾರಿ ಬೀಜಗಳಿಂದ ರಾಖಿ ತಯಾರಿಸಿದ್ದಾರೆ. ಈ ರಾಖಿಗಳ ಮಾರಾಟದಿಂದ ಬಂದ ಒಟ್ಟು ಆದಾಯದಲ್ಲಿ ಶೇ 15ರಷ್ಟು ಕಾಲೇಜಿಗೆ ನೀಡಬೇಕಾಗುತ್ತದೆ. ಮಿಕ್ಕಳಿದದ್ದು ವಿದ್ಯಾರ್ಥಿಗಳಿಗೆ ಹಂಚಿಕೆ ಮಾಡಲಾಗುತ್ತದೆ. ಕಲಿಕೆಯ ಜೊತೆಗೆ ಆದಾಯ ಅವರಿಗೆ ಸಿಗುತ್ತದೆ. ತೋಟಗಾರಿಕೆ ಮಾಡಿ ಮಾರುಕಟ್ಟೆ ಹೇಗೆ ಕಂಡುಕೊಳ್ಳುವುದು ಎಂಬುದನ್ನು ತಿಳಿಸುವುದು ಇದರ ಹಿಂದಿನ ಉದ್ದೇಶ’ ಎಂದು ವಿವರಿಸುತ್ತಾರೆ. ಸಹಾಯಕ ಪ್ರಾಧ್ಯಾಪಕ ಪ್ರೊ. ಅರವಿಂದ ಕುಮಾರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.