ADVERTISEMENT

ಜನವಾಡಕರ್‌ ಸಾಹಿತ್ಯದಿಂದ ಜನಮನಕ್ಕೆ ಚೈತನ್ಯ: ಸಂಜೀವಕುಮಾರ ಅತಿವಾಳೆ ಅಭಿಮತ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2025, 6:41 IST
Last Updated 15 ಸೆಪ್ಟೆಂಬರ್ 2025, 6:41 IST
ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ ಉದ್ಘಾಟಿಸಿದರು
ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ ಉದ್ಘಾಟಿಸಿದರು   

ಬೀದರ್‌: ಸಾಹಿತಿ ಎಸ್.ಎಂ.ಜನವಾಡಕರ್ ಅವರ ಸಮಗ್ರ ಸಾಹಿತ್ಯದ ಮೇಲೆ ಬೆಳಕು ಚೆಲ್ಲುವ ಒಂದ ದಿನದ ವಿಚಾರ ಸಂಕಿರಣ ನಗರದಲ್ಲಿ ಭಾನುವಾರ ನಡೆಯಿತು.

ಅತಿವಾಳೆ ಸಾಂಸ್ಕೃತಿಕ ಪ್ರತಿಷ್ಠಾನದಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ ಉದ್ಘಾಟಿಸಿ,‘ಸರಳ ವ್ಯಕ್ತಿತ್ವದ ಎಸ್.ಎಂ.ಜನವಾಡಕರ್ ಅವರು ಬೀದರ್ ಜಿಲ್ಲೆಯ ಸಾಹಿತ್ಯ ಲೋಕಕ್ಕೆ ಅಪರೂಪದ ಕೊಡುಗೆ ಕೊಟ್ಟಿದ್ದಾರೆ. ಅನೇಕ ಕೃತಿಗಳನ್ನು ಪ್ರಕಟಿಸಿ ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ’ ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸುರೇಶ ಚನಶೆಟ್ಟಿ ಮಾತನಾಡಿ,‘ಕನ್ನಡ ಸಾಹಿತ್ಯಕ್ಕೆ ಕೊಡುಗೆ ಕೊಟ್ಟವರ ಕೆಲಸದ ಮೇಲೆ ಬೆಳಕು ಚೆಲ್ಲುತ್ತಿರುವ ಕಾರ್ಯ ಶ್ಲಾಘನಾರ್ಹ’ ಎಂದರು.

ADVERTISEMENT

ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸಂಜೀವಕುಮಾರ ಅತಿವಾಳೆ ಮಾತನಾಡಿ,‘ಎಸ್.ಎಂ.ಜನವಾಡಕರ್ ಅನೇಕ ಪುಸ್ತಕಗಳನ್ನು ಬರೆದು ತಮ್ಮ ವಿಚಾರಧಾರೆಗಳನ್ನು ಜನರಿಗೆ ತಲುಪಿಸಿದ್ದಾರೆ. ಅವರ ಕೃತಿಗಳು ಜನಮನದಲ್ಲಿ ಚೈತನ್ಯ ಮೂಡಿಸುವಂತಿವೆ’ ಎಂದು ತಿಳಿಸಿದರು.

ಸಾಹಿತಿ ಎಂ.ಎಸ್.ಜನವಾಡಕರ್ ಮಾತನಾಡಿ,‘ನನ್ನ ಬರಹದ ಮೇಲೆ ಚರ್ಚೆ ನಡೆಸುತ್ತಿರುವುದು ಖುಷಿ ತಂದಿದೆ’ ಎಂದು ಭಾವುಕರಾದರು.

ಸಾಹಿತಿ ಸುನೀತಾ ಕೂಡ್ಲಿಕರ್ ಮಾತನಾಡಿ,‘ಪ್ರಜ್ಞ ತರಂಗ, ಶೀಲ ತರಂಗ, ಕರುಣ ತರಂಗ, ಧಮ್ಮಾಮೃತ ಗೀತೆ, ತಥಾಗತ್ ಗಾದೆಗಳು ಜನವಾಡಕರ್‌ ಅವರ ಪ್ರಮುಖ ಕೃತಿಗಳು. ಅವುಗಳಿಗೆ ವಿಶಿಷ್ಟ ಸ್ಥಾನ ಇದೆ’ ಎಂದರು.

ಸಾಹಿತಿ ರಾಮಚಂದ್ರ ಗಣಾಪುರ್ ಮಾತನಾಡಿ,‘ಬೌದ್ಧ ಸಾಹಿತ್ಯ ಪರಂಪರೆಗೆ ಜನವಾಡಕರ್‌ ಅವರ ಕೊಡುಗೆ ಅಪಾರ. ಕ್ಷೇತ್ರ ಕಾರ್ಯ ಕೈಗೊಂಡು ಅನೇಕ ಬೌದ್ಧ ಕೇಂದ್ರಗಳಿಗೆ ಭೇಟಿ ನೀಡಿ ಅಪಾರ ಮಾಹಿತಿಯನ್ನು ಸಂಗ್ರಹಿಸಿ ಕೃತಿಗಳ ಮೂಲಕ ಬೌದ್ಧ ಪರಂಪರೆಯ ಅಧ್ಯಯನಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ’ ಎಂದು ಹೇಳಿದರು.

ಸಾಹಿತಿ ಶ್ರೇಯಾ ಮಹೀಂದ್ರಕರ್ ಮಾತನಾಡಿ,‘ಜನವಾಡಕರ್ ಅವರ ಸಾಹಿತ್ಯ ಕೇವಲ ಕಾವ್ಯ ಅಥವಾ ವಿಮರ್ಶೆಗೆ ಸೀಮಿತವಾಗಿಲ್ಲ. ನಾಟಕ, ಕಥೆ ಹಾಗೂ ಕಾದಂಬರಿಗಳಲ್ಲಿ ಅವರು ಬರೆದಿರುವ ಕೃತಿಗಳು ಸಮಾಜದ ನಿಜ ಜೀವನವನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸುತ್ತವೆ’ ಎಂದರು.

ಸಾಹಿತಿ ಮುಕ್ತುಂಬಿ,‘ವಚನಕಾರರ ವಚನಗಳ ಹಿನ್ನೆಲೆಯಲ್ಲಿ ಜನವಾಡಕರ್ ಅವರು ಅದ್ಭುತ ಲೇಖನಗಳನ್ನು ಬರೆದಿದ್ದಾರೆ. ಅವರ ವೈಚಾರಿಕ ಬರಹಗಳು ಸಮಾಜದಲ್ಲಿನ ಮಡಿವಂತಿಕೆ ಮತ್ತು ಮೌಢ್ಯವನ್ನು ಹೊಡೆದೋಡಿಸುವ ಶಕ್ತಿಯನ್ನು ಹೊಂದಿವೆ’ ಎಂದು ಹೇಳಿದರು.

ಜಿಲ್ಲಾ ಕನ್ನಡ ಜಾಗೃತಿ ಸಮಿತಿಗೆ ನಾಮನಿರ್ದೇಶನಗೊಂಡ ಟಿ.ಎಂ.ಮಚ್ಚೆ, ಸುನೀಲ ಭಾವಿಕಟ್ಟಿ ಅವರನ್ನು ಸನ್ಮಾನಿಸಲಾಯಿತು. 

ಸಂಜೀವಕುಮಾರ ಅತಿವಾಳೆ ಇದ್ದರು.

ಸುನೀಲ್‌ ಗಾಯಕವಾಡ ಸ್ವಾಗತಿಸಿದರು. ಲಕ್ಷ್ಮಣ ಮೇತ್ರೆ ನಿರೂಪಿಸಿದರು. ನಾಗೇಶ್ ಜಾನಕನೂರ್ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.