ADVERTISEMENT

ಬೀದರ್ | ವೃದ್ಧರೂ, ವಿದ್ಯಾರ್ಥಿಗಳೂ ನಿತ್ಯ 3 ಕಿ.ಮೀ. ನಡಿಯಬೇಕು

ಬಸ್‌ ವ್ಯವಸ್ಥೆಗೆ ಕ್ರಮಕೈಗೊಳ್ಳದ ಜನಪ್ರತಿನಿಧಿಗಳು, ಅಧಿಕಾರಿಗಳ ವಿರುದ್ಧ ಸಾರ್ವಜನಿಕರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2025, 6:30 IST
Last Updated 8 ಆಗಸ್ಟ್ 2025, 6:30 IST
ಕಮಲನಗರ ತಾಲ್ಲೂಕಿನ ಬಾಲೂರ(ಕೆ) ಗ್ರಾಮದ ವಿದ್ಯಾರ್ಥಿಗಳು, ಮಹಿಳೆಯರು ಹಾಗೂ ವೃದ್ಧರು 
ಕಮಲನಗರ ತಾಲ್ಲೂಕಿನ ಬಾಲೂರ(ಕೆ) ಗ್ರಾಮದ ವಿದ್ಯಾರ್ಥಿಗಳು, ಮಹಿಳೆಯರು ಹಾಗೂ ವೃದ್ಧರು    

ಕಮಲನಗರ: ಸುಮಾರು 10 ವರ್ಷಗಳಿಂದ ಸೂಕ್ತ ಬಸ್‌ ವ್ಯವಸ್ಥೆಯಿಲ್ಲದ ಕಾರಣ ಇಲ್ಲಿನ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳಿಗೆ ಶಾಲಾ-ಕಾಲೇಜಿಗೆ ತೆರಳಲು, ತಾಲ್ಲೂಕು ಕೇಂದ್ರದಲ್ಲಿ ತಮ್ಮ ವೈಯಕ್ತಿಕ ಕೆಲಸಗಳಿಗಾಗಿ ತೆರಳಲು ಕಾಲ್ನಡಿಗೆ ಅನಿವಾರ್ಯವಾಗಿದೆ.

ತಲುಪಬೇಕಾದ ಸ್ಥಳಕ್ಕೆ ಹೋಗಲು ತಮ್ಮ ಬಹುತೇಕ ಸಮಯವನ್ನು ನಡಿಗೆಗಾಗಿಯೇ ವ್ಯಯಿಸಬೇಕಾಗಿದೆ. ಇದರಿಂದ ವಿದ್ಯಾರ್ಥಿಗಳ ಓದಿನ ಮೇಲೂ ಪರಿಣಾಮ ಬೀರುತ್ತಿದೆ.

ತಾಲ್ಲೂಕಿನ ಬಾಲೂರ(ಕೆ), ಮುರುಗ(ಕೆ) ಗ್ರಾಮಗಳ ಗ್ರಾಮಸ್ಥರು, ವಿದ್ಯಾರ್ಥಿಗಳು ಪ್ರತಿ ನಿತ್ಯ 3 ಕಿ.ಮೀ. ದೂರವನ್ನು ನಡಿದೇ ಸಾಗಬೇಕು. ಕಮಲನಗರದಿಂದ ಬಾಲೂರ(ಕೆ) 3 ಕಿ.ಮೀ. ಹಾಗೂ ಮುರುಗ(ಕೆ) 1 ಕಿ.ಮೀ. ಅಂತರದಲ್ಲಿವೆ. ಎರಡೂ ಗ್ರಾಮಗಳು ಸೇರಿ ಸುಮಾರು 2ರಿಂದ 3 ಸಾವಿರಕ್ಕೂ ಅಧಿಕ ಜನಸಂಖ್ಯೆ ಇದೆ. ಗ್ರಾಮಸ್ಥರು ತಮ್ಮ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳಬೇಕಾದರೆ ಕಮಲನಗರ ತಾಲ್ಲೂಕು ಕೇಂದ್ರಕ್ಕೆ ತೆರಳಬೇಕು. ಬಸ್ ಸೌಕರ್ಯವಿಲ್ಲ. ಈ ಸಂಬಂಧ ಹಲವು ಬಾರಿ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎನ್ನುವುದು ಗ್ರಾಮಸ್ಥರ ಅಳಲು.

ADVERTISEMENT

ಹತ್ತು ವರ್ಷಗಳಿಂದ ಸಾರಿಗೆ ವ್ಯವಸ್ಥೆ ಇಲ್ಲ. 6 ತಿಂಗಳ ಹಿಂದೆ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ ಬಸ್ ಹೋರಂಡಿ ಮಾರ್ಗವಾಗಿ ಬಾಲೂರ(ಕೆ), ಮುರುಗ(ಕೆ) ಗ್ರಾಮದಿಂದ ಕಮಲನಗರಕ್ಕೆ ಬೆಳಿಗ್ಗೆ-ಸಂಜೆ ಎರಡು ಬಾರಿಯಂತೆ ಸುಮಾರು ಒಂದು ತಿಂಗಳು ಸಂಚರಿಸಿತ್ತು. ನಂತರ ತದನಂತರ ಇದೀಗ ಮತ್ತೆ ಬಸ್ ವ್ಯವಸ್ಥೆ ಇಲ್ಲದಂತಾಗಿದೆ. ಬಸ್ ಅವ್ಯವಸ್ಥೆಯಿಂದ ವೃದ್ಧರು, ಶಾಲಾ–ಕಾಲೇಜು ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ ಎಂದು ಗ್ರಾಮಸ್ಥರಾದ ಶಿವಕುಮಾರ ಸಿರಸಗೆ, ಅವಿನಾಶ ಮೇತ್ರೆ, ಬಾಲಾಜಿ ಪಾಟೀಲ ಬೇಸರ ವ್ಯಕ್ತಪಡಿಸಿದರು.

ಕೂಡಲೇ ಸಂಬಂಧಪಟ್ಟ ಈಶಾನ್ಯ ಸಾರಿಗೆ ಸಂಸ್ಥೆ ಅಧಿಕಾರಿಗಳು ಬಾಲೂರ(ಕೆ), ಮುರುಗ(ಕೆ) ಗ್ರಾಮಕ್ಕೆ ಬಸ್ ವ್ಯವಸ್ಥೆ ಮಾಡಬೇಕು. ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಯುವರಾಜ ಬಿರಾದಾರ, ನೇತಾಜಿ ಪಾಟೀಲ, ವಿಜು ಮುರ್ಕೆ ಎಚ್ಚರಿಕೆ ನೀಡಿದ್ದಾರೆ.

ವಿದ್ಯಾರ್ಥಿಗಳು ನಡಿಗೆಯಲ್ಲಿ ಶಾಲಾ–ಕಾಲೇಜುಗಳಿಗೆ ತೆರಳುವುದರಿಂದ ಸುಸ್ತಾಗುತ್ತಾರೆ. ಇದರಿಂದ ಅಭ್ಯಾಸದ ಮೇಲೆ ಪರಿಣಾಮ ಬೀರುತ್ತಿದೆ. ಹೀಗಾಗಿ ವಿದ್ಯಾರ್ಥಿಗಳಿಗಾಗಿ ಬಸ್‌ ವ್ಯವಸ್ಥೆ ಮಾಡಬೇಕು
ವಿಠ್ಠಲರಾವ ಪಾಟೀಲ ರೈತ ಮುಖಂಡ
ಬಾಲೂರ(ಕೆ) ಮುರುಗ(ಕೆ) ಗ್ರಾಮಗಳಿಗೆ ಸಾರಿಗೆ ಸಂಸ್ಥೆ ಬಸ್ ಓಡಿಸಿದರೆ ಶಾಲಾ–ಕಾಲೇಜು ಮಕ್ಕಳಿಗೆ ಅನುಕೂಲವಾಗುತ್ತದೆ. ಗ್ರಾಮಸ್ಥರಿಗೆ ತಮ್ಮ ವೈಯಕ್ತಿಕ ಕಾರ್ಯ ಮಾಡಿಕೊಳ್ಳಲು ನೆರವಾಗುತ್ತದೆ
ಜ್ಞಾನೇಶ್ವರ ಚ್ಯಾಂಡೇಶ್ವರೆ ಗ್ರಾಮಸ್ಥ‌
ಘಟಕಕ್ಕೆ ಹೊಸದಾಗಿ ಬಂದಿದ್ದೇನೆ. ಈ ಗ್ರಾಮಗಳಿಗೆ ಬಸ್‌ ಬಂದ್‌ ಆಗಿರುವುದು ನನ್ನ ಗಮನಕ್ಕೆ ಬಂದಿಲ್ಲ. ಗ್ರಾಮಸ್ಥರಿಂದ ಮನವಿ ಬಂದರೆ ಮೇಲಧಿಕಾರಿಗಳ ಗಮನಕ್ಕೆ ತಂದು ಅಗತ್ಯ ಕ್ರಮಕೈಗೊಳ್ಳುತ್ತೇನೆ
ರಾಜಶೇಖರ ವ್ಯವಸ್ಥಾಪಕ ಔರಾದ್‌ ಬಸ್ ಘಟಕ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.