ADVERTISEMENT

ಬೀದರ್‌ನಲ್ಲಿ ‘ಆಟೊ ರಾಜ್‌’: ಎಲ್ಲೆಂದರಲ್ಲಿ ಆಟೊಗಳ ನಿಲುಗಡೆ..

ಶಶಿಕಾಂತ್ ಎಸ್. ಶೆಂಬೆಳ್ಳಿ
Published 15 ಫೆಬ್ರುವರಿ 2026, 3:47 IST
Last Updated 15 ಫೆಬ್ರುವರಿ 2026, 3:47 IST
ಬೀದರ್‌ನ ಡಾ.ಬಿ.ಆರ್‌. ಅಂಬೇಡ್ಕರ್‌ ವೃತ್ತದ ರಸ್ತೆಯುದ್ದಕ್ಕೂ ಬೇಕಾಬಿಟ್ಟಿ ಆಟೋಗಳನ್ನು ನಿಲ್ಲಿಸಿರುವುದು
ಬೀದರ್‌ನ ಡಾ.ಬಿ.ಆರ್‌. ಅಂಬೇಡ್ಕರ್‌ ವೃತ್ತದ ರಸ್ತೆಯುದ್ದಕ್ಕೂ ಬೇಕಾಬಿಟ್ಟಿ ಆಟೋಗಳನ್ನು ನಿಲ್ಲಿಸಿರುವುದು   

ಬೀದರ್‌: ಬೀದರ್‌ನಲ್ಲಿ ಬಹುತೇಕ ಆಟೊಗಳು ಸಂಚರಿಸುವ ರೀತಿ ನೋಡಿದರೆ ಇತರೆ ವಾಹನ ಚಾಲಕರು ಹತ್ತು ಸಲ ಯೋಚಿಸಿ ವಾಹನ ಓಡಿಸುವಂತಹ ಪರಿಸ್ಥಿತಿ ಇದೆ.

ಏಕೆಂದರೆ ಆಟೊಗಳು ಸಂಚರಿಸುವ ಪರಿಯೇ ಇದಕ್ಕೆ ಕಾರಣ. ಬೇಕಾಬಿಟ್ಟಿ ಎಲ್ಲೆಂದರಲ್ಲಿ ನಿಲುಗಡೆ ಮಾಡುವುದು, ನಡು ರಸ್ತೆಯಲ್ಲಿ ನಿಲ್ಲಿಸಿ, ಪ್ಯಾಸೆಂಜರ್‌ಗಳನ್ನು ಕರೆದೊಯ್ಯಲಾಗುತ್ತದೆ. ಇದರಿಂದ ಸಂಚಾರಕ್ಕೆ ತೊಡಕಾಗುತ್ತಿದೆ. ಅಪಘಾತಗಳೂ ಸಂಭವಿಸುತ್ತಿವೆ.

ನಗರದ ಡಾ.ಬಿ.ಆರ್‌. ಅಂಬೇಡ್ಕರ್‌ ವೃತ್ತ, ಬಸವೇಶ್ವರ ವೃತ್ತ, ಬೊಮ್ಮಗೊಂಡೇಶ್ವರ ವೃತ್ತ, ಗುಂಪಾ ರಿಂಗ್‌ರೋಡ್‌ ವೃತ್ತ, ಮೈಲೂರ್‌ ಕ್ರಾಸ್‌ ಸೇರಿದಂತೆ ಇತರೆಡೆಗಳಲ್ಲಿ ಆಟೊಗಳನ್ನು ಎಲ್ಲೆಂದರಲ್ಲಿ ನಿಲ್ಲಿಸಿ, ಪ್ಯಾಸೆಂಜರ್‌ಗಳನ್ನು ಕೊಂಡೊಯ್ಯುತ್ತಾರೆ. ಇದು ಇತರೆ ವಾಹನ ಚಾಲಕರಿಗೆ ಕಿರಿಕಿರಿ ಉಂಟು ಮಾಡುತ್ತಿದೆ.

ADVERTISEMENT

ಬಸವೇಶ್ವರ ಹಾಗೂ ಅಂಬೇಡ್ಕರ್‌ ವೃತ್ತ ಪ್ರಮುಖ ಜನನಿಬಿಡ ಸ್ಥಳಗಳಾಗಿವೆ. ವಾಹನಗಳು ಹೆಚ್ಚಾಗಿ ಸಂಚರಿಸುತ್ತವೆ. ಆದರೆ, ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರಸ್ತೆಯುದ್ದಕ್ಕೂ ಆಟೊಗಳನ್ನು ನಿಲ್ಲಿಸುವುದರಿಂದ ಸದಾ ವಾಹನ ದಟ್ಟಣೆ ಉಂಟಾಗುತ್ತಿದೆ.

ಇನ್ನು, ಬಹುತೇಕರು ಲೇನ್‌ ಅನುಸರಿಸುವುದಿಲ್ಲ. ವೇಗವಾಗಿ ರಸ್ತೆಯಲ್ಲಿ ಸಂಚರಿಸುತ್ತಲೇ ಏಕಾಏಕಿ ಯಾವುದೇ ಮುನ್ಸೂಚನೆ ಅಥವಾ ಇಂಡಿಕೇಟರ್‌ ಬಳಸದೇ ನಿಲ್ಲಿಸುತ್ತಾರೆ. ಯಾವ ಕಡೆಯಿಂದ ಯಾವಾಗ ಏಕಾಏಕಿ ನುಗ್ಗಿ ಬರುತ್ತಾರೆ ಎನ್ನುವುದು ಗೊತ್ತಾಗುವುದಿಲ್ಲ. ಅತಿ ವೇಗ ಮತ್ತು ಕಿವಿಗಡಚ್ಚಿಕ್ಕುವ ರೀತಿಯಲ್ಲಿ ಸಂಗೀತ ಹಾಕಿಕೊಂಡು ನಗರದ ಹೃದಯ ಭಾಗದಲ್ಲೇ ಓಡಿಸುತ್ತಾರೆ. ಇದರಿಂದ ಸಾಕಷ್ಟು ಕಿರಿಕಿರಿ ಉಂಟಾಗುತ್ತಿದೆ ಎನ್ನುತ್ತಾರೆ ಸಾರ್ವಜನಿಕರು.

‘ಬೀದರ್‌ನಲ್ಲಿ ಒಬ್ಬರು ಅಥವಾ ಇಬ್ಬರು ಆಟೊ ಬಾಡಿಗೆಗೆ ಪಡೆದು ಕೊಂಡೊಯ್ಯುವುದು ಬಹಳ ಕಡಿಮೆ. ತುರ್ತು ಇದ್ದವರಷ್ಟೇ ಆ ರೀತಿ ಮಾಡುತ್ತಾರೆ. ವೈಯಕ್ತಿಕ ಹಣ ಭರಿಸಿ ಇತರೆ ಸಹ ಪ್ರಯಾಣಿಕರೊಂದಿಗೆ ಹೋಗುವುದು ಹೆಚ್ಚು ರೂಢಿ. ಇದರಿಂದ ಜನರ ಜೇಬಿಗೂ ಉಳಿತಾಯ. ಆದರೆ, ಒಂದು ಆಟೊದಲ್ಲಿ 3+1 ಎಂಬ ನಿಯಮ ಇದೆ. ಆದರೆ, ಬಹುತೇಕರು ಇದನ್ನು ಪಾಲಿಸುವುದಿಲ್ಲ. ಹಿಂಭಾಗದಲ್ಲಿ ನಾಲ್ಕೈದು ಜನರಿರುತ್ತಾರೆ. ಮುಂಭಾಗದಲ್ಲಿ ಚಾಲಕನ ಬಳಿ ಇಬ್ಬರಿಂದ ಮೂವರನ್ನು ಕೂರಿಸಿಕೊಳ್ಳಲಾಗುತ್ತದೆ. ಆಟೊ ಓಡಿಸಲು ಕಷ್ಟವಾಗುತ್ತದೆ. ಆದರೂ ಹೆಚ್ಚಿನ ಹಣ ಸಿಗುತ್ತದೆ ಎಂದು ಹೀಗೆ ಮಾಡುತ್ತಾರೆ. ಇದು ಬಹಳ ಅಪಾಯಕಾರಿ’ ಎನ್ನುತ್ತಾರೆ ಮೈಲೂರಿನ ನಿವಾಸಿಗಳಾದ ಸಿದ್ದೇಶ್ವರ, ಸಂಗಶೆಟ್ಟಿ.

ಇನ್ನು ಆಟೊಗಳಲ್ಲಿ ಜೋರಾಗಿ ಸಂಗೀತ ಹಾಕುತ್ತಾರೆ. ಧ್ವನಿ ಕಡಿಮೆ ಮಾಡಬೇಕೆಂದು ಹೇಳಿದರೂ ಕೇಳುವುದಿಲ್ಲ. ಅಶ್ಲೀಲ ಹಾಗೂ ‘ಡಬಲ್‌ ಮೀನಿಂಗ್‌’ ಇರುವ ಹಾಡುಗಳನ್ನು ಹಾಕುವುದರಿಂದ ವಿಶೇಷವಾಗಿ ಹೆಣ್ಣು ಮಕ್ಕಳಿಗೆ ಬಹಳಷ್ಟು ಇರಿಸು ಮುರಿಸು ಉಂಟಾಗುತ್ತದೆ. ಇದಕ್ಕೆಲ್ಲ ಟ್ರಾಫಿಕ್‌ ಪೊಲೀಸರು ಕಡಿವಾಣ ಹಾಕಬೇಕಿದೆ ಎಂದರು.

ಶಾಲಾ ಬಸ್‌ಗಳಿಗೆ ಸಂಬಂಧಿಸಿದಂತೆ ನಿಯಮ ರೂಪಿಸಿ ಕಟ್ಟುನಿಟ್ಟಿನಿಂದ ಜಾರಿಗೆ ತರಲಾಗಿದೆ. ಆದರೆ ಆಟೊಗಳ ಚಲನವಲನದ ಮೇಲೆ ಏಕಿಲ್ಲ ನಿಯಂತ್ರಣ.
ಶಿವರಾಜ್‌ ಸ್ಥಳೀಯ ನಿವಾಸಿ
ಅಪಾಯವನ್ನು ಲೆಕ್ಕಿಸದೇ ಹೆಚ್ಚಿನ ಸಂಖ್ಯೆಯ ಮಕ್ಕಳನ್ನು ಆಟೊಗಳಲ್ಲಿ ಕೊಂಡೊಯ್ಯಲಾಗುತ್ತದೆ. ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಗಂಭೀರವಾಗಿ ಪರಿಗಣಿಸಬೇಕು.
ರಮೇಶ್‌ ಬಿರಾದಾರ ಸ್ಥಳೀಯ ನಿವಾಸಿ

ಸ್ಕ್ರ್ಯಾಪ್‌ ವಾಹನಗಳ ಸಂಚಾರ

ಆರ್‌ಟಿಒ ಮೂಲಗಳ ಪ್ರಕಾರ ಬೀದರ್‌ ನಗರವೊಂದರಲ್ಲೇ 10ರಿಂದ 12 ಸಾವಿರ ಆಟೋಗಳಿವೆ. ಇದರಲ್ಲಿ ಅರ್ಧಕ್ಕೂ ಹೆಚ್ಚು ಆಟೊಗಳು ಸ್ಕ್ಯಾಪ್‌ ಆಗಿವೆ. ಅವುಗಳು ರಸ್ತೆಯ ಮೇಲೆ ಸಂಚರಿಸುವಂತಿಲ್ಲ. ಆದರೆ ಅವುಗಳು ಮುಕ್ತವಾಗಿ ಓಡಾಡುತ್ತಿವೆ. ‌ ಫಿಟ್‌ನೆಸ್‌ ಇನ್‌ಶೂರೆನ್ಸ್‌ ಇರದ ವಾಹನಗಳು ಬೇಕಾಬಿಟ್ಟಿ ಸಂಚರಿಸುತ್ತಿದ್ದು ಟ್ರಾಫಿಕ್‌ ಹಾಗೂ ಆರ್‌ಟಿಒ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ತಪಾಸಣೆ ನಡೆಸಿ ನಿಯಮಗಳಿಗೆ ವಿರುದ್ಧವಾಗಿ ಸಂಚರಿಸುತ್ತಿರುವ ಆಟೊಗಳ ಮೇಲೆ ಕ್ರಮ ಜರುಗಿಸಬೇಕು ಎನ್ನುತ್ತಾರೆ ಸಾರ್ವಜನಿಕರು.

ಹೆಚ್ಚಿನ ಒಮಿನಿ ಸಂಚಾರ

ಬಹುತೇಕ ಶಾಲಾ–ಕಾಲೇಜುಗಳವರು ಬಸ್‌ಗಳ ವ್ಯವಸ್ಥೆ ಮಾಡಿದ್ದಾರೆ. ಹೀಗಿದ್ದರೂ ಆಟೊ ಹಾಗೂ ಒಮಿನಿಗಳಲ್ಲಿ ಮಕ್ಕಳನ್ನು ಶಾಲೆಗೆ ಕರೆದೊಯ್ದು ಬಿಡಲಾಗುತ್ತಿದೆ. ಅದರಲ್ಲೂ ಇತ್ತೀಚಿನ ವರ್ಷಗಳಲ್ಲಿ ನಗರದಲ್ಲಿ ಒಮಿನಿಗಳ ಸಂಖ್ಯೆ ಸಾಕಷ್ಟು ಹೆಚ್ಚಾಗಿದೆ. ಶಾಲೆಗಳು ಮಕ್ಕಳ ಪಿಕ್‌ಅಪ್‌ ಮತ್ತು ಡ್ರಾಪ್‌ಗೆ ವಿಧಿಸುವ ಶುಲ್ಕಕ್ಕಿಂತಲೂ ಕಡಿಮೆ ತೆಗೆದುಕೊಳ್ಳವುದರಿಂದ ಹೆಚ್ಚಿನ ಪೋಷಕರು ಒಮಿನಿಗಳಿಗೆ ಮೊರೆ ಹೋಗುತ್ತಿದ್ದಾರೆ. ಹೀಗಾಗಿಯೇ ಅವುಗಳ ಸಂಖ್ಯೆ ಹೆಚ್ಚಾಗುತ್ತಲೇ ಹೋಗುತ್ತಿದೆ. ‘ಒಮಿನಿಗಳಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಮಕ್ಕಳನ್ನು ಕೂರಿಸಿಕೊಳ್ಳುತ್ತಾರೆ. ಯಾವುದೇ ಸುರಕ್ಷತಾ ಮಾನದಂಡ ಅನುಸರಿಸುವುದಿಲ್ಲ. ಇದರಿಂದ ಸಮಸ್ಯೆ ಉದ್ಭವಿಸುವ ಮುಂಚೆ ಸೂಕ್ತ ಕ್ರಮ ಕೈಗೊಳ್ಳುವ ಅಗತ್ಯವಿದೆ’ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ರಮೇಶ್‌ ಬಿರಾದಾರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.