ಬೀದರ್: ನಗರದಲ್ಲಿ ಮರಗಳ ಮಾರಣ ಹೋಮ ಮುಂದುವರಿದಿದ್ದು, ಯಾರೂ ಕೂಡ ತಡೆಯುವವರು ಇಲ್ಲದಂತಾಗಿದೆ.
ಈ ಹಿಂದೆ ಮೈಲೂರ, ಗುಂಪಾ ಹಾಗೂ ಮನ್ನಳ್ಳಿ ರಸ್ತೆಯಲ್ಲಿ ಜೆಸ್ಕಾಂನವರು ಹಲವಾರು ಮರಗಳನ್ನು ಕಡಿದಿದ್ದರು. ಈಗ ಲೋಕೋಪಯೋಗಿ ಇಲಾಖೆಯ ಕಚೇರಿ, ಶಿವನಗರ, ಬರೀದ್ ಷಾಹಿ ಉದ್ಯಾನ, ಪಾಪನಾಶ ಗೇಟ್, ಅಷ್ಟೇಕೆ ಸ್ವತಃ ಅರಣ್ಯ ಇಲಾಖೆಯ ಕಚೇರಿ ಎದುರಿನ ರಸ್ತೆಯಲ್ಲಿರುವ ಮರಗಳಿಗೂ ಕೊಡಲಿ ಏಟು ಬಿದ್ದಿದೆ. ಹೀಗೆ ದಿನೇ ದಿನೇ ನಗರದ ಹೊಸ ಹೊಸ ಬಡಾವಣೆಗಳಿಗೆ ಮರ ಕಡಿಯುವುದು ವಿಸ್ತರಣೆಯಾಗುತ್ತಲೇ ಇದೆ. ಆದರೆ, ಅರಣ್ಯ ಇಲಾಖೆಯವರು ಅದಕ್ಕೆ ಕಡಿವಾಣ ಹಾಕುವ ಗೋಜಿಗೆ ಹೋಗಿಲ್ಲ.
ಮರಗಳ ಕಾಂಡ, ಟೊಂಗೆಗಳು ವಿದ್ಯುತ್ ತಂತಿಗಳಿಗೆ ತಗುಲುತ್ತಿರುವುದರಿಂದ ಪದೇ ಪದೇ ವಿದ್ಯುತ್ ಪೂರೈಕೆಯಲ್ಲಿ ಸಮಸ್ಯೆಯಾಗುತ್ತಿದ್ದು, ಇದಕ್ಕಾಗಿ ಸಮಸ್ಯೆ ಇರುವ ಕಡೆಗಳಲ್ಲಿ ಮರಗಳನ್ನು ಕತ್ತರಿಸಲಾಗುತ್ತಿದೆ ಎಂದು ಜೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಜೆಸ್ಕಾಂ ಸಿಬ್ಬಂದಿ ಮರಗಳನ್ನು ಬೇಕಾಬಿಟ್ಟಿ ಕಡಿಯುತ್ತಿರುವುದರಿಂದ ಮರಗಳ ಅಸ್ತಿತ್ವಕ್ಕೆ ಧಕ್ಕೆ ಬರುತ್ತಿದೆ.
ರಾಜ್ಯ ವನ್ಯಜೀವಿ ಮಂಡಳಿ ಕಳವಳ:
ಬೀದರ್ ನಗರದಲ್ಲಿ ಸತತವಾಗಿ ಮರಗಳನ್ನು ಕಡಿದು ಹಸಿರು ನಾಶಗೊಳಿಸುತ್ತಿರುವುದಕ್ಕೆ ರಾಜ್ಯ ವನ್ಯಜೀವಿ ಮಂಡಳಿ ತೀವ್ರ ಕಳವಳ ವ್ಯಕ್ತಪಡಿಸಿದೆ.
ಈ ಸಂಬಂಧ ಮಂಡಳಿಯ ಸದಸ್ಯ ವಿನಯ್‌ಕುಮಾರ ಮಾಳಗೆ ಅವರು ಉಪ ಅರಣ್ಯ ಸಂರಕ್ಷಣಾಧಿಕಾರಿ ವಾನತಿ ಎಂ.ಎಂ. ಅವರಿಗೆ ಪತ್ರ ಬರೆದು, ಮರಗಳ ರಕ್ಷಣೆಗೆ ಮುಂದಾಗಬೇಕು. ಸಂಬಂಧಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
‘ಜೆಸ್ಕಾಂನವರು ನಗರದ ಹಲವು ಭಾಗಗಳಲ್ಲಿ ಮರಗಳನ್ನು ಕಡಿಯುತ್ತಿರುವುದು ಗಮನಕ್ಕೆ ಬಂದಿದೆ. ಇದೇ ರೀತಿ ಮುಂದುವರಿದರೆ ನಗರದ ಹಸಿರು ಸಂಪೂರ್ಣ ಮಾಯವಾಗಲಿದೆ. ಸಮತೋಲನದಿಂದ ಕೂಡಿರುವ ಜೀವವೈವಿಧ್ಯಕ್ಕೆ ಕುತ್ತು ಬರಲಿದೆ. ಮರಗಳನ್ನು ಬೇಕಾಬಿಟ್ಟಿ ಕಡಿದು ಹಾಕುತ್ತಿರುವ ಕ್ರಮ ಸರಿಯಲ್ಲ. ಜೆಸ್ಕಾಂನವರು ಅನುಮತಿಯಿಲ್ಲದೆ ಮರಗಳನ್ನು ಕಡಿಯುತ್ತಿದ್ದಾರೆ ಎನ್ನುವುದು ತಿಳಿದು ಬಂದಿದೆ. ಇದು ಅರಣ್ಯ ಕಾಯ್ದೆಯ ಪ್ರಕಾರ ಅಪರಾಧ’ ಎಂದು ದೂರಿನಲ್ಲಿ ವಿವರಿಸಿದ್ದಾರೆ.
‘ಕರ್ನಾಟಕ ಮರಗಳ ಸಂರಕ್ಷಣಾ ಕಾಯ್ದೆ 1976, ಕರ್ನಾಟಕ ಮುನ್ಸಿಪಲ್ ಕಾರ್ಪೊರೇಷನ್ ಕಾಯ್ದೆ 1976, ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರ ಕಾಯ್ದೆ 1987, ಪರಿಸರ ಕಾಯ್ದೆ 1986ರಲ್ಲಿ ಮರಗಳನ್ನು ಕಡಿಯುವುದರ ಸಂಬಂಧ ಸ್ಪಷ್ಟವಾದ ಮಾರ್ಗಸೂಚಿಗಳಿವೆ. ಹೀಗಿದ್ದರೂ ಮರಗಳಿಗೆ ಕೊಡಲಿ ಏಟು ಬೀಳುತ್ತಿರುವುದು ಸರಿಯಲ್ಲ. ನಗರದ ಯಾವ್ಯಾವ ಭಾಗಗಳಲ್ಲಿ ಮರಗಳನ್ನು ಕಡಿಯಲಾಗಿದೆಯೋ ಅದರ ಬಗ್ಗೆ ವಿಸ್ತೃತವಾದ ತನಿಖೆ ನಡೆಸಬೇಕು. ಒಂದು ಮರ ಕಡಿದರೆ ಆ ಜಾಗದಲ್ಲಿ ಎರಡು ಸಸಿಗಳನ್ನು ನೆಡಿಸಲು ಕ್ರಮ ಜರುಗಿಸಬೇಕು. ಭವಿಷ್ಯದಲ್ಲಿ ಜೆಸ್ಕಾಂನವರು ಬೇಕಾಬಿಟ್ಟಿ ಮರಗಳನ್ನು ಕಡಿಯುವುದರ ಮೇಲೆ ನಿರ್ಬಂಧ ಹೇರುವುದನ್ನು ಖಾತ್ರಿ ಪಡಿಸಬೇಕು’ ಎಂದು ಒತ್ತಾಯಿಸಿದ್ದಾರೆ.
‘ವಿದ್ಯುತ್ ತಂತಿಗಳಿಗೆ ಮರಗಳ ಭಾಗಗಳು ತಗುಲುತ್ತಿವೆ ಎಂದು ಇಡೀ ಮರ ಕಡಿಯುವುದು ಸರಿಯಲ್ಲ. ಜೆಸ್ಕಾಂನವರು ಇನ್ಸುಲೇಟೆಡ್ ತಂತಿ ಹಾಕಬೇಕು. ಕಟ್ಟಡಗಳಿಗೆ ಹೊಂದಿಕೊಂಡಿರುವ ಜಾಗದಲ್ಲಿ ಪಿವಿಸಿ ಪೈಪ್ ಹಾಕಬೇಕು. ಹೀಗೆ ಮಾಡಿದರೆ ಪ್ರತಿ ವರ್ಷ ಮರಗಳನ್ನು ಕಡಿಯುವುದು ತಪ್ಪುತ್ತದೆ’ ಎನ್ನುತ್ತಾರೆ ವಿನಯ್ ಕುಮಾರ ಮಾಳಗೆ.
ಜೆಸ್ಕಾಂನಿಂದ ಮರಗಳ ಹನನ: ಆರೋಪ ಗಡಿಗಳ ರಕ್ಷಣೆಗೆ ಅರಣ್ಯ ಇಲಾಖೆ ನಿರ್ಲಕ್ಷ್ಯ: ಟೀಕೆ ಹಸಿರು ನಾಶಕ್ಕೆ ಪರಿಸರ ಪ್ರೇಮಿಗಳ ಆಕ್ರೋಶ
ಅರಣ್ಯ ಇಲಾಖೆಯವರು ನಿಗಾ ವಹಿಸಿ ತಪ್ಪು ಮಾಡಿದವರ ವಿರುದ್ಧ ಪ್ರಕರಣ ದಾಖಲಿಸಬೇಕು. ಒಂದು ಟೊಂಗೆ ಕಡಿಯಲು ಹತ್ತು ಸಲ ಯೋಚಿಸಬೇಕು. ಜನ ಕೂಡ ಮರ ಗಿಡಗಳನ್ನು ಕಡಿಸಬಾರದು. ಅದಕ್ಕೆ ಪರ್ಯಾಯ ಮಾರ್ಗ ಕಂಡುಕೊಳ್ಳಬೇಕುವಿನಯ್ ಕುಮಾರ ಮಾಳಗೆ ಸದಸ್ಯ ರಾಜ್ಯ ವನ್ಯಜೀವಿ ಮಂಡಳಿ
ಸರ್ಕಾರಿ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲು ಬರುವುದಿಲ್ಲ. ಯಾರು ಮರ ಕತ್ತರಿಸಲು ಗುತ್ತಿಗೆ ಪಡೆದಿದ್ದಾರೋ ಅಂಥವರ ಮೇಲೆ ಕ್ರಮ ಕೈಗೊಳ್ಳಲಾಗುತ್ತಿದೆ. ಜೆಸ್ಕಾಂ ಹಿರಿಯ ಅಧಿಕಾರಿಗಳಿಗೂ ಪತ್ರ ಬರೆಯಲಾಗಿದೆ. ವಾಚರ್‌ಗಳಿಗೆ ತಲಾ ನಾಲ್ಕೈದು ರಸ್ತೆಗಳ ಮೇಲೆ ನಿಗಾ ವಹಿಸಲು ಸೂಚಿಸಲಾಗಿದೆವಾನತಿ ಎಂ.ಎಂ. ಉಪ ಅರಣ್ಯ ಸಂರಕ್ಷಣಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.