ADVERTISEMENT

ಮೂಲಸೌಕರ್ಯ ಇಲ್ಲದೆ ಬಡವಾದ ಬೀದರ್‌ ವಿವಿ: ಸರ್ಕಾರದಿಂದ ಸಿಗದ ಅನುದಾನ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 12 ನವೆಂಬರ್ 2025, 5:50 IST
Last Updated 12 ನವೆಂಬರ್ 2025, 5:50 IST
ಬೀದರ್‌ ವಿಶ್ವವಿದ್ಯಾಲಯ
ಬೀದರ್‌ ವಿಶ್ವವಿದ್ಯಾಲಯ   

ಬೀದರ್‌: ಬೀದರ್‌ ವಿಶ್ವವಿದ್ಯಾಲಯ ಆರಂಭಗೊಂಡು ಎರಡು ವರ್ಷಗಳಾಗುತ್ತ ಬಂದಿದೆ. ಆದರೆ, ಅಗತ್ಯ ಕನಿಷ್ಠ ಮೂಲಸೌಕರ್ಯ ಇಲ್ಲದ ಕಾರಣ ವಿವಿ ಬಡವಾಗಿದೆ.

ವಿವಿ ಕುಲಪತಿ, ಕುಲಸಚಿವರಿಗಾಗಿ ಪ್ರತ್ಯೇಕವಾದ ವ್ಯವಸ್ಥಿತವಾದ ಕೊಠಡಿಗಳಿಲ್ಲ. ಈ ಹಿಂದೆ ಗುಲಬರ್ಗಾ ವಿಶ್ವವಿದ್ಯಾಲಯದ ಅಡಿ ಕೆಲಸ ನಿರ್ವಹಿಸುತ್ತಿದ್ದ ಸ್ನಾತಕೋತ್ತರ ಕೇಂದ್ರದ ಕಟ್ಟಡವನ್ನೇ ವಿಶ್ವವಿದ್ಯಾಲಯವಾಗಿ ಮಾಡಿಕೊಳ್ಳಲಾಗಿದೆ. ಅಲ್ಲಿರುವ ಕೊಠಡಿಗಳನ್ನೇ ಕುಲಪತಿ, ಕುಲಸಚಿವರ ಕೊಠಡಿಗಳಾಗಿ ಬದಲಿಸಲಾಗಿದೆ. ಆದರೆ, ಯಾವುದೇ ಹೇಳಿಕೊಳ್ಳುವಂತಹ ವ್ಯವಸ್ಥೆ ಇಲ್ಲ. ಅನೇಕ ಇಲ್ಲಗಳ ನಡುವೆ ಅವರು ಕೆಲಸ ನಿರ್ವಹಿಸುತ್ತಿದ್ದಾರೆ. ಇತರೆ ಸಿಬ್ಬಂದಿಯ ಪಾಡು ಬಿಡಿಸಿ ಹೇಳಬೇಕಿಲ್ಲ. ಇಡೀ ವಿವಿ ಕಟ್ಟಡವನ್ನು ನೋಡಿದಾಗ ಯಾವುದೋ ಸಣ್ಣ ಕಾಲೇಜಿನಂತೆ ಭಾಸವಾಗುತ್ತದೆ.

2022–23ನೇ ಸಾಲಿನಲ್ಲಿ ರಾಜ್ಯ ಸರ್ಕಾರವು ರಾಜ್ಯದಲ್ಲಿ ಹೊಸದಾಗಿ ಹತ್ತು ವಿಶ್ವವಿದ್ಯಾಲಯಗಳನ್ನು ಆರಂಭಿಸಿತ್ತು. ಅದರಲ್ಲಿ ಬೀದರ್‌ ವಿವಿ ಕೂಡ ಸೇರಿತ್ತು. ಆರ್ಥಿಕ ಕಾರಣಗಳಿಂದ ಸರ್ಕಾರವು ಹಿಂದಿನ ವರ್ಷ ಬೀದರ್‌ ವಿವಿ ಹೊರತುಪಡಿಸಿ ಇತರೆ ವಿಶ್ವವಿದ್ಯಾಲಯಗಳನ್ನು ಮುಚ್ಚಲು ಅಥವಾ ಅನ್ಯ ವಿಶ್ವವಿದ್ಯಾಲಯಗಳಲ್ಲಿ ವಿಲೀನಗೊಳಿಸಲು ಮುಂದಾಗಿತ್ತು. ಆದರೆ, ತೀವ್ರ ಪ್ರತಿರೋಧ ವ್ಯಕ್ತವಾಗಿದ್ದರಿಂದ ಸರ್ಕಾರ ಆ ಪ್ರಸ್ತಾವ ಕೈಬಿಟ್ಟಿತ್ತು. ಆಂತರಿಕ ಸಂಪನ್ಮೂಲಗಳಿಂದಲೇ ಬೀದರ್‌ ವಿವಿ ಉತ್ತಮ ರೀತಿಯಲ್ಲಿ ಮುನ್ನಡೆಯುತ್ತಿದೆ. ಅತ್ಯಧಿಕ ಕಾಲೇಜುಗಳನ್ನು ಹೊಂದಿರುವ ಕಾರಣ ಬೀದರ್‌ ವಿವಿ ಮುಚ್ಚುವ ಪ್ರಸ್ತಾವ ಇರಲಿಲ್ಲ. ಹೀಗಿದ್ದರೂ ಸರ್ಕಾರ ಅಗತ್ಯ ಅನುದಾನ ಕಲ್ಪಿಸಿ, ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ.

ADVERTISEMENT

ಬೀದರ್‌ ವಿವಿ ವ್ಯಾಪ್ತಿಯಲ್ಲಿ ಸದ್ಯ 126 ಕಾಲೇಜುಗಳು ಕೆಲಸ ನಿರ್ವಹಿಸುತ್ತಿವೆ. ಪದವಿ, ಸ್ನಾತಕೋತ್ತರ ಪದವಿಯಲ್ಲಿ 25 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳು ಪಾವತಿಸುವ ಶುಲ್ಕದಿಂದ ಆಂತರಿಕವಾಗಿ ಸಂಪನ್ಮೂಲ ಕ್ರೋಢೀಕರಣವಾಗುತ್ತಿದೆ. ಇದು ವಿವಿ ಸಣ್ಣಪುಟ್ಟ ಕೆಲಸಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಆದರೆ, ದೊಡ್ಡ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬ ಅಳಲು ವಿವಿ ಆಡಳಿತವನ್ನು ಕಾಡುತ್ತಿದೆ. 

322 ಎಕರೆ ವಿಶಾಲ ಜಾಗ ಹೊಂದಿದೆ. ಅದರ ಸುತ್ತಲೂ ಕಾಂಪೌಂಡ್‌ ನಿರ್ಮಿಸಿ ಆಸ್ತಿ ರಕ್ಷಿಸಿಕೊಳ್ಳಬೇಕಿದೆ. ವಿವಿ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಗಳಿಗೆ ಎರಡು ಹಾಸ್ಟೆಲ್‌ಗಳ ಸೌಲಭ್ಯವಿದ್ದು, ಬಿಸಿಎಂ ಮುನ್ನಡೆಸುತ್ತಿದೆ. ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಹಾಸ್ಟೆಲ್‌ ಸೌಲಭ್ಯ ಇನ್ನಷ್ಟೇ ಕಲ್ಪಿಸಬೇಕಿದೆ.

‘ಕಾಯಂ ಪ್ರಾಧ್ಯಾಪಕರೇ ಇಲ್ಲ’

‘ವಿವಿಯಲ್ಲಿ 29 ಬೋಧಕ ಹುದ್ದೆಗಳು 109 ಬೋಧಕೇತರ ಹುದ್ದೆಗಳಿವೆ. ಆದರೆ ಕಾಯಂ ಪ್ರಾಧ್ಯಾಪಕರು ಯಾರೂ ಇಲ್ಲ. ಹೋದ ವರ್ಷ 64 ಜನ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲಾಗಿತ್ತು. ಈಗ ಹೊಸ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ’ ಎಂದು ಬೀದರ್ ವಿವಿ ಕುಲಸಚಿವ ಪರಮೇಶ್ವರ ನಾಯಕ್‌ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ವಿವಿಯಲ್ಲಿ 15 ಸ್ನಾತಕೋತ್ತರ ಕೋರ್ಸ್‌ಗಳನ್ನು ನಡೆಸಲಾಗುತ್ತಿದೆ. ಭೌತಶಾಸ್ತ್ರ ರಸಾಯನಶಾಸ್ತ್ರ ಗಣಿತಶಾಸ್ತ್ರಕ್ಕೆ ಬೇಡಿಕೆ ಹೆಚ್ಚಿದೆ. ಸಂಶೋಧನೆಗೆ ಕಾಯಂ ಸಿಬ್ಬಂದಿ ಇಲ್ಲದ ಕಾರಣ ಸಂಶೋಧನಾ ಕೋರ್ಸ್‌ ಆರಂಭಿಸಲ್ಲ. ಅಧ್ಯಯನ ಪೀಠ ಆರಂಭಿಸುವ ಕುರಿತು ಇನ್ನೂ ಯಾವುದೇ ತೀರ್ಮಾನಕ್ಕೆ ಬಂದಿಲ್ಲ. ಸುಸಜ್ಜಿತ ಕಟ್ಟಡ ಅಗತ್ಯ ಮೂಲಸೌಕರ್ಯ ಕಲ್ಪಿಸಬೇಕು ಎಂದು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.