
ಸುಲ್ತಾನಪುರ(ಜನವಾಡ): ಬೀದರ್ ಮಹಾನಗರ ಪಾಲಿಕೆಯ ತ್ಯಾಜ್ಯದಿಂದ ಬೀದರ್ ತಾಲ್ಲೂಕಿನ ಸುಲ್ತಾನಪುರ ಗ್ರಾಮಸ್ಥರು ಸಂಕಷ್ಟ ಅನುಭವಿಸುವಂತಾಗಿದೆ.
ಸುಲ್ತಾನಪುರ ಸಮೀಪ 24 ಎಕರೆ ಪ್ರದೇಶದಲ್ಲಿ ಇರುವ ಮಹಾನಗರ ಪಾಲಿಕೆಯ ಘನ ತ್ಯಾಜ್ಯ ವಿಲೇವಾರಿ ಘಟಕ ಅನೇಕ ಸಮಸ್ಯೆಗಳಿಗೆ ಕಾರಣವಾಗಿದೆ ಎನ್ನುವುದು ಗ್ರಾಮಸ್ಥರ ದೂರು.
ಘಟಕದಿಂದ ಸುತ್ತಮುತ್ತಲಿನ ಪ್ರದೇಶದಲ್ಲಿ ಜಲ, ವಾಯು, ಮಣ್ಣು ಮಾಲಿನ್ಯವಾಗಿದೆ. ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ ಎಂದು ಅಳಲು ತೋಡಿಕೊಳ್ಳುತ್ತಾರೆ.
ಮಹಾನಗರ ಪಾಲಿಕೆಯವರು ವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿ ಮಾಡದ ಕಾರಣ ಗ್ರಾಮಸ್ಥರಿಗೆ ಬಹಳ ತೊಂದರೆಯಾಗುತ್ತಿದೆ ಎಂದು ನೋವಿನಿಂದ ಹೇಳುತ್ತಾರೆ ಗ್ರಾಮದ ಮುಖಂಡ ಶಿವಕುಮಾರ ಸುಲ್ತಾನಪುರೆ.
ಘಟಕದ ಪ್ರದೇಶದಲ್ಲಿ ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಇದೆ. ದುರ್ವಾಸನೆ ಕೆಲವೊಮ್ಮೆ ಗ್ರಾಮದವರೆಗೂ ಹರಡುತ್ತದೆ. ಗ್ರಾಮದಲ್ಲಿ ನೊಣಗಳು, ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಸೊಳ್ಳೆಗಳು ಹಾಗೂ ನೊಣಗಳು ಎಲೆಗಳ ಮೇಲೆ ಕೂಡುವುದರಿಂದ ಘಟಕದ ಸುತ್ತಲಿನ 200 ಎಕರೆ ಪ್ರದೇಶದಲ್ಲಿ ಸರಿಯಾಗಿ ಬೆಳೆ ಬರುತ್ತಿಲ್ಲ ಎಂದು ಹೇಳುತ್ತಾರೆ.
ಜಲ ಮಾಲಿನ್ಯದಿಂದ ಘಟಕದ ಬಳಿಯ ಗ್ರಾಮ ಪಂಚಾಯಿತಿಯ ಕುಡಿಯುವ ನೀರಿನ ಎರಡು ಕೊಳವೆ ಬಾವಿಗಳ ನೀರು ಬಳಸುತ್ತಿಲ್ಲ. ಗ್ರಾಮದ ಬಹುತೇಕರು ನಲ್ಲಿ ನೀರು ಕುಡಿಯಲು ಬಳಸುತ್ತಿಲ್ಲ. ಮಲ್ಕಾಪುರ ಇಲ್ಲವೇ ಬೀದರ್‌ನ ಮಂಗಲಪೇಟೆಯಿಂದ ಶುದ್ಧ ನೀರು ಖರೀದಿಸಿ ತಂದು ಕುಡಿಯಲು ಉಪಯೋಗಿಸುತ್ತಿದ್ದಾರೆ ಎಂದು ಹೇಳುತ್ತಾರೆ.
ಘಟಕದ ಪ್ರದೇಶದಲ್ಲಿ ಬೀದಿ ನಾಯಿಗಳ ಹಾವಳಿ ಅತಿಯಾಗಿದೆ. ಇಲ್ಲಿ ನೂರಾರು ನಾಯಿಗಳಿವೆ. ಹೀಗಾಗಿ ಮನುಷ್ಯರು ಒಂಟಿಯಾಗಿ ಓಡಾಡಲು ಭಯ ಪಡಬೇಕಾಗಿದೆ. ಮನುಷ್ಯರು ಹಾಗೂ ಜಾನುವಾರುಗಳ ಮೇಲೆ ಅನೇಕ ಸಲ ದಾಳಿ ನಡೆಸಿವೆ ಎಂದು ತಿಳಿಸುತ್ತಾರೆ ಗ್ರಾಮದ ಮಿಟ್ಟು ಕಮಠಾಣೆ.
ಘಟಕದಿಂದ ಅನಾರೋಗ್ಯ ಸಮಸ್ಯೆಗಳು ಮೇಲಿಂದ ಮೇಲೆ ಕಾಡುತ್ತಿರುತ್ತವೆ. ಬೇರೆ ಗ್ರಾಮದವರು ಗ್ರಾಮಕ್ಕೆ ಹೆಣ್ಣು ಕೊಡಲು ಹಿಂದೇಟು ಹಾಕಿದ ಅನೇಕ ಉದಾಹರಣೆಗಳು ಇವೆ ಎಂದು ತಿಳಿಸುತ್ತಾರೆ.
ಗ್ರಾಮಸ್ಥರ ಆರೋಗ್ಯಪೂರ್ಣ ಹಾಗೂ ನೆಮ್ಮದಿಯ ಬದುಕಿಗಾಗಿ ತ್ಯಾಜ್ಯ ವಿಲೇವಾರಿ ಘಟಕವನ್ನು ಬೇರೆಡೆ ಸ್ಥಳಾಂತರಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸುತ್ತಾರೆ.
ಘಟಕದಲ್ಲಿ 5 ಎಕರೆ ಪ್ರದೇಶದಲ್ಲಿನ 85 ಸಾವಿರ ಟನ್ ತ್ಯಾಜ್ಯ ಸಂಸ್ಕರಿಸಲಾಗಿದೆ. ಬರುವ ದಿನಗಳಲ್ಲಿ ಉಳಿದ ತ್ಯಾಜ್ಯವನ್ನು ಸಂಸ್ಕರಿಸಲಾಗುವುದು ಎಂದು ಹೇಳುತ್ತಾರೆ ಬೀದರ್ ಮಹಾನಗರ ಪಾಲಿಕೆಯ ತ್ಯಾಜ್ಯ ವಿಲೇವಾರಿ ಘಟಕದ ಉಸ್ತುವಾರಿ ರವಿ ಕಾಂಬಳೆ.
ಘಟಕ ಪ್ರದೇಶದಲ್ಲಿ ನಾಯಿಗಳ ಹಾವಳಿ ತಪ್ಪಿಸಲು ನಾಯಿ ಹಿಡಿಯುವವರನ್ನು ನಿಯೋಜಿಸಲಾಗುವುದು. ನಾಯಿಗಳನ್ನು ಹಿಡಿದು ಸಂತಾನ ನಿಯಂತ್ರಣ ಶಸ್ತ್ರ ಚಿಕಿತ್ಸೆ ಮಾಡಿಸಲಾಗುವುದು ಎಂದು ತಿಳಿಸುತ್ತಾರೆ.
ಬೀದರ್ ಮಹಾನಗರ ಪಾಲಿಕೆಯ ತ್ಯಾಜ್ಯ ವಿಲೇವಾರಿ ಘಟಕದ ಸ್ಥಳಾಂತರ ಬಹು ದಿನಗಳ ಬೇಡಿಕೆಯಾಗಿದೆ. ಆಡಳಿತ ಸ್ಪಂದಿಸದಿದ್ದರೆ ಹೋರಾಟ ನಡೆಸಲಾಗುವುದುಶಿವಕುಮಾರ ಸುಲ್ತಾನಪುರೆ ಸುಲ್ತಾನಪುರ ಗ್ರಾಮದ ಮುಖಂಡ
ತ್ಯಾಜ್ಯ ವಿಲೇವಾರಿ ಘಟಕದಿಂದ ಆಗುತ್ತಿರುವ ಸಮಸ್ಯೆಗಳಿಂದ ಬೇಸತ್ತು ಸುಲ್ತಾನಪುರ ಗ್ರಾಮದ ಅನೇಕರು ಬೀದರ್‌ನಲ್ಲಿ ಬಾಡಿಗೆ ಮನೆ ಪಡೆದು ವಾಸವಾಗಿದ್ದಾರೆಮಿಟ್ಟು ಕಮಠಾಣೆ ಗ್ರಾಮಸ್ಥ
ತ್ಯಾಜ್ಯ ವಿಲೇವಾರಿ ಘಟಕದಿಂದ ದುರ್ವಾಸನೆ ಹರಡದಂತೆ ದ್ರಾವಣ ಸಿಂಪಡಿಸಲಾಗುತ್ತಿದೆ. ನೀರು ಮಲಿನವಾಗದಂತೆ ಕಸ ಹಾಕುವ ಮುನ್ನ ಎಚ್‍ಡಿಪಿಇ ಲೈನರ್ ಶೀಟ್ ಹಾಕಲಾಗುತ್ತಿದೆರವಿ ಕಾಂಬಳೆ ತ್ಯಾಜ್ಯ ವಿಲೇವಾರಿ ಘಟಕದ ಉಸ್ತುವಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.