ADVERTISEMENT

ಸಚಿವರಿಂದ ಬೀದರ್ ಉತ್ಸವ ಸಿದ್ಧತೆ ಪರಿಶೀಲನೆ

ಬೀದರ್ ಉತ್ಸವ ಜನರ ಹಬ್ಬ: ಪ್ರಭು ಚವಾಣ್

​ಪ್ರಜಾವಾಣಿ ವಾರ್ತೆ
Published 4 ಜನವರಿ 2023, 15:34 IST
Last Updated 4 ಜನವರಿ 2023, 15:34 IST
ಪಶು ಸಂಗೋಪನೆ ಸಚಿವ ಪ್ರಭು ಚವಾಣ್ ಅವರು ಬೀದರ್‌ನ ಕೋಟೆಯಲ್ಲಿ ಬೀದರ್ ಉತ್ಸವದ ಸಿದ್ಧತೆಗಳನ್ನು ಪರಿಶೀಲಿಸಿದರು
ಪಶು ಸಂಗೋಪನೆ ಸಚಿವ ಪ್ರಭು ಚವಾಣ್ ಅವರು ಬೀದರ್‌ನ ಕೋಟೆಯಲ್ಲಿ ಬೀದರ್ ಉತ್ಸವದ ಸಿದ್ಧತೆಗಳನ್ನು ಪರಿಶೀಲಿಸಿದರು   

ಬೀದರ್: ಪಶು ಸಂಗೋಪನೆ ಸಚಿವ ಪ್ರಭು ಚವಾಣ್ ಅವರು ಬುಧವಾರ ನಗರದ ಕೋಟೆಗೆ ಭೇಟಿ ನೀಡಿ, ಜ. 7 ರಿಂದ 9 ರ ವರೆಗೆ ನಡೆಯಲಿರುವ ಬೀದರ್ ಉತ್ಸವದ ಸಿದ್ಧತೆಗಳನ್ನು ಪರಿಶೀಲಿಸಿದರು.

ಮುಖ್ಯ ವೇದಿಕೆ, ಕುಸ್ತಿ ಸ್ಪರ್ಧೆ, ಗಾಳಿಪಟ ಉತ್ಸವ, ಶ್ವಾನ ಪ್ರದರ್ಶನ, ಮಕ್ಕಳ ಆಟಿಕೆ, ಬೋಟಿಂಗ್ ವ್ಯವಸ್ಥೆ ಮಾಡಲಾದ ಬೋಮಗೊಂಡೇಶ್ವರ ಕೆರೆ ಮತ್ತಿತರ ಸ್ಥಳಗಳಿಗೆ ಭೇಟಿ ನೀಡಿ, ಅಧಿಕಾರಿಗಳಿಂದ ಸಿದ್ಧತೆಗಳ ಮಾಹಿತಿ ಪಡೆದರು.

ಬೀದರ್ ಉತ್ಸವ ಜಿಲ್ಲೆಯ ಜನರ ಹಬ್ಬವಾಗಿದೆ. ಕಾರಣ, ನಿರೀಕ್ಷೆಗೂ ಹೆಚ್ಚು ಜನ ಪಾಲ್ಗೊಳ್ಳಲಿದ್ದಾರೆ. ಯಾರಿಗೂ ತೊಂದರೆ ಆಗದ ರೀತಿಯಲ್ಲಿ ವ್ಯವಸ್ಥೆ ಕೈಗೊಳ್ಳಬೇಕು. ಕೋಟೆ ಆವರಣದಲ್ಲಿ ಇರುವ ರಸ್ತೆಗಳನ್ನು ಸರಿಪಡಿಸಿ, ದೂಳಿನ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ADVERTISEMENT

ಉತ್ಸವದಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಎಚ್ಚರ ವಹಿಸಬೇಕು. ನಗರದ ರಸ್ತೆ, ಚರಂಡಿಗಳನ್ನು ಸ್ವಚ್ಛಗೊಳಿಸಬೇಕು. ಫಾಗಿಂಗ್ ಮಾಡಬೇಕು ಎಂದು ತಿಳಿಸಿದರು.

ಜ. 7 ರಂದು ಕೇಂದ್ರದ ಪ್ರವಾಸೋದ್ಯಮ ಸಚಿವ ಜಿ. ಕಿಶನ್ ರೆಡ್ಡಿ ಉತ್ಸವ ಉದ್ಘಾಟಿಸಲಿದ್ದಾರೆ. ಜ. 9 ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿಲ್ಪಾ ಎಂ, ಹೆಚ್ಚುವರಿ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ಡಿವೈಎಸ್‍ಪಿ ಕೆ.ಎಂ. ಸತೀಶ, ಪಶು ವೈದ್ಯಕೀಯ ವಿಶ್ವವಿದ್ಯಾಲಯದ ವ್ಯವಸ್ಥಾಪಕ ಮಂಡಳಿ ಸದಸ್ಯ ವಸಂತ ಬಿರಾದಾರ, ನಗರಸಭೆ ಸದಸ್ಯ ಶಶಿಧರ ಹೊಸಳ್ಳಿ, ಮುಖಂಡರಾದ ರಾಮಶೆಟ್ಟಿ ಪನ್ನಾಳೆ, ರಮೇಶ ಉಪಾಸೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.