ADVERTISEMENT

ಯೋಗ, ಧ್ಯಾನದಿಂದ ಕ್ರೋಧ ನಿಯಂತ್ರಣ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2020, 13:09 IST
Last Updated 16 ಫೆಬ್ರುವರಿ 2020, 13:09 IST
ಬಿ.ಕೆ.ಮಂಜುನಾಥ
ಬಿ.ಕೆ.ಮಂಜುನಾಥ   

ಬೀದರ್: ‘ಕ್ರೋಧವನ್ನು ಶಮನ ಮಾಡುವ ಶಕ್ತಿ ಯೋಗ ಹಾಗೂ ಧ್ಯಾನಕ್ಕಿದೆ. ಆದ್ದರಿಂದ ಪ್ರತಿಯೊಬ್ಬರು ದಿನನಿತ್ಯ ಯೋಗ ಹಾಗೂ ಧ್ಯಾನ ಮಾಡಬೇಕು’ ಎಂದು ಬೆಂಗಳೂರಿನ ಬ್ರಹ್ಮಕುಮಾರಿ ರಾಜಯೋಗ ಕೇಂದ್ರದ ಬಿ.ಕೆ.ಮಂಜುನಾಥ ಸಲಹೆ ನೀಡಿದರು.

ಇಲ್ಲಿಯ ಬಿ.ವಿ.ಬಿ ಕಾಲೇಜಿನ ಆವರಣದಲ್ಲಿ ಬ್ರಹ್ಮಕುಮಾರಿ ಶಿವಶಕ್ತಿ ಭವನದ ವತಿಯಿಂದ ಮಹಾಶಿವರಾತ್ರಿ ಪ್ರಯುಕ್ತ ಆಯೋಜಿಸಿದ್ದ ಪ್ರವಚನದಲ್ಲಿ ಅವರು ಮಾತನಾಡಿದರು.

‘ವ್ಯಕ್ತಿಯ ಶರೀರ ಅಸಂಖ್ಯ ಕೋಶಗಳಿಂದ ಕೂಡಿದೆ. ಆಂತರಿಕ ಹಾಗೂ ಬಾಹ್ಯ ಜೀವನಗಳೆಂದು ವಿಭಜಿಸಲಾಗಿದೆ. ಭಾಗ್ಯ ಹಾಗೂ ಸಂಬಂಧ ಬದಲಾಗಲು ಒಳ್ಳೆಯ ಆಲೋಚನೆ ಅಗತ್ಯವಿದೆ’ ಎಂದರು.

ADVERTISEMENT

‘ಆತ್ಮವೆಂಬುವುದು ಶುದ್ಧ ನೀರಿನ ಹಾಗೆ. ಅದು ಕ್ರೋಧಕ್ಕೆ ಒಳಗಾಗಿ ಕೆಲಹೊತ್ತಿನ ಬಳಿಕ ಪುನಃ ಮೂಲ ಸ್ಥಾನಕ್ಕೆ ಮರಳುತ್ತದೆ. ಶಾಂತಿಯಿಂದ ಮಾಡಿದ ಕರ್ಮ ದೀರ್ಘಕಾಲದವರೆಗೆ ಬದುಕಿರುತ್ತದೆ. ನಮ್ಮಲ್ಲಿ ಶಾಂತತೆ ಕಾಪಾಡಿಕೊಂಡು ಇತರರಿಗೆ ಸಲಹೆ ನೀಡಿದರೆ ಮಾತ್ರ ಗೌರವ ಹೆಚ್ಚುತ್ತದೆ’ ಎಂದರು.

‘ಮನಸ್ಸು ಸದೃಢವಾಗಿದ್ದರೆ ಆತ್ಮ ಶಕ್ತಿಶಾಲಿಯಾಗಿರುತ್ತದೆ. ಶಾಂತಿಯನ್ನು ಬೇರೆಡೆ ಹುಡುಕುವುದು ಮೂರ್ಖತನದ ಪರಮಾವಧಿ. ಶಾಂತಿಯನ್ನು ನಮ್ಮಲ್ಲೆ ಕಂಡುಕೊಳ್ಳಬಹುದಾಗಿದೆ’ ಎಂದು ಪ್ರತಿಪಾದಿಸಿದರು.

‘ ಕೋಪದಿಂದ ರಾಗ, ದ್ವೇಷ ಹುಟ್ಟಿಕೊಳ್ಳುತ್ತವೆ. ಹಗೆತನ, ಅಸೂಯೆ ಪುಟೆದೇಳುತ್ತವೆ, ಅಹಂಕಾರ ಚಿಮ್ಮುತ್ತದೆ, ಸಂಬಂಧಗಳು ಕದಡುತ್ತವೆ, ನಿದ್ದೆ ಕ್ಷೀಣಿಸುತ್ತದೆ, ಖುಷಿ ಕಡಿಮೆಯಾಗುತ್ತದೆ, ಗೌರವಭಾವನೆ ಮುದುಡುತ್ತದೆ. ಈ ಎಲ್ಲ ಕೆಟ್ಟ ಅಭ್ಯಾಸಗಳನ್ನು ಧ್ಯಾನದ ಮೂಲಕ ನಿಯಂತ್ರಿಸಬಹುದಾಗಿದೆ’ ಎಂದು ತಿಳಿಸಿದರು.

ಡಾ.ಲಲಿತಮ್ಮ, ಮಹಿಳಾ ಪೊಲೀಸ್ ಠಾಣೆ ಸಿ.ಪಿ.ಐ ಮಲ್ಲಮ್ಮ ಚೌಬೆ ಮಾತನಾಡಿದರು. ರವಿ ಸ್ವಾಮಿ, ಉದ್ಯಮಿ ಸುರೇಶ ಕಾಮಶೆಟ್ಟಿ, ಶಕುಂತಲಾ ವಾಲಿ ಇದ್ದರು. ಬ್ರಹ್ಮಕುಮಾರಿ ಶಿವಶಕ್ತಿ ಭವನದ ಸಂಚಾಲಕಿ ಬಿ.ಕೆ ಸುಮಂಗಲಾ ಬಹೆನ್ ಅಧ್ಯಕ್ಷತೆ ವಹಿಸಿದ್ದರು.

ನಾಟ್ಯಶ್ರೀ ನೃತ್ಯಾಲಯದ ಮಕ್ಕಳು ನೃತ್ಯ ಪ್ರದರ್ಶಿಸಿದರು. ಬಿ.ಕೆ ಸುನಂದಾ ಸ್ವಾಗತಿಸಿದರು. ಬಿ.ಕೆ ಸರಸ್ವತಿ ನಿರೂಪಿಸಿದರು. ಬಿ.ಕೆ ಪಾರ್ವತಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.