ADVERTISEMENT

ಬೀದರ್‌| ಫಲಿತಾಂಶ ಕುಸಿದರೆ ಪ್ರಾಚಾರ್ಯರ ವಿರುದ್ಧ ಕ್ರಮ: ಜಿಪಂ ಸಿಇಒ

ಪಿಯು ಕಾಲೇಜುಗಳ ಪ್ರಾಚಾರ್ಯ ಸಭೆಯಲ್ಲಿ ಜಿಪಂ ಸಿಇಒ ಡಾ. ಗಿರೀಶ್‌ ಬದೋಲೆ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2026, 6:11 IST
Last Updated 11 ಫೆಬ್ರುವರಿ 2026, 6:11 IST
ಬೀದರ್‌ ಜಿಲ್ಲಾ ಪಂಚಾಯಿತಿಯಲ್ಲಿ ನಡೆದ ಪಿಯು ಫಲಿತಾಂಶ ಸುಧಾರಣೆಗೆ ಸಂಬಂಧಿಸಿದ ಪಿಯು ಕಾಲೇಜುಗಳ ಪ್ರಾಂಶುಪಾಲರ ಸಭೆಯಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ್‌ ಬದೋಲೆ ಮಾತನಾಡಿದರು. ಡಿಡಿಪಿಯು ಚಂದ್ರಕಾಂತ ಶಹಾಬಾದಕರ್ ಹಾಜರಿದ್ದಾರೆ
ಬೀದರ್‌ ಜಿಲ್ಲಾ ಪಂಚಾಯಿತಿಯಲ್ಲಿ ನಡೆದ ಪಿಯು ಫಲಿತಾಂಶ ಸುಧಾರಣೆಗೆ ಸಂಬಂಧಿಸಿದ ಪಿಯು ಕಾಲೇಜುಗಳ ಪ್ರಾಂಶುಪಾಲರ ಸಭೆಯಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ್‌ ಬದೋಲೆ ಮಾತನಾಡಿದರು. ಡಿಡಿಪಿಯು ಚಂದ್ರಕಾಂತ ಶಹಾಬಾದಕರ್ ಹಾಜರಿದ್ದಾರೆ    

ಬೀದರ್‌: ‘ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ದೃಷ್ಟಿಯಿಂದ ಪಿಯು ಮಹತ್ವದ ಘಟ್ಟ. ಇದರಲ್ಲಿ ಉತ್ತಮ ಫಲಿತಾಂಶ ಬರಬೇಕು. ಇದಕ್ಕಾಗಿ ಪಿಯು ಕಾಲೇಜುಗಳ ಪ್ರಾಚಾರ್ಯರು ಶ್ರಮಿಸಬೇಕು. ಒಂದುವೇಳೆ ಫಲಿತಾಂಶ ಕುಸಿದರೆ ಕ್ರಮ ಜರುಗಿಸಲಾಗುವುದು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ್‌ ಬದೋಲೆ ಎಚ್ಚರಿಕೆ ನೀಡಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ದ್ವಿತೀಯ ಪಿಯುಸಿ ಫಲಿತಾಂಶ ಸುಧಾರಣೆ ಸಂಬಂಧ ಕರೆದ ಜಿಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಾಂಘಿಕ ಪ್ರಯತ್ನದಿಂದ ಪಿಯು ಫಲಿತಾಂಶ ಹೆಚ್ಚಿಸಬಹುದು. ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ನಮ್ಮ ಜಿಲ್ಲೆಯ ಫಲಿತಾಂಶ ಕ್ಷೀಣಿಸುತ್ತಿದೆ. ವಿನೂತನ ಮಾದರಿಯ ಕೌಶಲ ಅಳವಡಿಸಿಕೊಂಡು ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸಿ, ಆಯಾ ವಿಷಯದ ಉಪನ್ಯಾಸಕರಿಗೆ ವಿದ್ಯಾರ್ಥಿಗಳನ್ನು ದತ್ತು ನೀಡಿ ವೈಯಕ್ತಿಕ ಕಾಳಜಿ ವಹಿಸಬೇಕು. ನಿಗದಿತ ಅವಧಿಯಲ್ಲಿ ಪಠ್ಯಕ್ರಮ ಮುಗಿಸಿ ಪರೀಕ್ಷೆ ಬಗ್ಗೆ ಕೆಲ ವಿದ್ಯಾರ್ಥಿಗಳಿಗಿರುವ ಭಯವನ್ನು ಹೋಗಲಾಡಿಸಿ ಉತ್ತಮ ವಾತಾವರಣ ನಿರ್ಮಿಸಬೇಕು. ವಿದ್ಯಾರ್ಥಿಗಳು ಹಾಗೂ ಪಾಲಕರ ಸಭೆ ಕರೆದು ತಿಳಿವಳಿಕೆ ನೀಡಬೇಕು ಎಂದು ಸಲಹೆ ನೀಡಿದರು.

ADVERTISEMENT

ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ (ಪದವಿ ಪೂರ್ವ) ಚಂದ್ರಕಾಂತ ಶಹಾಬಾದಕರ್ ಪ್ರಾಸ್ತಾವಿಕ ಮಾತನಾಡಿದರು. ಸಭೆಯಲ್ಲಿ ಜಿಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರು ಪಾಲ್ಗೊಂಡಿದ್ದರು.

ಸಭೆಯಲ್ಲಿ ಪಾಲ್ಗೊಂಡಿದ್ದ ಪಿಯು ಕಾಲೇಜುಗಳ ಪ್ರಾಚಾರ್ಯರು
ಕರ್ತವ್ಯದಲ್ಲಿ ನಿರ್ಲಕ್ಷ್ಯ ಸಲ್ಲದು.ಸರ್ಕಾರಿ ಪಿಯು ಕಾಲೇಜುಗಳಲ್ಲಿ ದಾಖಲಾತಿ ಹೆಚ್ಚಿಸಲು ಆಂದೋಲನ ಹಮ್ಮಿಕೊಳ್ಳುವುದು ಅತ್ಯಗತ್ಯ.
ಡಾ.ಗಿರೀಶ್‌ ಬದೋಲೆ ಸಿಇಒ ಜಿಪಂ

ರಿಸಲ್ಟ್‌ ಹೆಚ್ಚಿಸಿದವರ ಸನ್ಮಾನ

‘ಪ್ರತಿ ವರ್ಷ ಸರ್ಕಾರಿ ಅನುದಾನಿತ ಪಿಯು ಕಾಲೇಜುಗಳ ಫಲಿತಾಂಶಕ್ಕಿಂತ ಅನುದಾನ ರಹಿತ ಕಾಲೇಜುಗಳ ಫಲಿತಾಂಶ ಉತ್ತಮ ರೀತಿಯಲ್ಲಿ ಬರುತ್ತಿದೆ. ಪಿಯು ಫಲಿತಾಂಶ ಹೆಚ್ಚಿಸಲು ಹೆಚ್ಚುವರಿ ತರಗತಿಗಳನ್ನು ನಡೆಸಬೇಕು. ಬದಲಾದ ಪ್ರಶ್ನೆ ಪತ್ರಿಕೆ ಮಾದರಿ ಮಕ್ಕಳಿಗೆ ಮನದಟ್ಟಾಗುವಂತೆ ತಿಳಿ ಹೇಳಬೇಕು. ರಿಸಲ್ಟ್ ಹೆಚ್ಚಿಸಿದವರಿಗೆ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿಯಿಂದ ಸನ್ಮಾನಿಸಲಾಗುವುದು. ಕಡಿಮೆ ಬಂದವರ ಮೇಲೆ ಶಿಸ್ತಿನ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಜಿಪಂ ಸಿಇಒ ಡಾ. ಗಿರೀಶ್‌ ಬದೋಲೆ ಎಚ್ಚರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.