
ಬಸವಕಲ್ಯಾಣ: ‘ಹಿಂದೂ ಧರ್ಮ ಪರ್ಷಿಯನ್ ಭಾಷೆಯಲ್ಲಿನ ಒಂದು ಬೈಗಳದ ಶಬ್ದ. ಹಿಂದೂ ಧರ್ಮವೆಂಬುದೇ ಇಲ್ಲ. ಬ್ರಾಹ್ಮಣ ಧರ್ಮವನ್ನು ಹಿಂದೂ ಧರ್ಮದ ಹೆಸರಲ್ಲಿ ಚಾಲ್ತಿಗೆ ತರಲಾಗಿದೆ’ ಎಂದು ಮುಂಬೈ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ, ಮಹಾರಾಷ್ಟ್ರದ ಯಲ್ಗಾರ್ ಪರಿಷತ್ತಿನ ಮುಖ್ಯಸ್ಥ ಬಿ.ಜಿ.ಕೋಳ್ಸೆ ಪಾಟೀಲ ಹೇಳಿದ್ದಾರೆ.
ನಗರದಲ್ಲಿ ಈಚೆಗೆ ನೆಡದ ಸೂಫಿ-ಸಂತ ಬೃಹತ್ ಸಮಾವೇಶದಲ್ಲಿ ಅವರು ಮಾತನಾಡಿದರು.
‘ಶೇ1ರಷ್ಟಿರುವ ಬ್ರಾಹ್ಮಣರ ಹಿತಕ್ಕಾಗಿ ಆರ್‌ಎಸ್‌ಎಸ್ ಕೆಲಸ ಮಾಡುತ್ತದೆ. ಹಾಗೆ ನೋಡಿದರೆ, ಬ್ರಾಹ್ಮಣರು ಪುಕ್ಕಲರು. ಧೈರ್ಯ ತೋರಿದರೆ ಅವರು ಹೆದರುತ್ತಾರೆ. ಆದರೆ ಮುಸ್ಲಿಂ, ದಲಿತ, ಆದಿವಾಸಿಯಾದಿಯಾಗಿ ಇತರೆ ಶೇ99 ರಷ್ಟಿರುವವರು ಈ ಬಗ್ಗೆ ಮಾತನಾಡುವುದಿಲ್ಲ. ಹೆಗಡೆವಾರ್ ಅವರು ದೇಶಕ್ಕೆ ಸ್ವಾತಂತ್ರ್ಯ ದೊರಕುವುದನ್ನು ತಡೆಯುವುದಕ್ಕಾಗಿಯೇ ಆರ್‌ಎಸ್‌ಎಸ್ ಹುಟ್ಟುಹಾಕಿದರು ಎಂಬ ಸತ್ಯವನ್ನು ಯಾರೂ ಹೇಳುವುದಿಲ್ಲ. ಸಿಖ್ ದಂಗೆ ಸಹ ಸಂಘದವರೇ ಆರಂಭಿಸಿದರು’ ಎಂದರು.
‘ಸಂವಿಧಾನದ ಮೂಲಕ ಆಯ್ಕೆಯಾಗಿ 11 ವರ್ಷ ಅಧಿಕಾರದಲ್ಲಿರುವವರು ಅದೇ ಸಂವಿಧಾನವನ್ನು ತುಳಿಯುವ ಉದ್ದೇಶ ಹೊಂದಿದ್ದಾರೆ ಎಂಬ ಅರಿವಿರಲಿ. ಛತ್ರಪತಿ ಶಿವಾಜಿಯನ್ನು ಮುಸ್ಲಿಮರ ವಿರುದ್ಧ ಎತ್ತಿ ಕಟ್ಟುತ್ತಾರೆ. ಅವರ ಸೈನ್ಯದ ಪ್ರಮುಖ ಸ್ಥಾನದಲ್ಲಿ ಪಠಾಣರು ಇದ್ದರು. ಶಿವಾಜಿಯ ಸೋಲಿಗೆ ಬ್ರಾಹ್ಮಣರು ಯಜ್ಞ ಮಾಡಿದ್ದರು ಎಂಬುದನ್ನು ಯಾರೂ ಹೇಳುವುದಿಲ್ಲ. ಅವರು ಇತರರನ್ನು ಗುಲಾಮರಂತೆ ನಡೆಸಿಕೊಳ್ಳುತ್ತಾರೆ. ನಾನು ಹಿಂದೂ ಅಥವಾ ಮುಸ್ಲಿಂ ಪರ ಅಲ್ಲ, ಮಾನವ ಧರ್ಮದ ಪರ ಇದ್ದೇನೆ. ಆರ್‌ಎಸ್‌ಎಸ್ ಕುತಂತ್ರ ತಡೆಯುವುದಕ್ಕೆ ಯುವಕರಲ್ಲಿ ಜಾಗೃತಿ ಮೂಡಿಸುವ ಶಿಬಿರಗಳ ಆಯೋಜನೆಯ ಅಗತ್ಯವಿದೆ. ಮಠಾಧೀಶರು, ಮೌಲ್ವಿಗಳು ಈ ಬಗ್ಗೆ ಸತ್ಯ ಹೇಳಬೇಕಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.