ಹುಮನಾಬಾದ್: ತಾಲ್ಲೂಕಿನ ಹಳ್ಳಿಖೇಡ್ ಬಿ. ಪಟ್ಟಣದಲ್ಲಿ ಚತುಷ್ಪಥ ರಸ್ತೆ ಅಭಿವೃದ್ಧಿ ಕಾಮಗಾರಿ ಭೂಮಿಪೂಜೆ ಕಾರ್ಯಕ್ರಮದ ವೇದಿಕೆ ಭಾಷಣ ನಡೆಯುತ್ತಿದ್ದ ವೇಳೆ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದು ಕೆಲ ಹೊತ್ತು ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.
ವಿಧಾನ ಪರಿಷತ್ ಸದಸ್ಯ ಡಾ.ಚಂದ್ರಶೇಖರ ಪಾಟೀಲ ಮಾತನಾಡುವ ವೇಳೆ ಬಿಜೆಪಿ ಕಾರ್ಯಕರ್ತನೊಬ್ಬ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಮತ್ತು ಬಿಜೆಪಿ ಕಾರ್ಯಕರ್ತರು ನಡುವೆ ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪುತ್ತಿದ್ದಂತೆ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ ಹಾಗೂ ವಿಧಾನ ಪರಿಷತ್ ಸದಸ್ಯ ಡಾ. ಚಂದ್ರಶೇಖರ ಪಾಟೀಲರು ಕಾರ್ಯಕರ್ತರಿಗೆ ಸಮಾಧಾನ ಪಡಿಸಲು ಪ್ರಯತ್ನಿಸುತ್ತಿದ್ದರೂ ಸಮಾಧಾನ ಗೊಳ್ಳಲಿಲ್ಲ.
ನಂತರ ಸಿಪಿಐ ಗುರು ಪಾಟೀಲ ಅವರೇ ಸ್ವತ ಮೈಕ್ ಹಿಡಿದು ಸರ್ಕಾರಿ ಕಾರ್ಯಕ್ರಮ ನಡೆಯುತ್ತಿದೆ. ಹೀಗಾಗಿ ಎಲ್ಲರೂ ಶಾಂತವಾಗಿ ಇರಬೇಕು. ಇಲ್ಲದಿರೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ನಂತರ ಎರಡು ಪಕ್ಷರ ಕಾರ್ಯಕರ್ತರು ಸಮಾಧಾನಗೊಂಡರು. ಯಥಾವತ್ತಾಗಿ ಕಾರ್ಯಕ್ರಮ ಜರುಗಿತು.
ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ ಮಾತನಾಡಿ, ಹಳ್ಳಿಖೇಡ್ ಬಿ. ಪಟ್ಟಣದ ಜನರ ಬಹುದಿನಗಳ ಬೇಡಿಕೆಯಂತೆ ನಾಗೇಶ್ವರ ದೇವಸ್ಥಾನದ ಕ್ರಾಸ್‌ನಿಂದ ಇಲ್ಲಿಯ ಬಸವೇಶ್ವರ ವೃತ್ತದವರೆಗೆ ಸುಮಾರು ₹4 ಕೋಟಿ ಅನುದಾನದಲ್ಲಿ ಚತುಷ್ಪಥ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ರಸ್ತೆಯ ಮಧ್ಯದಲ್ಲಿ ವಿದ್ಯುತ್ ದೀಪ ಅಳವಡಿಕೆಗೆ ಕಲ್ಯಾಣ ಕರ್ನಾಟಕ ಅನುದಾನದಲ್ಲಿ ನೀಡಲಾಗುತ್ತಿದೆ’ ಎಂದರು.
ವಿಧಾನ ಪರಿಷತ್ ಸದಸ್ಯ ಡಾ.ಚಂದ್ರಶೇಖರ ಪಾಟೀಲ ಮಾತನಾಡಿ,‘₹4 ಕೋಟಿ ಅನುದಾನದಲ್ಲಿ ರಸ್ತೆ ನಿರ್ಮಾಣ ಕಾಮಗಾರಿ ಗುಣಮಟ್ಟದಿಂದ ಇರಬೇಕು. ಇಲ್ಲಿಯ ಮುಖಂಡರು ಸಹ ಕಾಮಗಾರಿ ಪರಿಶೀಲನೆ ನಡೆಸಬೇಕು’ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷೆ ಜಗದೇವಿ ಶಂಕೆ, ಮುಖ್ಯಾಧಿಕಾರಿ ನಿಂಗಪ್ಪ, ಮಹಾಂತಯ್ಯ ತೀರ್ಥ, ಅಬ್ದುಲ್ ರಸಾಕ್ , ಮಲ್ಲಿಕಾರ್ಜುನ ಪ್ರಭಾ, ನಾಗರಾಜ ಹಿಬಾರೆ, ನರಸಿಂಗ್, ರವಿಂದ್ರ , ಎಂ.ಡಿ. ಆರೀಫ್, ವೀರಶಟ್ಟಿ , ಸುನೀಲ, ರೇವಪ್ಪ, ರವಿ ಸೇರಿದಂತೆ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.