ADVERTISEMENT

ಬೀದರ್‌: ಅಕ್ರಮ ಲೇಔಟ್‌ ರದ್ದುಪಡಿಸಲು ಆಗ್ರಹಿಸಿ ಬಿಜೆಪಿ ಪ್ರತಿಭಟನೆ

ವಿಧಾನ ಪರಿಷತ್‌ ಸದಸ್ಯನ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 12 ಜನವರಿ 2026, 16:18 IST
Last Updated 12 ಜನವರಿ 2026, 16:18 IST
   

ಬೀದರ್‌: ನಗರದ ಚಿಕ್ಕಪೇಟೆ ಸಮೀಪ ನಿರ್ಮಿಸಲಾಗಿದೆ ಎನ್ನಲಾದ ಅಕ್ರಮ ಲೇಔಟ್ ರದ್ದುಗೊಳಿಸುವುದು, ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಮೇಲೆ ಹಲ್ಲೆಗೆ ಯತ್ನಿಸಿದ ವಿಧಾನ ಪರಿಷತ್‌ ಸದಸ್ಯ ಭೀಮರಾವ್‌ ಪಾಟೀಲ್‌ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಜಿಲ್ಲಾ ಬಿಜೆಪಿಯಿಂದ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ನಗರದ ಗಣೇಶ್‌ ಮೈದಾನದಿಂದ ಆರಂಭಗೊಂಡ ರ್‍ಯಾಲಿ ನಗರದ ಪ್ರಮುಖ ಮಾರ್ಗಗಳ ಮೂಲಕ ಡಾ.ಬಿ.ಆರ್‌. ಅಂಬೇಡ್ಕರ್‌ ವೃತ್ತದ ವರೆಗೆ ನಡೆಯಿತು. ಜಿಲ್ಲೆಯ ವಿವಿಧ ಭಾಗಗಳಿಂದ ಬಂದಿದ್ದ ಬಿಜೆಪಿ ಕಾರ್ಯಕರ್ತರು ಘೋಷಣೆ ಹಾಕುತ್ತ ಹೆಜ್ಜೆ ಹಾಕಿದರು. ಬಳಿಕ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.

ಜ.5ರಂದು ನಗರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಪಕ್ಷದ ಶಾಸಕ ಡಾ. ಸಿದ್ದಲಿಂಗಪ್ಪ ಪಾಟೀಲ್ ಅವರು, ಸಾವಿರಾರು ಕೋಟಿ ಮೌಲ್ಯದ ಅಕ್ರಮ ಲೇಔಟ್ ಕುರಿತು ವಿಷಯ ಪ್ರಸ್ತಾಪಿಸಿದ್ದಾರೆ. ಈ ವೇಳೆ ಭೀಮರಾವ್‌ ಪಾಟೀಲ್ ಅವರು ಆಕ್ಷೇಪ ವ್ಯಕ್ತಪಡಿಸಿ, ಶಾಸಕರ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆ ನಡೆದಿದೆ. ಆದರೆ ಈವರೆಗೆ ಯಾವುದೇ ಕೇಸ್ ದಾಖಲಿಸಿಲ್ಲ. ಪೊಲೀಸರು ಸಹ ಸುಮೋಟೊ ಕೇಸ್ ದಾಖಲಿಸಿಲ್ಲ. ಈ ಪ್ರಕರಣದಲ್ಲಿ ಕಣ್ಣುಮುಚ್ಚಿ ಕೊಂಡಿರುವುದು ಗಮನಿಸಿದ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ರಾಜ್ಯ ಸರ್ಕಾರದ ಒತ್ತಡವಿದ್ದಂತೆ ತೋರುತ್ತದೆ ಎಂದು ಮುಖಂಡರು ಆಕ್ರೋಶ ಹೊರ ಹಾಕಿದರು.

ADVERTISEMENT

ಶಾಸಕರ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಅಕ್ರಮ ಲೇಔಟ್ ರದ್ದುಪಡಿಸಲೇ ಬೇಕು. ನಿರ್ಲಕ್ಷ್ಯ ತೋರಿದರೆ ಉಗ್ರ ಹೋರಾಟ ಮಾಡಲಾಗುವುದು. ಹುಬ್ಬಳ್ಳಿಯಲ್ಲಿ ಮಹಿಳೆಯರನ್ನು ಪೊಲೀಸರು ವಿವಸ್ತ್ರಗೊಳಿಸಿ ಹಲ್ಲೆ ಮಾಡಿರುವುದು ಖಂಡನಾರ್ಹ. ಅಲ್ಲಿನ ಕಾಂಗ್ರೆಸ್ ಕಾರ್ಪೋರೇಟರ್ ಸುವರ್ಣಾ ನೀಡಿದ ದೂರಿನ ಮೇರೆಗೆ ಬಿಜೆಪಿ ಕಾರ್ಯಕರ್ತೆ ಮೇಲೆ ಪೊಲೀಸರು ತಮ್ಮ ದರ್ಪ ತೋರಿಸಿದ್ದಾರೆ. ರಾಜ್ಯದಲ್ಲಿ ಮಹಿಳೆಯರು ಅಸುರಕ್ಷಿತರು ಹಾಗೂ ಸರ್ಕಾರದ ದುರಾಡಳಿತಕ್ಕೆ ಸಾಕ್ಷಿ. ಪೊಲೀಸರ ವಿರುದ್ಧ ಕೂಡಲೇ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಸೋಮನಾಥ ಪಾಟೀಲ್, ಶಾಸಕರಾದ ಡಾ.ಶೈಲೇಂದ್ರ ಕೆ. ಬೆಲ್ದಾಳೆ, ಪ್ರಭು ಚವಾಣ್, ಡಾ.ಸಿದ್ದಲಿಂಗಪ್ಪ ಪಾಟೀಲ್, ಶರಣು ಸಲಗರ, ಕೇಂದ್ರದ ಮಾಜಿ ಸಚಿವ ಭಗವಂತ ಖೂಬಾ, ವಿಧಾನ ಪರಿಷತ್ ಮಾಜಿ ಸಭಾಪತಿ ರಘುನಾಥರಾವ ಮಲ್ಕಾಪುರೆ, ಮಾಜಿ ಶಾಸಕ ಸುಭಾಷ ಕಲ್ಲೂರ್, ಪ್ರಕಾಶ ಖಂಡ್ರೆ, ಪ್ರಮುಖರಾದ ಈಶ್ವರಸಿಂಗ್ ಠಾಕೂರ್, ಪೀರಪ್ಪ ಔರಾದೆ, ಶಶಿಧರ ಹೊಸಳ್ಳಿ, ವಿಜಯಕುಮಾರ ಪಾಟೀಲ್ ಗಾದಗಿ, ಗುರುನಾಥ ಜ್ಯಾಂತಿಕರ್, ನಾಗರಾಜ ಕರ್ಪೂರ, ಸೂರ್ಯಕಾಂತ ಚಿಲ್ಲಾಬಟ್ಟೆ, ಬಸವರಾಜ ಆರ್ಯ, ಬಾಬು ಮಲ್ಕಾಪುರೆ ಮತ್ತಿತರರು ಪಾಲ್ಗೊಂಡಿದ್ದರು.

ಸಹೋದರರ ವಿರುದ್ಧ ಕಿಡಿ

ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಮಾತನಾಡಿ, ಮಾಜಿ ಸಚಿವ ರಾಜಶೇಖರ ಪಾಟೀಲ್, ಎಂಎಲ್ಸಿಗಳಾದ ಡಾ.ಚಂದ್ರಶೇಖರ ಪಾಟೀಲ್, ಭೀಮರಾವ್‌ ಪಾಟೀಲ್ ಹೆಸರು ಪ್ರಸ್ತಾಪಿಸದೆ ಅವರ ವಿರುದ್ಧ ಕಿಡಿಕಾರಿದರು.

ಮನೆಯಲ್ಲಿ ಕುಳಿತಿರುವ ಮೂವರು ಖಾಲಿಯಿದ್ದಾರೆ. ಇವರಿಗೆ ಅಭಿವೃದ್ಧಿ ಬಗ್ಗೆ ಹೇಳಬೇಡಿ. ಯಾವುದಾದರೂ ಕೆಲಸ ಹಾಳು ಮಾಡಬೇಕೆಂದರೆ, ಈ ಮೂವರಿಗೆ ಟೆಂಡರ್ ಕೊಡಿ. ಅವರು (ರಾಜಶೇಖರ ಪಾಟೀಲ್), ಅವರ ಸಹೋದರರು, ಮಗ ಬೆಳೆಯಬೇಕೆನ್ನುವುದಷ್ಟೇ ಅವರ ಮುಖ್ಯ ಗುರಿ. ಎಂಎಲ್ಸಿಗಳಿಬ್ಬರು ಅನಕ್ಷರಸ್ಥರು ಎಂದು ಟೀಕಿಸಿದರು.

ವಿಧಾನಸಭೆ ಚುನಾವಣೆಯಾಗಿ ಎರಡು ವರ್ಷಗಳಿಗೆ ಈ ಪರಿಸ್ಥಿತಿ ಆಗಿದೆ. ಮುಂದಿನ ದಿನಗಳಲ್ಲಿ ಹೇಗೆ? ಮೂವರು ಸಹೋದರರ ಮೇಲೆ ಜನತೆ ವಿಶ್ವಾಸ ಕಳೆದುಕೊಂಡಿದ್ದಾರೆ. ದೇವರೆ ಇವರಿಗೆ ಕಾಪಾಡಬೇಕು. ಇಂತಹ ಗುಣಗಳಿದ್ದವರಿಗೆ ಭಗವಂತ ಸಹ ಕೈಹಿಡಿಯುವುದಿಲ್ಲ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.