ADVERTISEMENT

ನಮ್ಮ ತಪ್ಪು ತಿದ್ದಿಕೊಂಡರೆ ಪುಟಿದೇಳಬಹುದು: ರಾಜುಗೌಡ

ಬಿಜೆಪಿ ಕಾರ್ಯಕಾರಣಿಯಲ್ಲಿ ಪಕ್ಷದ ರಾಜ್ಯ ಘಟಕದ ಉಪಾಧ್ಯಕ್ಷ ರಾಜುಗೌಡ

​ಪ್ರಜಾವಾಣಿ ವಾರ್ತೆ
Published 21 ಜುಲೈ 2024, 3:07 IST
Last Updated 21 ಜುಲೈ 2024, 3:07 IST
ಬೀದರ್‌ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶನಿವಾರ ನಡೆದ ಪಕ್ಷದ ಕಾರ್ಯಕಾರಣಿ ಸಭೆಯನ್ನು ಪಕ್ಷದ ರಾಜ್ಯ ಘಟಕದ ಉಪಾಧ್ಯಕ್ಷ ರಾಜುಗೌಡ ಉದ್ಘಾಟಿಸಿದರು
ಬೀದರ್‌ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶನಿವಾರ ನಡೆದ ಪಕ್ಷದ ಕಾರ್ಯಕಾರಣಿ ಸಭೆಯನ್ನು ಪಕ್ಷದ ರಾಜ್ಯ ಘಟಕದ ಉಪಾಧ್ಯಕ್ಷ ರಾಜುಗೌಡ ಉದ್ಘಾಟಿಸಿದರು   

ಬೀದರ್‌: ‘ನಮ್ಮ ತಪ್ಪು ತಿದ್ದುಕೊಂಡು ಮುನ್ನಡೆದರೆ ಬರುವ ದಿನಗಳಲ್ಲಿ ನಡೆಯುವ ಚುನಾವಣೆಗಳಲ್ಲಿ ಬಿಜೆಪಿ ಪುನಃ ಜಯ ಗಳಿಸುವುದು ಖಚಿತ’ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ರಾಜುಗೌಡ ತಿಳಿಸಿದರು.

ನಗರದ ನೌಬಾದ್‌ ಸಮೀಪದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶನಿವಾರ ನಡೆದ ಪಕ್ಷದ ಜಿಲ್ಲಾ ಕಾರ್ಯಕಾರಣಿ ಉದ್ಘಾಟಿಸಿ ಮಾತನಾಡಿದ ಅವರು, ಲೋಕಸಭೆ ಚುನಾವಣೆಯಲ್ಲಿ ನಮ್ಮ ತಪ್ಪಿನಿಂದ ಸೋತಿದ್ದೇವೆ. ಬೇರೆಯವರ ಮೇಲೆ ಗೂಬೆ ಕೂರಿಸುವುದರಲ್ಲಿ ಅರ್ಥವಿಲ್ಲ. ಈಗ ಅದರ ಬಗ್ಗೆ ಮಾತಾಡುವುದು, ಚರ್ಚಿಸುವುದು ಕೂಡ ಬೇಡ. ಮುಂದೆ ಏನು ಮಾಡಬೇಕೆಂದು ಯೋಚಿಸಿ ಮುನ್ನಡೆಯಬೇಕು. ಕೆಲವೇ ತಿಂಗಳಲ್ಲಿ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿಗಳಿಗೆ ಚುನಾವಣೆ ನಡೆಯಲಿದೆ. ಪಕ್ಷದ ಕಾರ್ಯಕರ್ತರನ್ನು ಗೆಲ್ಲಿಸಿ ಅವರಿಗೆ ಅಧಿಕಾರ ಒದಗಿಸಿಕೊಡುವುದು ಮುಖಂಡರಾದ ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು.

ಯಾರೂ ಕನಸು ಮನಸ್ಸಿನಲ್ಲೂ ಯೋಚನೆ ಮಾಡಿರಲಿಲ್ಲ ಸ್ವಂತ ಬಲದ ಮೇಲೆ ಬಿಜೆಪಿ ಕೇಂದ್ರದಲ್ಲಿ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ ಎಂದು. ಆದರೆ, ನಮ್ಮ ತಪ್ಪಿನಿಂದ ಈ ರೀತಿ ಆಗಿದೆ. ನಾವೆಲ್ಲರೂ ಪಕ್ಷದಲ್ಲಿ ಒಗ್ಗಟ್ಟಿನಿಂದ, ಒಂದಾಗಿ ಕೆಲಸ ಮಾಡಿದರೆ ಮತ್ತೆ ಪುಟಿದೇಳಬಹುದು. ಯಾರೂ ಎದೆಗುಂದಬೇಕಿಲ್ಲ ಎಂದು ತಿಳಿಸಿದರು.

ADVERTISEMENT

ನಮ್ಮ ಸರ್ಕಾರವಿದ್ದಾಗ ಪ್ರತಿಭಟನೆಗಳನ್ನು ಮೊಟಕುಗೊಳಿಸುತ್ತಿರಲಿಲ್ಲ. ಆದರೆ, ಕಾಂಗ್ರೆಸ್‌ನವರು ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಮುಡಾ ಹಗರಣದ ವಿರುದ್ಧ ಪ್ರತಿಭಟನೆಗೆ ತೆರಳುತ್ತಿದ್ದ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ ಅವರನ್ನು ಬಂಧಿಸಿ ಸಂವಿಧಾನಕ್ಕೆ ಅಪಚಾರ ಬಗೆದಿದ್ದಾರೆ. ಕೇಸರಿ ಶಾಲು, ಕುಂಕುಮ ಹಚ್ಚಿಕೊಂಡವರನ್ನೆಲ್ಲ ಬಂಧಿಸುತ್ತಿದ್ದಾರೆ. ಇದರ ವಿರುದ್ಧ ಹೋರಾಟ ನಡೆಸಬೇಕಿದೆ ಎಂದು ಕಾರ್ಯಕರ್ತರಿಗೆ ತಿಳಿಸಿದರು.

ಆಡು ಮುಟ್ಟದ ಸೊಪ್ಪಿಲ್ಲ, ಕಾಂಗ್ರೆಸ್‌ ಮಾಡದ ಹಗರಣಗಳಿಲ್ಲ ಎಂಬ ಪರಿಸ್ಥಿತಿ ರಾಜ್ಯದಲ್ಲಿದೆ. ಪ್ರತಿಯೊಂದರಲ್ಲೂ ಹಗರಣಗಳು ನಡೆಯುತ್ತಿವೆ. ಜಿಲ್ಲಾ, ತಾಲ್ಲೂಕು ಕೇಂದ್ರಗಳಿಗೂ ತಲುಪಿದೆ. ಬರುವ ದಿನಗಳಲ್ಲಿ ನಮ್ಮ ಆಸ್ತಿಗೆ ಕೈ ಹಾಕಬಹುದು. ಇದರ ವಿರುದ್ಧ ಹೋರಾಟಕ್ಕೆ ಕಾರ್ಯಕರ್ತರು ಸಿದ್ಧರಾಗಬೇಕು ಎಂದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಸೋಮನಾಥ ಪಾಟೀಲ, ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ, ಶಾಸಕರಾದ ಡಾ. ಶೈಲೇಂದ್ರ ಕೆ. ಬೆಲ್ದಾಳೆ, ಡಾ. ಸಿದ್ದು ಪಾಟೀಲ, ಶರಣು ಸಲಗರ್‌, ಎಂ.ಜಿ. ಮುಳೆ, ಮಾಜಿಶಾಸಕರಾದ ಪ್ರಕಾಶ ಖಂಡ್ರೆ, ಗುಂಡಪ್ಪ ವಕೀಲ, ಕಲಬುರಗಿ ವಿಭಾಗೀಯ ಸಹ ಪ್ರಭಾರಿ ಈಶ್ವರ ಸಿಂಗ್‌ ಠಾಕೂರ್‌, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪೀರಪ್ಪ ಔರಾದೆ, ಕಿರಣ್‌ ಪಾಟೀಲ, ಮುಖಂಡರಾದ ಜೈಕುಮಾರ ಕಾಂಗೆ, ರೌಫೋದ್ದಿನ್‌ ಕಚೇರಿವಾಲೆ, ರಾಜೇಂದ್ರ ಗಂದಗೆ, ನಂದಕಿಶೋರ್‌ ವರ್ಮಾ, ಸುರೇಶ ಬಿರಾದಾರ, ಬಾಬುರಾವ ಮದಕಟ್ಟಿ, ಹೇಮಾ ತುಕಾರೆಡ್ಡಿ ಹಾಜರಿದ್ದರು.

ಮುಖಂಡರಿಗೆ ಶ್ರದ್ಧಾಂಜಲಿ

ಇತ್ತೀಚೆಗೆ ನಿಧನರಾದ ಪಕ್ಷದ ಮಾಜಿ ಶಾಸಕ ರಮೇಶಕುಮಾರ ಪಾಂಡೆ ಮುಖಂಡರಾದ ಧರ್ಮಣ್ಣಗೌಡ ಹಣಮಂತ ಸುಧಾಕರ ಕುಲಕರ್ಣಿ ಪಂಢರಿನಾಥ ಲದ್ದೆ ಧೋಂಡಿರಾಮ ಚಾಂದಿವಾಲೆ ಅಪರ್ಣಾ ಬಸಪ್ಪ ರವಿ ಕೋಮಟೆ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸೂರ್ಯಕಾಂತ ಚಿಲ್ಲಾಬಟ್ಟೆ ಕಾರ್ಯಕ್ರಮ ನಡೆಸಿಕೊಟ್ಟರು.

ಜೈಶ್ರೀರಾಮ್‌ ಜೈ ಭೀಮ್‌

ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದವರಿಗೆ ಮೀಸಲಾತಿ ಕೊಟ್ಟಿದ್ದು ಬಿಜೆಪಿ. ಆದರೆ ನಮ್ಮ ವಿರುದ್ಧ ಕಾಂಗ್ರೆಸ್‌ನವರು ಅಪಪ್ರಚಾರ ಮಾಡಿದರು. ನಮ್ಮನ್ನು ದಲಿತರ ವಿರೋಧಿ ಎಂದು ಬಿಂಬಿಸಿದರು. 40 ಪರ್ಸೆಂಟ್‌ ಕಮಿಷನ್‌ ಸರ್ಕಾರವೆಂದು ಆರೋಪಿಸಿದರು. ಈಗ ಕಾಂಗ್ರೆಸ್‌ನವರು ದಲಿತರ ಹಣ ಲೂಟಿ ಹೊಡೆಯುತ್ತಿದ್ದಾರೆ. ಕಾಂಗ್ರೆಸ್‌ನವರು ದಲಿತರಿಗಾಗಿ ಏನೂ ಮಾಡಿಲ್ಲ. ನಾವು ಬಿಜೆಪಿಯವರು ಜೈ ಶ್ರೀರಾಮ್‌ ಜೈ ಭೀಮ್‌ ಎರಡೂ ಹೇಳುತ್ತೇವೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.