ಗುರುದ್ವಾರ
ಬೀದರ್: ನಗರದ ಗುರುದ್ವಾರ ನಾನಕ ಝೀರಾದಲ್ಲಿ ಸರಣಿ ಬಾಂಬ್ ಸ್ಫೋಟ ಮಾಡುವುದಾಗಿ ಬೆದರಿಕೆ ಒಡ್ಡಿರುವ ಇಮೇಲ್ ಬಂದಿದೆ.
ಗುರುದ್ವಾರ ಪ್ರಬಂಧಕ ಕಮಿಟಿ ವಿಷಯವನ್ನು ಪೊಲೀಸರಿಗೆ ತಿಳಿಸಿದ ನಂತರ ಬಾಂಬ್ ನಿಷ್ಕ್ರಿಯ ದಳ, ಶ್ವಾನ ದಳ ಸೇರಿದಂತೆ 50ಕ್ಕೂ ಹೆಚ್ಚು ಪೊಲೀಸರು ಇಡೀ ಪರಿಸರವನ್ನು ಪರಿಶೀಲಿಸಿದರು. ಈ ವೇಳೆ ಯಾವುದೇ ಬಾಂಬ್ ಅಥವಾ ಸ್ಫೋಟಕ ವಸ್ತು ಪತ್ತೆಯಾಗಿಲ್ಲ. ಆತಂಕ ಸೃಷ್ಟಿಸುವ ಉದ್ದೇಶದಿಂದ ಈ ರೀತಿ ಮಾಡಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
‘ಗುರುವಾರ (ಜು.18) ಎಂದಿನಂತೆ ನಾನು ಕಚೇರಿಗೆ ಬಂದು ಇಮೇಲ್ ನೋಡಿದಾಗ ಬಾಂಬ್ ಸ್ಫೋಟದ ಬೆದರಿಕೆಯ ಸಂದೇಶ ಬಂದಿದೆ. ಅದರ ಪ್ರಿಂಟ್‌ಔಟ್ ತೆಗೆದುಕೊಂಡು ಗುರುದ್ವಾರ ಪ್ರಬಂಧ ಕಮಿಟಿ ಅಧ್ಯಕ್ಷರು, ಪದಾಧಿಕಾರಿಗಳಿಗೆ ತಿಳಿಸಿದೆ. ಆನಂತರ ನೂತನ ನಗರ ಪೊಲೀಸ್ ಠಾಣೆಗೆ ದೂರು ಕೊಟ್ಟೆ. ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲಿಸಿದ್ದು, ಯಾವುದೇ ಸ್ಫೋಟಕ ಸಾಮಗ್ರಿ ಪತ್ತೆಯಾಗಿಲ್ಲ’ ಎಂದು ಕಮಿಟಿ ವ್ಯವಸ್ಥಾಪಕ ಜಗಜೀತ್ ಸಿಂಗ್ ಮಾಹಿತಿ ನೀಡಿದ್ದಾರೆ.
‘ಗುರುದ್ವಾರದಲ್ಲಿ ಎಂದಿನಂತೆ ಪೂಜೆ, ಪ್ರಾರ್ಥನೆಗಳು ನಡೆದಿವೆ. ಭಕ್ತರು ಯಾವುದೇ ರೀತಿಯಿಂದ ಆತಂಕ ಪಡುವ ಅಗತ್ಯವಿಲ್ಲ. ಯಾವುದೇ ಸಮಯದಲ್ಲೂ ಭೇಟಿ ಕೊಡಬಹುದು’ ಎಂದು ಗುರುದ್ವಾರ ಪ್ರಬಂಧಕ ಕಮಿಟಿ ಅಧ್ಯಕ್ಷ ಸರ್ದಾರ್ ಬಲಬೀರ್ ಸಿಂಗ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.