
ಬೀದರ್‌ನಲ್ಲಿ ಸೋಮವಾರ ಸಂಜೆ ನಡೆದ ವೀರಲೋಕ ಪುಸ್ತಕ ಸಂತೆಯ ಸಮಾರೋಪ ಸಮಾರಂಭದಲ್ಲಿ ಲೇಖಕಿ ಮೇನಕಾ ದತ್ತಾತ್ರೇಯ ಪಾಟೀಲ್ ಅವರ ‘ಮೌನದೊಳಗಿನ ಮಾತು’ ಕೃತಿಯನ್ನು ಮಾಜಿ ಸಭಾಪತಿ ವಿ.ಆರ್. ಸುದರ್ಶನ್, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾನಸ ಸೇರಿದಂತೆ ಮತ್ತಿತರರು ಬಿಡುಗಡೆಗೊಳಿಸಿದರು
ಬೀದರ್: ವೀರಲೋಕ ಬುಕ್ಸ್, ಭಾಲ್ಕಿ ಹಿರೇಮಠ ಸಂಸ್ಥಾನ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ನಗರದಲ್ಲಿ ಏರ್ಪಡಿಸಿದ್ದ ಮೂರು ದಿನಗಳ ವೀರಲೋಕ ಪುಸ್ತಕ ಸಂತೆಗೆ ಭಾನುವಾರ ಸಂಜೆ ವಿದ್ಯುಕ್ತ ತೆರೆ ಬಿತ್ತು.
ರಾಜ್ಯದ ವಿವಿಧ ಭಾಗಗಳ 55 ಪ್ರಕಾಶಕರ ಪುಸ್ತಕಗಳ ಮಳಿಗೆಗಳಿಗೆ ಮೂರು ದಿನಗಳ ಅವಧಿಯಲ್ಲಿ ಬರೋಬ್ಬರಿ 50 ಸಾವಿರಕ್ಕೂ ಅಧಿಕ ಜನ ಭೇಟಿ ಕೊಟ್ಟಿದ್ದಾರೆ. ಇಷ್ಟೇ ಅಲ್ಲ, ₹30 ಲಕ್ಷಕ್ಕೂ ಅಧಿಕ ಮೌಲ್ಯದ ಪುಸ್ತಕಗಳು ಮಾರಾಟವಾಗಿವೆ. ಮೊದಲ ಸಲ ಏರ್ಪಡಿಸಿರುವ ಪುಸ್ತಕ ಸಂತೆಗೆ ನಿರೀಕ್ಷೆಗೂ ಮೀರಿ ಜನ ಬಂದು, ಪುಸ್ತಕ ಖರೀದಿಸಿ, ಪುಸ್ತಕ ಸಂಸ್ಕೃತಿ ಬೆಳೆಸುವ ನಿಟ್ಟಿನಲ್ಲಿ ಮಹತ್ವದ ಕೊಡುಗೆ ನೀಡಿದ್ದಾರೆ ಎನ್ನುವುದು ಸಂತೆ ಆಯೋಜಕರಾದ ವೀರಕಪುತ್ರ ಶ್ರೀನಿವಾಸ್ ಹಾಗೂ ಗುರುನಾಥ ರಾಜಗೀರಾ ಅವರ ಮಾತುಗಳು.
ಜ. 24ರಿಂದ 26ರ ವರೆಗೆ ನಗರದ ನೆಹರೂ ಕ್ರೀಡಾಂಗಣ ಸಮೀಪದ ಸಾಯಿ ಶಾಲೆ ಮೈದಾನವೂ ತೆರೆದ ಗ್ರಂಥಾಲಯವಾಗಿ ಮಾರ್ಪಟ್ಟಿತ್ತು. ಜನರು ತಮಗೆ ಅನುಕೂಲವಾದ ಸಂದರ್ಭಕ್ಕೆ ಬಂದು ಪ್ರದರ್ಶನ ವೀಕ್ಷಿಸಿ, ಪುಸ್ತಕ ಖರೀದಿಸಿದರು. ಹಗಲು–ರಾತ್ರಿಯೆನ್ನದೆ ಜನರ ಓಡಾಟವಿತ್ತು. ಇನ್ನೊಂದು ಮಗ್ಗುಲಲ್ಲಿ ದಿನವಿಡೀ ಸಾಹಿತ್ಯದ ವಿಚಾರ–ವಿಮರ್ಶೆ, ಸಂವಾದ ನಡೆಯಿತು. ಹೊತ್ತು ಮುಳುಗಿದ ಬಳಿಕ ವಚನ ಗಾಯನ, ಗಜಲ್ ಕಂಪು ಹರಡಿತು. ಒಂದರ್ಥದಲ್ಲಿ ಜಾತ್ರೆಯ ವಾತಾವರಣ ಸೃಷ್ಟಿಸಿತ್ತು.
ಭಾನುವಾರ ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಮಾಜಿ ಸಭಾಪತಿ ವಿ.ಆರ್. ಸುದರ್ಶನ್, ಪ್ರಗತಿಪರ ಯೋಚನೆ, ಹೋರಾಟಗಳಿಗೆ ಪುಸ್ತಕಗಳೇ ಸ್ಫೂರ್ತಿ. ಪುಸ್ತಕಗಳು ನಿರಂತರವಾಗಿ ನಮ್ಮ ಆಲೋಚನೆ, ಲೋಪ–ದೋಷ ತಿದ್ದಿಕೊಳ್ಳಲು ಸಹಾಯ ಮಾಡುತ್ತವೆ. ಹೀಗಾಗಿ ಪುಸ್ತಕ ಓದುವ ಸಂಸ್ಕೃತಿ ಬೆಳೆಯಬೇಕಿದೆ ಎಂದು ಅಭಿಪ್ರಾಯ ಪಟ್ಟರು.
ಸಣ್ಣ ಮನೆ ಕಟ್ಟಿದ್ದರೂ ಅಲ್ಲಿ ಪುಟ್ಟ ಗ್ರಂಥಾಲಯ ಇರಬೇಕೆಂಬ ನಿಯಮ ಸರ್ಕಾರ ರೂಪಿಸಬೇಕಿದೆ. ಬೀದರ್ ಜಿಲ್ಲೆಯಲ್ಲಿ ಆರಂಭಗೊಂಡ ಈ ಪುಸ್ತಕ ಸಂತೆ ರಾಜ್ಯದ ಎಲ್ಲ ಗಡಿ ಜಿಲ್ಲೆಗಳು ಸೇರಿದಂತೆ ರಾಜ್ಯದಾದ್ಯಂತ ವಿಸ್ತರಣೆಗೊಳ್ಳಬೇಕು ಎಂದು ಹೇಳಿದರು.
ಒಂದು ಸರ್ಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ, ವಾರ್ತಾ ಇಲಾಖೆ, ಶಿಕ್ಷಣ ಇಲಾಖೆ ಇವೆಲ್ಲ ಸೇರಿ ಮಾಡಬೇಕಾದ ಕೆಲಸ ವೀರಲೋಕ ಬುಕ್ಸ್ ಮಾಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾನಸ ಮಾತನಾಡಿ, ಈ ಪುಸ್ತಕ ಸಂತೆಯೂ ಬೀದರ್‌ನ ಮನೆ ಮನೆಗಳಲ್ಲಿ ಪುಸ್ತಕ ಸಂತೆ ಪ್ರಾರಂಭಿಸಿದೆ. ಇದು ರಾಜ್ಯದುದ್ದಗಲಕ್ಕೂ ವಿಸ್ತರಿಸುವ ವಿಶ್ವಾಸ ಹುಟ್ಟಿಸಿದೆ ಎಂದರು.
ವೀರಲೋಕ ಬುಕ್ಸ್ ಮುಖ್ಯಸ್ಥ ವೀರಕಪುತ್ರ ಶ್ರೀನಿವಾಸ ಮಾತನಾಡಿ, 2006ರಲ್ಲಿ ಬೀದರ್‌ನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಂತರ ದೊಡ್ಡ ಮಟ್ಟದ ಸಾಹಿತ್ಯ ಕಾರ್ಯಕ್ರಮ ನಡೆದಿರಲಿಲ್ಲ. ಸಾಹಿತ್ಯದ ಜೊತೆಗಿನ ನಂಟು ಕಳಚಿತ್ತು. ಈ ಪುಸ್ತಕ ಸಂತೆ ಪುನಃ ಆ ನಂಟು ಬೆಳೆಸಿದೆ. ಅದರ ಶ್ರೇಯ ಬೀದರ್ ಜನತೆಗೆ ಸಲ್ಲಬೇಕು ಎಂದು ಹೇಳಿದರು.
ಗೋರ್ಟಾ ರಾಜಶೇಖರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುರೇಶ ಚನಶೆಟ್ಟಿ, ಸಂತೆ ಆಯೋಜಕ ಗುರುನಾಥ ರಾಜಗೀರಾ, ಲೇಖಕರಾದ ತಿಮ್ಮೇಗೌಡ, ಮೇನಕಾ ದತ್ತಾತ್ರೇಯ ಪಾಟೀಲ್, ಶಾಹೀನ್ ಸಮೂಹ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಅಬ್ದುಲ್ ಹಸೀಬ್, ಸಾಹಿತಿಗಳಾದ ಬಸವರಾಜ ಬಲ್ಲೂರ, ಶಿವಕುಮಾರ ಕಟ್ಟೆ, ವಿಜಯಕುಮಾರ ಸೋನಾರೆ ಹಾಜರಿದ್ದರು.
ಇಡೀ ರಾಜ್ಯಕ್ಕೆ ಮಾದರಿ ಎಂಬಂತೆ ಬೀದರ್‌ನಲ್ಲಿ ಏರ್ಪಡಿಸಿದ್ದ ಪುಸ್ತಕ ಸಂತೆಯಲ್ಲಿ ನಿರೀಕ್ಷೆಗೂ ಮೀರಿ ಪುಸ್ತಕಗಳ ವ್ಯಾಪಾರ ಆಗಿದೆ. ಇದು ಪುಸ್ತಕ ಪ್ರೀತಿ ಬಿಂಬಿಸುತ್ತದೆ.
-ವೀರಕಪುತ್ರ ಶ್ರೀನಿವಾಸ ಮುಖ್ಯಸ್ಥ ವೀರಲೋಕ ಬುಕ್ಸ್
ಸಾಹಿತ್ಯಾಸಕ್ತರು ಪುಸ್ತಕ ಸಂತೆಯಲ್ಲಿ ಬಹಳ ಉತ್ಸಾಹದಿಂದ ಭಾಗವಹಿಸಿ ಪುಸ್ತಕಗಳನ್ನು ಖರೀದಿಸಿದ್ದಾರೆ. ಬೀದರ್ ಜಿಲ್ಲೆಯಲ್ಲಿರುವ ಪುಸ್ತಕ ಸಂಸ್ಕೃತಿ ಪ್ರೀತಿ ತೋರಿಸುತ್ತದೆ.
-ಗುರುಬಸವ ಪಟ್ಟದ್ದೇವರು ಪೀಠಾಧಿಪತಿ ಭಾಲ್ಕಿ ಹಿರೇಮಠ ಸಂಸ್ಥಾನ
ಬೀದರ್ ಇತಿಹಾಸದ ಪುಟಗಳಲ್ಲಿ ಪುಸ್ತಕ ಸಂತೆ ಎಲ್ಲ ಕಾಲಕ್ಕೂ ದಾಖಲಾಗುತ್ತದೆ. ಇದು ಬೇರೆಯವರಿಗೆ ಸ್ಫೂರ್ತಿ ಕೂಡ ಹೌದು. ಇಂತಹ ಕೆಲಸ ನಿರಂತರ ನಡೆಯಬೇಕು.
- ವಿ.ಆರ್. ಸುದರ್ಶನ್ ಮಾಜಿ ಸ್ಪೀಕರ್
ಈ ರೀತಿಯ ಪುಸ್ತಕ ಸಂತೆಗಳಿಂದ ಪ್ರವಾಸೋದ್ಯಮ ಬೆಳವಣಿಗೆಗೆ ಅನುಕೂಲವಾಗುತ್ತದೆ. ಸ್ಥಳೀಯ ಆದಾಯ ವೃದ್ಧಿಗೂ ಸಹಕಾರಿ. ಜ್ಞಾನದ ಹರಿವು ಹೆಚ್ಚಾಗುತ್ತದೆ. ಉತ್ತಮ ಕೆಲಸ.
-ಸೂರ್ಯಕಾಂತ ನಾಗಮಾರಪಳ್ಳಿ ಅಧ್ಯಕ್ಷ ಎನ್‌ಎಸ್‌ಎಸ್‌ಕೆ
ಕನ್ನಡ ನಾಡಿನಲ್ಲಿ ಶಾಂತಿ ನೆಲೆಸಲು ಅನೇಕ ಬರಹಗಾರ ಪುಸ್ತಕಗಳು ಬಂದಿರುವುದು ಕಾರಣ. ನಾಡಿನ ಶಾಂತಿ ತಿಳಿಸುವುದು ಪುಸ್ತಕಗಳು. ಪುಸ್ತಕ ಸಂತೆ ಸಮಾಜಕ್ಕೆ ಬಹಳ ಮುಖ್ಯವಾದುದು
-ವಸುಧೇಂದ್ರ ಲೇಖಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.