
ಬೀದರ್: ವೀರಲೋಕ ಬುಕ್ಸ್, ಭಾಲ್ಕಿ ಹಿರೇಮಠ ಸಂಸ್ಥಾನ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಹಮ್ಮಿಕೊಂಡಿರುವ ಮೂರು ದಿನಗಳ ವೀರಲೋಕ ‘ಪುಸ್ತಕ ಸಂತೆ’ ಗಡಿನಾಡಲ್ಲಿ ಜಾತ್ರೆಯ ವಾತಾವರಣ ಸೃಷ್ಟಿಸಿದೆ.
‘ಎಲ್ಲ ಮಾರ್ಗಗಳು ರೋಮ್‌ಗೆ’ ಎಂಬಂತೆ ಈಗ ಎಲ್ಲ ಸಾಹಿತ್ಯಾಸಕ್ತರ ನಡಿಗೆ ನಗರದ ನೆಹರೂ ಕ್ರೀಡಾಂಗಣ ಸಮೀಪದ ಸಾಯಿ ಶಾಲೆಯಲ್ಲಿ ನಡೆಯುತ್ತಿರುವ ಪುಸ್ತಕ ಸಂತೆಯ ಕಡೆಗೆ ಎಂಬಂತಾಗಿದೆ.
ಕಿರಿಯರಿಂದ ಹಿರಿಯರ ವರೆಗೆ ಎಲ್ಲ ವಯೋಮಾನದವರು ಪುಸ್ತಕ ಮಳಿಗೆಗಳಿಗೆ ಭೇಟಿ ಕೊಟ್ಟು ಪುಸ್ತಕ ಖರೀದಿಸಿದರು. ಸೆಲ್ಫಿ ತೆಗೆದುಕೊಂಡರು. ತಮಗಿಷ್ಟವಾದ ವಸ್ತು, ಉಡುಪು, ಪ್ರಿಯವಾದ ಆಹಾರ ಸವಿದರು. ಒಂದರ್ಥದಲ್ಲಿ ಜಾತ್ರೆಯ ವಾತಾವರಣ ಸೃಷ್ಟಿಯಾಗಿತ್ತು. ಬೆಳಿಗ್ಗೆಯಿಂದ ರಾತ್ರಿ ತನಕ ಜನ ಬಂದು ಹೋಗುವುದು ಮುಂದುವರಿದಿತ್ತು. ಸಂಜೆ ಸಂಗೀತ ಕಾರ್ಯಕ್ರಮ ಮನಸೂರೆಗೊಳಿಸಿತು.
ಮಧ್ಯಾಹ್ನ ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪನವರು ಪುಸ್ತಕ ಸಂತೆ ಉದ್ಘಾಟಿಸಿದರು. ಬಳಿಕ ಮಾತನಾಡಿ, ಓದುಗ ವಲಯ, ಸಾಮಾಜಿಕ ವಲಯವು ಜಾತಿ, ಧರ್ಮದ ಕಾರಣದಿಂದ ವಿಭಜಕ ಆಗಿದೆ. ಧರ್ಮ, ಜಾತಿ ಮೀರುವ ಅಗತ್ಯವಿದೆ. ಆಗ ನಾವೆಲ್ಲ ಮನುಷ್ಯರಾಗುತ್ತೇವೆ ಎಂದು ಹೇಳಿದರು.
ಓದುವುದು ಬೇರೆ, ಒಪ್ಪುವುದು ಬೇರೆ. ವಿಭಜಿತ ಓದು ನಮ್ಮಲ್ಲಿದೆ. ಆದರೆ, ಮೊದಲು ಓದಬೇಕು. ಅದನ್ನು ಒಪ್ಪುವುದು ಬಿಡುವುದು ಬೇರೆಯ ವಿಚಾರ. ಪೂರ್ವಗ್ರಹಗಳಿಲ್ಲದ ಓದು ಬಹಳ ಅಗತ್ಯ. ನಾವು ಪುಸ್ತಕದೊಳಗೆ ಪ್ರವೇಶಿಸಿದ ನಂತರ ಅದರ ಸರಿ–ತಪ್ಪು ನಿರ್ಧರಿಸಬೇಕು ಹೊರತು ಪೂರ್ವಗ್ರಹಪೀಡಿತರಾಗಿ ಅಲ್ಲ ಎಂದರು.
ಓದಿಗೆ ಪದವಿ ಮಾನದಂಡವಲ್ಲ. ಓದಿನ ಹಸಿವು ಇರಬೇಕು. ಪುಸ್ತಕಗಳಿಂದ ಸೌಹಾರ್ದ, ಸಮಾನತೆ ಬೆಳೆಸುವ ಕೆಲಸವಾಗಬೇಕಿದೆ. ಡಿಜಿಟಲೀಕರಣದಿಂದ ಪುಸ್ತಕಗಳು ನಾಶವಾಗುತ್ತಿವೆ ಎಂಬ ಅಭಿಪ್ರಾಯ ತಪ್ಪು. ಮುಂದುವರಿದ ದೇಶಗಳಲ್ಲಿ ಈಗಲೂ ಪುಸ್ತಕ ಮಳಿಗೆಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಓದುವ ಅಭಿರುಚಿ ಬೆಳೆಸುವುದು ಬಹಳ ಮುಖ್ಯ. ಎಷ್ಟೇ ಮುಂದುವರಿದ ತಂತ್ರಜ್ಞಾನ ಬಂದರೂ ಅದು ಕೂಡ ಓದಿನ ಜ್ಞಾನದಿಂದ ಎಂಬುದನ್ನು ಮರೆಯಬಾರದು ಎಂದು ಹೇಳಿದರು.
ಶಿಕ್ಷಣ, ಆರೋಗ್ಯ, ಮಾಧ್ಯಮ, ಪುಸ್ತಕ ಹೀಗೆ ಎಲ್ಲವೂ ಉದ್ಯಮದ ಸ್ವರೂಪ ಪಡೆದುಕೊಂಡಿದೆ. ಆದರೆ, ಯಾರು ಯಾವುದನ್ನೂ ಏತಕ್ಕಾಗಿ ನಿಯಂತ್ರಿಸುತ್ತಿದ್ದಾರೆ ಎನ್ನುವುದು ಬಹಳ ಮುಖ್ಯ. ಸಂಪಾದನೆಯ ಜೊತೆಗೆ ಸಂವೇದನೆ, ಸಮತೋಲನ ಕೂಡ ಅಷ್ಟೇ ಮುಖ್ಯ. ನಾವು ಕೆಟ್ಟ ಪುಸ್ತಕ ಬರೆದು ಜನ ಓದಬೇಕೆಂದು ಹೇಳಬೇಕಿಲ್ಲ. ಲೇಖಕನಿಗೂ ಸಾಮಾಜಿಕ ಜವಾಬ್ದಾರಿ, ಬದ್ಧತೆ ಬಹಳ ಮುಖ್ಯ ಎಂದು ಅಭಿಪ್ರಾಯಪಟ್ಟರು.
ನಟಿ ಸುಲಕ್ಷಾ ಕೈರಾ, ಗಡಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸಂತೋಷ್ ಹಾನಗಲ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುರೇಶ ಚನಶೆಟ್ಟಿ, ನಟರಾದ ಸುಚೇಂದ್ರಪ್ರಸಾದ್, ಅಶ್ವತ್ಥ, ಬಾಬುರಾವ್ ಮಲ್ಕಾಪುರೆ, ಶಿವಶಂಕರ್ ಟೋಕರೆ, ಟಿ.ಎಂ. ಮಚ್ಚೆ ಹಾಜರಿದ್ದರು.
Qನಾನು ನಿತ್ಯ ‘ಪ್ರಜಾವಾಣಿ’ ‘ಡೆಕ್ಕನ್ ಹೆರಾಲ್ಡ್’ ಪತ್ರಿಕೆಗಳನ್ನು ಓದಿದ ನಂತರವೇ ತಿಂಡಿ ಮಾಡುತ್ತೇನೆ. ಇದು ನಮ್ಮ ತಂದೆ ಭೀಮಣ್ಣ ಖಂಡ್ರೆಯವರಿಂದ ನನ್ನಲ್ಲೂ ಬೆಳೆದಿದೆ.ಈಶ್ವರ ಬಿ. ಖಂಡ್ರೆ ಜಿಲ್ಲಾ ಉಸ್ತುವಾರಿ ಸಚಿವ
ಯಾರ ಬಳಿಯೂ ಹಣ ತೆಗೆದುಕೊಳ್ಳದೇ ಪುಸ್ತಕ ಸಂತೆಯನ್ನು ಆಯೋಜಿಸಲಾಗಿದೆ. ರಾಜ್ಯದ ಅನೇಕ ಪ್ರಕಾಶಕರ ವೈವಿಧ್ಯ ಪುಸ್ತಕಗಳ ಪ್ರದರ್ಶನ–ಮಾರಾಟದ ವ್ಯವಸ್ಥೆ ಮಾಡಲಾಗಿದೆ.ಗುರುನಾಥ ರಾಜಗೀರಾ ಸಂತೆ ಆಯೋಜಕ
ಜನ ಮೊಬೈಲ್ ಟಿವಿ ನೋಡುವುದರಲ್ಲಿ ಹೆಚ್ಚು ತಲ್ಲೀನರಾಗಿದ್ದಾರೆ. ಪುಸ್ತಕ ಓದುವುದು ಕಡಿಮೆಯಾಗಿದೆ. ಆದರೆ ಎಲ್ಲರೂ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳುವುದು ಉತ್ತಮರಹೀಂ ಖಾನ್, ಪೌರಾಡಳಿತ ಸಚಿವ
Quote - ಜಗತ್ತಿನಲ್ಲಿ ಆಗಿರುವ ಮಹಾನ್ ವ್ಯಕ್ತಿಗಳಿಗೆಲ್ಲ ಪುಸ್ತಕಗಳೇ ಸ್ಫೂರ್ತಿ. ಪುಸ್ತಕಗಳ ಓದಿನಿಂದ ಜ್ಞಾನ ಪಡೆದು ಉನ್ನತವಾದ ಸ್ಥಾನ ಅಲಂಕರಿಸಬಹುದು.ಡಾ. ಶೈಲೇಂದ್ರ ಕೆ. ಬೆಲ್ದಾಳೆ ಶಾಸಕ
ಪುಸ್ತಕ ಓದಿದರೆ ಮಸ್ತಕ ಶಕ್ತಿ ಹೆಚ್ಚಾಗುತ್ತದೆ. ಪ್ರಬುದ್ಧರಾಗುತ್ತೇವೆ. ಆದಕಾರಣ ಎಲ್ಲರೂ ದಿನನಿತ್ಯ ಸ್ವಲ್ಪ ಸಮಯವಾದರೂ ಉತ್ತಮವಾದ ಪುಸ್ತಕ ಓದುವುದು ರೂಢಿಸಿಕೊಳ್ಳಬೇಕು.ಬಸವಲಿಂಗ ಪಟ್ಟದ್ದೇವರು ಅಧ್ಯಕ್ಷ ಬಸವಕಲ್ಯಾಣ ಅನುಭವ ಮಂಟಪ
Quote - ವಚನಗಳ ಮೂಲಕ ಜಗತ್ತಿನ ಗಮನ ಸೆಳೆದವರು ಬಸವಾದಿ ಶರಣರು. ಇದರಿಂದಲೇ ಅಕ್ಷರ ಪುಸ್ತಕಗಳ ಮಹತ್ವ ಎಷ್ಟಿದೆ ಎಂಬುದನ್ನು ಮನಗಾಣಬಹುದು.ಶಿವಾನಂದ ಸ್ವಾಮೀಜಿ ಪೀಠಾಧಿಪತಿ ಹುಲಸೂರು ಗುರುಬಸವೇಶ್ವರ ಸಂಸ್ಥಾನ ಮಠ
Quote - ಬದುಕು ಬೆಳಗಲು ಪುಸ್ತಕ ಜಗತ್ತು ಬೆಳಗಲು ಪುಸ್ತಕ. ಇದು ಪುಸ್ತಕಗಳ ಮಹತ್ವ ಸಾರುತ್ತದೆ. ಗತ ನಾಳೆ ಸಮಕಾಲೀನ ಹೀಗೆ ಎಲ್ಲ ಕಾಲದ ಜ್ಞಾನಕ್ಕಾಗಿ ಪುಸ್ತಕಗಳ ಅಗತ್ಯವಿದೆ.ಬರಗೂರು ರಾಮಚಂದ್ರಪ್ಪ ಹಿರಿಯ ಸಾಹಿತಿ
ಮಹನೀಯರ ಹೆಸರು ಪುಸ್ತಕ ಸಂತೆಯ ಮಹಾದ್ವಾರಕ್ಕೆ ಇತ್ತೀಚೆಗೆ ನಿಧನರಾದ ಮಾಜಿ ಸಚಿವ ದಿವಂಗತ ಭೀಮಣ್ಣ ಖಂಡ್ರೆ ಪುಸ್ತಕಗಳ ಮಳಿಗೆಗೆ ಭಾಲ್ಕಿ ಹಿರೇಮಠದ ಚನ್ನಬಸವ ಪಟ್ಟದ್ದೇವರು ವೇದಿಕೆಗೆ ಜಯದೇವಿ ತಾಯಿ ಲಿಗಾಡೆ ಹಾಗೂ ಮಂಟಪಕ್ಕೆ ಪ್ರಭುರಾವ್ ಕಂಬಳಿವಾಲೆ ಅವರ ಹೆಸರಿಡಲಾಗಿದೆ.
ಪುಸ್ತಕ ಮಳಿಗೆಗಳು ತಲೆ ಎತ್ತಲಿ
‘ಯಾವುದೇ ನಗರ ಪಟ್ಟಣಗಳಿಗೆ ಹೋದರೆ ಹೋಟೆಲ್ ಮೊಬೈಲ್ ರೇಷನ್ ಮಳಿಗೆಗಳು ಕಾಣಿಸುತ್ತವೆ. ಆದರೆ ಪುಸ್ತಕ ಮಳಿಗೆಗಳು ಕಾಣಿಸುವುದು ಬಹಳ ಅಪರೂಪ. ಎಲ್ಲೆಡೆ ಪುಸ್ತಕ ಮಳಿಗೆಗಳು ತಲೆ ಎತ್ತಬೇಕು’ ಎಂದು ವೀರಲೋಕ ಬುಕ್ಸ್‌ನ ವೀರಕಪುತ್ರ ಶ್ರೀನಿವಾಸ ತಿಳಿಸಿದರು. ಅಮೆರಿಕದಂತಹ ದೇಶದಲ್ಲಿ ಪುಸ್ತಕ ಪ್ರಕಾಶಕರು ಮಿಲೇನಿಯರ್ ಆಗಿದ್ದಾರೆ. ಆದರೆ ನಮ್ಮಲ್ಲಿ ಪ್ರಕಾಶಕರು ಪ್ರೊಜೆಕ್ಟ್ ಮಾಡಿಕೊಳ್ಳುತ್ತಿಲ್ಲ. ಬೆಂಗಳೂರಿನಲ್ಲಿ ಏರ್ಪಡಿಸಿದ್ದ ವೀರಲೋಕ ಪುಸ್ತಕ ಸಂತೆಯಲ್ಲಿ ₹3 ಕೋಟಿ ಪುಸ್ತಕಗಳು ಮಾರಾಟವಾಗಿವೆ. ಎರಡು ಲಕ್ಷ ಜನ ಪಾಲ್ಗೊಂಡಿದ್ದರು. ಈ ರೀತಿಯ ಸಂತೆಗಳು ಎಲ್ಲೆಡೆ ನಡೆಸುವ ಉದ್ದೇಶ ಇದೆ ಎಂದು ಹೇಳಿದರು.
ದೇಶ ಸುತ್ತು ಕೋಶ ಓದು
‘ದೇಶ ಸುತ್ತುವುದರಿಂದ ಆ ಭಾಗದ ಆಚಾರ–ವಿಚಾರ ಉಡುಗೆ–ತೊಡುಗೆ ಸಂಸ್ಕೃತಿಯ ಜ್ಞಾನ ಸಿಗುತ್ತದೆ. ಅದೇ ರೀತಿ ಪುಸ್ತಕಗಳನ್ನು ಓದುವುದರಿಂದ ನಮ್ಮ ಜ್ಞಾನ ಹೆಚ್ಚಾಗುತ್ತದೆ. ಅದಕ್ಕಾಗಿಯೇ ದೇಶ ಸುತ್ತು ಕೋಶ ಓದು ಎಂಬ ಗಾದೆ ಮಾತು ಬಹಳ ಪ್ರಸಿದ್ಧವಾದುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ನೆನಪಿಸಿದರು. ಪುಸ್ತಕಗಳನ್ನು ಓದುವುದರಿಂದ ಮನುಷ್ಯನಲ್ಲಿರುವ ಕ್ರೌರ್ಯ ದ್ವೇಷ ದೂರವಾಗುತ್ತದೆ. ನೈತಿಕ ಮಾನವೀಯ ಮೌಲ್ಯಗಳು ಬೆಳೆಯುತ್ತವೆ. ತಲೆ ತಗ್ಗಿಸಿ ಪುಸ್ತಕಗಳನ್ನು ಓದಿದರೆ ಅದು ತಲೆ ಎತ್ತಿ ಓಡಾಡುವಂತೆ ಮಾಡುತ್ತದೆ. ಇದಕ್ಕೆ ಅನೇಕ ಮಹನೀಯರು ನಿದರ್ಶನ ಎಂದರು.
ಸಿನಿಮಾ ಪುಸ್ತಕಗಳು ನನ್ನನ್ನು ಬೆಳೆಸಿವೆ
ನಟ ಪ್ರೇಮ್ ‘ನಾನು ಶಾಲೆಯಲ್ಲಿ ಕೊನೆಯ ಬೆಂಚಿನ ವಿದ್ಯಾರ್ಥಿ. ಅಲ್ಲಿ ಕಲಿತದ್ದು ಬಹಳ ಕಡಿಮೆ. ಆದರೆ ಸಿನಿಮಾ ಮತ್ತು ಪುಸ್ತಕಗಳು ನನ್ನನ್ನು ಬೆಳೆಸಿವೆ. ಆರಂಭದಿಂದಲೂ ಸಿನಿಮಾದಲ್ಲಿ ನಟಿಸಲು ಕೀಳರಿಮೆ ಆಗುತ್ತಿತ್ತು. ಪುಸ್ತಕಗಳನ್ನು ಓದುವುದು ರೂಢಿಸಿಕೊಂಡ ನಂತರ ನನ್ನಲ್ಲಿ ಧೈರ್ಯ ಬೆಳೆಯಿತು. ಈ ಕಾರಣಕ್ಕಾಗಿಯೇ ನಾನು ಎಲ್ಲೇ ಹೋದರೂ ಪುಸ್ತಕಗಳನ್ನು ಜನರಿಗೆ ಉಡುಗೊರೆ ರೂಪದಲ್ಲಿ ಕೊಡುತ್ತೇನೆ’ ಎಂದು ನಟ ಪ್ರೇಮ್ ಹೇಳಿದಾಗ ಕರತಾಡನ ಮುಗಿಲು ಮುಟ್ಟಿತು. ಬೀದರ್ ಬಹಳ ಸುಂದರವಾದ ಸ್ಥಳ. ಬಸವಾದಿ ಶರಣರು ಮೆಟ್ಟಿದ ನೆಲವಿದು. ಗುರುನಾನಕರು ಬಂದಿದ್ದರು. ಕನ್ನಡದ ಮಠ ಭಾಲ್ಕಿ ಹಿರೇಮಠ ಸಂಸ್ಥಾನವಿದೆ. ಅಲ್ಲಿನ ಭಾಷೆ ಜನರ ಪ್ರೀತಿ ಪದಗಳಲ್ಲಿ ವರ್ಣಿಸಲಾಗದು. ಇಲ್ಲಿನ ಹೆಣ್ಣು ಮಕ್ಕಳು ಬಹಳ ಸುಂದರವಾಗಿದ್ದಾರೆ. ನೀವು ಚಿತ್ರರಂಗಕ್ಕೆ ಬರಬೇಕು. ಅದೇ ರೀತಿ ಇಲ್ಲಿನ ಯುವಕರು ಕೂಡ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.