ಔರಾದ್: ‘ಆಧುನಿಕ ಸಂಸ್ಕೃತಿ ಮೈಗೂಡಿಸಿಕೊಂಡು ಬದುಕು ಹಾಳು ಮಾಡಿಕೊಳ್ಳುವ ಬದಲು ಗ್ರಾಮೀಣ ಜನಪದ ಸಂಸ್ಕೃತಿ ಮೈಗೂಡಿಸಿಕೊಂಡರೆ ಬದುಕು ಹಸನಾಗುತ್ತದೆ’ ಎಂದು ಕಲಬುರಗಿ ಸಾಹಿತಿ ಕಾವ್ಯಶ್ರೀ ಮಹಾಗಾಂವಕರ್ ಹೇಳಿದರು.
ತಾಲ್ಲೂಕಿನ ನಾಗೂರ್ (ಬಿ) ಗ್ರಾಮದಲ್ಲಿ ಭಾನುವಾರ ‘ನನ್ನವ್ವ ಜನಪದ ಸಿರಿ’ ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿದರು.
‘ಆಧುನಿಕತೆ, ತಂತ್ರಜ್ಞಾನದ ಪ್ರಸ್ತುತ ಕಾಲದಲ್ಲಿ ಜನಪದ ಸೊಗಡು ತುಂಬಿಕೊಂಡ ನನ್ನವ್ವನ ಕೃತಿ ತುಂಬ ವಿಶೇಷವಾಗಿದೆ. ಜನಪದ ಸಂಸ್ಕೃತಿಯನ್ನು ಪೋಷಿಸುವ ಹಾಗೂ ಮುಂದಿನ ಪೀಳಿಗೆಗೆ ವರ್ಗಾಯಿಸಲು ಇದು ಅನುಕೂಲವಾಗಲಿದೆ’ ಎಂದರು.
ಕೃತಿಯಲ್ಲಿ ಬೀದರ್ ಭಾಷೆ ಹಾಗೂ ಹಾಡಿನ ದಾಟಿಗೆ ಪೂರಕವಾದ ವ್ಯಾಕರಣಾಂಶ ಅನಾವರಣಗೊಳಿಸಿರುವ ಸಂಪಾದಕಿ ಶಾಂತಮ್ಮ ಬಲ್ಲೂರ್ ಅವರ ಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ‘ತನ್ನ ತಾಯಿ ತುಳಸಮ್ಮ ಸಂಗ್ರಾಮ ಸಿಂಧೆ ಅವರಲ್ಲಿನ ಹಾಡುಗಳಿಗೆ ಅಕ್ಷರ ರೂಪ ನೀಡಿರುವುದು ಒಂದು ಸಂಶೋಧನಾ ಕೃತಿಗಿಂತಲೂ ಮಿಗಿಲಾಗಿದೆ’ ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಬಿ.ಎಂ ಅಮರವಾಡಿ, ‘ಪ್ರಸ್ತುತ ನಶಿಸುತ್ತಿರುವ ಜನಪದ ಸಂಸ್ಕೃತಿಯನ್ನು ನಾವು ಪೋಷಿಸುವ ಅಗತ್ಯವಿದೆ. ಜನಪದದಲ್ಲಿ ಜೀವನ ಮೌಲ್ಯಗಳು, ನೈತಿಕ ಪಾಠಗಳಿವೆ. ಬದುಕಿಗೆ ದಾರಿದೀಪವಾಗುವ ಮಹತ್ವದ ಸಂದೇಶಗಳಿವೆ’ ಎಂದರು.
ಸಾಹಿತಿ ಹಂಸಕವಿ ನಾಗೂರ್ (ಬಿ) ಗ್ರಾಮದ ಹಿನ್ನೆಲೆ, ವಿಶೇಷತೆ ಮತ್ತು ಸಂಪಾದಕಿ ಶಾಂತಮ್ಮ ಬಲ್ಲೂರ್ ಅವರ ಕುರಿತು ಪರಿಚಯ ಮಾಡಿಕೊಟ್ಟರು.
ಕಲ್ಲಪ್ಪ ಪಾಂಚಾಳ ಹಾಗೂ ಸವಿತಾ ಕರಸೊಣ್ಣೆ ಅವರ ಮಾರ್ಗದರ್ಶನದಲ್ಲಿ ಜ್ಞಾನಭಾರತಿ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು. ಸಾಹಿತಿ ಚೆನ್ನಮ್ಮ ವಲ್ಲಾಪೂರೆ, ಸ್ಯಾಮಸನ್ ಬಲ್ಲೂರ, ಗುರುನಾಥ ದೇಶಮುಖ, ಪ್ರಕಾಶ ದೇಶಮುಖ, ಬಸವರಾಜ ಮಸ್ಕಲೆ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.