ADVERTISEMENT

ಔರಾದ್: ಮೂಲಸೌಲಭ್ಯ ನಿರೀಕ್ಷೆಯಲ್ಲಿ ಗಡಿ ಗ್ರಾಮ

ಜಮಗಿ: ಶುದ್ಧ ನೀರಿನ ಘಟಕ ದುರಸ್ತಿ, ರಸ್ತೆ ಸುಧಾರಣೆಗೆ ಒತ್ತಾಯ

ಮನ್ನಥಪ್ಪ ಸ್ವಾಮಿ
Published 4 ಮೇ 2021, 5:34 IST
Last Updated 4 ಮೇ 2021, 5:34 IST
ಜಮಗಿ ಗ್ರಾಮದಲ್ಲಿ ತುಕ್ಕು ಹಿಡಿದ ಶುದ್ಧ ಕುಡಿಯುವ ನೀರಿನ ಘಟಕ
ಜಮಗಿ ಗ್ರಾಮದಲ್ಲಿ ತುಕ್ಕು ಹಿಡಿದ ಶುದ್ಧ ಕುಡಿಯುವ ನೀರಿನ ಘಟಕ   

ಔರಾದ್: ತೆಲಂಗಾಣ ಗಡಿಗೆ ಹೊಂದಿ ಕೊಂಡಿರುವ ತಾಲ್ಲೂಕಿನ ಜಮಗಿ ಗ್ರಾಮ ವಿವಿಧ ಮೂಲ ಸೌಲಭ್ಯಗಳಿಂದ ವಂಚಿತವಾಗಿದೆ.ಸೌಲಭ್ಯಗಳ ನಿರೀಕ್ಷೆಯಲ್ಲಿ ಜನ ಜೀವನ ಸಾಗಿಸುತ್ತಿದ್ದಾರೆ.

ಗ್ರಾಮ ಪಂಚಾಯಿತಿ ಕೇಂದ್ರವಾಗಿ ರುವ ಇಲ್ಲಿಯ ಜನ ದಶಕಗಳಿಂದ ಶುದ್ಧ ಕುಡಿಯುವ ನೀರಿನಿಂದ ವಂಚಿತರಾಗಿದ್ದಾರೆ. ಗ್ರಾಮೀಣ ಪ್ರದೇಶದ ಜನರಿಗೆ ಶುದ್ಧ ನೀರು ಪೂರೈಸುವ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆ ಇಲ್ಲಿ ವಿಫಲವಾಗಿದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಅಳವಡಿಸಲಾದ ನೀರಿನ ಎರಡೂ ಘಟಕಗಳು ತುಕ್ಕು ಹಿಡಿದಿವೆ. ಈ ಕುರಿತು ಸಂಬಂಧಿತರಿಗೆ ಕೇಳಿದರೆ ಸಮರ್ಪಕ ಉತ್ತರ ನೀಡದೆ ನುಣುಚಿಕೊಳ್ಳುತ್ತಿದ್ದಾರೆ ಎಂದು ಜನ ಹಿಡಿಶಾಪ ಹಾಕುತ್ತಿದ್ದಾರೆ.

‘ನಮ್ಮೂರಿಗೆ 3 ಕಿ.ಮೀ. ದೂರದಲ್ಲಿರುವ ತೆಲಂಗಾಣ ಗ್ರಾಮದ ಜನರಿಗೆ ಅಲ್ಲಿಯ ಸರ್ಕಾರ ಸಾಕಷ್ಟು ಸೌಲಭ್ಯ ಕಲ್ಪಿಸಿದೆ. ಆದರೆ ನಮ್ಮವರು ಮಾತ್ರ ಗಡಿ ಗ್ರಾಮಸ್ಥರನ್ನು ವಂಚನೆ ಮಾಡುತ್ತಾ ಬಂದಿದ್ದಾರೆ’ ಎಂದು ಕಿಸಾನ್‌ ಸಭಾದ ಅಧ್ಯಕ್ಷ ಅಹೆಮ್ಮದ್ ಜಮಗಿ ದೂರುತ್ತಾರೆ.

ADVERTISEMENT

‘ನಾವು ಪ್ರತಿಯೊಂದಕ್ಕೂ ಹೋಬಳಿ ಇಲ್ಲವೇ ತಾಲ್ಲೂಕು ಕೇಂದ್ರಕ್ಕೆ ಹೋಗಬೇಕು. ಒಂದು ಪಹಣಿ ಬೇಕಾದರೂ 16 ಕಿ.ಮೀ. ದೂರದ ಸಂತಪುರ ಹೋಬಳಿ ಕೇಂದ್ರಕ್ಕೆ ಹೋಗಬೇಕು. ಅಲ್ಲಿಗೆ ಹೋಗಲು ಸರಿಯಾದ ರಸ್ತೆ ಕೂಡ ಇಲ್ಲ. ಬಸ್ ಸೌಲಭ್ಯವೂ ಇಲ್ಲ. ಇದರಿಂದಾಗಿ ಗಡಿ ಭಾಗದ ಜನ ತೀವ್ರ ತೊಂದರೆಯಲ್ಲಿದ್ದಾರೆ’ ಎಂದು ಅವರು ತಿಳಿಸಿದರು.

ನಮ್ಮ ಊರಿಗೆ ನೆಮ್ಮದಿ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರದ ಅವಶ್ಯಕತೆ ಬಹಳ ಇದೆ. ಈ ಕುರಿತು ಈಚೆಗೆ ವಡಗಾಂವ್‍ನಲ್ಲಿ ನಡೆದ ಅಧಿಕಾರಿಗಳ ಗ್ರಾಮ ವಾಸ್ತವ್ಯದಲ್ಲೂ ಬೇಡಿಕೆ ಸಲ್ಲಿಸಿದ್ದೇವೆ. ಆದರೂ ಸಮಸ್ಯೆಗೆ ಸ್ಪಂದನೆ ಸಿಕ್ಕಿಲ್ಲ ಎಂದು ಜನ ಅಳಲು ತೋಡಿಕೊಂಡಿದ್ದಾರೆ.

‘ಜಮಗಿ ಗಡಿ ಪ್ರದೇಶ ಆಗಿರುವುದರಿಂದ ಇಲ್ಲಿ ಕಳ್ಳತನ ಪ್ರಕರಣ ಜಾಸ್ತಿಯಾಗುತ್ತವೆ. ಆಗಾಗ ಗಾಂಜಾ ಅಕ್ರಮ ಮಾರಾಟ ಪ್ರಕರಣ ಪತ್ತೆಯಾಗುತ್ತಲೇ ಇರುತ್ತವೆ. ಇಲ್ಲಿ ಪೊಲೀಸ್ ಠಾಣೆ ಮಂಜೂರು ಮಾಡುವ ಬೇಡಿಕೆ ಹಲವು ವರ್ಷಗಳಿಂದ ಇದೆ. ಈ ನಿಟ್ಟಿನಲ್ಲೂ ಸರ್ಕಾರ ಕಾಳಜಿ ವಹಿಸಬೇಕು’ ಎಂದು ಅಹೆಮ್ಮದ್ ಜಮಗಿ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.