ಬೀದರ್ ಜಿಲ್ಲೆಯಲ್ಲಿ ಆರೋಗ್ಯ ಸೇವೆ ಹೇಗಿದೆ? ರೋಗಿಗಳಿಗೆ ಉತ್ತಮ ಸೇವೆ ಸಿಗುತ್ತಿದೆಯೇ? ವೈದ್ಯರು ಔಷಧಿ ವ್ಯವಸ್ಥೆ ಇದೆಯೇ? ಕಟ್ಟಡಗಳು ಸರಿ ಇವೆಯೇ? ಈ ಎಲ್ಲ ವಿಷಯಗಳ ಕುರಿತು ‘ಪ್ರಜಾವಾಣಿ’ ಬೆಳಕು ಚೆಲ್ಲುವ ಕೆಲಸ ಮಾಡಲಿದೆ. ‘ಆರೋಗ್ಯ ಭಾಗ್ಯ’ ಶೀರ್ಷಿಕೆ ಅಡಿ ಸರಣಿ ಲೇಖನಗಳನ್ನು ಪ್ರಕಟಿಸುತ್ತಿದ್ದು ಇದರ ಮೊದಲ ಲೇಖನ ಶುಕ್ರವಾರ ಪ್ರಕಟವಾಗಲಿದೆ.
ಬೀದರ್: ನಗರದ ಬೀದರ್ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಬ್ರಿಮ್ಸ್) ಹೆರಿಗೆ ವಿಭಾಗದಲ್ಲಿ ಪ್ರತಿಯೊಂದಕ್ಕೂ ದುಡ್ಡು ಕೊಡಬೇಕು. ದುಡ್ಡು ಕೊಡದಿದ್ದರೆ ಹೆರಿಗೆ ಆಗುವುದಿಲ್ಲ!
ಇದು ನಗರದಲ್ಲಿನ ಬ್ರಿಮ್ಸ್ ಅವಸ್ಥೆ. ಹಣ ಕೊಡದಿದ್ದರೆ ಹೆರಿಗೆ ವಿಭಾಗದಲ್ಲಿರುವ ಸಿಬ್ಬಂದಿ ಮಹಿಳೆಯರನ್ನು ವಾರ್ಡ್‌ಗೆ ಕೊಂಡೊಯ್ಯುವುದಿಲ್ಲ. ಹೆರಿಗೆ ಮೊದಲು, ಹೆರಿಗೆ ಮುಗಿಸಿಕೊಂಡು ಹೋಗುವವರೆಗೆ ಪ್ರತಿಯೊಂದಕ್ಕೂ ಹಣ ಕೊಡಬೇಕು. ಬಾಣಂತಿಗೆ ಬಿಸಿ ನೀರು ಬೇಕಾದರೂ ದುಡ್ಡು ಕೊಡಲೇಬೇಕು. ಈ ಸಂಬಂಧ ಸಾಕಷ್ಟು ದೂರುಗಳು ಸಲ್ಲಿಕೆಯಾಗಿವೆ. ಸಿಬ್ಬಂದಿಯೊಂದಿಗೆ ಜಗಳಗಳಾಗಿವೆ. ಆದರೆ, ಇದುವರೆಗೆ ಯಾರ ವಿರುದ್ಧವೂ ಕ್ರಮ ಜರುಗಿಸಿಲ್ಲ.
ಈ ಸಂಬಂಧ ಬ್ರಿಮ್ಸ್ ನಿರ್ದೇಶಕ ಶಿವಕುಮಾರ ಶೆಟಕಾರ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ, ಈ ಕುರಿತ ದೂರುಗಳಿಗೆ ಸಂಬಂಧಿಸಿದಂತೆ ಮೂವರು ನರ್ಸ್‌ಗಳ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಲಾಗಿದೆ. ಪ್ರತಿಯೊಂದು ದೂರುಗಳನ್ನು ಗಂಭೀರವಾಗಿ ಸ್ವೀಕರಿಸಿ, ಸಿಬ್ಬಂದಿ ವಿರುದ್ಧ ಕ್ರಮ ಜರುಗಿಸಲು ಸಮಿತಿ ರಚಿಸಲಾಗಿದೆ ಎಂದು ತಿಳಿಸುವುದರ ಮೂಲಕ ಅಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ಒಪ್ಪಿಕೊಂಡಿದ್ದಾರೆ.
ಬ್ರಿಮ್ಸ್‌ನಲ್ಲಿರುವ ಅವ್ಯವಸ್ಥೆಗಳು ಒಂದೆರಡು ಅಲ್ಲ. ಅಲ್ಲಿನ ಹಿರಿಯ ವೈದ್ಯರು ಹೇಳುವ ಪ್ರಕಾರ, ಪ್ರತಿಯೊಂದು ವಿಭಾಗದಲ್ಲಿ ಖಾಸಗಿ ಆಸ್ಪತ್ರೆಗಳ ಏಜೆಂಟರು ಸದಾ ಓಡಾಡಿಕೊಂಡು ಇರುತ್ತಾರೆ. ರೋಗಿಗಳನ್ನು ಅವರ ಆಸ್ಪತ್ರೆಗಳಿಗೆ ಕರೆದೊಯ್ಯಲು ಪ್ರಯತ್ನ ನಡೆಸಿರುತ್ತಾರೆ. ಇದು ರಾಜಾರೋಷವಾಗಿ ನಡೆಯುತ್ತಿದ್ದರೂ ಅವರನ್ನು ಯಾರೂ ನಿಯಂತ್ರಿಸುವವರು ಇಲ್ಲದಂತಾಗಿದೆ.
ಬ್ರಿಮ್ಸ್ ಕಟ್ಟಡ ಹೊರಗಿನಿಂದ ನೋಡಿದರೆ ಥೇಟ್ ಮಾಲ್‌ನಂತೆ ಕಾಣುತ್ತದೆ. ಹೊರಗಿನಿಂದ ಕಟ್ಟಡ ನೋಡಿದವರು ಆಹಾ ಎಂತಹ ಆಸ್ಪತ್ರೆಗೆ ಎಂದು ಹುಬ್ಬೇರಿಸುತ್ತಾರೆ. ಆದರೆ, ಒಳಗೆ ಹೋದರೆ ಅಸ್ವಚ್ಛತೆ ಕಣ್ಣಿಗೆ ರಾಚುತ್ತದೆ. ಬಹುತೇಕ ವಿಭಾಗಗಳ ಶೌಚಾಲಯಗಳು ದುರ್ಗಂಧದಿಂದ ಕೂಡಿವೆ. ಅವುಗಳನ್ನು ಒಮ್ಮೆ ನೋಡಿದವರೂ ಪುನಃ ಬ್ರಿಮ್ಸ್ ಕಡೆ ಮುಖ ಮಾಡಲಾರರು. ಇಂತಹ ಪರಿಸ್ಥಿತಿ ಇದೆ.
ಇನ್ನು, ಇಲ್ಲಿ ಕೆಲಸ ನಿರ್ವಹಿಸುತ್ತಿರುವ ಹೆಚ್ಚಿನ ವೈದ್ಯರು ಖಾಸಗಿ ಕ್ಲಿನಿಕ್, ಆಸ್ಪತ್ರೆಗಳನ್ನು ನಡೆಸುತ್ತಾರೆ. ಸರ್ಕಾರಿ ಸಂಬಳ ಪಡೆದರೂ ಅವರಿಗೆ ಅವರ ಕ್ಲಿನಿಕ್ ಮೇಲೆ ಹೆಚ್ಚಿನ ಪ್ರೀತಿ. ಆದರೆ, ಬ್ರಿಮ್ಸ್‌ನಲ್ಲಿ ಸಮಯಕ್ಕೆ ಅನುಗುಣವಾಗಿ ‘ಪಂಚ್’ ಮಾಡುವುದು ಮರೆಯುವುದಿಲ್ಲ ಎಂಬ ಆರೋಪಗಳು ಅಲ್ಲಿನವರೇ ಮಾಡುತ್ತಾರೆ. ತುರ್ತು ಇದ್ದಾಗಷ್ಟೇ ಬ್ರಿಮ್ಸ್‌ಗೆ ಬರುತ್ತಾರೆ. ಹೆಚ್ಚಿನ ಸಮಯ ಖಾಸಗಿ ಕ್ಲಿನಿಕ್‌ಗಳಲ್ಲಿ ಇರುತ್ತಾರೆ.
ಬ್ರಿಮ್ಸ್ ಅವ್ಯವಸ್ಥೆ ಕುರಿತು ಸಾಕಷ್ಟು ದೂರುಗಳು ಸಲ್ಲಿಕೆಯಾಗುತ್ತಲೇ ಇವೆ. ಅಲ್ಲಿನ ಸೇವೆ ಕುರಿತು ಸ್ವತಃ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆಯವರೇ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿ, ಕ್ರಮದ ಎಚ್ಚರಿಕೆ ಕೊಟ್ಟಿದ್ದಾರೆ. ಆದರೆ, ಅದು ಬದಲಾಗಿಲ್ಲ.
₹5ರಿಂದ ₹6 ಕೋಟಿ ಬೆಲೆಬಾಳುವ ಎಂಆರ್‌ಐ ಮಶೀನ್‌ಗಳಿವೆ. ಆದರೆ, ತುರ್ತಾಗಿ ಕೊಡಲಾಗುವ ‘ಎಟ್ರೊಪಿನ್’ ಸೇರಿದಂತೆ ಕೆಲ ಅಗ್ಗದ ಇಂಜೆಕ್ಷನ್‌ಗಳಿಲ್ಲ ಎನ್ನುವುದು ವೈದ್ಯರ ದೂರು.
2005ರಲ್ಲಿ ಆರಂಭ:
ಜಿಲ್ಲಾ ಸರ್ಕಾರಿ ಆಸ್ಪತ್ರೆಯನ್ನು ವಿಲೀನಗೊಳಿಸಿ 2005ರಲ್ಲಿ ಬ್ರಿಮ್ಸ್ ಆರಂಭಿಸಲಾಯಿತು. ಹಿಂದುಳಿದ ಬೀದರ್ ಜಿಲ್ಲೆಯ ಜನರಿಗೆ ಉತ್ತಮ ಆರೋಗ್ಯ ಸೇವೆ ಕಲ್ಪಿಸಿಕೊಡಬೇಕು ಎನ್ನುವುದು ಇದರ ಉದ್ದೇಶವಾಗಿತ್ತು. ಆದರೆ, ಜನರ ನಿರೀಕ್ಷೆ ಹುಸಿಯಾಗಿದೆ. ಅಲ್ಲಿನ ಅವ್ಯವಸ್ಥೆಯಿಂದ ಜನ ಬ್ರಿಮ್ಸ್‌ಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಜಿಲ್ಲೆಯ ಪಾಲಿಗೆ ಬ್ರಿಮ್ಸ್ ಬಿಳಿ ಆನೆಯಾಗಿ ಮಾರ್ಪಟ್ಟಿದೆ. ಈಗಲೂ ಬಹುತೇಕರು ಚಿಕಿತ್ಸೆಗೆ ಹೈದರಾಬಾದ್, ಸೊಲ್ಲಾಪುರಕ್ಕೆ ಹೋಗುವುದು ನಿಂತಿಲ್ಲ.
ಇತ್ತೀಚೆಗೆ ಪಿ.ಜಿ ಕೋರ್ಸ್ ಆರಂಭಿಸಲು ಅನುಮತಿ ಸಿಕ್ಕಿದೆ. ‘ಕ್ಯಾಥ್‌ಲ್ಯಾಬ್’ ನಿರ್ಮಾಣ ಕಾರ್ಯ ಭರದಿಂದ ನಡೆಯುತ್ತಿದೆ. ಇಬ್ಬರು ಹೊಸ ಸೂಪರ್‌ಸ್ಪೆಷಾಲಿಸ್ಟ್‌ಗಳ ನೇಮಕಕ್ಕೆ ಒಪ್ಪಿಗೆ ಸಿಕ್ಕಿದೆ. ಈಗಾಗಲೇ 200 ವೈದ್ಯರು ಕೆಲಸ ನಿರ್ವಹಿಸುತ್ತಿದ್ದಾರೆ. ಹೆಚ್ಚಿನ ಬಜೆಟ್ ನೀಡಲಾಗುತ್ತಿದೆ. ಆದರೆ, ವೈದ್ಯಕೀಯ ಸೇವೆ ಮಾತ್ರ ಅಷ್ಟಕಷ್ಟೇ. ಆದ್ಯತೆ ಮೇಲೆ ಅದು ಬದಲಾಗಬೇಕೆನ್ನುವುದು ಜನರ ಹಕ್ಕೊತ್ತಾಯವಾಗಿದೆ.
ಪ್ರತ್ಯೇಕದ ಕೂಗು
ಬೀದರ್ ನಗರದಲ್ಲಿನ ಈ ಹಿಂದಿನ ಜಿಲ್ಲಾ ಸರ್ಕಾರಿ ಆಸ್ಪತ್ರೆಯನ್ನು ಬ್ರಿಮ್ಸ್‌ನಲ್ಲಿ ವಿಲೀನಗೊಳಿಸಲಾಗಿದೆ. ಸರ್ಕಾರಿ ಆಸ್ಪತ್ರೆಯ ಸಂಪೂರ್ಣ ನಿಯಂತ್ರಣ ಬ್ರಿಮ್ಸ್ ನಿರ್ದೇಶಕರಿಗೆ ವಹಿಸಲಾಗಿದೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗೆ ಇದರ ಮೇಲೆ ಯಾವುದೇ ರೀತಿಯ ನಿಯಂತ್ರಣ ಇಲ್ಲ. ಜಿಲ್ಲಾ ಆಸ್ಪತ್ರೆಯನ್ನು ಬ್ರಿಮ್ಸ್‌ನಿಂದ ಪ್ರತ್ಯೇಕ ಮಾಡಬೇಕೆಂಬ ಕೂಗು ಇದೆ. ಆದರೆ ಅದು ಅಷ್ಟು ಬಲ ಪಡೆದುಕೊಂಡಿಲ್ಲ. ವೈದ್ಯಕೀಯ ಕಾಲೇಜು ಆರಂಭಿಸುವಾಗ ಜಿಲ್ಲಾ ಆಸ್ಪತ್ರೆಯ 36 ವೈದ್ಯರನ್ನು ತೆಗೆದುಕೊಳ್ಳಲಾಗಿತ್ತು. ಇನ್ನೂ ಅದು ಹಾಗೆಯೇ ಮುಂದುವರೆದಿದೆ. ರಾಜ್ಯದ ಬೀದರ್ ಸೇರಿದಂತೆ ನಾಲ್ಕೈದು ಜಿಲ್ಲೆಗಳು ಬಿಟ್ಟರೆ ಬೇರೆ ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜು ಸರ್ಕಾರಿ ಆಸ್ಪತ್ರೆಗಳು ಪ್ರತ್ಯೇಕವಾಗಿ ನಡೆಯುತ್ತಿವೆ. ‘ಈ ಹಿಂದೆ ಜಿಲ್ಲಾ ಸರ್ಕಾರಿ ಆಸ್ಪತ್ರೆ ಉತ್ತಮವಾಗಿ ನಡೆಯುತ್ತಿತ್ತು. ಅದೀಗ ಬ್ರಿಮ್ಸ್‌ಗೆ ಸೇರಿದ ನಂತರ ಬಹಳ ಕೆಟ್ಟ ಹೆಸರು ಬಂದಿದೆ. ಬ್ರಿಮ್ಸ್‌ನಲ್ಲಿ ಪ್ರತಿಯೊಂದಕ್ಕೂ ಹಣ ಕೇಳಲಾಗುತ್ತಿದೆ ಎಂಬ ಆರೋಪಗಳಿವೆ. ಈ ಹಿಂದಿನಂತೆ ಜಿಲ್ಲಾ ಸರ್ಕಾರಿ ಆಸ್ಪತ್ರೆಯನ್ನು ಬೇರೆ ಮಾಡಬೇಕು. ಬ್ರಿಮ್ಸ್ ಅದರ ಪಾಡಿಗೆ ಅದು ನಡೆಯಬೇಕು. ಜಿಲ್ಲಾ ಆಸ್ಪತ್ರೆಯ ಜವಾಬ್ದಾರಿ ಡಿಎಚ್‌ಒ ಹಾಗೂ ಬ್ರಿಮ್ಸ್ ಹೊಣೆ ನಿರ್ದೇಶಕರಿಗೆ ವಹಿಸಿದರೆ ಅಧಿಕಾರ ವಿಕೇಂದ್ರೀಕರಣವಾಗಿ ಜನರಿಗೆ ಉತ್ತಮ ಸೇವೆ ಕೊಡಲು ಸಾಧ್ಯ’ ಎನ್ನುವುದು ಹಿರಿಯ ವೈದ್ಯರ ಅಭಿಪ್ರಾಯ.
ಎಲ್ಲೆಲ್ಲಿ ಏನೇನಿದೆ?
ಬೀದರ್ ನಗರದಲ್ಲಿ ಹಳೆಯ ಆಸ್ಪತ್ರೆ ಹಾಗೂ ಬ್ರಿಮ್ಸ್ ಒಳಗೊಂಡ ಜಿಲ್ಲಾ ಸರ್ಕಾರಿ ಆಸ್ಪತ್ರೆ ಇದೆ. ತಾಲ್ಲೂಕು ಕೇಂದ್ರಗಳಾದ ಹುಮನಾಬಾದ್ ಭಾಲ್ಕಿ ಬಸವಕಲ್ಯಾಣ ಹಾಗೂ ಔರಾದ್‌ನಲ್ಲಿ ತಲಾ ಒಂದು ಜನರಲ್ ಆಸ್ಪತ್ರೆಗಳಿವೆ. ಬೀದರ್ ಬಸವಕಲ್ಯಾಣದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಗಳಿವೆ. ಜಿಲ್ಲೆಯ ವಿವಿಧ ಭಾಗಗಳಲ್ಲಿ 23 ಪ್ರಾಥಮಿಕ ಆರೋಗ್ಯ ಕೇಂದ್ರಗಳು 8 ಸಮುದಾಯ ಆರೋಗ್ಯ ಕೇಂದ್ರಗಳಿವೆ. ಏಳು ಜನ ಹೆರಿಗೆ ವೈದ್ಯರ ಕೊರತೆ ಇದೆ ಎಂದು ಡಿಎಚ್‌ಒ ಕಚೇರಿ ತಿಳಿಸಿದೆ.
ಬ್ರಿಮ್ಸ್ ನಿರ್ದೇಶಕರು ಏನೆನ್ನುತ್ತಾರೆ?
‘ರೋಗಿಗಳಿಂದ ಹಣ ಪಡೆಯುತ್ತಾರೆ ಎಂಬ ದೂರುಗಳ ಮೇರೆಗೆ ಮೂವರು ನರ್ಸ್‌ಗಳ ಅಮಾನತಿಗೆ ಶಿಫಾರಸು ಮಾಡಲಾಗಿದೆ. ಜಿಲ್ಲಾ ಶಸ್ತ್ರ ಚಿಕಿತ್ಸಕ ಸೂಪರಿಟೆಂಡೆಂಟ್ ಅವರನ್ನು ಒಳಗೊಂಡ ಒಂದು ಸಮಿತಿ ರಚಿಸಲಾಗಿದ್ದು ಸಿಬ್ಬಂದಿ ವಿರುದ್ಧ ದೂರುಗಳು ಬಂದರೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ’ ಎಂದು ಬ್ರಿಮ್ಸ್ ನಿರ್ದೇಶಕ ಡಾ. ಶಿವಕುಮಾರ ಶೆಟಕಾರ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ಡಿಎಚ್‌ಒ ಏನು ಹೇಳುತ್ತಾರೆ?
‘ಜಿಲ್ಲಾ ಸರ್ಕಾರಿ ಆಸ್ಪತ್ರೆಯನ್ನು ಬ್ರಿಮ್ಸ್‌ಗೆ ವಹಿಸಲಾಗಿದೆ. ಅದರ ಮೇಲೆ ಸಂಪೂರ್ಣ ನಿಯಂತ್ರಣ ಬ್ರಿಮ್ಸ್ ನಿರ್ದೇಶಕರಿಗೆ ಇದೆ. ಅಲ್ಲಿ ನಾವೇನೂ ಮಾಡುವಂತಿಲ್ಲ. ನಮ್ಮ ವೈದ್ಯರು ಸಿಬ್ಬಂದಿಯನ್ನು ಅಲ್ಲಿಗೆ ವರ್ಗಾಯಿಸಲಾಗಿದೆ. ಸರ್ಕಾರಿ ಆಸ್ಪತ್ರೆಯ ಜವಾಬ್ದಾರಿ ವೈದ್ಯಕೀಯ ಇಲಾಖೆ ಬದಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ವಹಿಸಿದರೆ ಉತ್ತಮ. ಜಿಲ್ಲೆಯಲ್ಲಿ ಏಳು ಹೆರಿಗೆ ವೈದ್ಯರು ಬಿಟ್ಟರೆ ಎಲ್ಲ ಹುದ್ದೆಗಳು ತುಂಬಿವೆ’ ಎಂದು ಡಿಎಚ್‌ಒ ಡಾ. ಧ್ಯಾನೇಶ್ವರ ನೀರಗುಡಿ ತಿಳಿಸಿದ್ದಾರೆ.
ಬೀದರ್ ಜಿಲ್ಲೆ ಸರ್ಕಾರಿ ಆಸ್ಪತ್ರೆಗಳ ವಿವರ
01 ಜಿಲ್ಲಾ ಸರ್ಕಾರಿ ಆಸ್ಪತ್ರೆ 04 ಜನರಲ್ ಆಸ್ಪತ್ರೆಗಳು 02 ತಾಯಿ ಮತ್ತು ಮಕ್ಕಳ ಆಸ್ಪತ್ರೆಗಳು 23 ಪ್ರಾಥಮಿಕ ಆರೋಗ್ಯ ಕೇಂದ್ರಗಳು 08 ಸಮುದಾಯ ಆರೋಗ್ಯ ಕೇಂದ್ರಗಳು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.