ADVERTISEMENT

ಬ್ರಿಮ್ಸ್‌ನಲ್ಲಿ ವಿದ್ಯುತ್‌ ವ್ಯತ್ಯಯ: ತನಿಖೆಗೆ ಸಚಿವ ಈಶ್ವರ ಖಂಡ್ರೆ ಸೂಚನೆ

​ಪ್ರಜಾವಾಣಿ ವಾರ್ತೆ
Published 18 ಜುಲೈ 2025, 10:38 IST
Last Updated 18 ಜುಲೈ 2025, 10:38 IST
<div class="paragraphs"><p>ಆಸ್ಪತ್ರೆಗೆ ಭೇಟಿ ನೀಡಿದ ಸಚಿವ ಈಶ್ವರ ಖಂಡ್ರೆ</p></div>

ಆಸ್ಪತ್ರೆಗೆ ಭೇಟಿ ನೀಡಿದ ಸಚಿವ ಈಶ್ವರ ಖಂಡ್ರೆ

   

– ಪಿಟಿಐ ಚಿತ್ರ

ಬೀದರ್‌: ಇಲ್ಲಿನ ಬೀದರ್‌ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ಬ್ರಿಮ್ಸ್‌) ಇತ್ತೀಚೆಗೆ ವಿದ್ಯುತ್‌ ವ್ಯತ್ಯಯದಿಂದ ರೋಗಿಗಳಿಗೆ ಆಗಿರುವ ತೊಂದರೆಗೆ ಸಂಬಂಧಿಸಿದಂತೆ ತನಿಖೆ ನಡೆಸಿ 48 ಗಂಟೆಯೊಳಗೆ ವರದಿ ಸಲ್ಲಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಅವರು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರಿಗೆ ಸೂಚನೆ ನೀಡಿದ್ದಾರೆ.

ADVERTISEMENT

ಬ್ರಿಮ್ಸ್‌ನಲ್ಲಿ ಇತ್ತೀಚೆಗೆ ವಿದ್ಯುತ್‌ ಸಮಸ್ಯೆ ಉಂಟಾಗಿ ರೋಗಿಗಳಿಗೆ ತೊಂದರೆ ಉಂಟಾಗಿತ್ತು. ಇದರ ವಿರುದ್ಧ ಜಿಲ್ಲಾ ಬಿಜೆಪಿ ‘ಕ್ಯಾಂಡಲ್‌ ಮಾರ್ಚ್‌’ ನಡೆಸಿ ಪ್ರತಿಭಟನೆ ನಡೆಸಿತು. ಇದರ ಬೆನ್ನಲ್ಲೇ ಸಚಿವರಾದ ಈಶ್ವರ ಬಿ. ಖಂಡ್ರೆ ಹಾಗೂ ರಹೀಂ ಖಾನ್‌ ಅವರು ಶುಕ್ರವಾರ ಬ್ರಿಮ್ಸ್‌ಗೆ ಭೇಟಿ ನೀಡಿ ಪರಿಶೀಲಿಸಿದರು. ಅಧಿಕಾರಿಗಳಿಂದ ಮಾಹಿತಿ ಪಡೆದರು.

ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಈಶ್ವರ ಬಿ. ಖಂಡ್ರೆ, 45 ನಿಮಿಷಗಳ ಕಾಲ ವಿದ್ಯುತ್‌ ಕಡಿತ ಉಂಟಾಗಿತ್ತು ಎಂದು ಆಸ್ಪತ್ರೆಯವರು ಹೇಳಿದ್ದಾರೆ. ಆದರೆ, ಜಿಲ್ಲಾಮಟ್ಟದ ಆಸ್ಪತ್ರೆಯಲ್ಲಿ ವಿದ್ಯುತ್‌ ಕಡಿತಕ್ಕೆ ಕಾರಣವೇನು? ಆಸ್ಪತ್ರೆಯಲ್ಲಿ ಸದಾ ವಿದ್ಯುತ್‌ ವ್ಯವಸ್ಥೆ ಇರಬೇಕು. ಈಗಾಗಲೇ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಲು ಸೂಚಿಸಿದ್ದು, ವರದಿ ಆಧರಿಸಿ ಕ್ರಮ ಜರುಗಿಸಲಾಗುವುದು. ಬ್ರಿಮ್ಸ್‌ನಲ್ಲಿ ಏನೇನು ನ್ಯೂನತೆ, ಕೊರತೆಗಳಿವೆಯೋ ಅದನ್ನು ಪರಿಶೀಲಿಸಿ, ಸರಿಪಡಿಸುವ ಕೆಲಸ ಮಾಡಲಾಗುವುದು ಎಂದು ಹೇಳಿದರು.

ಬೀದರ್‌ ಜಿಲ್ಲೆಯ ಜನರಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆ ಸಿಗಬೇಕು. ಯಾರಿಗೂ ತೊಂದರೆ ಆಗಬಾರದು. ವಿಷಯ ಗೊತ್ತಾದ ನಂತರ ನಾನು ಎಲ್ಲ ವಾರ್ಡ್‌ಗಳಿಗೆ ಭೇಟಿ ಕೊಟ್ಟು ರೋಗಿಗಳ ಜೊತೆಗೆ ಸಮಾಲೋಚನೆ ನಡೆಸಿದ್ದೇನೆ. ಸ್ವಚ್ಛತೆ ಕಾಪಾಡಬೇಕು. ಗುಣಮಟ್ಟದ ಆಹಾರ ಹಾಗೂ ಔಷಧ ಕೊಡಬೇಕು ಎಂದು ಸೂಚಿಸಿದ್ದೇನೆ ಎಂದರು.

ಕ್ಯಾಥ್‌ಲ್ಯಾಬ್‌ ಕೆಲಸ ಈಗಾಗಲೇ ಮುಗಿದಿದೆ. ಆದರೆ, ಕಾರ್ಡಿಯೊಲಜಿಸ್ಟ್‌ ಮತ್ತು ಅಗತ್ಯ ತಂತ್ರಜ್ಞರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದರೂ ಯಾರೊಬ್ಬರು ಮುಂದೆ ಬಂದಿಲ್ಲ. ಈ ಕುರಿತು ಸಂಪುಟ ಸಭೆಯಲ್ಲಿ ಚರ್ಚಿಸಲಾಗಿದೆ. ಒಂದು ವಾರದೊಳಗೆ ನೇಮಕಕ್ಕೆ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.

ನಗರಸಭೆ ಅಧ್ಯಕ್ಷ ಮುಹಮ್ಮದ್‌ ಗೌಸ್‌, ಬ್ರಿಮ್ಸ್ ನಿರ್ದೇಶಕ ಡಾ. ಶಿವಕುಮಾರ ಶೆಟಕಾರ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.