ADVERTISEMENT

ರಸ್ತೆ ಅಗಲೀಕರಣ ನೆಪದಲ್ಲಿ ದಲಿತರ ಭೂಮಿ ಬಳಕೆ: ಆರೋಪ

​ಪ್ರಜಾವಾಣಿ ವಾರ್ತೆ
Published 8 ಜನವರಿ 2026, 5:59 IST
Last Updated 8 ಜನವರಿ 2026, 5:59 IST
ಹುಲಸೂರ ಪಟ್ಟಣದ ಬುದ್ಧವಿಹಾರದಿಂದ ಭಾಲ್ಕಿ–ನೀಲಂಗಾ ರಸ್ತೆಯವರೆಗೆ ರಸ್ತೆ ಅಗಲೀಕರಣ ಕಾಮಗಾರಿಯಲ್ಲಿ ದಲಿತರ ಭೂಮಿ ಬಳಸಲಾಗುತ್ತಿದೆ ಎಂದು ಆರೋಪಿಸಿ ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ಮುಖಂಡರು ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದರು
ಹುಲಸೂರ ಪಟ್ಟಣದ ಬುದ್ಧವಿಹಾರದಿಂದ ಭಾಲ್ಕಿ–ನೀಲಂಗಾ ರಸ್ತೆಯವರೆಗೆ ರಸ್ತೆ ಅಗಲೀಕರಣ ಕಾಮಗಾರಿಯಲ್ಲಿ ದಲಿತರ ಭೂಮಿ ಬಳಸಲಾಗುತ್ತಿದೆ ಎಂದು ಆರೋಪಿಸಿ ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ಮುಖಂಡರು ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದರು   

ಹುಲಸೂರ: ಪಟ್ಟಣದ ಬುದ್ಧವಿಹಾರದಿಂದ ಭಾಲ್ಕಿ–ನೀಲಂಗಾ ಮುಖ್ಯ ರಸ್ತೆಯವರೆಗೆ ನಡೆಯುತ್ತಿರುವ ರಸ್ತೆ ಅಗಲೀಕರಣ ಕಾಮಗಾರಿ ವೇಳೆ, ದಲಿತ ಸಮುದಾಯಕ್ಕೆ ಮಂಜೂರಾದ ಭೂಮಿಯನ್ನು ಯಾವುದೇ ನೋಟಿಸ್ ನೀಡದೇ ಬಳಸಲಾಗುತ್ತಿದೆ ಎಂದು ಆರೋಪಿಸಿ ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

‘ಪಟ್ಟಣದ ಇನಾಮಿ ಭೂಮಿ ಸರ್ವೆ ನಂ.1ರಲ್ಲಿ ಒಟ್ಟು 18 ಎಕರೆ 12 ಗುಂಟೆ ಭೂಮಿ ದಲಿತರಿಗೆ ಸರ್ಕಾರ ಮಂಜೂರು ಮಾಡಿದೆ. ಈ ಭೂಮಿಯಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ನಡೆಸಲಾಗುತ್ತಿದೆ ಎಂದು ದೂರಿದರು. ಇತರೆ ಸಮುದಾಯಗಳ ಭೂಮಿಯನ್ನು ಬಿಟ್ಟು, ಉದ್ದೇಶಪೂರ್ವಕವಾಗಿ ದಲಿತರ ಭೂಮಿಗೆ ತೊಂದರೆ ನೀಡಲಾಗುತ್ತಿದೆ’ ಎಂದು ಆರೋಪಿಸಿದರು.

‘ಕಾಮಗಾರಿ ಆರಂಭಿಸುವ ಮೊದಲು ಭೂಮಿ ಮಾಲೀಕರಿಗೆ ಯಾವುದೇ ನೋಟಿಸ್ ನೀಡಿಲ್ಲ. ಅಲ್ಲದೆ ಭೂಮಿ ಸ್ವಾಧೀನಕ್ಕೆ ಸಂಬಂಧಿಸಿದಂತೆ ಸರ್ವೆ, ದಾಖಲೆ ಪರಿಶೀಲನೆ ಹಾಗೂ ಪರಿಹಾರ ಪ್ರಕ್ರಿಯೆ ಕೈಗೊಳ್ಳದೆ ನೇರವಾಗಿ ಕಾಮಗಾರಿ ನಡೆಸಲಾಗುತ್ತಿದೆ’ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ADVERTISEMENT

ತಕ್ಷಣ ಸ್ಥಳ ಪರಿಶೀಲನೆ ನಡೆಸಿ, ಮರುಸರ್ವೆ ಮಾಡಬೇಕು. ರಸ್ತೆ ಅಗಲೀಕರಣದಿಂದ ಭೂಮಿ ಕಳೆದುಕೊಂಡ ದಲಿತ ಕುಟುಂಬಗಳನ್ನು ಗುರುತಿಸಿ, ನ್ಯಾಯಯುತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಸತ್ಯದೀಪ ಹಾವನೂರ, ರಾಜ್ಯ ಉಪಾಧ್ಯಕ್ಷ ದತ್ತು ಸೂರ್ಯವಂಶಿ, ಜಿಲ್ಲಾ ಅಧ್ಯಕ್ಷ ಯೋಹಾನ ಡಿಸೋಜಾ ಚಿಲ್ಲರ್ಗಿ, ಬಸವಕಲ್ಯಾಣ ತಾಲ್ಲೂಕು ಅಧ್ಯಕ್ಷ ಸಂತೋಷ ಮೇಕ್ಷಮ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಉಮೇಶ್ ಗುತ್ತೆದಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.