ADVERTISEMENT

ಬೌದ್ಧ ಸಾಹಿತ್ಯ ಪ್ರಜಾಪ್ರಭುತ್ವದ ಬೆಳಕು

ಬೌದ್ಧ ಸಾಹಿತ್ಯ ಉಪನ್ಯಾಸ ಮಾಲಿಕೆ ಕಾರ್ಯಕ್ರಮ: ಸುಬ್ಬಣ್ಣ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2018, 19:59 IST
Last Updated 21 ನವೆಂಬರ್ 2018, 19:59 IST
ಬೀದರ್‌ನಲ್ಲಿ ಬುಧವಾರ ಆಯೋಜಿಸಿದ್ದ ಬೌದ್ಧ ಸಾಹಿತ್ಯ ಉಪನ್ಯಾಸ ಮಾಲಿಕೆ ಕಾರ್ಯಕ್ರಮದಲ್ಲಿ ಅಖಿಲ ಭಾರತ ಬೌದ್ಧ ಸಾಹಿತ್ಯ ಪರಿಷತ್ತಿನ ರಾಜ್ಯ ಘಟಕದ ಅಧ್ಯಕ್ಷ ಎಸ್.ಎಂ. ಜನವಾಡಕರ್ ಮಾತನಾಡಿದರು. ಉಮೇಶ ಅಷ್ಟಗಿ, ಶ್ರೀದೇವಿ ಹೂಗಾರ, ಪ್ರೇಮಸಾಗರ ದಾಂಡೇಕರ್, ಪಾಂಡುರಂಗ ಬೆಲ್ದಾರ್ ಇದ್ದರು
ಬೀದರ್‌ನಲ್ಲಿ ಬುಧವಾರ ಆಯೋಜಿಸಿದ್ದ ಬೌದ್ಧ ಸಾಹಿತ್ಯ ಉಪನ್ಯಾಸ ಮಾಲಿಕೆ ಕಾರ್ಯಕ್ರಮದಲ್ಲಿ ಅಖಿಲ ಭಾರತ ಬೌದ್ಧ ಸಾಹಿತ್ಯ ಪರಿಷತ್ತಿನ ರಾಜ್ಯ ಘಟಕದ ಅಧ್ಯಕ್ಷ ಎಸ್.ಎಂ. ಜನವಾಡಕರ್ ಮಾತನಾಡಿದರು. ಉಮೇಶ ಅಷ್ಟಗಿ, ಶ್ರೀದೇವಿ ಹೂಗಾರ, ಪ್ರೇಮಸಾಗರ ದಾಂಡೇಕರ್, ಪಾಂಡುರಂಗ ಬೆಲ್ದಾರ್ ಇದ್ದರು   

ಬೀದರ್: ‘ಬೌದ್ಧ ಧರ್ಮ ಹಾಗೂ ಸಾಹಿತ್ಯ ಪ್ರಜಾಪ್ರಭುತ್ವದ ಬೆಳಕಾಗಿವೆ’ ಎಂದು ಸಾಹಿತಿ ಸುಬ್ಬಣ್ಣ ಕರಕನಳ್ಳಿ ಅಭಿಪ್ರಾಯಪಟ್ಟರು.

ನಗರದ ನರೇಂದ್ರ ಪದವಿಪೂರ್ವ ಕಾಲೇಜಿನಲ್ಲಿ ಬುಧವಾರ ನಡೆದ ಬೌದ್ಧ ಸಾಹಿತ್ಯ ಉಪನ್ಯಾಸ ಮಾಲಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಬೌದ್ಧ ಧರ್ಮ ಜಗತ್ತಿನ ಎಲ್ಲ ಧರ್ಮಗಳಿಗಿಂತಲೂ ಶ್ರೇಷ್ಠ ಧರ್ಮವಾಗಿದೆ’ ಎಂದು ಹೇಳಿದರು.
‘ಜಗತ್ತಿನ ಚರಿತ್ರೆ ಬೇರೇನೂ ಅಲ್ಲ, ಅದು ಬುದ್ಧನ ಚರಿತ್ರೆಯೇ ಆಗಿದೆ ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದಾರೆ’ ಎಂದು ತಿಳಿಸಿದರು.

‘ಅಹಿಂಸೆ, ದಯೆ, ಪ್ರೀತಿ, ಶಾಂತಿಯ ತತ್ವಗಳನ್ನು ಒಳಗೊಂಡಿರುವ ಬೌದ್ಧ ಧರ್ಮ ಎಲ್ಲರಿಗೂ ದಾರಿದೀಪವಾಗಿದೆ’ ಎಂದು ಉದ್ಘಾಟನೆ ಮಾಡಿದ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಪ್ರೇಮಸಾಗರ ದಾಂಡೇಕರ್ ಹೇಳಿದರು.

ADVERTISEMENT

‘ಬೌದ್ಧ ಧರ್ಮ, ಸಾಹಿತ್ಯ ಹಾಗೂ ಸಂಸ್ಕೃತಿಯ ಪರಿಚಯ ಮಾಡಿಕೊಡುವುದು ಪ್ರತಿಯೊಬ್ಬ ಅಂಬೇಡ್ಕರ್ ಅನುಯಾಯಿಯ ಜವಾಬ್ದಾರಿಯಾಗಿದೆ’ ಎಂದು ಅಧ್ಯಕ್ಷತೆ ವಹಿಸಿದ್ದ ಅಖಿಲ ಭಾರತ ಬೌದ್ಧ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಪಾಂಡುರಂಗ ಬೆಲ್ದಾರ್ ನುಡಿದರು.

‘ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎನ್ನುವ ತತ್ವವನ್ನು ಎಲ್ಲರೂ ಪಾಲಿಸಬೇಕು’ ಎಂದು ಕಾಲೇಜು ಅಧ್ಯಕ್ಷ ಉಮೇಶ ಅಷ್ಟಗಿ ಹೇಳಿದರು.

ಸಾಹಿತಿ ಶ್ರೀದೇವಿ ಹೂಗಾರ ಗೌತಮ ಬುದ್ಧರ ಜೀವನ ಹಾಗೂ ಅಖಿಲ ಭಾರತ ಬೌದ್ಧ ಸಾಹಿತ್ಯ ಪರಿಷತ್ತಿನ ರಾಜ್ಯ ಘಟಕದ ಅಧ್ಯಕ್ಷ ಎಸ್.ಎಂ. ಜನವಾಡಕರ್ ಬೌದ್ಧ ಧರ್ಮದ ಮೇಲೆ ಬೆಳಕು ಚೆಲ್ಲಿದರು.

ಜಿಲ್ಲಾ ಆಡಳಿತದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಎಂ.ಪಿ. ಮುದಾಳೆ, ಆರ್.ವಿ. ಶಿಂಧೆ, ಅಜೀತ್ ಎನ್., ದಿಲೀಪ್‌ ಮೋಘಾ, ಸಂಜುಕುಮಾರ ಮೇಟಿ, ಅರವಿಂದ ಭಾವಿಕಟ್ಟಿ, ಗೋವಿಂದ ಪೂಜಾರಿ, ಬುದ್ಧಾದೇವ ಸಂಗಮ, ಅನಿಲಕುಮಾರ ಚಾಂದಪುರೆ ಅವರನ್ನು ಸನ್ಮಾನಿಸಲಾಯಿತು.

ಸುನೀಲಕುಮಾರ ಗಾಯಕವಾಡ ಸ್ವಾಗತಿಸಿದರು. ಕಿಶೋರಕುಮಾರ ಮೇಟಿ ನಿರೂಪಿಸಿದರು. ಬಾಬುರಾವ್ ಮಾಳಗೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.