ADVERTISEMENT

ಬೀದರ್: ಶ್ರದ್ಧಾ ಭಕ್ತಿಯ ಬುದ್ಧ ಪೂರ್ಣಿಮೆ ಆಚರಣೆ

​ಪ್ರಜಾವಾಣಿ ವಾರ್ತೆ
Published 26 ಮೇ 2021, 14:54 IST
Last Updated 26 ಮೇ 2021, 14:54 IST
ಬೀದರ್‌ ಸಿಎಂಸಿ ಕಾಲೊನಿಯ ಸಿದ್ಧಾರ್ಥ ಉದ್ಯಾನದಲ್ಲಿ ನಡೆದ ಬುದ್ಧ ಪೂರ್ಣಿಮೆ ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯ ಶಿವಕುಮಾರ ಭಾವಿಕಟ್ಟಿ ಅವರು ಗೌತಮ ಬುದ್ಧರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು
ಬೀದರ್‌ ಸಿಎಂಸಿ ಕಾಲೊನಿಯ ಸಿದ್ಧಾರ್ಥ ಉದ್ಯಾನದಲ್ಲಿ ನಡೆದ ಬುದ್ಧ ಪೂರ್ಣಿಮೆ ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯ ಶಿವಕುಮಾರ ಭಾವಿಕಟ್ಟಿ ಅವರು ಗೌತಮ ಬುದ್ಧರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು   

ಬೀದರ್: ಬುದ್ಧ ಪೂರ್ಣಿಮೆಯನ್ನು ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಬುಧವಾರ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.

ಮೈಲೂರು: ನಗರದ ಸಿಎಂಸಿ ಕಾಲೊನಿಯ ಮೈಲೂರಿನಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಸೇವಾ ಸಮಿತಿ ವತಿಯಿಂದ ನಡೆದ ಬುದ್ಧ ಪೂರ್ಣಿಮೆ ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯ ಶಿವಕುಮಾರ ಭಾವಿಕಟ್ಟಿ ಹಾಗೂ ಸಮಿತಿಯ ಅಧ್ಯಕ್ಷ ವಿಠ್ಠಲರಾವ್ ಮನ್ನಾಎಖ್ಖೆಳ್ಳಿಕರ್ ಪಂಚಶೀಲ ಧ್ವಜಾರೋಹಣ ಮಾಡಿದರು.

ವಿಶ್ವ ಕನ್ನಡಿಗರ ಸಂಸ್ಥೆ ಕರ್ನಾಟಕದ ರಾಜ್ಯ ಘಟಕದ ಅಧ್ಯಕ್ಷ ಸುಬ್ಬಣ್ಣ ಕರಕನಳ್ಳಿ ತ್ರಿಶರಣ ಪಂಚಶೀಲ ಅಷ್ಟಾಂಗ ಮಾರ್ಗ ಕುರಿತು ಮಾತನಾಡಿದರು.

ADVERTISEMENT

‘ನೀಲಿ ಬಣ್ಣ ಸಮಾನತೆ, ವ್ಯಾಪಕತೆ, ಹಳದಿ ಬಣ್ಣ ಪವಿತ್ರತೆ, ಕರುಣೆ, ಕೆಂಪು ಬಣ್ಣ ಕ್ರಿಯಾಶೀಲತೆ, ದೃಢ ಸಂಕಲ್ಪ, ಬಿಳಿ ಬಣ್ಣ ಶಾಂತಿ, ಶುದ್ಧತೆ, ಕೇಸರಿ ಬಣ್ಣ ತ್ಯಾಗ, ಸೇವೆ, ಭಕ್ತಿಯ ಪ್ರತೀಕವಾಗಿದೆ’ ಎಂದು ತಿಳಿಸಿದರು.

‘ಸಿಟ್ಟನ್ನು ತಾಳ್ಮೆ, ದುಷ್ಟತೆಯನ್ನು ಒಳ್ಳೆತನ, ಜಿಪುಣತೆಯನ್ನು ದಾನ, ಅಸತ್ಯವನ್ನು ಸತ್ಯದಿಂದ ಜಯಿಸಬೇಕು. ಅಂದಾಗ ಮಾತ್ರ ಸಮಾಜದಲ್ಲಿ ಶಾಂತಿ, ಸಮಾನತೆ ಹಾಗೂ ಪ್ರೇಮದಿಂದ ಬಾಳ್ವೆ ನಡೆಸಲು ಸಾಧ್ಯವಿದೆ’ ಹೇಳಿದರು.

ಸಮಿತಿಯ ಉಪಾಧ್ಯಕ್ಷರಾದ ಲಕ್ಷ್ಮಣ ಕಾಂಚೆ, ಸಂಜುಕುಮಾರ ಸಿಂಧೆ, ಸಂಘಟನಾ ಕಾರ್ಯದರ್ಶಿಗಳಾದ ಜೈಭೀಮ ಚಿಮ್ಮನಾಯ್ಕ, ಅರುಣ ಪಟೇಲ್, ಜಗನ್ನಾಥ ಬಡಿಗೇರ, ಕಾಶೀನಾಥ ಬಡಿಗೇರ, ಧೂಳಪ್ಪ ಸಾತೋಳಿಕರ್, ನಾಗಪ್ಪ ಕೇಳುಸ್ಕರ, ಶಂಕರರಾವ್ ಕರಕನಳ್ಳಿ, ಕಮಲಾಕರ ಭಾವಿದೊಡ್ಡಿ, ಕಾಶೀನಾಥ ಭಾಸನ, ಸುಧಾಕರ, ಅಮರ ಪೂಜಾರಿ ಇದ್ದರು.

ಅಂಬಿಗರ ಚೌಡಯ್ಯ ಸೇನೆ ಕಚೇರಿ: ನಗರದ ಅಂಬಿಗರ ಚೌಡಯ್ಯ ಸೇನೆ ಕೇಂದ್ರ ಕಚೇರಿಯಲ್ಲಿ ಬುದ್ಧ ಪೂರ್ಣಿಮೆ ಪ್ರಯುಕ್ತ ಗೌತಮ ಬುದ್ಧರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.

‘ಗೌತಮ ಬುದ್ಧರ ಶಾಂತಿ ಸಂದೇಶಗಳು ವಿಶ್ವಕ್ಕೆ ಮಾದರಿಯಾಗಿವೆ’ ಎಂದು ಕರ್ನಾಟಕ ರಾಜ್ಯ ಕಲಾವಿದರ ಒಕ್ಕೂಟದ ಜಿಲ್ಲಾ ಸಂಚಾಲಕ ವಿಜಯಕುಮಾರ ಸೋನಾರೆ ಹೇಳಿದರು.

‘ಬುದ್ಧ ಜನಪರ, ಜೀವಪರ ಕಾಳಜಿ ಹೊಂದಿದ್ದರು. ರಾಜ ಮನೆತನದಲ್ಲಿ ಜನಿಸಿದರೂ ಸಾಮಾನ್ಯ ಮನುಷ್ಯನಂತೆ ಬದುಕಿದ್ದರು’ ಎಂದು ತಿಳಿಸಿದರು.

ಅಂಬಿಗರ ಚೌಡಯ್ಯ ಯುವ ಸೇನೆಯ ಸಂಸ್ಥಾಪಕ ಅಧ್ಯಕ್ಷ ಸುನೀಲ್ ಭಾವಿಕಟ್ಟಿ, ಎಂ.ಪಿ. ಮುದಾಳೆ, ಅವಿನಾಶ, ಅಯಾಸಪುರೆ, ರವೀಂದ್ರ ಕಾಂಬಳೆ ಇದ್ದರು.

ಸಿದ್ಧಾರ್ಥ ಉದ್ಯಾನ: ನಗರದ ಸಿಎಂಸಿ ಕಾಲೊನಿಯ ಸಿದ್ಧಾರ್ಥ ಉದ್ಯಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯ ಶಿವಕುಮಾರ ಭಾವಿಕಟ್ಟಿ ಅವರು ಗೌತಮ ಬುದ್ಧರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.

ಮಲ್ಲಿಕಾರ್ಜುನ ನೇಳಗೆ, ಶ್ರೀಮಂತ ಸೂರ್ಯವಂಶಿ, ಅಂಬಾದಾಸ, ನವನಾಥ ವಂಟೆ, ಗೌತಮ ಚಿಮ್ಮನಾಯಕ, ಅರುಣ ಪಟೇಲ್, ಸಂಜು ಮೇತ್ರೆ, ವಿಜಯಕುಮಾರ ಭಾವಿಕಟ್ಟಿ, ಜೈಭೀಮ ಚಿಮ್ಮನಾಯಕ ಇದ್ದರು.

ಆಹಾರ ಪೊಟ್ಟಣ ವಿತರಣೆ
ಬೌದ್ಧ ಪೂರ್ಣಿಮೆಯ ಪ್ರಯುಕ್ತ ಬೀದರ್ ನಗರದಲ್ಲಿ ಬೋಧಿವೃಕ್ಷ - ಸಮಾಜಕ್ಕೆ ಮರಳಿ ಕೊಡಿ ಸಂಘದ ಸದಸ್ಯರು ನಿರ್ಗತಿಕರಿಗೆ ಆಹಾರ ಪೊಟ್ಟಣ ಹಾಗೂ ನೀರಿನ ಬಾಟಲ್‌ ವಿತರಿಸಿದರು.

ಭಂತೆ ಧಮ್ಮಾನಂದ ಚಾಲನೆ ನೀಡಿದರು. ಸಂಘದ ಅಧ್ಯಕ್ಷ ಪ್ರಸನ್ನ ಡಾಂಗೆ, ಸುರೇಶ ಮೇತ್ರೆ, ಸಂತೋಷ ಬೋರೆ, ಪ್ರೇಮ್, ಶಿವಕುಮಾರ ಇದ್ದರು.

ಕೋವಿಡ್‍ನಿಂದ ರಕ್ಷಣೆಗೆ ಲಸಿಕೆ ಪಡೆಯಿರಿ: ನಾಗಮಾರಪಳ್ಳಿ
ಜನವಾಡ:
‘ಕೋವಿಡ್‍ನಿಂದ ರಕ್ಷಣೆಗೆ ಅರ್ಹ ಪ್ರತಿಯೊಬ್ಬರೂ ಲಸಿಕೆ ಪಡೆಯಬೇಕು’ ಎಂದು ಗುರುಪಾದಪ್ಪ ನಾಗಮಾರಪಳ್ಳಿ ಮಲ್ಟಿ ಸೂಪರ್ ಸ್ಪೇಷಾಲಿಟಿ ಸಹಕಾರ ಆಸ್ಪತ್ರೆಯ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ ಹೇಳಿದರು.

ಬೀದರ್ ತಾಲ್ಲೂಕಿನ ಆಣದೂರು ಗ್ರಾಮದ ಧಮ್ಮ ದರ್ಶನ ಬುದ್ಧ ವಿಹಾರದಲ್ಲಿ ಬುದ್ಧ ಪೂರ್ಣಿಮೆ ಹಾಗೂ ಬುದ್ಧ ಬೆಳಕು ಸಾಮಾಜಿಕ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಟ್ರಸ್ಟ್ ಉದ್ಘಾಟನಾ ಸಮಾರಂಭದ ಪ್ರಯುಕ್ತ ನಡೆದ ಮಾಸ್ಕ್ ವಿತರಣೆ ಹಾಗೂ ಕೋವಿಡ್ ಲಸಿಕೆ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕೋವಿಡ್ ಬರದಂತೆ ತಡೆಯಲು ಸುರಕ್ಷತಾ ನಿಯಮಗಳನ್ನು ಚಾಚೂತಪ್ಪದೇ ಪಾಲಿಸಬೇಕು’ ಎಂದು ತಿಳಿಸಿದರು.

‘ಬೀದರ್‌ನಲ್ಲಿ ಗುರುಪಾದಪ್ಪ ನಾಗಮಾರಪಳ್ಳಿ ಆಸ್ಪತ್ರೆ ಹಾಗೂ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಕೋವಿಡ್ ಕೇರ್ ಸೆಂಟರ್ ಆರಂಭಿಸಿದ್ದು, ಸೋಂಕಿತರಿಗೆ ಕೇವಲ ₹1 ರಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ಹೇಳಿದರು.

‘ಕೋವಿಡ್ ಲಸಿಕೆ ಸಂಪೂರ್ಣ ಸುರಕ್ಷಿತವಾಗಿದೆ. ಆದರೂ, ಸುಶಿಕ್ಷಿತರು ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿರುವುದು ಕಳವಳಕಾರಿಯಾಗಿದೆ’ ಎಂದು ಕಾರ್ಯಕ್ರಮ ಉದ್ಘಾಟಿಸಿದ ಶಾಹೀನ್ ಶಿಕ್ಷಣ ಸಮೂಹ ಸಂಸ್ಥೆಯ ಅಧ್ಯಕ್ಷ ಅಬ್ದುಲ್ ಖದೀರ್ ಹೇಳಿದರು.

‘ಕೋವಿಡ್ ನಿಯಂತ್ರಣಕ್ಕೆ ಎಲ್ಲರೂ ಮಾಸ್ಕ್ ಧರಿಸಬೇಕು. ಸುರಕ್ಷಿತ ಅಂತರ ಕಾಪಾಡಬೇಕು. ಸ್ಯಾನಿಟೈಸರ್ ಬಳಸಬೇಕು’ ಎಂದು ತಿಳಿಸಿದರು.

ಭಂತೆ ಜ್ಞಾನಸಾಗರ ಸಾನಿಧ್ಯ ವಹಿಸಿದ್ದರು. ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಮಾರುತಿ ಬೌದ್ಧೆ, ಬೀದರ್ ಗ್ರಾಮೀಣ ಸಿಪಿಐ ಶ್ರೀಕಾಂತ ಅಲ್ಲಾಪುರ, ಮುಖಂಡ ಫರ್ನಾಂಡೀಸ್ ಹಿಪ್ಪಳಗಾಂವ್ ಮಾತನಾಡಿದರು. ಭಾರತೀಯ ಬೌದ್ಧ ಧಮ್ಮ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಶಿವರಾಜ ಕುದರೆ ಅಧ್ಯಕ್ಷತೆ ವಹಿಸಿದ್ದರು.

ಬುದ್ಧ ಬೆಳಕು ಸಾಮಾಜಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ಅಧ್ಯಕ್ಷ ಮಹೇಶ ಗೋರನಾಳಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಪವನ ಮಿಠಾರೆ, ಹಣಮಂತ ಬುಳ್ಳಾ, ಕಲ್ಯಾಣರಾವ್ ಬಿರಾದಾರ, ಕಮಲ ಹುಡುಗೆ, ರಾಜಕುಮಾರ ಗೈಬಾ, ಮಲ್ಲಿಕಾರ್ಜುನ ಮೋಳಕೆರೆ, ಆಕಾಶ ತಿರ್ಮುಕೆ, ರಾಜುಕುಮಾರ ದೊಡ್ಡಿ, ಅವಿನಾಶ ಖಾನಾಪುರ ಇದ್ದರು.

ಮಚ್ಚೇಂದ್ರ ನಿರೂಪಿಸಿದರು. ರಾಜಕುಮಾರ ಕರುಣಾಸಾಗರ ಸ್ವಾಗತಿಸಿದರು. ಬಾಬು ಆಣದೂರೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.