ADVERTISEMENT

ಬೀದರ್‌: ಬೌದ್ದರ ಧಾರ್ಮಿಕ ಹಕ್ಕಿಗೆ ಪ್ರತಿಭಟನೆ

ಬುದ್ಧ ಗಯಾ ಆಡಳಿತ ಸಂಪೂರ್ಣ ಬೌದ್ಧರಿಗೆ ವಹಿಸಬೇಕೆಂದು ಆಗ್ರಹ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2024, 9:14 IST
Last Updated 27 ನವೆಂಬರ್ 2024, 9:14 IST
ಬೌದ್ಧ ಧರ್ಮದ ಗುರುಗಳು ಬೀದರ್‌ನಲ್ಲಿ ಮಂಗಳವಾರ ಹೆಚ್ಚುವರಿ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಅವರಿಗೆ ಮನವಿ ಪತ್ರ ಸಲ್ಲಿಸಿದರು
ಬೌದ್ಧ ಧರ್ಮದ ಗುರುಗಳು ಬೀದರ್‌ನಲ್ಲಿ ಮಂಗಳವಾರ ಹೆಚ್ಚುವರಿ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಅವರಿಗೆ ಮನವಿ ಪತ್ರ ಸಲ್ಲಿಸಿದರು   

ಬೀದರ್‌: ಬಿಹಾರದ ಬುದ್ಧ ಗಯಾದ ಬೌದ್ಧ ವಿಹಾರದ ಸಂಪೂರ್ಣ ಆಡಳಿತ ಬೌದ್ಧರಿಗೆ ವಹಿಸಬೇಕೆಂದು ಆಗ್ರಹಿಸಿ ಬೌದ್ಧ ಧರ್ಮಿಯರು ನಗರದಲ್ಲಿ ಮಂಗಳವಾರ ಪ್ರತಿಭಟನಾ ರ್‍ಯಾಲಿ ನಡೆಸಿದರು.

ನಗರದ ಜನವಾಡ ರಸ್ತೆಯ ಡಾ.ಬಿ.ಆರ್‌.ಅಂಬೇಡ್ಕರ್‌ ಭವನದಿಂದ ಪ್ರಾರಂಭಗೊಂಡ ರ್‍ಯಾಲಿ ಅಂಬೇಡ್ಕರ್‌ ವೃತ್ತ, ಭಗತ್‌ ಸಿಂಗ್‌ ವೃತ್ತ, ತಹಶೀಲ್ದಾರ್‌ ಕಚೇರಿ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿ ತಲುಪಿತು. 

ರಾಷ್ಟ್ರಪತಿ, ಪ್ರಧಾನಿ ಹಾಗೂ ಮುಖ್ಯಮಂತ್ರಿಗೆ ಬರೆದ ಮನವಿ ಪತ್ರವನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಅವರಿಗೆ ಸಲ್ಲಿಸಿದರು.

ADVERTISEMENT

‘ಆಲ್‌ ಇಂಡಿಯಾ ಬುದ್ದಿಷ್ಟ್‌ ಫೋರಂ’ನಿಂದ ದೇಶದಾದ್ಯಂತ ಪ್ರತಿಭಟನೆಗೆ ಕರೆ ನೀಡಲಾಗಿತ್ತು. ‘ಬೀದರ್ ಬುದ್ದಿಷ್ಟ್’ ವಿಹಾರದ ಸಂಸ್ಥಾಪಕ ಭಂತೆ ಧಮ್ಮಾನಂದ ಮಹಾಥೆರೊ, ಕಾರ್ಯದರ್ಶಿ ಭಂತೆ ಜ್ಞಾನ ಸಾಗರ, ಭಂತೆ ಸಂಘ ರಖ್ಖೀತ, ರೇಕುಳಗಿ ಮೌಂಟ್‌ನ ಭಂತೆ ಧರ್ಮಪಾಲ, ಭಾಲ್ಕಿಯ ಭಂತೆ ನೌಪಾಲ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಬೌದ್ಧ ಭಿಕ್ಕುಗಳು, ಬೌದ್ಧ ಸಂಘಟನೆಗಳು, ದಲಿತ ಸಂಘಟನೆಗಳು ಹಾಗೂ ಸಂವಿಧಾನ ಸಂರಕ್ಷಣಾ ಸಮಿತಿಯ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಬೌದ್ಧ ಆಚಾರ್ಯ ಮಿಲಿಂದ ಗುರೂಜಿ, ಉಪಾಸಕ ಧರ್ಮರಾಯ ಘಾಂಗ್ರೆ, ಮುಖಂಡರಾದ ರಮೇಶ ಡಾಕುಳಗಿ, ಅನೀಲಕುಮಾರ ಬೆಲ್ದಾರ, ಬಾಬು ಪಾಸ್ವಾನ್‌, ರಾಜಕುಮಾರ ಮೂಲಭಾರತಿ, ಶ್ರೀಪತರಾವ್‌ ದೀನೆ, ಶಿವಕುಮಾರ ನೀಲಿಕಟ್ಟಿ, ಮಹೇಶ ಗೋರನಾಳಕರ್, ಸುರೇಶ ಜೋಜನಾಕರ್, ಅಂಬಾದಾಸ ಚಕ್ರವರ್ತಿ, ಕಾಶಿನಾಥ ಚೆಲ್ವಾ, ರಾಜಪ್ಪ ಗೂನಳ್ಳಿಕರ್, ಬಾಬುರಾವ್‌ ಮಿಠಾರೆ, ಚಂದ್ರಕಾಂತ ನಿರಾಟೆ, ಅರುಣ ಪಟೇಲ್, ಅವಿನಾಶ ದೀನೆ, ಭರತ್‌ ಕಾಂಬಳೆ, ರಾಜಕುಮಾರ ವಾಘಮಾರೆ, ಸಂದೀಪ ಕಾಂಟೆ, ಪ್ರಕಾಶ ರಾವಣ, ವಿನೋದಕುಮಾರ ಶಾಕ್ಯಪಾಲ್, ಪ್ರದೀಪ ನಾಟೆಕರ್ ಮತ್ತಿತರರು ಪಾಲ್ಗೊಂಡಿದ್ದರು.

ಭಾರತೀಯ ಭೀಮ ಸೇನೆ ಜಿಲ್ಲಾ ಘಟಕದ ಕಾರ್ಯಕರ್ತರು ಬೀದರ್‌ನಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು

ಭೀಮ ಸೇನೆ ಪ್ರತ್ಯೇಕ ಪ್ರತಿಭಟನೆ

ಭಾರತೀಯ ಭೀಮ ಸೇನೆ ಜಿಲ್ಲಾ ಘಟಕದಿಂದ ನಗರದಲ್ಲಿ ಮಂಗಳವಾರ ಪ್ರತ್ಯೇಕವಾಗಿ ಪ್ರತಿಭಟನೆ ನಡೆಯಿತು. ಬೌದ್ಧ ಧರ್ಮೀಯರ ಪವಿತ್ರ ಕ್ಷೇತ್ರ ಬುದ್ಧ ಗಯಾ ಇಡೀ ಜಗತ್ತಿನಲ್ಲಿ ಬೌದ್ಧ ಧರ್ಮದ ತತ್ವ ಸಂದೇಶಗಳನ್ನು ಪಸರಿಸಿದ ಕ್ಷೇತ್ರ. ಹಿಂದೂ ಹಾಗೂ ಮುಸ್ಲಿಂ ರಾಜರ ಆಕ್ರಮಣಕ್ಕೆ ಒಳಗಾಯಿತು. ಕಾಲಾನಂತರದಲ್ಲಿ ಅದನ್ನು ಅತಿಕ್ರಮಿಸಲಾಯಿತು. ಬುದ್ಧ ಗಯಾ ಬೌದ್ಧರಿಗೆ ಸೇರಿದ ಪವಿತ್ರ ಸ್ಥಳವೆಂಬುದು ಇಡೀ ಜಗತ್ತಿಗೆ ಗೊತ್ತಿದೆ. ಹಾಗಾಗಿ ಅದರ ಆಡಳಿತ ಬೌದ್ಧ ಧರ್ಮೀಯರಿಗೆ ವಹಿಸಬೇಕು ಎಂದು ಆಗ್ರಹಿಸಿದರು.

ಸಂವಿಧಾನ ಸಮರ್ಪಣ ದಿನ ಆಚರಿಸಿದ ಕಾರ್ಯಕರ್ತರು ಬುದ್ಧ ಗಯಾ ಬೌದ್ಧರಿಗೆ ಹಸ್ತಾಂತರಿಸಬೇಕೆಂದು ಒತ್ತಾಯಿಸಿ ಘೋಷಣೆಗಳನ್ನು ಹಾಕಿದರು.

ಭಾರತೀಯ ಭೀಮ ಸೇನೆ ರಾಜ್ಯ ಘಟಕದ ಅಧ್ಯಕ್ಷ ಸುರೇಶ ಸಿಂಧೆ ನೇತೃತ್ವದಲ್ಲಿ ನಗರದ ಶಹಾಗಂಜ್ ಅಂಬೇಡ್ಕರ್‌ ಭವನದಿಂದ ಅಂಬೇಡ್ಕರ್‌ ವೃತ್ತ ಮಹಾವೀರ ವೃತ್ತ ಶಿವಾಜಿ ವೃತ್ತ ಮಾರ್ಗವಾಗಿ ಜಿಲ್ಲಾಧಿಕಾರಿಗಳ ಕಚೇರಿ ವರೆಗೆ ರ್‍ಯಾಲಿ ನಡೆಸಿ ಮನವಿ ಪತ್ರ ಸಲ್ಲಿಸಲಾಯಿತು.

ಸೇನೆಯ ರಾಷ್ಟ್ರೀಯ ಉಪಾಧ್ಯಕ್ಷ ಅಶೋಕ ಮಾಳಗೆ ಜಿಲ್ಲಾಧ್ಯಕ್ಷ ಸಂಜುಕುಮಾರ ಸಾಗರ ರಾಜ್ಯ ಸಂಯೋಜಕ ಸುರೇಶ ಟಾಳೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸುನೀಲ ಡೊಳ್ಳೆ ರಾಷ್ಟ್ರೀಯ ಸಂಯೋಜಕ ಮಹಾದೇವ ಕಾಂಬಳೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಧನಶೆಟ್ಟಿ ಕಂಗನಕೋಟ ಕಲಬುರಗಿ ವಿಭಾಗೀಯ ಪ್ರಭಾರಿ ಓಂಕಾರ ಶಿಂಧೆ ರಾಜ್ಯ ಪ್ರಧಾನ ಕಾರ್ಯದರ್ಶಿ ಬಕ್ಕಪ್ಪ ದಂಡಿನ್‌ ಅಶೋಕ ನಾಟೇಕರ್ ಜಾಂಪಾಡ ಜಿಲ್ಲಾ ಉಪಾಧ್ಯಕ್ಷ ಗೌತಮ ಶರ್ಮಾ ಜಿಲ್ಲಾ ಮಹಿಳಾ ಘಟಕ ಅಧ್ಯಕ್ಷೆ ಸುಧಾಮಣಿ ಗುಪ್ತಾ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.