ADVERTISEMENT

ಕಲ್ಯಾಣ ಕರ್ನಾಟಕಕ್ಕೆ ಬಂಪರ್ ಕೊಡುಗೆ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2021, 15:57 IST
Last Updated 8 ಮಾರ್ಚ್ 2021, 15:57 IST
ಸಚಿವ ಪ್ರಭು ಚವಾಣ್
ಸಚಿವ ಪ್ರಭು ಚವಾಣ್   

ಬೀದರ್: ರಾಜ್ಯ ಸರ್ಕಾರ ಕಲ್ಯಾಣ ಕರ್ನಾಟಕಕ್ಕೆ ಪ್ರಸಕ್ತ ಬಜೆಟ್‍ನಲ್ಲಿ ಬಂಪರ್ ಕೊಡುಗೆ ನೀಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಹೇಳಿದ್ದಾರೆ.

ಬೀದರ್‍ನಲ್ಲಿ ಕೃಷಿ ಉತ್ಪನ್ನಗಳ ತಯಾರಿಕಾ ಕಸ್ಟರ್‌ನಲ್ಲಿ ಬರುವ ಕೈಗಾರಿಕೆಗಳಿಗೆ ಪ್ರೋತ್ಸಾಹ ಪ್ಯಾಕೇಜ್ ಘೋಷಿಸಿದ್ದು, ಜಿಲ್ಲೆಯ ಅಭಿವೃದ್ಧಿಗೆ ನಾಂದಿ ಹಾಡಿದಂತಾಗಿದೆ ಎಂದು ತಿಳಿಸಿದ್ದಾರೆ. ಪ್ರಾದೇಶಿಕ ಅಸಮಾನತೆ ನಿವಾರಿಸಲು ಹಿಂದುಳಿದ ತಾಲ್ಲೂಕುಗಳಿಗೆ ₹ 3 ಸಾವಿರ ಕೋಟಿ ಒದಗಿಸಲಾಗಿದೆ. ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಒತ್ತು ನೀಡಿದ್ದು, ₹ 1,500 ಕೋಟಿ ಮೀಸಲಿಡಲಾಗಿದೆ ಎಂದು ಹೇಳಿದ್ದಾರೆ.

ಬಸವಕಲ್ಯಾಣದಲ್ಲಿ ₹ 500 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ನೂತನ ಅನುಭವ ಮಂಟಪಕ್ಕೆ ₹. 200 ಕೋಟಿ ಬಿಡುಗಡೆ ಮಾಡಿದ್ದು, ಕಾಮಗಾರಿಗೆ ವೇಗ ದೊರೆಯಲಿದೆ. ಬಸವಣ್ಣನವರ ಜನ್ಮಸ್ಥಳವಾದ ಬಸವನಬಾಗೇವಾಡಿ ತಾಲ್ಲೂಕಿನ ಇಂಗಳೇಶ್ವರ ಗ್ರಾಮದ ಅಭಿವೃದ್ಧಿಗೆ ರೂ. 5 ಕೋಟಿ ಒದಗಿಸಲಾಗಿದೆ ಎಂದು ತಿಳಿಸಿದ್ದಾರೆ.

ಸಮತೋಲನ ಬಜೆಟ್: ಸಂಸದ ಖೂಬಾ

ADVERTISEMENT

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ರಾಜ್ಯದ ಸರ್ವತೋಮುಖ ಅಭಿವೃದ್ಧಿಯನ್ನು ಗಮನದಲ್ಲಿ ಇಟ್ಟುಕೊಂಡು ಸಮತೋಲನ ಬಜೆಟ್‌ ಮಂಡಿಸಿದ್ದಾರೆ ಎಂದು ಸಂಸದ ಭಗವಂತ ಖೂಬಾ ಪ್ರತಿಕ್ರಿಯಿಸಿದ್ದಾರೆ. ಜನ ಸಾಮಾನ್ಯರ ಮೇಲೆ ಒಂದು ಪೈಸೆಯೂ ತೆರಿಗೆ ಹೊರೆ ಹಾಕಿಲ್ಲ. ಬಸವಕಲ್ಯಾಣದಲ್ಲಿ ಹೊಸ ಅನುಭವ ಮಂಟಪ ನಿರ್ಮಾಣಕ್ಕೆ ₹ 200 ಕೋಟಿ ಬಿಡುಗಡೆ ಮಾಡಿ ನುಡಿದಂತೆ ನಡೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ. ರಾಜ್ಯದ ಮಹಿಳೆಯರ ಕಲ್ಯಾಣಕ್ಕಾಗಿ ₹37,188 ಕೋಟಿ ಮೀಸಲಿಟ್ಟು, ಪ್ರತಿ ಜಿಲ್ಲೆಯಲ್ಲಿ ಎರಡು ಶಿಶು ಕೇಂದ್ರಗಳನ್ನು ಪ್ರಾರಂಭಿಸುವ ಪ್ರಸ್ತಾಪ ಮಾಡಿದ್ದಾರೆ. ಕೃಷಿ ಭೂಮಿ ಪರಿವರ್ತನೆಗೆ ಭೂ ಕಾಯ್ದೆಯಡಿ ತಿದ್ದುಪಡಿ ಮಾಡಿದ್ದಾರೆ. ರೈಲು ಮಾರ್ಗಗಳ ಅಭಿವೃದ್ಧಿಗೆ ಅನುದಾನ ಮೀಸಲಿಟ್ಟಿದ್ದಾರೆ. ತಾಲ್ಲೂಕಿಗೊಂದು ಗೋಶಾಲೆ ತೆರೆಯಲು ನಿರ್ಧರಿಸುವುದು ಸ್ವಾಗತಾರ್ಹವಾಗಿದೆ ಎಂದು ತಿಳಿಸಿದ್ದಾರೆ.

ನಿರೀಕ್ಷೆ ಹುಸಿಗೊಳಿಸಿದ ಬಜೆಟ್: ಶಾಸಕ ಬಂಡೆಪ್ಪ ಕಾಶೆಂಪೂರ್

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರ ಜನರ ನಿರೀಕ್ಷೆಗಳನ್ನು ಹುಸಿಗೊಳಿಸಿದೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ಉಪ ನಾಯಕ, ಶಾಸಕ ಬಂಡೆಪ್ಪ ಕಾಶೆಂಪೂರ್ ಹೇಳಿದ್ದಾರೆ. ರಾಜ್ಯದ ಜನತೆಗೆ ಹೊಸ ತೆರಿಗೆಯ ಹೊರೆ ಹಾಕಿಲ್ಲ ಎನ್ನುವುದನ್ನು ಬಿಟ್ಟರೆ ಹೊಸದೇನೂ ಇಲ್ಲ. ₹ 80 ಸಾವಿರ ಕೋಟಿ ಸಾಲ ಮಾಡಿದ್ದಾರೆ ಎಂದು ಟೀಕಿಸಿದ್ದಾರೆ.

ನಿರಾಶಾದಾಯಕ ಬಜೆಟ್
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮಂಡಿಸಿರುವ ಪ್ರಸಕ್ತ ಸಾಲಿನ ರಾಜ್ಯ ಬಜೆಟ್ ನಿರಾಶಾದಾಯಕವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ವಿಜಯಸಿಂಗ್ ಟೀಕಿಸಿದ್ದಾರೆ. ಬಜೆಟ್ ಶ್ರೀಮಂತರ ಪರವಾಗಿದ್ದು, ಜನಸಾಮಾನ್ಯರು ಹಾಗೂ ರೈತರ ವಿರೋಧಿಯಾಗಿದೆ. ಅಡಿಗೆ ಅನಿಲ, ಪೆಟೋಲ್, ಡೀಸೆಲ್ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರು ತೊಂದರೆಯಲ್ಲಿದ್ದಾರೆ. ಬಜೆಟ್‍ನಲ್ಲಿ ಜನರ ಮೇಲಿನ ಹೊರೆ ಕಡಿಮೆ ಮಾಡುವ ಪ್ರಯತ್ನ ಮಾಡಿಲ್ಲ ಎಂದು ಹೇಳಿದ್ದಾರೆ
ಬೀದರ್ ಜಿಲ್ಲೆಗೆ ಯಾವುದೇ ವಿಶೇಷ ಕೊಡುಗೆ ಕೊಟ್ಟಿಲ್ಲ, ಬೀದರ್ ಜಿಲ್ಲೆಯಲ್ಲಿ ನೀರಾವರಿ ಯೋಜನೆ, ಕೈಗಾರಿಕೆ ಸ್ಥಾಪನೆ, ಶಿಕ್ಷಣ ಹಾಗೂ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಿಲ್ಲ. ಬಿಎಸ್‍ಎಸ್‍ಕೆ ಪುನರಾರಂಭಕ್ಕೆ ಕ್ರಮ ಕೈಗೊಂಡಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಚುನಾವಣೆ ಗಿಮಿಕ್: ಅರಳಿ
ಉಪ ಚುನಾವಣೆಯ ಗಿಮಿಕ್‌ ಆಗಿ ಮಂಡಿಸಿದ ಬಜೆಟ್‌ ಇದಾಗಿದೆ. ಜನ ಸಾಮಾನ್ಯರು ಹಾಗೂ ರೈತರ ಮೇಲಿನ ತೆರಿಗೆ ಭಾರವನ್ನು ಕಡಿಮೆ ಮಾಡುವಲ್ಲಿ ಮುಖ್ಯಮಂತ್ರಿ ವಿಫಲರಾಗಿದ್ದಾರೆ ಎಂದು ವಿಧಾನ ಪರಿಷತ್‌ ಸದಸ್ಯ ಅರವಿಂದಕುಮಾರ ಅರಳಿ ಟೀಕಿಸಿದ್ದಾರೆ. ಯಡಿಯೂರಪ್ಪ ಅವರು ತಮ್ಮ ಜಿಲ್ಲೆಯಾದ ಶಿವಮೊಗ್ಗಕ್ಕೆ ಅತಿ ಹೆಚ್ಚು ಅನುದಾನ ಒದಗಿಸಿದ್ದಾರೆ. ಕಲ್ಯಾಣ ಕರ್ನಾಟಕ ಭಾಗಕ್ಕೆ ಮಲತಾಯಿ ಧೋರಣೆ ತೋರಿದ್ದಾರೆ ಎಂದು ಆರೋಪಿಸಿದ್ದಾರೆ. ಪಶು, ಪಶು ವೈದ್ಯಕೀಯ ವಿಶ್ವವಿದ್ಯಾಲಯದ ಅಭಿವೃದ್ದಿ ಹಾಗೂ ಎಂಜಿನಿಯರಿಂಗ್‌ ಕಾಲೇಜು ಆರಂಭಿಸಲು ಅನುದಾನ ಒದಗಿಸಿಲ್ಲ. ಕೃಷಿ ಕಾಲೇಜು ಮಂಜೂರು ಮಾಡದೆ ಜಿಲ್ಲೆಯ ಜನರ ನಿರೀಕ್ಷೆಯನ್ನು ಹುಸಿಗೊಳಿಸಿದ್ದಾರೆ ಎಂದು ಟೀಕಿಸಿದ್ದಾರೆ. ಕಾರ್ಪೋರೇಟ್‌ ವಲಯಕ್ಕೆ ಅನುಕೂಲವಾಗುವಂತ ಬಜೆಟ್‌ ಆಗಿದೆ. ಜನ ಸಾಮಾನ್ಯರ ಹಿತ ಕಡೆ ಗಣಿಸಲಾಗಿದೆ ಎಂದು ಹೇಳಿದ್ದಾರೆ.

ಜನಸಾಮಾನ್ಯರ ಬಜೆಟ್
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮಂಡಿಸಿರುವ ರಾಜ್ಯ ಬಜೆಟ್ ಜನಪರವಾಗಿದೆ ಎಂದು ರಾಜ್ಯ ಕೈಗಾರಿಕೆ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಶೈಲೇಂದ್ರ ಬೆಲ್ದಾಳೆ ಹೇಳಿದ್ದಾರೆ. ಬಸವಕಲ್ಯಾಣದಲ್ಲಿ ₹ 500 ಕೋಟಿ ವೆಚ್ಚದಲ್ಲಿ ನಿರ್ಮಿಸಲಿರುವ ನೂತನ ಅನುಭವ ಮಂಟಪಕ್ಕೆ ₹ 200 ಕೋಟಿ ಬಿಡುಗಡೆ ಮಾಡಿ ಶೀಘ್ರ ಕಾಮಗಾರಿ ಆರಂಭಿಸಲಾಗುವುದು ಎಂದು ಹೇಳಿರುವುದು ಜಿಲ್ಲೆಯ ಜನರಿಗೆ ಸಂತಸ ತಂದಿದೆ ಎಂದು ತಿಳಿಸಿದ್ದಾರೆ. ಯಡಿಯೂರಪ್ಪ ಅವರು ರೈತರ ಅಭಿವೃದ್ಧಿಗೆ ಅನೇಕ ನೀರಾವರಿ ಯೋಜನೆ ಘೋಷಿಸಿದ್ದಾರೆ. ಶಿಕ್ಷಣ ಗುಣಮಟ್ಟ ವೃದ್ಧಿ ಹಾಗೂ ಮೂಲಸೌಕರ್ಯಕ್ಕೆ ಬಜೆಟ್‍ನಲ್ಲಿ ಹೆಚ್ಚಿನ ಅನುದಾನ ಒದಗಿಸಿದ್ದಾರೆ ಎಂದು ಹೇಳಿದ್ದಾರೆ.

ಬಜೆಟ್‍ನಲ್ಲಿ ಜನಪರ ಯೋಜನೆಗಳು
ರಾಜ್ಯ ಸರ್ಕಾರವು ಪ್ರಸಕ್ತ ಬಜೆಟ್‍ನಲ್ಲಿ ಅನೇಕ ಜನಪರ ಹಾಗೂ ಅಭಿವೃದ್ಧಿ ಪರ ಯೋಜನೆಗಳನ್ನು ಪ್ರಕಟಿಸಿದೆ ಎಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಸೂರ್ಯಕಾಂತ ನಾಗಮಾರಪಳ್ಳಿ ಹೇಳಿದ್ದಾರೆ. ಮಹಿಳಾ ಉದ್ಯಮಿಗಳಿಗೆ ರೂ. 2 ಕೋಟಿ ಸಾಲ ಸೌಲಭ್ಯ, ಆಸ್ತಿ ನೋಂದಣಿಯಲ್ಲಿ ವಂಚನೆ ಹಾಗೂ ದಾಖಲೆ ತಿರುಚುವಿಕೆಯನ್ನು ತಡೆಗಟ್ಟಲು ಬ್ಲಾಕ್‍ಚೈನ್ ತಂತ್ರಜ್ಞಾನ ಬಳಸಿ ಆಸ್ತಿ ನೋಂದಣಿ ಮಾಡುವ ಪ್ರಾಯೋಗಿಕ ಯೋಜನೆ ಘೋಷಿಸಿದೆ ಎಂದು ತಿಳಿಸಿದ್ದಾರೆ.

ಬದಲಾಗಲಿದೆ ಪ್ರವಾಸೋದ್ಯಮ ಚಿತ್ರಣ
ಬಸವಕಲ್ಯಾಣದಲ್ಲಿ ನೂತನ ಅನುಭವ ಮಂಟಪ ನಿರ್ಮಾಣಕ್ಕೆ ಸರ್ಕಾರ ಬಜೆಟ್‍ನಲ್ಲಿ ₹ 200 ಕೋಟಿ ಅನುದಾನ ಒದಗಿಸಿದೆ. ಶೀಘ್ರದಲ್ಲಿಯೇ ಕಾಮಗಾರಿ ಆರಂಭವಾಗಲಿದೆ ಎಂದು ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುವಾಲಿ ತಿಳಿಸಿದ್ದಾರೆ.
ಅನುಭವ ಮಂಟಪ ನಿರ್ಮಾಣದ ನಂತರ ಜಿಲ್ಲೆಯ ಪ್ರವಾಸೋದ್ಯಮದ ಚಿತ್ರಣ ಬದಲಾಗಲಿದೆ. ಬೀದರ್‌ನ ಕೀರ್ತಿ ಹೆಚ್ಚಲಿದೆ ಎಂದು ಹೇಳಿದ್ದಾರೆ. ಬಜೆಟ್‍ನಲ್ಲಿ ಮಹಿಳಾ ಸಶಕ್ತಿಕರಣಕ್ಕೆ ಹಲವು ಕಾರ್ಯಕ್ರಮ ಪ್ರಕಟಿಸಲಾಗಿದೆ. ಸಹಕಾರ ಸಂಸ್ಥೆಗಳ ಬಲವರ್ಧನೆಗೂ ಅನುದಾನ ಘೋಷಿಸಲಾಗಿದೆ. ರಾಜ್ಯ ಬಜೆಟ್ ಅಭಿವೃದ್ಧಿಗೆ ಪೂರಕವಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.