ADVERTISEMENT

ಭಾಲ್ಕಿ | ಬಸ್‌ ಬಾಗಿಲಲ್ಲಿ ನೇತಾಡಿಕೊಂಡೇ ವಿದ್ಯಾರ್ಥಿಗಳ ಪ್ರಯಾಣ

ಗಿರಿರಾಜ ಎಸ್ ವಾಲೆ
Published 17 ಡಿಸೆಂಬರ್ 2023, 5:09 IST
Last Updated 17 ಡಿಸೆಂಬರ್ 2023, 5:09 IST
<div class="paragraphs"><p>ಖಟಕಚಿಂಚೋಳಿ ಮುಖ್ಯ ರಸ್ತೆಯಿಂದ ಭಾಲ್ಕಿ ಪಟ್ಟಣಕ್ಕೆ ತೆರಳುವ ಬಸ್‌ನಲ್ಲಿ ವಿದ್ಯಾರ್ಥಿಗಳು ಜೋತು ಬಿದ್ದಿರುವುದು.</p></div>

ಖಟಕಚಿಂಚೋಳಿ ಮುಖ್ಯ ರಸ್ತೆಯಿಂದ ಭಾಲ್ಕಿ ಪಟ್ಟಣಕ್ಕೆ ತೆರಳುವ ಬಸ್‌ನಲ್ಲಿ ವಿದ್ಯಾರ್ಥಿಗಳು ಜೋತು ಬಿದ್ದಿರುವುದು.

   

ಖಟಕಚಿಂಚೋಳಿ: ಗ್ರಾಮೀಣ ಭಾಗದಿಂದ ತಾಲ್ಲೂಕು ಕೇಂದ್ರಕ್ಕೆ ಶಾಲಾ–ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಬಸ್‌ನಲ್ಲಿ ಸ್ಥಳಾವಕಾಶ ಸಿಗದೇ ಪ್ರತಿದಿನ ಬಾಗಿಲಲ್ಲಿ ಜೋತು ಬಿದ್ದು ಪ್ರಯಾಣಿಸಬೇಕಾಗಿದೆ. ಅನಾಹುತ ಸಂಭವಿಸಿ ಜೀವಹಾನಿಯಾದರೆ ಯಾರು ಹೊಣೆ ಹೊರುತ್ತಾರೆ ಎಂಬ ಆತಂಕ ಮಕ್ಕಳ ಪೋಷಕರನ್ನು ಕಾಡುತ್ತಿದೆ.

ಹೋಬಳಿಯ ಡಾವರಗಾಂವ, ಎಣಕೂರ, ಮಾಸಿಮಾಡ, ಬರದಾಪುರ, ದಾಡಗಿ, ಕುರುಬಖೇಳಗಿ, ನಾವದಗಿ, ಬ್ಯಾಲಹಳ್ಳಿ(ಕೆ) ಸೇರಿದಂತೆ ಇನ್ನಿತರ ಹಳ್ಳಿಗಳ ವಿದ್ಯಾರ್ಥಿಗಳು ಹುಮನಾಬಾದ್, ಭಾಲ್ಕಿ ಹಾಗೂ ಬೀದರ್ ಶಾಲಾ–ಕಾಲೇಜಿಗೆ ಹೋಗುವ ನೂರಾರು ವಿದ್ಯಾರ್ಥಿಗಳು ಪ್ರತಿ ದಿನ ತೊಂದರೆ ಅನುಭವಿಸುತ್ತಿದ್ದಾರೆ.

ADVERTISEMENT

‘ಬಹುತೇಕ ಗ್ರಾಮಗಳಿಗೆ ಸರ್ಕಾರಿ ಬಸ್‌ ಸೌಲಭ್ಯವಿದೆ. ಆದರೆ ಸಮಯದ ಪರಿಪಾಲನೆ ಹಾಗೂ ಕಡಿಮೆ ಬಸ್ ಸಂಚರಿಸುವುದರಿಂದ ವಿದ್ಯಾರ್ಥಿಗಳು, ಬಸ್‌ನ ಬಾಗಿಲಲ್ಲೇ ಜೋತು ಬಿದ್ದು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ವಿದ್ಯಾರ್ಥಿಗಳಿಗೆ ತೊಂದರೆಯಾದರೆ ಹೊಣೆ ಯಾರು?’ ಎಂದು ಸಾಮಾಜಿಕ ಕಾರ್ಯಕರ್ತ ಉಮೇಶ ತೇಲಂಗ ಪ್ರಶ್ನಿಸಿದ್ದಾರೆ.

ವಿದ್ಯಾರ್ಥಿಗಳು ಶಾಲಾ–ಕಾಲೇಜುಗಳಿಗೆ ತೆರಳುವ ಸಮಯದಲ್ಲಿ ಹೆಚ್ಚುವರಿ ಬಸ್ ಇಲ್ಲದಿರುವುದರಿಂದ ಜೋತು ಬಿದ್ದು ಹೋಗುತ್ತಿದ್ದಾರೆ. ಹೀಗಾಗದಂತೆ ತಪ್ಪಿಸಲು ಬೆಳಿಗ್ಗೆ ಹೆಚ್ಚುವರಿ ಬಸ್ ಓಡಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

‘ಬಹುತೇಕ ಬಸ್‌ಗಳು ಖಟಕಚಿಂಚೋಳಿ ಗ್ರಾಮದಲ್ಲಿ ಬಾರದೇ ಮುಖ್ಯ ರಸ್ತೆಯಿಂದ ಹೋಗುತ್ತಿವೆ. ಇದರಿಂದ ನಾವೆಲ್ಲರೂ ಬೆಳಿಗ್ಗೆ ಹಾಗೂ ಸಂಜೆ 2 ಕಿ.ಮೀ. ನಡೆದುಕೊಂಡು ಬರುತ್ತಿದ್ದೇವೆ. ಇದರಿಂದ ತುಂಬಾ ತೊಂದರೆ ಆಗುತ್ತಿದೆ. ಅಲ್ಲದೇ ಮನೆಗೆ ಬಂದ ನಂತರ ಬಹಳ ಸುಸ್ತಾಗುತ್ತಿರುವುದರಿಂದ ಓದಲು ಆಗುತ್ತಿಲ್ಲ’ ಎಂದು ವಿದ್ಯಾರ್ಥಿನಿ ಭವಾನಿ ಡೊಂಗ್ರೆ ಅಸಹಾಯಕತೆ ವ್ಯಕ್ತಪಡಿಸಿದರು.

ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ಬಸ್ ಬಾರದಿರುವುದರಿಂದ ಶಾಲಾ ಕಾಲೇಜುಗಳಿಗೆ ಸಮಯಕ್ಕೆ ಸರಿಯಾಗಿ ತಲುಪುವುದು ಕಷ್ಟವಾಗುತ್ತಿದೆ. ಹಾಗಾಗಿ, ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಹೆಚ್ಚುವರಿ ಬಸ್ ಓಡಿಸಲು ಕ್ರಮ ಕೈಗೊಳ್ಳ ಬೇಕು. ಇಲ್ಲದಿದ್ದರೆ ಪ್ರತಿಭಟನೆ ಮಾಡಲಾಗು ವುದು ಎಂದು ಎಬಿವಿಪಿಯ ರೇವಣಸಿದ್ಧ ಜಾಡರ ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.