ADVERTISEMENT

ನೆಟ್‌ವರ್ಕ್‌ ಸ್ಥಗಿತಗೊಳಿಸಿ ಕೇಬಲ್ ಟಿವಿ ಆಪರೇಟರ್‌ಗಳ ಪ್ರತಿಭಟನೆ

ಜಿಲ್ಲೆಯಾದ್ಯಂತ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 24 ಜನವರಿ 2019, 12:40 IST
Last Updated 24 ಜನವರಿ 2019, 12:40 IST
ಬೀದರ್‌ನ ಜಿಲ್ಲಾಧಿಕಾರಿ ಕಚೇರಿ ಎದುರು ಟ್ರಾಯ್ ನೀತಿ ವಿರೋಧಿಸಿ ಕೇಬಲ್ ಟಿವಿ ಆಪರೇಟರ್‌ಗಳು ಗುರುವಾರ ಧರಣಿ ಸತ್ಯಾಗ್ರಹ ನಡೆಸಿದರು
ಬೀದರ್‌ನ ಜಿಲ್ಲಾಧಿಕಾರಿ ಕಚೇರಿ ಎದುರು ಟ್ರಾಯ್ ನೀತಿ ವಿರೋಧಿಸಿ ಕೇಬಲ್ ಟಿವಿ ಆಪರೇಟರ್‌ಗಳು ಗುರುವಾರ ಧರಣಿ ಸತ್ಯಾಗ್ರಹ ನಡೆಸಿದರು   

ಬೀದರ್: ಟ್ರಾಯ್ ನೀತಿ ಖಂಡಿಸಿ ಕೇಬಲ್ ಟಿವಿ ಆಪರೇಟರ್‌ಗಳು ಜಿಲ್ಲೆಯಲ್ಲಿ ಗುರುವಾರ ಕೇಬಲ್ ಟಿವಿ ನೆಟ್‌ವರ್ಕ್‌ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದರು.

ಜಿಲ್ಲಾ ಕೇಬಲ್ ಆಪರೇಟರ್‌ಗಳ ಕಲ್ಯಾಣ ಒಕ್ಕೂಟದ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿ ಸಂಸದರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗೆ ಸಲ್ಲಿಸಿದರು.

ಟ್ರಾಯ್ ನೀತಿಯು ಕೇಬಲ್ ಉದ್ಯಮವನ್ನು ನಂಬಿಕೊಂಡಿರುವ ಆಪರೇಟರ್‌ಗಳು ಹಾಗೂ ಗ್ರಾಹಕರಿಗೆ ಮಾರಕವಾಗಿದೆ. ಇದರಿಂದಾಗಿ ವಿಶ್ವದಲ್ಲೇ ಭಾರತದಲ್ಲಿ ಅತಿ ಕಡಿಮೆ ಇರುವ ಕೇಬಲ್ ಶುಲ್ಕ ಅತ್ಯಂತ ದುಬಾರಿ ಆಗಲಿದೆ ಎಂದು ದೂರಿದರು.

ADVERTISEMENT

30 ವರ್ಷಗಳ ಹಿಂದೆ ಕೇಬಲ್ ಟಿವಿ ಬಂದ ಮೇಲೆ ದೇಶದಲ್ಲಿ ಲಕ್ಷಾಂತರ ಕುಟುಂಬಗಳಿಗೆ ಉದ್ಯೋಗ ದೊರಕಿದೆ. 2013 ರಲ್ಲಿ ಕೇಬಲ್ ಟಿವಿ ಡಿಜಿಟಲ್ ಆಗಿ ಮಾರ್ಪಟ್ಟ ನಂತರ ನಗರ ಪ್ರದೇಶದ ಗ್ರಾಹಕರಿಗೆ ₹ 200 ರಿಂದ ₹ 250 ಹಾಗೂ ಗ್ರಾಮೀಣ ಪ್ರದೇಶದ ಗ್ರಾಹಕರಿಗೆ ₹ 150 ರಿಂದ ₹ 180 ಪ್ಯಾಕೇಜ್‌ನಲ್ಲಿ 250 ರಿಂದ 350 ಚಾನೆಲ್‌ಗಳು ಲಭ್ಯ ಇವೆ ಎಂದು ಹೇಳಿದರು.

ಡಿಸೆಂಬರ್ 29 ರಿಂದ ಕೇಂದ್ರ ಸರ್ಕಾರ ಟ್ರಾಯ್ ಹೊಸ ನೀತಿ ಜಾರಿಗೊಳಿಸಿತ್ತು. ಆಕ್ಷೇಪ ವ್ಯಕ್ತವಾದಾಗ ಒಂದು ತಿಂಗಳ ಕಾಲಾವಕಾಶ ನೀಡಿತ್ತು. ಇದೀಗ ಮತ್ತೆ ಆದೇಶ ಹೊರಡಿಸಿದ್ದು, ಇದು ಕೂಡ ಕೇಬಲ್ ಆಪರೇಟರ್‌ಗಳು ಹಾಗೂ ಗ್ರಾಹಕರ ಹಿತಕ್ಕೆ ವಿರುದ್ಧವಾಗಿದೆ ಎಂದು ಆರೋಪಿಸಿದರು.

ಟ್ರಾಯ್ ನೀತಿಯಿಂದಾಗಿ ರಾಜ್ಯದ ಎಲ್ಲ ಕನ್ನಡ ಚಾನೆಲ್‌ಗಳ ವೀಕ್ಷಣೆಗೆ ₹ 300 ರಿಂದ ₹ 450 ಹಾಗೂ ಈಗ ಲಭ್ಯ ಇರುವ ಎಲ್ಲ ಚಾನೆಲ್‌ಗಳ ವೀಕ್ಷಣೆಗೆ ₹ 1,200 ರಿಂದ ₹ 1,600 ಪಾವತಿಸಬೇಕಾಗಲಿದ್ದು, ಗ್ರಾಹಕರಿಗೆ ಹೊರೆಯಾಗಲಿದೆ ಎಂದು ದೂರಿದರು.
ಟ್ರಾಯ್ ಕೆಲ ಹಿತಾಸಕ್ತಿಗಳನ್ನು ಗಮನದಲ್ಲಿ ಇಟ್ಟುಕೊಂಡು ಶುಲ್ಕ ವಿಂಗಡಣೆ ಮಾಡಿದಂತಿದೆ. ಇದರ ಅನುಷ್ಠಾನದಿಂದ ಕೇಬಲ್ ಟಿವಿ ಉದ್ಯಮ ನೆಲಕಚ್ಚಲಿದೆ. ಇದನ್ನೇ ಅವಲಂಬಿಸಿರುವ ಕುಟುಂಬಗಳು ಬೀದಿಗೆ ಬರಲಿವೆ ಎಂದು ಆತಂಕ ವ್ಯಕ್ತಪಡಿಸಿದರು.

ಟ್ರಾಯ್ ಅವೈಜ್ಞಾನಿಕ ನೀತಿಯನ್ನು ಕೈಬಿಟ್ಟು ಕೇಬಲ್ ಆಪರೇಟರ್‌ಗಳು ಹಾಗೂ ಗ್ರಾಹಕರ ಹಿತ ಕಾಪಾಡಬೇಕು ಎಂದು ಒತ್ತಾಯಿಸಿದರು.

ಒಕ್ಕೂಟದ ಅಧ್ಯಕ್ಷ ಅಫ್ರೋಜ್ ಅಹಮ್ಮದ್ ಸೌದಾಗರ್‌, ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಿ., ರಮೇಶ ಬಿರಾದಾರ ಚಿಟ್ಟಾ, ಮಲ್ಲಿಕಾರ್ಜುನ ಬರೂರೆ, ಗುಣವಂತ, ಪವನಕುಮಾರ, ಚಂದು ಸ್ವಾಮಿ, ಅನಿಲ ಮೈಲೂರ, ರವೀಂದ್ರ ಸ್ವಾಮಿ, ಇಕ್ಬಾಲ್, ಈಶ್ವರ, ಶಿವಕುಮಾರ ಕುಂಬಾರವಾಡ, ಬಾಬು ಗಾದಗಿ, ಬಸವರಾಜ ಕೊಳಾರ, ಇಸ್ಮಾಯಿಲ್, ಸಂಜುಕುಮಾರ ಎನಕೆಮುರಿ, ಹಣಮಂತ ನಿಜಾಂಪುರ, ದತ್ತು ಜನವಾಡ, ಪ್ರದೀಪ ಚಾಂಬೋಳ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.