ADVERTISEMENT

ಅಧಿಕ ಹಣ ಸಾಗಿಸಿದರೆ ಪ್ರಕರಣ ದಾಖಲು: ಜಿಲ್ಲಾಧಿಕಾರಿ ರಾಮಚಂದ್ರನ್ ಆರ್.

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2021, 2:12 IST
Last Updated 29 ಮಾರ್ಚ್ 2021, 2:12 IST
ಬಸವಕಲ್ಯಾಣ ತಾಲ್ಲೂಕಿನ ಕಲಖೋರಾದಲ್ಲಿ ಈಚೆಗೆ ಆಯೋಜಿಸಿದ್ದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ಮಾತನಾಡಿದರು
ಬಸವಕಲ್ಯಾಣ ತಾಲ್ಲೂಕಿನ ಕಲಖೋರಾದಲ್ಲಿ ಈಚೆಗೆ ಆಯೋಜಿಸಿದ್ದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ಮಾತನಾಡಿದರು   

ಬಸವಕಲ್ಯಾಣ: ‘ಮಾದರಿ ನೀತಿ ಸಂಹಿತೆ ಪಾಲನೆ ಎಲ್ಲರ ಕರ್ತವ್ಯವಾಗಿದ್ದು ಚೆಕ್‌ಪೋಸ್ಟ್‌ಗಳಿಂದ ಆಯುಧ, ಮದ್ಯ, ಅಧಿಕ ಹಣ ಸಾಗಿಸುವುದು ಪತ್ತೆಯಾದರೆ ಪ್ರಕರಣ ದಾಖಲಿಸಬೇಕು’ ಎಂದು ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ಸೂಚಿಸಿದರು.

ಅವರು ಈಚೆಗೆ ವಿಧಾನಸಭಾ ಕ್ಷೇತ್ರದ ಗಡಿಯಲ್ಲಿನ ತಡೋಳಾ ಹತ್ತಿರದ ಚೆಕ್‌ಪೋಸ್ಟ್‌ ಪರಿಶೀಲನೆ ನಡೆಸಿ ಅಲ್ಲಿನ ಅಧಿಕಾರಿಗಳಿಗೆ ಸಲಹೆ ನೀಡಿದರು.

‘ವಾಹನ ಪರಿಶೀಲಿಸುವಾಗ ಕಡ್ಡಾಯವಾಗಿ ವಿಡಿಯೊ ಚಿತ್ರೀಕರಣ ಮಾಡಬೇಕು. ಇಲ್ಲಿನ ಕಾರ್ಯಚಟುವಟಿಕೆಗಳ ಬಗ್ಗೆ ಪ್ರತಿದಿನ ಚುನಾವಣಾಧಿಕಾರಿಗಳಿಗೆ ವರದಿ ಸಲ್ಲಿಸಬೇಕು. ಮತದಾನ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೂ ಪೂರ್ವಾನುಮತಿ ಇಲ್ಲದೆ ರಜೆ ಮೇಲೆ ತೆರಲುವಂತಿಲ್ಲ. ಕಾಳಜಿ ವಹಿಸಿ ಕೆಲಸ ಮಾಡಬೇಕು’ ಎಂದರು.

ADVERTISEMENT

‘ಮಹಾರಾಷ್ಟ್ರದಿಂದ ಬರುವ ವಾಹನಗಳ ಪರಿಶೀಲನೆಗಾಗಿ ಪ್ರತಾಪೂರ ತಾಂಡಾ, ಮನ್ನಳ್ಳಿ-ಉಮರ್ಗಾ ಗಡಿ, ಅಂಬೇವಾಡಿ ಕ್ರಾಸ್, ಘೋಟಾಳ ಗಡಿ, ಕಲಬುರ್ಗಿಯಿಂದ ಬರುವ ವಾಹನಗಳ ತಪಾಸಣೆಗೆ ಕೊಹಿನೂರ-ಮಹಾಗಾಂವ ಮಧ್ಯೆ ಚೆಕ್‌ಪೋಸ್ಟ್ ಸ್ಥಾಪಿಸಲಾಗಿದೆ. ಬೆಳಿಗ್ಗೆ 6ರಿಂದ ಮಧ್ಯಾಹ್ನ 2ರವರೆಗೆ, ಮಧ್ಯಾಹ್ನ 2ರಿಂದ ರಾತ್ರಿ 10 ಗಂಟೆವರೆಗೆ ಮತ್ತು ರಾತ್ರಿ 10 ಗಂಟೆಯಿಂದ ಬೆಳಗಿನ 6 ಗಂಟೆವರೆಗೆ ಒಂದು ಪಾಳಿಗೆ ಅಧಿಕಾರಿಗಳು ಮತ್ತು ಸಿಬ್ಬಂದಿ ಒಳಗೊಂಡು ಐವರಂತೆ ಮೂರು ಪಾಳಿಯಲ್ಲಿ ಒಟ್ಟು 15 ಜನರ ತಂಡ ಪ್ರತಿದಿನ ಕಾರ್ಯಪ್ರವೃತ್ತರಾಗಿದ್ದಾರೆ’ ಎಂದು ಉಪ ವಿಭಾಗಾಧಿಕಾರಿ ಭುವ ನೇಶ ಪಾಟೀಲ ಮಾಹಿತಿ ನೀಡಿದರು.

ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾ ಅಧಿಕಾರಿ ಜಹೀರಾ ನಸೀಮ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ ಡಿ.ಎಲ್., ತಹಶೀಲ್ದಾರ್ ನಾಗಯ್ಯ ಹಿರೇಮಠ, ಮಾಸ್ಟರ್ ಟ್ರೇನರ್ ಗೌತಮ ಅರಳಿ ಪಾಲ್ಗೊಂಡಿದ್ದರು.

ಪರಿಶೀಲನೆ:ವಿಧಾನಸಭಾ ಕ್ಷೇತ್ರದಲ್ಲಿನ ಸೂಕ್ಷ್ಮ ಹಾಗೂ ಅತಿಸೂಕ್ಷ್ಮ ಮತಗಟ್ಟೆಗಳಿಗೂ ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ಅವರು ಭೇಟಿ ನೀಡಿ ಪರಿಶೀಲಿಸಿದರು.

ಕಲಖೋರಾ ಹಾಗೂ ವಿವಿಧ ಮತಗಟ್ಟೆಗಳಲ್ಲಿ ಮತದಾನ ಜಾಗೃತಿ ಸಭೆ ಕೂಡ ಆಯೋಜಿಸಿ ಮತದಾರರಿಗೆ ತಿಳಿವಳಿಕೆ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.