ADVERTISEMENT

ಗೋಡಂಬಿ ಬೆಳೆಸುವವರಿಗೆ ಕೇಂದ್ರದ ನೆರವು: ಜೆ. ದಿನಕರ ಅಡಿಗ

ಪರಿಶಿಷ್ಟ ಜಾತಿ ರೈತರ ಸಾಮರ್ಥ್ಯ ವೃದ್ಧಿಸುವ ತರಬೇತಿ, ಪರಿಕರಗಳ ವಿತರಣೆ

​ಪ್ರಜಾವಾಣಿ ವಾರ್ತೆ
Published 16 ಜನವರಿ 2026, 7:30 IST
Last Updated 16 ಜನವರಿ 2026, 7:30 IST
   

ಬೀದರ್‌: ‘ಗೋಡಂಬಿ ಬೆಳೆಸುವ ಪರಿಶಿಷ್ಟ ಜಾತಿಯವರಿಗೆ ಕೇಂದ್ರದಿಂದ ಅಗತ್ಯ ಅನುದಾನ ಮತ್ತು ಇತರೆ ಸೌಲಭ್ಯ ಕಲ್ಪಿಸಲಾಗುವುದು. ಇದರ ಪ್ರಯೋಜನ ಪಡೆಯಬೇಕು’ ಎಂದು ಭಾರತೀಯ ಕೃಷಿ ಅನುಸಂಧಾನ ಸಂಶೋಧನಾ ಸಂಸ್ಥೆಯ ನಿರ್ದೇಶಕ ಜೆ. ದಿನಕರ ಅಡಿಗ ಹೇಳಿದರು.

ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಬಾಗಲಕೋಟೆ, ತೋಟಗಾರಿಕೆ ಕಾಲೇಜು ಬೀದರ್‌, ತೋಟಗಾರಿಕೆ ವಿಸ್ತರಣಾ ಶಿಕ್ಷಣ ಕೇಂದ್ರ ಮತ್ತು ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ-ಗೋಡಂಬಿ ಸಂಶೋಧನಾ ನಿರ್ದೇಶನಾಲಯದ ಸಹಯೋಗದಲ್ಲಿ ತೋಟಗಾರಿಕೆ ನಾವೀನ್ಯತೆಗಳ ಅಳವಡಿಕೆ, ಪ್ರಚಾರ ಮತ್ತು ಕಾರ್ಯತಂತ್ರದ ಪರಿಕರಗಳ ವಿತರಣೆಯ ಮೂಲಕ ಕಲ್ಯಾಣ ಕರ್ನಾಟಕ ಪ್ರದೇಶದ ಪರಿಶಿಷ್ಟ ಜಾತಿ (ಎಸ್‌ಸಿ) ರೈತರ ಸಾಮರ್ಥ್ಯ ವೃದ್ಧಿಸುವ ಒಂದು ದಿನದ ತರಬೇತಿ ಮತ್ತು ಪರಿಕರಗಳ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಮಾಜದಲ್ಲಿ ಶೋಷಿತ ವರ್ಗದವರು ಇತರೆ ವರ್ಗದವರಂತೆ ಮುನ್ನೆಲೆಗೆ ಬರಬೇಕಿದೆ. ಸಮಾನತೆ ತರುವ ಸದುದ್ದೇಶದಿಂದ ಭಾರತ ಸರ್ಕಾರವು ಈ ಯೋಜನೆಯ ಅಡಿಯಲ್ಲಿ ವಿವಿಧ ರೀತಿಯ ಪರಿಕರಗಳನ್ನು ಮತ್ತು ತೋಟಗಾರಿಕಾ ಸಸಿಗಳನ್ನು ಪರಿಶಿಷ್ಟ ಜಾತಿಯ ಸುಮಾರು 100 ಜನರಿಗೆ ವಿತರಿಸಲು ನಿರ್ಧರಿಸಿದೆ. ಬೀದರ್‌ ಜಿಲ್ಲೆಯ ವಿವಿಧ ತಾಲೂಕಿನ ರೈತರಿಗೆ ನೇರವಾಗಿ ಇದರ ಪ್ರಯೋಜನ ತಲುಪಿಸುವ ಗುರಿ ಇದೆ ಎಂದರು.

ADVERTISEMENT

ತೋಟಗಾರಿಕೆ ಕಾಲೇಜಿನ ಡೀನ್ ಎಸ್.ವಿ. ಪಾಟೀಲ್‌ ಮಾತನಾಡಿ, ಪರಿಶಿಷ್ಟ ಜಾತಿ ರೈತರ ಆದಾಯ ದ್ವಿಗುಣಗೊಳಿಸುವ ಉದ್ದೇಶದಿಂದ ಈ ಕಾರ್ಯಕ್ರಮನ್ನು ಹಮ್ಮಿಕೊಳ್ಳಲಾಗಿದೆ. ತೋಟಗಾರಿಕಾ ಸಸಿಗಳು ಹಾಗೂ ಉದ್ಯಾನ ಉಪಕರಣಗಳನ್ನು ಸ್ವತಃ ತಾವೇ ಉಪಯೋಗಿಸಿದಲ್ಲಿ ಇಂತಹ ಕಾರ್ಯಕ್ರಮ ಹಮ್ಮಿಕೊಂಡಿರುವುದು ಸಾರ್ಥಕವಾಗುತ್ತದೆ. ಗೋಡಂಬಿ ಬೆಳೆಯನ್ನು ಬಂಜರು ಭೂಮಿಯಲ್ಲಿ ಯಥೇಚ್ಛವಾಗಿ ಬೆಳೆದು ಅತಿ ಕಡಿಮೆ ಖರ್ಚಿನಲ್ಲಿ ಉತ್ತಮವಾದ ಇಳುವರಿ ಮತ್ತು ಆದಾಯವನ್ನು ಪಡೆಯಬಹುದು ಎಂದು ಹೇಳಿದರು.

ಸುಮಾರು 100 ಜನ ಪರಿಶಿಷ್ಟ ಜಾತಿಯ ಅರ್ಹ ರೈತ ಫಲಾನುಭವಿಗಳಿಗೆ ತೋಟಗಾರಿಕಾ ಸಸಿಗಳಾದ ಮಾವು, ನುಗ್ಗೆ, ಅಶ್ವಗಂಧ, ತುಳಸಿ, ಸ್ಟೀವಿಯಾ ಮತ್ತು ರೋಸ್‌ಮೇರಿ, ಉದ್ಯಾನ ಉಪಕರಣಗಳಾದ ಗಾರ್ಡನ್‌ ಕ್ರೊಬಾರ್, ಸಿಕಲ್, ತೋಟದ ಕಳೆ ತೆಗೆಯುವಿಕೆ ಫೊರ್ಕ್‌, ನೀರು ಹಾಕುವ ಝಾರಿ (ರೋಜ್ ಕ್ಯಾನ್), ಕೈಯಲ್ಲಿ ಹಿಡಿಯುವ ಗರಗಸ, ಕಳೆ ತೆಗೆಯುವ ಟ್ರೋವೆಲ್, ಸ್ಪೇಡ್ ಪಿಕಾಸ್, ಪ್ಲಾಸ್ಟಿಕ್ ಪೈಪ್, ಸಿಕೇಚರ್ ಹಾಗೂ ಪ್ಲಾಸ್ಟಿಕ್ ಬುಟ್ಟಿ ಇತ್ಯಾದಿಗಳ ಕಿಟ್‌ಗಳನ್ನು  ವಿತರಿಸಲಾಯಿತು.

ವಿಜ್ಞಾನಿಗಳಾದ ವಿ.ಪಿ. ಸಿಂಗ್‌, ವಿಜಯಮಹಾಂತೇಶ, ಮುಹಮ್ಮದ್ ಫಾರೂಖ್‌, ಇಟಗಿ ಪ್ರಭಾಕರ್, ಮಂಜೇಶ್ ಜಿ.ಎನ್., ವೀಣಾ ಜಿ.ಎಲ್., ಅಂಬರೀಷ್ ಇವರು ಬರೆದ ‘ಉತ್ಪಾದನಾ ಸಾಮರ್ಥ್ಯ ಮತ್ತು ನವೀನ ತೋಟಗಾರಿಕಾ ತಂತ್ರಜ್ಞಾನಗಳ ಅಳವಡಿಕೆ’ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು.

ವಿಜ್ಞಾನಿ ವಿ.ಪಿ. ಸಿಂಗ್‌ ಸ್ವಾಗತಿಸಿದರೆ, ಹರೀಶ್‌ ಟಿ. ವಂದಿಸಿದರು. ವಿಜಯಮಹಾಂತೇಶ ನಿರೂಪಿಸಿದರು. ವಿದ್ಯಾರ್ಥಿನಿ ಪೂರ್ಣಿಮಾ ಮತ್ತು ಸಂಗಡಿಗರು ಪ್ರಾರ್ಥಿಸಿದರು.