ADVERTISEMENT

ಭ್ರಷ್ಟಾಚಾರ ಮುಚ್ಚಲು ಬಿಜೆಪಿಯಿಂದ ಜಾತಿ ಬಳಕೆ; ಈಶ್ವರ ಖಂಡ್ರೆ

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಆರೋ‍ಪ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2022, 15:46 IST
Last Updated 25 ಸೆಪ್ಟೆಂಬರ್ 2022, 15:46 IST
ಈಶ್ವರ ಖಂಡ್ರೆ
ಈಶ್ವರ ಖಂಡ್ರೆ   

ಬೀದರ್‌: ‘ಅನೇಕ ಹಗರಣ ಹಾಗೂ ಭ್ರಷ್ಟಾಚಾರದಲ್ಲಿ ಮುಳುಗಿರುವ ಬಿಜೆಪಿ ಸರ್ಕಾರ ತನ್ನ ದುರಾಡಳಿತಕ್ಕೆ ಕಡಿವಾಣ ಹಾಕುವ ಬದಲು ಜಾತಿಯನ್ನು ಒಳ ತರುತ್ತಿದೆ. ಲಿಂಗಾಯತ ಜಾತಿ ಕಾರ್ಡ್‌ ಬಳಸಿ ರಕ್ಷಣೆ ಪಡೆಯಲು ಯತ್ನಿಸುತ್ತಿದೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಆರೋ‍ಪಿಸಿದರು.

‘ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಹಗರಣಗಳು ನಡೆಯುತ್ತಲೇ ಇವೆ. ಪಿಎಸ್‌ಐ, ಶಿಕ್ಷಕರ, ಉಪನ್ಯಾಸಕರ ಹಾಗೂ ಸಹಕಾರ ಬ್ಯಾಂಕ್‌ ಸಿಬ್ಬಂದಿ ನೇಮಕಾತಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ. ಐಎಎಸ್‌, ಐಪಿಎಸ್‌ ಅಧಿಕಾರಿಗಳು ಬಂಧನಕ್ಕೊಳಗಾದರೂ ಸರ್ಕಾರ ತನಿಖೆ ನಡೆಸಲು ಸಿದ್ಧವಿಲ್ಲ’ ಎಂದು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಬಿಜೆಪಿಯಲ್ಲಿರುವ ಲಿಂಗಾಯತ ಮುಖಂಡರನ್ನು ನಿಕೃಷ್ಟವಾಗಿ ನಡೆಸಿಕೊಳ್ಳಲಾಗಿದೆ. ಬಿಜೆಪಿ 2012ರಲ್ಲಿ ಬಿ.ಎಸ್.ಯಡಿಯೂಡಿರಪ್ಪ ಅವರನ್ನು ಮುಖ್ಯಮಂತ್ರಿ ಪದವಿಯಿಂದ ಕೆಳಗಿಸಿ ಜೈಲಿಗೆ ಕಳಿಸಿತು. ವಯಸ್ಸಾದ ನೆಪ ಹೇಳಿ 2020ರಲ್ಲಿ ಬಹುಮತ ಇಲ್ಲದಿದ್ದರೂ ಸರ್ಕಾರ ರಚಿಸಿದ ಯಡಿಯೂರಪ್ಪ ಅವರಿಂದ ಕಣ್ಣೀರು ಹಾಕಿಸಿ ಮನೆಗೆ ಕಳಿಸಿತು. ಆಗ ಲಿಂಗಾಯತರಿಗೆ ಅನ್ಯಾಯವಾಗಲಿಲ್ಲವೆ? ಪೇಸಿಎಂ ಪೋಸ್ಟ್‌ ಅಂಟಿಸಿ ಕಾಂಗ್ರೆಸ್‌ ಲಿಂಗಾಯತರಿಗೆ ಅವಮಾನ ಮಾಡುತ್ತಿದೆ ಎಂದು ಬಿಂಬಿಸುತ್ತಿರುವುದು ಖಂಡನೀಯ. ಲಿಂಗಾಯತರಿಗೆ ಅವಮಾನ ಮಾಡಿದ್ದೇ ಬಿಜೆಪಿ’ ಎಂದು ತಿರುಗೇಟು ನೀಡಿದರು.

ADVERTISEMENT

‘ಬಾಲೇಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ ಮಠಮಾನ್ಯಗಳಿಗೆ ಕೊಡಲಾದ ಅನುದಾನದಲ್ಲಿ ಶೇ 30ರಷ್ಟು ಲಂಚ ಕೊಡಬೇಕಾಗುತ್ತದೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ನೇರ ಆರೋಪ ಮಾಡಿದರು. ಆಗ ವೀರಶೈವ ಲಿಂಗಾಯತ ಸಮಾಜಕ್ಕೆ ಅವಮಾನ ಆಗಲಿಲ್ಲವೆ’ ಎಂದು ಪ್ರಶ್ನಿಸಿದರು.

‘ಪಂಚಾಯತ್‌ ರಾಜ್‌ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವರು ಶೇ 40ರಷ್ಟು ಕಮಿಷನ್‌ ಕೊಡುವವರೆಗೂ ಬಿಲ್‌ ಕೊಡುವುದಿಲ್ಲ ಎಂದು ಹೇಳುತ್ತಿದ್ದಾರೆ ಎಂದು ಲಿಂಗಾಯತ ಸಮಾಜದ ಗುತ್ತಿಗೆದಾರ ಸಂತೋಷ ಪಾಟೀಲ ನೇರ ಆರೋಪ ಮಾಡಿದ್ದರು. ಕೊನೆಗೆ ಡೆತ್ ನೋಟ್‌ ಬರೆದು ಆತ್ಮಹತ್ಯೆ ಮಾಡಿಕೊಂಡರು. ಅವರ ಪತ್ನಿ ಜಯಶ್ರೀ ‍ಪಾಟೀಲ ಅವರು ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ನ್ಯಾಯಕೊಡಿಸಬೇಕು ಎಂದು ಒತ್ತಾಯಿಸಿದರೂ ಬಿಜೆಪಿಯವರು ಬಿ ರಿಪೋರ್ಟ್‌ ಹಾಕಿಸಿ ಪ್ರಕರಣವನ್ನು ಮುಚ್ಚಿ ಹಾಕಿದರು. ಆ ಮೂಲಕ ಲಿಂಗಾಯತರಿಗೆ ಅನ್ಯಾಯ ಮಾಡಿದರು’ ಎಂದು ಆರೋಪಿಸಿದರು.

‘ಕಾಂಗ್ರೆಸ್‌ ಪಕ್ಷ, ವೀರಶೈವ–ಲಿಂಗಾಯತ ಸಮಾಜ ಸೇರಿದಂತೆ ಎಲ್ಲ ಸಮಾಜಕ್ಕೂ ನ್ಯಾಯ ಕೊಡುವ ಕೆಲಸ ಮಾಡುತ್ತಿದೆ. ಬಿಜೆಪಿ ತನ್ನ ತಟ್ಟೆಯಲ್ಲಿ ಹೆಗ್ಗಣ ಬಿದ್ದರೂ, ಬೇರೆಯವರ ತಟ್ಟೆಯಲ್ಲಿನ ನೊಣ ತೋರಿಸುತ್ತಿದೆ. ರಾಜ್ಯದ ಮಾನ ಮರ್ಯಾದೆ ಹರಾಜಾಗಿರುವುದಕ್ಕೆ ಬಿಜೆಪಿಯೇ ಕಾರಣವಾಗಿದೆ. ಜಾತಿ, ಧರ್ಮದ ಹೆಸರಲ್ಲಿ ಒಡೆದು ಆಳುವ ನೀತಿ ಅನುಸರಿಸುತ್ತಿದೆ’ ಎಂದು ಆರೋಪ ಮಾಡಿದರು.

‘ಪೇ ಸಿಎಂ’ ಅಭಿಯಾನ ಭ್ರಷ್ಟಾಚಾರದ ವಿರುದ್ಧ ಹೋರಾಟವೇ ಹೊರತು ಯಾವುದೇ ಜಾತಿ, ಮತ ಮತ್ತು ಧರ್ಮದ ವಿರುದ್ಧವಲ್ಲ. ಸ್ವಚ್ಛ ಕರ್ನಾಟಕ ನಿರ್ಮಾಣ ಮತ್ತು ಭ್ರಷ್ಟಾಚಾರ ಮುಕ್ತ ಆಡಳಿತ ನೀಡಬೇಕು ಎನ್ನುವುದು ಕಾಂಗ್ರೆಸ್‌ನ ಆಶಯವಾಗಿದೆ’ ಎಂದು ಸ್ಪಷ್ಟಪಡಿಸಿದರು.

ಶಾಸಕ ರಾಜಶೇಖರ ಪಾಟೀಲ, ರಹೀಂ ಖಾನ್, ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಮೀನಾಕ್ಷಿ ಸಂಗ್ರಾಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.