ADVERTISEMENT

ಬೀದರ್‌ ಜಿಲ್ಲೆಯಲ್ಲಿ ‘ಸಿಸಿಟಿವಿ ಕ್ಯಾಮೆರಾ ಮ್ಯಾಪಿಂಗ್‌’

ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚಲು ಬೀದರ್‌ ಜಿಲ್ಲಾ ಪೊಲೀಸರಿಂದ ವಿನೂತನ ಕೆಲಸ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 17 ಜೂನ್ 2024, 5:46 IST
Last Updated 17 ಜೂನ್ 2024, 5:46 IST
ಬೀದರ್‌ ನಗರದಲ್ಲಿ ಪೊಲೀಸ್‌ ಇಲಾಖೆ ಅಳವಡಿಸಿರುವ ಸಿ.ಸಿ ಟಿ.ವಿ ಕ್ಯಾಮೆರಾಗಳು
ಬೀದರ್‌ ನಗರದಲ್ಲಿ ಪೊಲೀಸ್‌ ಇಲಾಖೆ ಅಳವಡಿಸಿರುವ ಸಿ.ಸಿ ಟಿ.ವಿ ಕ್ಯಾಮೆರಾಗಳು   

ಬೀದರ್‌: ಅಪರಾಧ ಪ್ರಕರಣಗಳನ್ನು ತ್ವರಿತ ಗತಿಯಲ್ಲಿ ಪತ್ತೆ ಹಚ್ಚಿ ಆರೋಪಿಗಳನ್ನು ಕಂಬಿ ಹಿಂದೆ ಕಳಿಸುವ ಉದ್ದೇಶದಿಂದ ಬೀದರ್‌ ಜಿಲ್ಲಾ ಪೊಲೀಸರು ಜಿಲ್ಲೆಯಾದ್ಯಂತ ‘ಸಿಸಿಟಿವಿ ಕ್ಯಾಮೆರಾಗಳ ಮ್ಯಾಪಿಂಗ್‌’ಗೆ ಮುಂದಾಗಿದ್ದಾರೆ.

ಬೀದರ್‌ ನಗರದ ಪ್ರಮುಖ ವೃತ್ತಗಳು, ರಸ್ತೆಗಳು, ಆಯಕಟ್ಟಿನ ಸ್ಥಳಗಳು, ಸೂಕ್ಷ್ಮ ಪ್ರದೇಶಗಳಲ್ಲಿ ಬೀದರ್‌ ಜಿಲ್ಲಾ ಪೊಲೀಸರು 150 ಅತ್ಯಾಧುನಿಕ ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಿದ್ದಾರೆ. ಇದೇ ರೀತಿ ಜಿಲ್ಲೆಯ ಎಲ್ಲ ತಾಲ್ಲೂಕು ಕೇಂದ್ರಗಳಲ್ಲೂ ಮಾಡಿದ್ದಾರೆ. ಇದರೊಂದಿಗೆ ನಗರದ ಪ್ರಮುಖ ವಾಣಿಜ್ಯ ಮಳಿಗೆಗಳು, ಮಾಲ್‌ಗಳು, ಹೋಟೆಲ್‌ಗಳು, ಸಾರ್ವಜನಿಕರ ಮನೆಗಳ ಎದುರು ಅಳವಡಿಸಿರುವ 5,200 ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಗುರುತಿಸಿ, ‘ಮ್ಯಾಪಿಂಗ್‌’ ಮಾಡಿದ್ದಾರೆ.

ಈಗ ಒಂದು ಹೆಜ್ಜೆ ಮುಂದೆ ಹೋಗಿರುವ ಬೀದರ್‌ ಜಿಲ್ಲಾ ಪೊಲೀಸರು, ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಕೆ ಕುರಿತು ದೊಡ್ಡ ಮಟ್ಟದಲ್ಲಿ ಸಾರ್ವಜನಿಕರಲ್ಲಿ ಅರಿವು ಮೂಡಿಸಿ, ಆ ಕ್ಯಾಮೆರಾಗಳ ಮೂಲಕ ಇಡೀ ಜಿಲ್ಲೆಯ ಚಲನವಲನಗಳ ಮೇಲೆ ನಿಗಾ ವಹಿಸಿ, ಅಪರಾಧ ಪ್ರಕರಣಗಳಾಗದಂತೆ ನೋಡಿಕೊಳ್ಳಲು ದೊಡ್ಡ ಯೋಜನೆ ರೂಪಿಸಿದ್ದಾರೆ.

ADVERTISEMENT

‘ಮ್ಯಾಪಿಂಗ್‌’ನಿಂದ ಏನಾಗಲಿದೆ?:

ಬೀದರ್ ಜಿಲ್ಲೆಯಲ್ಲಿ ಇದುವರೆಗೆ 5,200 ಕ್ಯಾಮೆರಾಗಳನ್ನು ಪೊಲೀಸ್‌ ಇಲಾಖೆ ಮ್ಯಾಪಿಂಗ್‌ ಮಾಡಿದೆ. ಆದರೆ, ಜಿಲ್ಲೆಯ ಜನಸಂಖ್ಯೆ ಸರಿಸುಮಾರು 20 ಲಕ್ಷಕ್ಕೂ ಅಧಿಕವಿದೆ. ಅಲ್ಲದೇ, ಒಂದು ಕಡೆ ತೆಲಂಗಾಣ, ಇನ್ನೊಂದು ಕಡೆ ಮಹಾರಾಷ್ಟ್ರದ ಗಡಿ ಹಂಚಿಕೊಂಡಿದೆ. ಇದರಿಂದಾಗಿ ಪೊಲೀಸರ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಈ ಕಾರಣಕ್ಕಾಗಿಯೇ ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಿಕೊಳ್ಳಲು ಜನರಲ್ಲಿ ಅರಿವು ಮೂಡಿಸಲು ಮುಂದಾಗಿದೆ.

‘ಈಗಷ್ಟೇ ಕೆಲಸ ಆರಂಭಿಸಲಾಗಿದೆ. ಮೊದಲ ಹಂತದಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುವುದು. ಎರಡ್ಮೂರು ತಿಂಗಳಲ್ಲಿ ಇದಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಗುವುದು. ಬರುವ ದಿನಗಳಲ್ಲಿ ಗೂಗಲ್‌ ಫಾರ್ಮ್ಯಾಟ್ ತಯಾರಿಸಲಾಗುವುದು. ಯಾರ್‍ಯಾರು ಅವರ ಮನೆ, ವಾಣಿಜ್ಯ ಉದ್ದೇಶದ ಕಟ್ಟಡಗಳ ಮೇಲೆ ಸಿ.ಸಿ ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಿದ್ದಾರೆ. ಅಂತಹವರು ಗೂಗಲ್‌ ಫಾರ್ಮ್ಯಾಟ್‌ನಲ್ಲಿ ವಿಳಾಸ ಸೇರಿದಂತೆ ಬೇಸಿಕ್‌ ವಿವರಗಳನ್ನು ಅದರಲ್ಲಿ ದಾಖಲಿಸಬೇಕು. ಎಲ್ಲರ ವಿವರಗಳನ್ನು ಕಲೆ ಹಾಕಿ ‘ಮ್ಯಾಪಿಂಗ್‌’ ಮಾಡಲಾಗುತ್ತದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್‌.ಎಲ್‌. ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಇದರಿಂದ ಯಾರ ಖಾಸಗಿತನಕ್ಕೂ ಧಕ್ಕೆ ಆಗುವುದಿಲ್ಲ. ಅಪರಾಧ ಕೃತ್ಯಗಳು ಸಂಭವಿಸಿದಾಗ ಮಾತ್ರ ತುರ್ತಾಗಿ ಆ ಸಿ.ಸಿ ಟಿ.ವಿ ಕ್ಯಾಮೆರಾಗಳಲ್ಲಿ ದಾಖಲಾದ ದೃಶ್ಯಗಳನ್ನು ಪರಿಶೀಲಿಸಿ, ತಕ್ಷಣವೇ ಕ್ರಮ ಕೈಗೊಳ್ಳಲು ನೆರವಾಗುತ್ತದೆ. ಅಮೂಲ್ಯ ವಸ್ತುಗಳು ಕಳುವಾದರೆ ಬೇಗ ಪತ್ತಿ ಹಚ್ಚಿ, ವಾರಸುದಾರರಿಗೆ ಹಿಂತಿರುಗಿಸಲು ಸಹಾಯವಾಗುತ್ತದೆ. ಸಾರ್ವಜನಿಕರು ಮಾಡಬೇಕಾದದ್ದು ಎರಡೇ ಕೆಲಸ. ಯಾರು ಸಿ.ಸಿ ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಿಕೊಂಡಿಲ್ಲವೋ ಅಂತಹವರು ಅಳವಡಿಸಿಕೊಳ್ಳಬೇಕು. ಆನಂತರ ಗೂಗಲ್‌ ಫಾರ್ಮ್ಯಾಟ್ ಮೂಲಕ ಪೊಲೀಸರಿಗೆ ವಿವರ ಹಂಚಿಕೊಂಡರೆ ಸಾಕು. ಜಿಲ್ಲೆಯಲ್ಲಿ ನಮ್ಮ ಅಂದಾಜಿಗಿಂತ ದೊಡ್ಡ ಸಂಖ್ಯೆಯಲ್ಲಿ ಜನ ಸಿ.ಸಿ ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಿಕೊಂಡಿದ್ದಾರೆ. ಆದರೆ, ನಮ್ಮ ಗಮನಕ್ಕೆ ಬಂದು ‘ಮ್ಯಾಪಿಂಗ್‌’ ಮಾಡಿದ್ದು 5,200 ಕ್ಯಾಮೆರಾಗಳು. ಸ್ವಯಂ ಪ್ರೇರಣೆಯಿಂದ ಜನ ಮುಂದೆ ಬಂದರೆ ಉತ್ತಮ’ ಎಂದು ಹೇಳಿದ್ದಾರೆ.

‘ಕ್ಯಾಮೆರಾಗಳನ್ನು ಅತ್ಯಂತ ವೈಜ್ಞಾನಿಕವಾಗಿ ಅಳವಡಿಸಿಕೊಳ್ಳಬೇಕು. ಮನೆಯೊಳಗಿನ ಸಂಗತಿಗಳಿಗಿಂತ ಹೊರಗಿನ ಚಲನವಲನಗಳು ಅದರಲ್ಲಿ ದಾಖಲಾಗಬೇಕು. ವೃತ್ತಿಪರರಿಂದ ಕ್ಯಾಮೆರಾಗಳನ್ನು ಸೂಕ್ತ ಸ್ಥಳಗಳಲ್ಲಿ ಅಳವಡಿಸಿಕೊಂಡರೆ ಉತ್ತಮ. ಈ ಕುರಿತಾಗಿಯೂ ಪೊಲೀಸ್‌ ಇಲಾಖೆಯಿಂದ ಮಾಹಿತಿ ನೀಡಲಾಗುವುದು. ಜಿಲ್ಲೆಯಲ್ಲಿ ಸಾಧ್ಯವಾದಷ್ಟು ಮಟ್ಟಿಗೆ ಅಪರಾಧ ಪ್ರಕರಣಗಳನ್ನು ಕಡಿಮೆಗೊಳಿಸುವ ಉದ್ದೇಶ ಪೊಲೀಸ್‌ ಇಲಾಖೆ ಹೊಂದಿದೆ. ಅದಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ’ ಎಂದು ತಿಳಿಸಿದ್ದಾರೆ.

ಬ್ರಿಮ್ಸ್‌ ಮುಖ್ಯ ರಸ್ತೆಯಲ್ಲಿ ಪೊಲೀಸ್‌ ಇಲಾಖೆ ಅಳವಡಿಸಿರುವ ಸಿ.ಸಿ ಟಿ.ವಿ ಕ್ಯಾಮೆರಾಗಳು
ಬೀದರ್‌ನ ಡಾ.ಬಿ.ಆರ್‌. ಅಂಬೇಡ್ಕರ್‌ ವೃತ್ತದಲ್ಲಿ ಅಳವಡಿಸಿರುವ ಸಿ.ಸಿ ಟಿ.ವಿ ಕ್ಯಾಮೆರಾಗಳು –ಪ್ರಜಾವಾಣಿ ಚಿತ್ರಗಳು
‘ಅಮೆರಿಕದ ಡಲ್ಲಾಸ್‌ನಲ್ಲಿ ಈಗ ಆರಂಭ’
‘ಸಿ.ಸಿ ಟಿ.ವಿ ಕ್ಯಾಮೆರಾ ಅಳವಡಿಸಿದ ಮಾಹಿತಿ ಕೊಟ್ಟರೆ ಅಪರಾಧ ಪ್ರಕರಣಗಳನ್ನು ಬೇಗ ಪತ್ತೆ ಹಚ್ಚಲು ಪೊಲೀಸ್‌ ಇಲಾಖೆಗೆ ಅನುಕೂಲವಾಗಲಿದೆ. ಸಾರ್ವಜನಿಕರ ಖಾಸಗಿ ಮಾಹಿತಿಗೆ ಯಾವುದೇ ರೀತಿಯ ಧಕ್ಕೆ ಬರದಂತೆ ನೋಡಿಕೊಳ್ಳಲಾಗುವುದು. ಮುಂದುವರೆದ ರಾಷ್ಟ್ರವಾದ ಅಮೆರಿಕದ ಡಲ್ಲಾಸ್‌ ಪೊಲೀಸರು ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸಿರುವ ಸಿ.ಸಿ ಟಿ.ವಿ ಕ್ಯಾಮೆರಾಗಳ ಮಾಹಿತಿಯನ್ನು ಕಲೆ ಹಾಕಿ ‘ಮ್ಯಾಪಿಂಗ್‌’ ಮಾಡುವ ಕೆಲಸ ಈಗ ಆರಂಭಿಸಿದ್ದಾರೆ. ನಮ್ಮಲ್ಲಿ ಈಗಾಗಲೇ ಆರಂಭಿಸಲಾಗಿದೆ. ಈಗ ದೊಡ್ಡ ಮಟ್ಟದಲ್ಲಿ ಮಾಡಲಾಗುತ್ತಿದೆ’ ಎಂದು ಎಸ್ಪಿ ಚನ್ನಬಸವಣ್ಣ ಎಸ್‌.ಎಲ್‌. ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ಅಂಕಿ ಅಂಶ
150 ಬೀದರ್‌ ನಗರದಲ್ಲಿ ಪೊಲೀಸರು ಅಳವಡಿಸಿರುವ ಸಿ.ಸಿ ಟಿ.ವಿ ಕ್ಯಾಮೆರಾಗಳು 5200 ಪೊಲೀಸ್‌ ಇಲಾಖೆ ‘ಮ್ಯಾಪಿಂಗ್‌’ ಮಾಡಿರುವ ಕ್ಯಾಮೆರಾಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.