ADVERTISEMENT

ಶತಮಾನ ಕಂಡ ಶಾಲೆಗಳ ಸುಧಾರಣೆ– ಪುರುಷೋತ್ತಮ ಬಿಳಿಮಲೆ

​ಪ್ರಜಾವಾಣಿ ವಾರ್ತೆ
Published 14 ಜುಲೈ 2024, 16:17 IST
Last Updated 14 ಜುಲೈ 2024, 16:17 IST
ಬೀದರ್‌ನಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ವೈದ್ಯರ ದಿನಾಚರಣೆಯಲ್ಲಿ ವೈದ್ಯರನ್ನು ಸನ್ಮಾನಿಸಲಾಯಿತು
ಬೀದರ್‌ನಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ವೈದ್ಯರ ದಿನಾಚರಣೆಯಲ್ಲಿ ವೈದ್ಯರನ್ನು ಸನ್ಮಾನಿಸಲಾಯಿತು   

ಬೀದರ್‌: ‘ಶತಮಾನ ಕಂಡ ಕನ್ನಡ ಶಾಲೆಗಳ ಸುಧಾರಣೆಗೆ ಶ್ರಮಿಸಲಾಗುವುದು’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ತಿಳಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಸಹಯೋಗದಲ್ಲಿ ನಗರದ ಡಾ. ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಶನಿವಾರ ರಾತ್ರಿ ಏರ್ಪಡಿಸಿದ್ದ ರಾಷ್ಟ್ರೀಯ ವೈದ್ಯರ ದಿನಾಚರಣೆ, ಸಂಶೋಧಕ ಸಂತೋಷ ಹಾನಗಲ್‌ ಅವರ ‘ವೀರ ಸೌದಾಮಿನಿ ಕಿತ್ತೂರು ರಾಣಿ ಚನ್ನಮ್ಮ’ ಚಿತ್ರ ಸಂಪುಟ ಬಿಡುಗಡೆ ಸಮಾರಂಭ, ವೈದ್ಯರ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ರಾಜ್ಯದಲ್ಲಿ ನೂರು ವರ್ಷ ದಾಟಿದ 220 ಕನ್ನಡ ಶಾಲೆಗಳಿವೆ. ಅವುಗಳಿಗೆ ಭೇಟಿ ಕೊಟ್ಟು ಅವುಗಳನ್ನು ಸುಧಾರಿಸಲು ನಿರ್ಧರಿಸಲಾಗಿದೆ. ಸರ್ಕಾರದ ಜೊತೆಗೆ ಸಾರ್ವಜನಿಕರು ಕೂಡ ಈ ಕೆಲಸಕ್ಕೆ ಕೈ ಜೋಡಿಸಬೇಕು’ ಎಂದು ಹೇಳಿದರು.

ADVERTISEMENT

‘ನಾನು ನವದೆಹಲಿಯಲ್ಲಿ ಕರ್ನಾಟಕ ಸಂಘ ಕಟ್ಟುವಾಗ ಕನಿಷ್ಠ ಒಂದು ರೂಪಾಯಿಯಿಂದ ಎಷ್ಟಾದರೂ ದೇಣಿಗೆ ಕೊಡುವಂತೆ ಕೇಳಿದ್ದೆ. ಹಣ ಕೊಡುವವರು ಈಗಲೂ ನಮ್ಮ ಸಮಾಜದಲ್ಲಿ ಇದ್ದಾರೆ’ ಎಂದರು.

‘ರಾಜ್ಯದಲ್ಲಿ 45 ಸಾವಿರ ಕನ್ನಡ ಶಾಲೆಗಳಿವೆ. ಇದರಲ್ಲಿ 55 ಸಾವಿರ ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಅವುಗಳೆಲ್ಲ ಒಂದೇ ದಿನಕ್ಕೆ ಖಾಲಿ ಆಗಿಲ್ಲ. ಕಾಲಕಾಲಕ್ಕೆ ಸರ್ಕಾರ ಶಿಕ್ಷಕರ ಹುದ್ದೆಗಳನ್ನು ತುಂಬುತ್ತ ಹೋಗಿದ್ದರೆ ಇಂದು ಈ ಪರಿಸ್ಥಿತಿ ಬರುತ್ತಿರಲಿಲ್ಲ. 45 ಸಾವಿರ ಶಾಲೆಗಳನ್ನು ಹಾಳಾಗಲು ಬಿಟ್ಟಿದ್ದೇವೆ. ಅನೇಕ ಕಡೆ ಶಾಲೆಗಳ ಜಾಗ ಅತಿಕ್ರಮಣವಾಗಿದೆ’ ಎಂದು ಹೇಳಿದರು.

‘ಹೊಸ ತಲೆಮಾರಿಗೆ ಇತಿಹಾಸದ ತಿಳಿವಳಿಕೆ ಇಲ್ಲ. ಈ ಕಾರಣದಿಂದ ಕನ್ನಡದ ಬಗೆಗಿನ ಆತ್ಮವಿಶ್ವಾಸ ಕಡಿಮೆ ಆಗುತ್ತಿದೆ. ಭಾಷೆ ಇಂದಿನವರಿಗೆ ಅರ್ಥವಾಗುತ್ತಿಲ್ಲ. ಭಾಷೆ ಅರ್ಥವಾಗದಿದ್ದರೆ ನಮ್ಮ ಸಂಸ್ಕೃತಿ, ಪರಂಪರೆ ತಿಳಿಯುವುದಿಲ್ಲ’ ಎಂದರು.

‘ಶ್ರೇಷ್ಠ ಪರಂಪರೆ ಹೊಂದಿರುವ ಕನ್ನಡದ ಬಗ್ಗೆ ಆತ್ಮವಿಶ್ವಾಸ ಕಳೆದುಕೊಳ್ಳುತ್ತಿರುವುದು ಆತ್ಮಹತ್ಯೆಗೆ ಸಮ. ಕನ್ನಡವನ್ನು ಅನ್ನದ ಭಾಷೆ ಮಾಡುವ ಪ್ರಯತ್ನ ಮಾಡುತ್ತಿದ್ದೇವೆ. ಅದಕ್ಕೆ ಎಲ್ಲರೂ ಕೈಜೋಡಿಸಬೇಕು. ಜೊತೆಗೆ ಪ್ರಾಧಿಕಾರದ ಕೆಲಸ ವಿಮರ್ಶಿಸಬೇಕು’ ಎಂದು ಹೇಳಿದರು.

ವೈದ್ಯ ಡಾ. ಅಂಜನಪ್ಪ ಮಾತನಾಡಿ, ‘ಕನ್ನಡದಲ್ಲಿ ಓದಿದ ಅನೇಕರು ದೊಡ್ಡ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಆದಕಾರಣ ಕನ್ನಡದಲ್ಲಿ ಓದುತ್ತಿರುವವರಿಗೆ ಕೀಳರಿಮೆ ಬೇಕಿಲ್ಲ. ಕನ್ನಡದೊಂದಿಗೆ ಅನ್ಯ ಭಾಷೆ ಕಲಿತರೆ ತಪ್ಪಲ್ಲ’ ಎಂದರು.

ಜ್ಞಾನಸುಧಾ ಶಿಕ್ಷಣ ಸಂಸ್ಥೆ ಅಧ್ಯಕ್ಷೆ ಪೂರ್ಣಿಮಾ ಜಿ. ಮಾತನಾಡಿ, ಬೀದರ್‌ ಜಿಲ್ಲೆಯ ಭಾಷೆ ಕೆಳಮಟ್ಟದ ಭಾಷೆ ಎಂದು ನಮ್ಮ ಭಾಗದ ವಿದ್ಯಾರ್ಥಿಗಳು ಭಾವಿಸಿದ್ದಾರೆ. ಆದರೆ, ಇದು ಹಾಗಲ್ಲ. ಬೀದರ್‌ನಲ್ಲಿ ಆರು ಭಾಷೆಗಳು ಸಮ್ಮಿಳಿತವಾಗಿರುವ ಕನ್ನಡವಿದೆ’ ಎಂದರು.

ಕಲ್ಯಾಣ ಕರ್ನಾಟಕಕ್ಕೆ 371(ಜೆ) ವಿಶೇಷ ಸ್ಥಾನಮಾನ ಕಲ್ಪಿಸಿದ ನಂತರ ಇತ್ತೀಚಿನ ವರ್ಷಗಳಲ್ಲಿ ಈ ಭಾಗದವರಿಗೆ ಶಿಕ್ಷಣ ಮತ್ತು ನೌಕರಿಗಳಲ್ಲಿ ಸಣ್ಣ ಪ್ರಯೋಜನವಾಗುತ್ತಿದೆ. ಇದನ್ನು ಸಹಿಸಲಾರದೆ ಬೆಂಗಳೂರಿನ ಕೆಲವರು ಈ ಸೌಲಭ್ಯ ಕಸಿಯುವ ಹುನ್ನಾರ ನಡೆಸುತ್ತಿದ್ದಾರೆ. ಅದು ಸರಿಯಾದ ಧೋರಣೆ ಅಲ್ಲ. ಅದರ ಬಗ್ಗೆ ಪ್ರಾಧಿಕಾರದ ಅಧ್ಯಕ್ಷರು ದನಿ ಎತ್ತಬೇಕು ಎಂದು ಆಗ್ರಹಿಸಿದರು.

ಇದೇ ವೇಳೆ 16 ಜನ ವೈದ್ಯರನ್ನು ಸನ್ಮಾನಿಸಲಾಯಿತು. ಭಾಲ್ಕಿ ಹಿರೇಮಠದ ಗುರುಬಸವ ಪಟ್ಟದ್ದೇವರು, ವಾಲಿಶ್ರೀ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ. ರಜನೀಶ ವಾಲಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುರೇಶ ಚನಶೆಟ್ಟಿ, ಕಲಬುರಗಿ ಪತ್ರಾಗಾರ ಕಚೇರಿಯ ಹಿರಿಯ ಸಹಾಯಕ ನಿರ್ದೇಶಕ ವೀರಶೆಟ್ಟಿ ಗಾರಂಪಳ್ಳಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸಂತೋಷ ಹಾನಗಲ್‌, ಶಾಹೀನ್‌ ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ಅಬ್ದುಲ್‌ ಖದೀರ್‌, ಡಾ. ಸಿ. ಆನಂದರಾವ್‌ ಹಾಜರಿದ್ದರು.

‘ಕನ್ನಡದ ಬೆಳವಣಿಗೆ ತೀರ ಕಡಿಮೆ’

‘ದೇಶದ ಇತರೆ ಭಾಷೆಗಳಿಗೆ ಹೋಲಿಸಿದರೆ ಕನ್ನಡ ಬೆಳವಣಿಗೆ ತೀರ ಕಡಿಮೆ ಇದೆ. ಹಿಂದಿ ಭಾಷೆಯ ಬೆಳವಣಿಗೆಯ ವೇಗ ಶೇ 66ರಷ್ಟು ಇದ್ದರೆ ಕನ್ನಡ ಬೆಳವಣಿಗೆ ಪ್ರಮಾಣ ಶೇ 3.7ರಷ್ಟಿದೆ’ ಎಂದು ಪುರುಷೋತ್ತಮ ಬಿಳಿಮಲೆ ತಿಳಿಸಿದರು. ಬಾಂಗ್ಲಾ ಮರಾಠಿ ಒಡಿಯಾ ಭಾಷೆಗಳ ಬೆಳವಣಿಗೆಯೂ ಶೇ 12ರಷ್ಟಿದೆ. ಇವುಗಳಿಗೆ ಹೋಲಿಸಿದರೆ ಕನ್ನಡದ ಬೆಳವಣಿಗೆ ದರ ತೀರ ಕಡಿಮೆ. ಇದು ಕನ್ನಡಿಗರಿಗೆ ಎಚ್ಚರಿಕೆಯ ಕರೆಗಂಟೆ ಎಂದು ಹೇಳಿದರು.

ಸನ್ಮಾನಿತರಾದ ವೈದ್ಯರು

ಸುಭಾಷ ಕರ್ಪೂರ ವೈಜಿನಾಥ ತೂಗಾವೆಓಂಕಾರ ಸ್ವಾಮಿ ಪ್ರಭುಶೆಟ್ಟಿ ಚಿದ್ರಿ ಸಿ.ಎಸ್‌. ರಗಟೆ ಸುಭಾಷ ಪಾಟೀಲ ಸೋಮನಾಥ ಪಾಟೀಲ ಅನಿಲ್‌ಕುಮಾರ್‌ ತಳವಾಡೆ ರಾಜೇಶ ಪಾರಾ ಅಶೋಕಕುಮಾರ ನಾಗೂರೆ ವಿನಯ ಹಲಮಂಡಗೆ ಉದಯ ಹಿಂದಾ ವಿಜಯಶ್ರೀ ಬಶೆಟ್ಟಿ ಪ್ರೇಮಲತಾ ಪಾಟೀಲ ಶೈಲಜಾ ಚನಶೆಟ್ಟಿ ಉಮಾ ದೇಶ ಅವರನ್ನು ಸನ್ಮಾನಿಸಲಾಯಿತು.  ವೈದ್ಯರ ದಿನದಂದು ಬೆಂಗಳೂರಿನಲ್ಲಿ ಆರೋಗ್ಯ ಇಲಾಖೆಯಿಂದ ಗೌರವಕ್ಕೆ ಪಾತ್ರರಾದ ವೈದ್ಯರಾದ ಕಿರಣ ಪಾಟೀಲ ಶಂಕರೆಪ್ಪ ಬೊಮ್ಮ  ರವಿಶಂಕರ ಖಂಡ್ರೆ ಹಾಗೂ ರೇಣುಕಾ ಜಾಧವ ಅವರನ್ನು ಸತ್ಕರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.